ಸಮಯ ಸಿಕ್ಕರೂ ಸಾಕು ಅದು ರಸಮಯ

 

 ಸಮಯ ಸಿಕ್ಕರೂ ಸಾಕು ಅದು ರಸಮಯ

* ಜಯಶ್ರೀ.ಜೆ. ಅಬ್ಬಿಗೇರಿ, ಬೆಳಗಾವಿ

ದಿನದ ಇಪ್ಪತ್ನಾಲ್ಕು ಗಂಟೆ ಕೆಲಸ ಮಾಡಲು ಆಗುವುದಿಲ್ಲ ಅನ್ನುವುದು ನಿಜವಾದರೂ ಸಿಕ್ಕ ಸಮಯವನ್ನು ಗುಣಾತ್ಮಕವಾಗಿ ಕಳೆಯುವುದೂ ಮುಖ್ಯ. ಸಮಯವನ್ನು ಹಣಕ್ಕೆ ಹೋಲಿಸುತ್ತಾರೆ. ಸಮಯ ಹಣಕ್ಕಿಂತ ದೊಡ್ಡದು ಏಕೆಂದರೆ ಹಣವನ್ನು ಕೂಡಿಡಬಹುದು. ನಮಗೆ ಬೇಕಾದಾಗ ಉಪಯೋಗಿಸಬಹುದು. ಸಮಯ ಹಾಗಲ್ಲ ಇಂದಿನ ಸಮಯವನ್ನು ಇಂದೇ ಬಳಸಬೇಕು. ಕೂಡಿಟ್ಟ ಹಣವನ್ನು: ನ್ನು ನಮ್ಮ ಮಕ್ಕಳಿಗೆ ಕೊಡಬಹುದು. ಆದರೆ ಸಮಯವನ್ನು ಹಾಗೆ ಮಾಡಲು ಬರುವುದಿಲ್ಲ.

ಮನೆಯ ಮುಂದಿನ ಹೂದೋಟದಲ್ಲಿ ಶತಪಥ ಹಾಕುತ್ತ ಒಂಭತ್ತು ಘಂಟೆಗೆ ಬರ್ತಿನಿ ಅಂದವರು ಒಂಭತ್ತು ಹೊಡೆದು ಅರ್ಧ ತಾಸಾದರೂ ಇನ್ನೂ ಪತ್ತೆ ಇಲ್ಲ ಅಸಾಮಿ ನನ್ನ ಇವತ್ತಿನ ಮುಂದಿನ ಕೆಲಸ ಎಲ್ಲಾ ಉಲ್ಟಾಪಲ್ಟಾ ಆಗ್ತಾವ ಪೆಂಡಿಂಗ್ ಉಳಿತಾವ, ಟೈಂ ಸೆನ್ಸ್ ಇಲ್ಲ ಇವರಿಗೆ. ಇಂಥವರನ ನಂಬಿದರ ಉದಾರ ಆದಂಗ ಎಂದು ಬಾರದೇ ಇರುವವರಿಗೆ ಸಹಸ್ರ ನಾಮಾರ್ಚನೆಯನ್ನು ವಟ ವಟಿಸುವಿಕೆಯಲ್ಲಿ ಸಲ್ಲಿಸುತ್ತ ನಮ್ಮ ಟೈಮ್‌ನ್ನು ಧಾರಾಳವಾಗಿ ಹಾಳು ಮಾಡೋದು ನಮಗೆ ಗೊತ್ತೇ ಆಗುವುದಿಲ್ಲ.

