ಕಪಟ ನಾಟಕ ಸೂತ್ರಧಾರಿಗಳ ಭ್ರಷ್ಟಾಚಾರ………

ವಿಜಯ ದರ್ಪಣ ನ್ಯೂಸ್……

ಕಪಟ ನಾಟಕ ಸೂತ್ರಧಾರಿಗಳ ಭ್ರಷ್ಟಾಚಾರ………

ಸುಮಾರು 30 ವರ್ಷಗಳ ಕರ್ನಾಟಕದ ರಾಜಕೀಯ ಮತ್ತು ಆಡಳಿತಾತ್ಮಕ ಇತಿಹಾಸವನ್ನು ನೋಡಿದರೆ ಯಾವುದೇ ಪಕ್ಷದ ಯಾವ ಸರ್ಕಾರ ಬಂದರೂ ಭ್ರಷ್ಟಾಚಾರ ಮಾತ್ರ ಕಡಿಮೆಯಾಗುತ್ತಿಲ್ಲ‌. ದಿನೇ ದಿನೇ ಭ್ರಷ್ಟಾಚಾರ ಪರ್ಸೆಂಟೇಜ್ ಲೆಕ್ಕದಲ್ಲಿ ಹೆಚ್ಚಾಗುತ್ತಲೇ ಇದೆ‌‌….

ಪ್ರತಿ ಸರ್ಕಾರಗಳಲ್ಲೂ ಒಂದಲ್ಲ ಒಂದು ಹಗರಣಗಳು ಬೆಳಕಿಗೆ ಬರುತ್ತದೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಇಡೀ ವ್ಯವಸ್ಥೆ ಭ್ರಷ್ಟಾಚಾರದಲ್ಲಿ ತುಂಬಿ ತುಳುಕುತ್ತಿದೆ. ಅದು ಎಷ್ಟು ಸಹಜವಾಗಿದೆ ಎಂದರೆ, ಸಾಮಾನ್ಯರ ಮನಸ್ಸು ಭ್ರಷ್ಟಾಚಾರದ ವಿಷಯದಲ್ಲಿ ಸಂವೇದನೆಯನ್ನೇ ಕಳೆದುಕೊಂಡಿದೆ‌‌. ಎಲ್ಲವೂ ಸಹಜ ಸಾಮಾನ್ಯ, ಇದನ್ನು ನಿಲ್ಲಿಸಲು ಸಾಧ್ಯವೇ ಇಲ್ಲ ಎನ್ನುವ ಮಟ್ಟಿಗೆ ಎಲ್ಲರೂ ಈ ವಿಷಯದಲ್ಲಿ ಸ್ಥಿತಪ್ರಜ್ಞರಾಗಿದ್ದಾರೆ‌…….

ಮತದಾರರ ಮನಸ್ಸುಗಳೇ ಭ್ರಷ್ಟಗೊಂಡಿರುವಾಗ,
ಇಡೀ ವ್ಯವಸ್ಥೆಯೇ ಭ್ರಷ್ಟಾಚಾರದಲ್ಲಿ ಮುಳುಗಿರುವಾಗ,
ಬಹುತೇಕ ಅದಕ್ಕೆ ಸಂಬಂಧಿಸಿದ ಎಲ್ಲರೂ ಅದನ್ನು ಒಪ್ಪಿಕೊಂಡು ಅದರ ಭಾಗವಾಗಿರುವಾಗ,
ಈ ರೀತಿಯ ಅವ್ಯವಹಾರಕ್ಕೆ ದೀರ್ಘ ಇತಿಹಾಸವೇ ಇರುವಾಗ, ನ್ಯಾಯಾಲಯದಲ್ಲಿ ಸಾಕ್ಷಿಗಳೇ ಮುಖ್ಯವಾಗಿರುವಾಗ, ಅತ್ಯಂತ ಪ್ರತಿಭಾವಂತ ವಕೀಲರು ನಮ್ಮ ಪರವಾಗಿ ವಕಾಲತ್ತು ವಹಿಸುವ ಧೈರ್ಯ ನಮಗಿರುವಾಗ, ಜನಸಾಮಾನ್ಯರು ಇದು ಒಂದು ಸಹಜ ಕ್ರಿಯೆ ಎಂದು ಭಾವಿಸಿರುವಾಗ,

ಯಾರು ತನಿಖೆ ಮಾಡುವುದು, ಯಾರನ್ನು ತನಿಖೆ ಮಾಡುವುದು, ಹೇಗೆ ತನಿಖೆ ಮಾಡುವುದು, ಹೇಗೆ ಶಿಕ್ಷಿಸುವುದು,ಹೇಗೆ ಇನ್ನು ಮುಂದೆ ಈ ರೀತಿ ಆಗದಂತೆ ತಡೆಯುವುದು, ಎಲ್ಲವೂ ಒಂದು ಕಪಟ ನಾಟಕದಂತೆ ಭಾಸವಾಗುವುದಿಲ್ಲವೇ ?….

