ರಾಗಿ ಕಟಾವು ಯಂತ್ರಕ್ಕೆ ಬಾಡಿಗೆ ದರ ನಿಗದಿ, ಹೆಚ್ಚುವರಿ ಹಣ ಪಡೆದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ ಡಾ. ಶಿವಶಂಕರ
ವಿಜಯ ದರ್ಪಣ ನ್ಯೂಸ್….
ರಾಗಿ ಕಟಾವು ಯಂತ್ರಕ್ಕೆ ಬಾಡಿಗೆ ದರ ನಿಗದಿ, ಹೆಚ್ಚುವರಿ ಹಣ ಪಡೆದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ
ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ನವೆಂಬರ್ 06, 2024 : ಮುಂಗಾರು ಹಂಗಾಮಿನಲ್ಲಿ ರಾಗಿ ಬೆಳೆಯು 69,230 ಹೆಕ್ಟೇರ್ ಪ್ರದೇಶದಲ್ಲಿ ಆವರಿಸಿದ್ದು, ಬಹುತೇಕ ರಾಗಿ ಬೆಳೆಯು ತೆನೆ ತುಂಬುವ ಹಾಗೂ ಕಟಾವು ಹಂತದಲ್ಲಿರುತ್ತದೆ. ಜಿಲ್ಲೆಯ ಬಹುತೇಕ ರೈತರು ರಾಗಿ ಬೆಳೆಯನ್ನು ಕಟಾವು ಯಂತ್ರಗಳ (combined harvesters) ಮೂಲಕ ಕಟಾವು ಕೈಗೊಳ್ಳುತ್ತಿದ್ದು, ಖಾಸಗಿ ರಾಗಿ ಕಟಾವು ಯಂತ್ರಗಳ ಮಾಲಿಕರು ರೈತರಿಂದ ಪ್ರತಿ ಗಂಟೆಗೆ 3500 ರೂಗಳಿಂದ 4000 ರೂಗಳ ವರೆಗೆ ಬಾಡಿಗೆ ಹಣ ಪಡೆಯುತ್ತಿರುವ ಬಗ್ಗೆ ಜಿಲ್ಲೆಯ ರೈತರುಗಳಿಂದ ದೂರು ಬಂದಿರುತ್ತದೆ.
ಇದರಿಂದ ರೈತರಿಗೆ ಹೆಚ್ಚಿನ ಆರ್ಥಿಕ ಹೊರೆಯಾಗಲಿದೆ. ಪ್ರಸ್ತುತ ಇಂಧನ ವೆಚ್ಚ ಹಾಗೂ ಕಾರ್ಮಿಕರ ಕೂಲಿ ವೆಚ್ಚ ಹೆಚ್ಚಾಗಿದ್ದು, ಇತರೇ ನಿರ್ವಹಣೆ ವೆಚ್ಚಗಳನ್ನು ಪರಿಗಣಿಸಿ ರಾಗಿ ಕಟಾವು ಮಾಡಲು ಯಂತ್ರಕ್ಕೆ ಕಳೆದ ವರ್ಷ ನಿರ್ಧರಿಸಿದಂತೆ, ಪ್ರತಿ ಗಂಟೆಗೆ ನ್ಯೂ ಹಾಲೆಂಡ್/ ಜಾನ್ಡೀರ್ ಕಂಪನಿಯ ದೊಡ್ಡ ಕಟಾವು ಯಂತ್ರಕ್ಕೆ ಗಂಟೆಗೆ 3350 ರೂಗಳು ಹಾಗೂ ಕ್ಲಾಸ್ ಮತ್ತು ಎಸಿಸಿ ಕಂಪನಿಯ ಕಟಾವು ಯಂತ್ರಕ್ಕೆ ಗಂಟೆಗೆ 2700 ರೂಗಳು ಮೀರದಂತೆ ಬಾಡಿಗೆಯನ್ನು ನಿಗದಿಪಡಿಸಿದೆ. ತಪ್ಪಿದ್ದಲ್ಲಿ ರಾಗಿ ಕಟಾವು ಯಂತ್ರದ ಮಾಲೀಕರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆ 2005ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
################################
ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ವಿಕಲಚೇತನರಿಂದ ಅರ್ಜಿ ಆಹ್ವಾನ
ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ನವೆಂಬರ್ 06, 2024 :- ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ 03 ಫಲಾನುಭವಿ ಆಧಾರಿತ ಯೋಜನೆಗಳಿಗೆ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿಕಲಚೇತನ ವ್ಯಕ್ತಿಗಳೊಡನೆ ವಿವಾಹ ಏರ್ಪಡುವ ಪ್ರಕರಣಗಳಲ್ಲಿ, ವಿಕಲಚೇತನ ವ್ಯಕ್ತಿಯ ಹೆಸರಿನಲ್ಲಿ 50,000 ರೂಗಳನ್ನು ಹೂಡಿಕೆಯ ರೂಪದಲ್ಲಿನ ವಿವಾಹ ಪ್ರೋತ್ಸಾಹಧನ ಯೋಜನೆ, ವಿಕಲಚೇತನ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಯೋಜನೆ, ಬುದ್ಧಿಮಾಂದ್ಯರು, ಸೆರಬ್ರಲ್ ಪಾಲ್ಸಿ, ಆಟಿಸಂ ಮತ್ತು ಬಹುವಿಧ ಅಂಗವಿಕಲತೆಗೆ ಒಳಗಾದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ವಿಕಲಚೇತನರಿಗೆ “ನಿರಾಮಯ” ಆರೋಗ್ಯ ವಿಮಾ ಯೋಜನೆಗಳ ಸೌಲಭ್ಯ ಪಡೆಯಬಹುದಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಗೆ ಬರುವ ತಾಲ್ಲೂಕು ಪಂಚಾಯತಿಯಲ್ಲಿರುವ ಎಂ.ಆರ್.ಡಬ್ಲ್ಯೂ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ವಿ.ಆರ್.ಡಬ್ಲ್ಯೂ ಹಾಗೂ ನಗರಸಭೆ/ಪುರಸಭೆ/ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿರುವ ಯು.ಆರ್.ಡಬ್ಲ್ಯೂ ಗಳಿಂದ ನಿಗಧಿತ ಅರ್ಜಿ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಇದೇ ನವ್ಹೆಂಬರ್ 20 ರೊಳಗೆ ಅರ್ಜಿ ಸಲ್ಲಿಸುವ ಮೂಲಕ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ: ತಾಲ್ಲೂಕು ಮಟ್ಟದ ವಿಕಲಚೇತನರ ನೋಡಲ್ ಅಧಿಕಾರಿಗಳನ್ನು ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕೊಠಡಿ ಸಂಖ್ಯೆ-03 ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ ಕುಂದಾಣ ಹೋಬಳಿ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೂರವಾಣಿ ಸಂಖ್ಯೆ: 080-29787441 ಮೂಲಕ ಸಂಪರ್ಕಿಸಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಜಗದೀಶ ಎನ್.ಎಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.