ಬದುಕಿರುವವರೆಗೆ ಎಲ್ಲವನ್ನೂ ಗಳಿಸಬೇಕು ಅನುಭವಿಸಬೇಕು ಎನ್ನುವ ಹಟ ನಮ್ಮದು. ಸಾಯುವದಕ್ಕೆ ಮುನ್ನ ಒಂದೆರಡು ದೊಡ್ಡ ಬಂಗಲೆ. ಬಂಗಲೆ ಮುಂದೆ ಐದಾರು ಉದ್ದನೆಯ ಕಾರು, ಬ್ಯಾಂಕ್‌ನಲ್ಲಿ ಬಿಗ್ ಬ್ಯಾಲನ್ಸ್, ಪದವಿ ಬಿರುದು ಸನ್ಮಾನ ಒಟ್ಟಿನೊಳಗೆ ನಮ್ಮ ಸಿರಿವಂತಿಕೆ ನಾಲ್ಕು ಜನರ ಬಾಯಲ್ಲಿರಬೇಕೆಂದು ಬೆಳಿಗ್ಗೆ ಬೇಗ ಎದ್ದು ರಾತ್ರಿ ಎಷ್ಟು ಹೊತ್ತಾದರೂ ಮನೆ ಸೇರುವುದಿಲ್ಲ, ಏನನ್ನೋ ಗಳಸ್ತಿವಿ ಅಂತ ಯಾವುದನ್ನು ಗಳಿಸದೇ ತಡ ರಾತ್ರಿ ಮನೆಗೆ ಬಂದು ಮನೆಯವರ ಮೇಲೆ ವಿನಾಕಾರಣ ಹರಿಹಾಯುವುದನ್ನು ರೂಢಿ ಮಾಡಿಕೊಂಡಿದ್ದೇವೆ. ನಮ್ಮ ಸುತ್ತ ಮುತ್ತ ಇರುವ ಕೆಲ ಜನರನ್ನು ಸೂಕ್ತ ವಾಗಿ ನೋಡಿದಾಗ ತಿಳಿದು ಬರುವ ಸಂಗತಿ ಅಂದರೆ ಅವರು ಸಿಕ್ಕ ಒಂದು ನಿಮಿಷವನ್ನೂ ಹಾಳು ಮಾಡುವುದಿಲ್ಲ
ಸುಮ್ಮನೆ ಕಳೆಯುವುದಿಲ್ಲ. ಯಾವುದಾದರೂ ಉಪಯುಕ್ತ ಕೆಲಸಗಳಿಗೆ ಉಪಯೋಗಿಸುತ್ತಿರುತ್ತಾರೆ. ಪ್ರತಿಯೊಬ್ಬ ಮನುಷ್ಯನೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಅತ್ಯಂತ ಶ್ರೇಷ್ಠ ಗುಣವೆಂದರೆ ಸಿಕ್ಕ ಸಮಯವನ್ನು ಸದುಪಯೋಗಪಡಿಸಿಕೊಳ್ಳುವುದು. ಟೈಂ ಮ್ಯಾನೇಜ್‌ಮೆಂಟ್ ಅನ್ನುವುದು ಒಂದು ಕಲೆ. ದಿನದ ಇಪ್ಪತ್ನಾಲ್ಕು ಗಂಟೆ ಕೆಲಸ ಮಾಡಲು ಆಗುವುದಿಲ್ಲ ಅನ್ನುವುದು ನಿಜವಾದರೂ ಸಿಕ್ಕ ಸಮಯವನ್ನು ಗುಣಾತ್ಮಕವಾಗಿ ಕಳೆಯುವುದೂ ಮುಖ್ಯ. ಸಮಯವನ್ನು ಹಣಕ್ಕೆ ಹೋಲಿಸುತ್ತಾರೆ ಸಮಯ ಹಣಕ್ಕಿಂತ ದೊಡ್ಡದು ಏಕೆಂದರೆ ಹಣವನ್ನು ಕೂಡಿಡಬಹುದು ನಮಗೆ ಬೇಕಾದಾಗ ಉಪಯೋಗಿಸಬಹುದು ಸಮಯ ಹಾಗಲ್ಲ ಇಂದಿನ ಸಮಯವನ್ನು ಇಂದೇ ಬಳಸಬೇಕು. ಕೂಡಿಟ್ಟ ಹಣವನ್ನು ನಮ್ಮ ಮಕ್ಕಳಿಗೆ ಕೊಡಬಹುದು ಆದರೆ ಸಮಯವನ್ನು ಹಾಗೆ ಮಾಡಲು ಬರುವುದಿಲ್ಲ.