ಕಾವಲು ನಾಯಿಗಳು ಸಾಕು ನಾಯಿಗಳಾಗಿ ಪರಿವರ್ತನೆ ಹೊಂದಿರುವಾಗ, ರುಚಿ ರುಚಿಯಾದ ಬಿಸ್ಕತ್ತುಗಳು ಮಾರುಕಟ್ಟೆಯಲ್ಲಿ ಚಲಾವಣೆಗೆ ಬಂದಿರುವಾಗ, ಮನುಷ್ಯರು ಬಹಳ ಬಹಳ ಬುದ್ದಿವಂತ ಕ್ರಿಮಿನಲ್ ಗಳಾಗಿರುವಾಗ ಮಾಡುವುದಾದರೂ ಏನು ?….

ಇಡೀ ವ್ಯವಸ್ಥೆಯೇ ಸ್ವಾರ್ಥ, ಅಪ್ರಾಮಾಣಿಕ, ಭ್ರಷ್ಟ ಜನಗಳಿಂದ ತುಂಬಿರುವಾಗ, ಸುಧಾರಣೆ ಎಲ್ಲಿಂದ ಪ್ರಾರಂಭಿಸುವುದು. ಕೆಲವರ ಬಂಧನ, ಸ್ವಲ್ಪ ದಿನಗಳ ನಂತರ ಜಾಮೀನು, ಸ್ವಲ್ಪ ವರ್ಷಗಳ ನಂತರ ಖುಲಾಸೆ ಮತ್ತೇ ಬೇರೆ ರೂಪದ ಭ್ರಷ್ಟಾಚಾರ. ಇದೊಂದು ಬಯಲು ನಾಟಕ ರಂಗ…….

ಯಾವ ಇಲಾಖೆ, ಯಾವ ಅಧಿಕಾರಿ ಅಥವಾ ರಾಜಕಾರಣಿ ಭ್ರಷ್ಟ ಮುಕ್ತ ಎಂದು ಹುಡುಕುವುದು. ಮೊದಲೆಲ್ಲಾ ಭ್ರಷ್ಟರನ್ನು ಹುಡುಕಲಾಗುತ್ತಿತ್ತು. ಈಗ ಪ್ರಾಮಾಣಿಕರನ್ನು ಹುಡುಕುವ ಕಾಲ ಬಂದಿದೆ……

ವಕೀಲರೊಬ್ಬರು ಹೇಳಿದ ಕಥೆ ಇಲ್ಲಿ ನೆನಪಾಗುತ್ತಿದೆ.
” ಒಂದು ಊರಿನಲ್ಲಿ ಒಬ್ಬ ಅತ್ಯಂತ ನಟೋರಿಯಸ್ ಕಳ್ಳನಿದ್ದನು. ಆತ ಊರಿನ ಜನರನ್ನು ‌ದೋಚಿ ಇಡೀ ಜೀವನ ಕಳೆದನು. ಕಾಲ ಸರಿಯುತ್ತದೆ. ಅವನಿಗೂ ತುಂಬಾ ವಯಸ್ಸಾಗುತ್ತದೆ. ಸಾವಿನ ಭಯ ಕಾಡತೊಡಗುತ್ತದೆ.

ಅವನಿಗೆ ನಾಲ್ಕು ಜನ ಗಂಡು ಮಕ್ಕಳು. ಎಲ್ಲರೂ ದೊಡ್ಡವರಾಗಿರುತ್ತಾರೆ. ಒಂದು ದಿನ ಆ ನಾಲ್ಕು ಮಕ್ಕಳನ್ನು ಕರೆದು ಒಂದು ಬೇಡಿಕೆ ಅವರ ಮುಂದಿಡುತ್ತಾನೆ.
ಮಕ್ಕಳೇ, ನಾನು ಇಷ್ಟು ದಿನ ದುಡಿದು ನಿಮ್ಮನ್ನು ಸಾಕಿ ಸಲುಹಿದ್ದೇನೆ. ಈಗ ವಯಸ್ಸಾಗಿದೆ. ಸಾವಿಗೆ ಹತ್ತಿರವಾಗಿದ್ದೇನೆ. ನನಗೆ ಒಂದು ಕೊನೆಯ ಆಸೆ ಇದೆ. ಅದನ್ನು ಪೂರೈಸುವಿರಾ ? ಎಂದು ಕೇಳುತ್ತಾನೆ.