ಜೀವನದಲ್ಲಿ ಎಲ್ಲದಕ್ಕಿಂತಲೂ ಮುಖ್ಯ ಸಮಯ. ಜಗತ್ತಿನ ನಂಬರ್ ಒನ್ ಶ್ರೀಮಂತರು ಅದನ್ನು ಕೊಳ್ಳಲು ಸಾಧ್ಯವೇ ಇಲ್ಲ ಹೀಗಾಗಿ ಸಮಯದ ಮೌಲ್ಯ ಅರಿತವರು ಕಛೇರಿಯಲ್ಲಿ ನನ್ನ ಸಮಯ ಅಮೂಲ್ಯ ಎಂಬ ಫಲಕವನ್ನು ಬರೆದು ತಮ್ಮ ಟೇಬಲ್ ಮೇಲೆ ಇಟ್ಟಿರುತ್ತಾರೆ ಅದನ್ನು ನೋಡಿ ಅವರನ್ನು ಭೇಟಿಯಾದವರು ಬಂದ ಕೆಲಸ ಮುಗಿದ ತಕ್ಷಣ ಹೊರಡುತ್ತಾರೆ. ಎಲ್ಲಿ ಹೋಗಬೇಕಾದರೂ ಸರಿಯಾದ ಸಮಯಕ್ಕೆ ತಯಾರಾಗಿರುತ್ತಾರೆ. ತಮ್ಮನ್ನು ಭೇಟಿಯಾಗಲು ಬರುವವರು ಒಂದು ವೇಳೆ ಹತ್ತು ಹದಿನೈದು ನಿಮಿಷ ತಡವಾಗುವ ಮುನ್ಸೂಚನೆ ಸಿಕ್ಕರೆ ಸಾಕು ಅಷ್ಟರಲ್ಲಿ ತಮಗೆ ಕೆಲಸದ ವಿಷಯವಾಗಿ ಮಾತನಾಡಬೇಕಾದವರೊಂದಿಗೆ ಫೋನಿನಲ್ಲಿ ಮಾತನಾಡುತ್ತಾರೆ. ಗೆಳೆಯರ ಮೆಸೇಜ್ಗಳಿಗೆ ಉತ್ತರಿಸುತ್ತಾರೆ. ದಿನ ಪತ್ರಿಕೆಯಲ್ಲಿ ತಮಗೆ ಇಷ್ಟವಾದ ಅಂಕಣವನ್ನು ಓದಿ ಮುಗಿಸುತ್ತಾರೆ. ತಲೆಗೆ ಕಸರತ್ತು ಕೊಡುವ ಪದಬಂಧವನ್ನು ತುಂಬುತ್ತಾರೆ ಸುಡೋಕುದಂಥ ಆಟವನ್ನಾಡುತ್ತಾರೆ.

ಕಛೇರಿಯಲ್ಲಿ ನಿಗದಿತ ಸಮಯಕ್ಕೆ ಕಾರ್ಯಕ್ರಮವೊಂದು ಶುರುವಾಗದಿದ್ದರೆ ಸಿಕ್ಕ ಸ್ವಲ್ಪ ಸಮಯದಲ್ಲಿಯೇ ಫೈಲ್ಗಳನ್ನು ಜೋಡಿಸಿಟ್ಟುಕೊಳ್ಳುತ್ತಾರೆ. ಅಥವಾ ಇತ್ಯರ್ಥಗೊಳಿಸಬೇಕಾದ ಫೈಲ್ ಮೇಲೆ ಒಂದು ಶೀಘ್ರ ನೋಟ ಹರಿಸುತ್ತಾರೆ. ಮುಂದೆ ಮಾಡಬೇಕಾದ ಕೆಲಸದ ಪಟ್ಟಿಯೊಂದನ್ನು ತಯಾರಿಸಿಕೊಳ್ಳುತ್ತಾರೆ. ಮನೆಯಲ್ಲಿದ್ದರೆ ನಾಳೆಗೆ ಬೇಕಾದ ಬಟ್ಟೆಗಳನ್ನು ಇಸ್ತ್ರಿ ಮಾಡಿಕೊಳ್ಳುತ್ತಾರೆ. ಶೂ ಪಾಲಿಷ್ ಮಾಡಿಟ್ಟುಕೊಳ್ಳುತ್ತಾರೆ. ಕಛೇರಿಗೆ ತೆಗೆದುಕೊಂಡು ಹೋಗಬೇಕಾದ ಅವಶ್ಯಕ ವಸ್ತುಗಳನ್ನು ಜೋಡಿಸಿಟ್ಟು ಕೊಳ್ಳುತ್ತಾರೆ. ನೆಂಟರಿಷ್ಟರೊಂದಿಗೆ ಕರೆ ಮಾಡಿ ಮಾತನಾಡುತ್ತಾರೆ. ಟಿವಿಯಲ್ಲಿ ಬರುವ ಹಾಸ್ಯ ಚಟಾಕಿಗಳನ್ನು ನೋಡಿ ನಕ್ಕು ಹಗುರಾಗುತ್ತಾರೆ. ತಮ್ಮ ಪ್ರಾಜೆಕ್ಟ್‌ಗೆ ಬೇಕಾದ ವಿಷಯಗಳನ್ನು ನೆಟ್‌ನಲ್ಲಿ ಸರ್ಚ್ ಮಾಡುತ್ತಾರೆ. ಇವೆಲ್ಲ ಚಿಕ್ಕ ಪುಟ್ಟ ಕೆಲಸಗಳು ಅನಿಸುತ್ತವೆ. ಆದರೆ ಈ ಕೆಲಸಗಳನ್ನು ಮಾಡಲು ಸಮಯ ಬೇಕೇ ಬೇಕು ತಾನೆ. ಸಿಕ್ಕ ಸ್ವಲ್ಪ ಸಮಯದ ಬಗ್ಗೆ ಉದಾಸೀನತೆ ತೋರಿಸದೇ ಅದನ್ನು ತಮ್ಮ ಚಿಕ್ಕ ಚಿಕ್ಕ ಕೆಲಸಗಳಿಗಾಗಿ ಉಪಯೋಗಿಸುತ್ತಾರೆ ಹೀಗಾಗಿ ಅವರು ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲು ಸಾಧ್ಯವಾಗಿದೆ. ಮತ್ತೊಬ್ಬರಿಗಾಗಿ ಕಾಯುವ ಸಂದರ್ಭ ಬಂದಾಗ ಅವರಿಗಾಗಿ ಅರ್ಧ ತಾಸಿನಷ್ಟು ಸಮಯವೂ ಕಾದು ಕುಳಿತುಕೊಳ್ಳುತ್ತೇವೆ. ಮಾಡಲೇಬೇಕಾದ ಅನಿವಾರ್ಯ ಕೆಲಸವಿದ್ದರೂ ಅಯ್ಯೋ ಅಷ್ಟರಲ್ಲಿ ಆಗುತ್ತೋ ಇಲ್ಲವೋ ಎಂಬ ಅನುಮಾನ ಸೂಚಿಸುತ್ತೇವೆ. ಮಾಡಬಹುದು ಆದರೆ ಆಗಲೆ ರೆಡಿಯಾಗಿ ಬಿಟ್ಟಿದಿನಲ್ಲಾ ಎಂಬ ಸಬೂಬು ನಮಗೆ ನಾವೇ ಕೊಟ್ಟುಕೊಂಡು ಹೇಗೋ ಕಾಲ ಕಳೆದು ಬಿಡುತ್ತೇವೆ. ಬಸ್ ಅಥವಾ ರೈಲು ತಡವಾದಾಗ ನಾವು ಅದು ಬರುವವರೆಗೆ ‘ವ್ಯವಸ್ಥೆ ಎಷ್ಟು ಹಾಳಾಗಿಬಿಟ್ಟಿದೆ ಇಲ್ಲಿ ಸರಿಯಾದ ಸಮಯಕ್ಕೆ ಯಾವುದೂ ನಡೆಯೋದಿಲ್ಲ’ ಅಂತ ತಾಸಿಗಿಂತಲೂ ಹೆಚ್ಚಿನ ಸಮಯವನ್ನು ಬೇಡವಾದ ಹುರುಳಿಲ್ಲದ ಮಾತುಕತೆಯಲ್ಲಿ ಕಳೆದು ಬಿಡುತ್ತೇವೆ. ನಮಗೆ ಅನೇಕ ಕೆಲಸಗಳನ್ನು ಮಾಡಲು ಸಮಯ ಸಿಕ್ಕರೂ ಅದನ್ನು ಸದುಪಯೋಗ ಪಡಿಸಿಕೊಳ್ಳದೇ ಹಾಗೆ ಕಳೆದುಬಿಡುತ್ತೇವೆ. ಆದರೆ ಅವರು ಅದೇ ಸಮಯದಲ್ಲಿ ವೇಟಿಂಗ್ ರೂಮಿನಲ್ಲಿ ಕುಳಿತ ಇತರರೊಂದಿಗೆ ಹಿತ ನೀಡುವಂತಹ ಮಾತುಕತೆಯಲ್ಲಿ ತೊಡಗಿಕೊಂಡು ಸಾಹಿತ್ಯ ಸಂಗೀತ ಕ್ರೀಡೆಯಂತಹ ವಿಷಯಗಳನ್ನು ಚರ್ಚಿಸುತ್ತ ಎದುರಿನವರು ಮಾಡುವ ಕಾರ್ಯಕ್ಷೇತ್ರದ ಒಳ ಹೊರಗುಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ಸದಭಿರುಚಿಯ ಸಂವಾದದಲ್ಲಿ ತೊಡಗಿಸಿಕೊಂಡು ಅನೇಕ ಸಮಸ್ಯೆಗಳಿಗೆ ತಮ್ಮ ತಾರ್ಕಿಕ ಮಟ್ಟದಲ್ಲಿ ಪರಿಹಾರ ಸೂಚಿಸುತ್ತಾರೆ. ಇಲ್ಲವೇ ನಿಲ್ದಾಣದಲ್ಲಿರುವ ಬುಕ್‌ಸ್ಟಾಲ್ ಗೆ ಹೋಗಿ ತಮಗೆ ಇಷ್ಟವಾದ ಪುಸ್ತಕ ಅಥವಾ ಮ್ಯಾಗಜಿನ್‌ವೊಂದನ್ನು ಕೊಂಡು ತಂದು ಓದುತ್ತಾರೆ. ಮಜ್ಜಿಗೆ ಎಳೆನೀರನ್ನು ಕುಡಿದು ಚೈತನ್ಯ” ತುಂಬಿಕೊಳ್ಳುತ್ತಾರೆ. ಹೀಗೆ ಸಿಕ್ಕ ಸ್ವಲ್ಪ ಸಮಯವನ್ನು ತಮ್ಮ ಬೆಳವಣಿಗೆಗೆ ಬಳಸಿಕೊಳ್ಳುತ್ತಾರೆ.