ಜನ್ಮ ನೀಡಿದ ಅಪ್ಪನ ಬಗ್ಗೆ ತುಂಬಾ ಗೌರವ ಇದ್ದ ಮಕ್ಕಳು ಅದು ಎಷ್ಟೇ ಕಷ್ಟ ಆಗಿರಲಿ ನಾವು ಪೂರೈಸುತ್ತೇವೆ ಎಂದು ವಾಗ್ದಾನ ಮಾಡುತ್ತಾರೆ. ಆಗ ಅಪ್ಪ ಕೇಳುತ್ತಾನೆ.
ಮಕ್ಕಳೇ, ನನಗೆ ತಿಳಿವಳಿಕೆ ಬಂದಾಗಿನಿಂದ ನಾನು ಕಳ್ಳತನವನ್ನೇ ವೃತ್ತಿಯಾಗಿ ಮಾಡಿಕೊಂಡವನು. ಅದಕ್ಕಾಗಿ ಜನರು ನನ್ನನ್ನು ಕಳ್ಳ ಕಳ್ಳ ಎಂದೇ ಕರೆಯುತ್ತಾರೆ. ಅದನ್ನು ಕೇಳಿ ಕೇಳಿ ನನಗೆ ಸಾಕಾಗಿದೆ. ಸಾಯುವ ಈ ಸಮಯದಲ್ಲಾದರೂ ಊರಿನ ಜನ ನನ್ನನ್ನು ಒಳ್ಳೆಯವನು ಎಂದು ಕರೆಯಬೇಕು. ಆಗ ನಾನು ನಿಶ್ಚಿಂತನಾಗಿ ಸಾಯುತ್ತೇನೆ. ದಯವಿಟ್ಟು ಈ ಕೋರಿಕೆ ಈಡೇರಿಸಿ ಎಂದು ಕೇಳಿಕೊಳ್ಳತ್ತಾನೆ.

ಅಪ್ಪನ ಮಾತಿನಿಂದ ಮಕ್ಕಳು ಚಿಂತಿತರಾಗುತ್ತಾರೆ. ಕಳ್ಳ ಅಪ್ಪನನ್ನು ಒಳ್ಳೆಯವನು ಎಂದು ಊರಿನ ಜನರಿಂದ ಹೇಗೆ ಹೇಳಿಸುವುದು ಎಂಬ ಪ್ರಶ್ನೆ ಕಾಡುತ್ತದೆ. ಆದರೂ ಅಪ್ಪನ ಮನಸ್ಸು ನೋಯಿಸಲು ಇಷ್ಟ ಪಡದೆ ಆತನಿಗೆ ಆಸೆ ಪೂರೈಸುವ ಭರವಸೆ ನೀಡುತ್ತಾರೆ.

ನಂತರ ತಮ್ಮ ತಮ್ಮಲ್ಲಿಯೇ ಯೋಚನೆ ಮಾಡಿ ಕಾರ್ಯರೂಪಕ್ಕೆ ಇಳಿಯುತ್ತಾರೆ.

ಊರಿನ ನಾಲ್ಕು ದಿಕ್ಕುಗಳಲ್ಲಿ ಒಬ್ಬೊಬ್ಬರು ನಿಂತು ದರೋಡೆಗೆ ಇಳಿಯುತ್ತಾರೆ. ತೀರಾ ಕ್ರೌರ್ಯದಿಂದ ವರ್ತಿಸುತ್ತಾರೆ. ಯಾವುದೇ ಕರುಣೆಯನ್ನು ಯಾರಿಗೂ ತೋರುವುದಿಲ್ಲ. ಕುಖ್ಯಾತ ಮತ್ತು ಕ್ರೂರ ಕಳ್ಳರಾಗುತ್ತಾರೆ. ದೈಹಿಕ ಹಲ್ಲೆಯನ್ನು ಮಾಡಿ ಬಟ್ಟೆಬರೆಗಳನ್ನೂ ಸಹ ಬಿಡದೆ ದೋಚುತ್ತಾರೆ.

ಹೀಗಿರುವಾಗ ಒಮ್ಮೆ ಅವರ ಅಪ್ಪ ಮನೆಯ ಜಗುಲಿಯ ಮೇಲೆ ಆಕಾಶ ದಿಟ್ಟಿಸುತ್ತಾ ಕುಳಿತಿರುತ್ತಾನೆ. ಆಗ ಅಲ್ಲಿಗೆ ಬಂದ ಊರಿನ ಕೆಲವು ಜನರು ಆ ಕಳ್ಳನನ್ನು ಕುರಿತು ಕೈ ಮುಗಿಯುತ್ತಾ ” ಸ್ವಾಮಿ ನೀವು ದೇವರಂತವರು. ಏನೋ ಸಣ್ಣ ಪುಟ್ಟ ಕಳ್ಳತನ ಮಾಡಿ ಬದುಕುತ್ತಿದ್ದಿರಿ. ಆದರೆ ಆ ನಿಮ್ಮ ಮಕ್ಕಳು ತುಂಬಾ ಕ್ರೂರಿಗಳು. ನಿಮಗಿದ್ದ ಕರುಣೆ ಅವರಿಗಿಲ್ಲ. ನೀವು ನಮ್ಮ ಬಟ್ಟೆಗಳನ್ನು ಮುಟ್ಟುತ್ತಿರಲಿಲ್ಲ. ಆದರೆ ನಿಮ್ಮ ಮಕ್ಕಳು ನಮ್ಮ ಮೈಮೇಲಿನ ಪುಡಗೋಸಿಯನ್ನು ಬಿಡುತ್ತಿಲ್ಲ. ಅಂತಹ ರಾಕ್ಷಸರು. ನೀವು ತುಂಬಾ ಒಳ್ಳೆಯವರು ” ಎಂದು ಹೇಳಿ ಹೋಗುತ್ತಾರೆ.

ಅಹಹಾ..
ನಮ್ಮ ಆಡಳಿತ ವ್ಯವಸ್ಥೆ ಕೂಡ ಇದೇ ರೀತಿ ಇದೆ. ಹಿಂದೆ ಇದ್ದವರೇ ಇವರಿಗಿಂತ ಉತ್ತಮ. ಮುಂದೆ ಬರುವವರು ಮತ್ತಷ್ಟು ಕೆಟ್ಟವರು ಎಂದು ಸಮಾಧಾನ ಮಾಡಿಕೊಳ್ಳುತ್ತಾ ಮುನ್ನಡೆಯಬೇಕಾದ ಅನಿವಾರ್ಯತೆಗೆ ನಾವು ಸಿಲುಕಿದ್ದೇವೆ. ಹೊಸ ಕಳ್ಳನಿಗೆ ಹೋಲಿಸಿ ಹಳೆಯ ಕಳ್ಳನೇ ಉತ್ತಮ ಎಂಬ ಮನಸ್ಥಿತಿಗೆ ಬಂದಿದ್ದೇವೆ….

ಭ್ರಷ್ಟ ಹಣದ ಮಹತ್ವ ಕಡಿಮೆ ಮಾಡದೆ, ಮಾನವೀಯ ಮೌಲ್ಯಗಳ ಪುನರುತ್ಥಾನ ಮಾಡದೆ ಈಗಿನ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಹೋಗಲಾಡಿಸಲು ಸಾಧ್ಯವೇ ಇಲ್ಲ. ಅದು ಭಯಂಕರ ಭಸ್ಮಾಸುರನಂತೆ ಬೇರೆ ಬೇರೆ ರೂಪದಲ್ಲಿ, ಬೇರೆ ಬೇರೆ ಮಾರ್ಗದಲ್ಲಿ, ಬೇರೆ ಬೇರೆ ವಿಧಾನದಲ್ಲಿ, ಮತ್ತೆ ಮತ್ತೆ ಕಾಡುತ್ತಲೇ ಇರುತ್ತದೆ.

ಇದರ ಅಮೂಲಾಗ್ರ ಬದಲಾವಣೆಗೆ ಮನುಷ್ಯ ಕುಲ ಆತ್ಮಾವಲೋಕನ ಮಾಡಿಕೊಂಡು ಒಟ್ಟಾಗಿ ಎಲ್ಲಾ ಹಂತದಲ್ಲೂ ಪ್ರಯತ್ನಿಸದಿದ್ದರೆ ಭ್ರಷ್ಟಾಚಾರ ಸರ್ವವ್ಯಾಪಿಯಾಗಿ ನಿರಂತರವಾಗಿ ಇದ್ದೇ ಇರುತ್ತದೆ.
ತನಿಖೆಗಳು ಕೇವಲ ನಾಟಕದ ದೃಶ್ಯಗಳು ಮಾತ್ರ..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ. ಎಚ್. ಕೆ.
9844013068…….