ನಾವು ಇತರರ ಹೆಸರಿನಲ್ಲಿ ದಿನವೊಂದಕ್ಕೆ ಏನಿಲ್ಲವೆಂದರೂ ಎರಡು ಮೂರು ತಾಸು ಸಮಯವನ್ನು ವ್ಯರ್ಥಗೊಳಿಸುತ್ತೇವೆ. ಅದರ ಬಗ್ಗೆ ನಮಗೆ ಅರಿವೇ ಇರುವುದಿಲ್ಲ ಕಾಯುವ ಸಮಯದಲ್ಲಿ ನಮ್ಮ ಮನಸ್ಥಿತಿಯೂ ತುಂಬಾ ಒತ್ತಡವನ್ನೂ ಅನುಭವಿಸಿರುತ್ತದೆ ಎಂದು ಬೇರೆ
ಹೇಳಬೇಕಿಲ್ಲ. ಆದರೆ ಸಮಯಕ್ಕೆ ಬೆಲೆ ಕೊಡುವವರು ಒಂದೇ ಒಂದು ನಿಮಿಷವನ್ನೂ ವ್ಯರ್ಥವಾಗಿ ಕಳೆಯುವುದಿಲ್ಲ, ಆದ್ದರಿಂದಲೇ ಅವರು
ಸಾಧಕರೆನಿಸಿಕೊಳ್ಳುತ್ತಾರೆ ನಮಗಿಂತ ಎತ್ತರ ಸ್ಥಾನದಲ್ಲಿರುತ್ತಾರೆ. ಅವರಿಗೆ ಫ್ರೀಯಾಗಿರೋಕೆ ಸಮಯ ವಿರುವುದಿಲ್ಲವೆಂದರೂ ಎಲ್ಲವನ್ನೂ ಎಷ್ಟು ಚೆನ್ನಾಗಿ ನಿಭಾಯಿಸುತ್ತಾರೆ. ಕಾರಣ ಅವರು ಸಿಕ್ಕ ಪ್ರತೀ ನಿಮಿಷವನ್ನೂ ಚಾಣಾಕ್ಷತನದಿಂದ ತಮ್ಮ ಗೆಲುವಿಗಾಗಿ ಬಳಸಿಕೊಳ್ಳುತ್ತಾರೆ. ನಾವು ಸಿಕ್ಕಸಮಯವನ್ನು ಸಿಕ್ಕ ಸಿಕ್ಕ ಹಾಗೆ ಸಿಕ್ಕವರೊಂದಿಗೆ ಕಳೆಯುತ್ತಿರುವುದರಿಂದ ಯಾವುದಕ್ಕೂ ಪುರುಸೊತ್ತಿಲ್ಲ ಸಮಯ ಸಿಗುತ್ತಿಲ್ಲ ಎಂದು ದೂರುಹೇಳುತ್ತಿರುತ್ತೇವೆ.

ಇನ್ನೇಲೆ ಹೀಗೆ ಸಮಯದ ಬಗ್ಗೆ ಕಂಪ್ಲೇಂಟ್ ಹೇಳುತ್ತ ಸಮಯವನ್ನು ವ್ಯರ್ಥ ಕಳೆಯುವುದರ ಬದಲು ನಾವೂ ಸಹ ಅವರು ನಡೆಯುತ್ತಿರುವ ದಾರಿಯನ್ನು ಅನುಸರಿಸುವುದು ಒಳ್ಳೆಯದಲ್ಲವೇ?

* ಜಯಶ್ರೀ.ಜೆ. ಅಬ್ಬಿಗೇರಿ, ಬೆಳಗಾವಿ