ಕನ್ನಡ ರಾಜ್ಯೋತ್ಸವದ ಶುಭಾಶಯಗಳು……….
ವಿಜಯ ದರ್ಪಣ ನ್ಯೂಸ್…..
ಕನ್ನಡ ರಾಜ್ಯೋತ್ಸವದ ಶುಭಾಶಯಗಳು……….
ಕರ್ನಾಟಕದ ಜನ ಬಹಳ ಬುದ್ದಿವಂತರು – ಒಳ್ಳೆಯವರು,
ಕನ್ನಡ ಭಾಷೆ ವಿಶ್ವ ಶ್ರೇಷ್ಠ,
ಕನ್ನಡ ಇತಿಹಾಸ ಅದ್ಬುತ,
ಕನ್ನಡ ಸಂಸ್ಕೃತಿ ವಿಶ್ವ ಮಾನ್ಯ,
ಕನ್ನಡ ನೆಲದಲ್ಲಿ ಬಸವಣ್ಣ, ಕುವೆಂಪು, ಕೆಂಪೇಗೌಡ, ಕನಕ, ಪುರಂದರ, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ವೀರ ಮದಕರಿ ಮುಂತಾದ ಜಗತ್ ಪ್ರಸಿದ್ದ ನಾಯಕರು ಜನಿಸಿದ್ದಾರೆ,….
ಬೆಳಗಾವಿಯ ಕುಂದ,
ಧಾರವಾಡದ ಪೇಡ,
ಬಳ್ಳಾರಿ ಖಾರ ಮಂಡಕ್ಕಿ,
ಮೈಸೂರು ಪಾಕು,
ತುಮಕೂರಿನ ತಟ್ಟೆ ಇಡ್ಲಿ,
ದಾವಣಗೆರೆಯ ಬೆಣ್ಣೆ ದೋಸೆ,
ಕೋಲಾರದ ಬಂಗಾರ ಪೇಟೆ ಚಾಟ್ಸ್,
ಕಲಬುರಗಿಯ ಖಡಕ್ ರೋಟಿ,
ಕರಾವಳಿ ಭಾಗದ ಕಾಣೆ ಮೀನಿನ ಸಾರು,
ಮಲೆನಾಡಿನ ಹಲಸಿನ ಕಡುಬು,
ಶಿವಮೊಗ್ಗದ ಮಾವಿನ ಶೀಕರಣೆ,
ಉತ್ತರ ಕನ್ನಡದ ಕೆಸುವಿನ ಪಲ್ಯ,
ಹಾಸನದ ಬೈನೇ ಮರದ ಕಳ್ಳು,
ಚಾಮರಾಜನಗರದ ಆದಿವಾಸಿಗಳ ಬೊಂಬು ಬಿರಿಯಾನಿ,
ಕೊಡಗಿನ ಅಕ್ಕಿ ರೊಟ್ಟಿ ಹಂದಿ ಫ್ರೈ,
ಬಿಜಾಪುರದ ಸಿಹಿ ಮಿಶ್ರಿತ ಉಪ್ಪಿನಕಾಯಿ,
ಬೀದರಿನ ಗಡಿಗೆ ಮೊಸರು,
ಯಾದಗಿರಿಯ ಎಣ್ಣಿ ಬದನೆಯಕಾಯಿ ಪಲ್ಯ,
ಮಂಡ್ಯದ ರಾಗಿ ಮುದ್ದೆ, ಬನ್ನೂರು ಕುರಿಯ ತಲೆ ಮಾಂಸ,
ಚಿತ್ರದುರ್ಗದ ಖಾಲಿ ದೋಸೆ,
ಉಡುಪಿಯ ಹೋಳಿಗೆ ತುಪ್ಪ,
ದಕ್ಷಿಣ ಕನ್ನಡದ ಪತ್ರೊಡೆ,
ವಿಜಯನಗರದ ಮೆಣಸಿನಕಾಯಿ ಕಾಯಿ ಬಜ್ಜಿ,
ಚಿಕ್ಕಮಗಳೂರಿನ ಘಮಘಮಿಸುವ ಕಾಫಿ,
ಚಿಕ್ಕಬಳ್ಳಾಪುರದ ಕಡಳೆ ಬೀಜ,
ಬಾಗಲಕೋಟೆಯ ಮೊಳಕೆ ಕಾಳು,
ಹಾವೇರಿಯ ಗೋದಿ ಹುಗ್ಗಿ,
ರಾಯಚೂರಿನ ಪಪ್ಪು ತುಪ್ಪ ಬೆರೆತ ಅನ್ನ,
ಕೊಪ್ಪಳದ ಕಬ್ಬಿನ ರಸ,
ಗದಗಿನ ಪಾಯಸ,
ರಾಮನಗರದ ಮುದ್ದೆ ಸೊಪ್ಪಿನ ಸಾರು,
ಬೆಂಗಳೂರಿನ ಗ್ರಾಮಾಂತರದ ತರಕಾರಿಗಳು,
ಬೆಂಗಳೂರು ನಗರದ ಪುಡ್ ಬಜಾರ್ ಗಳು,
ಹೀಗೆ ಕರ್ನಾಟಕದ ಎಲ್ಲವೂ ಶ್ರೇಷ್ಠ ಶ್ರೇಷ್ಠ ಶ್ರೇಷ್ಠ……….
ನಮ್ಮಲ್ಲಿ ಬಹಳಷ್ಟು ಜನರು ನವೆಂಬರ್ ಕನ್ನಡಿಗರು ಮಾತ್ರವಲ್ಲ, ಕನ್ನಡವನ್ನೇ ಸದಾ ಕಾಲ ಉಸಿರಾಡುತ್ತಿರುವ ತುಂಬಾ ಚಟುವಟಿಕೆಯಿಂದ ಇರುವವರು ಇದ್ದಾರೆ. ಕನ್ನಡದ ಕಟ್ಟಾಳುಗಳಿಗೆ ಬರವಿಲ್ಲ. ಆದರೆ ವಾಸ್ತವ ನೆಲೆಯಲ್ಲಿ, ಕರ್ನಾಟಕ, ಕನ್ನಡ ಭಾಷೆಯ ಅಭಿವೃದ್ಧಿ ಮತ್ತು ವಿಕಾಸದ ದೃಷ್ಟಿಯಿಂದ ಸಮಾಧಾನಕರ ಬೆಳವಣಿಗೆ ಸಾಧ್ಯವಾಗುತ್ತಿಲ್ಲ…..
ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಇಲ್ಲಿನ ಆಡಳಿತ ಮಾಡುವ ಸರ್ಕಾರಗಳ ಜವಾಬ್ದಾರಿ ಹೆಚ್ಚಾಗಿರುತ್ತದೆ. ಜನರೇ ಸರ್ಕಾರಗಳನ್ನು ಆಯ್ಕೆ ಮಾಡುತ್ತಾರೆ ನಿಜ, ಆದರೆ ಸರ್ಕಾರಗಳು ರಚನೆಯಾದ ಮೇಲೆ ಅದರ ಮೇಲೆ ಜನರ ನಿಯಂತ್ರಣವಿಲ್ಲ. ಅಲ್ಲದೇ ಸರ್ಕಾರಗಳು ಜನರ ಒಟ್ಟು ವಿವೇಚನಾಯುಕ್ತ ಮತ್ತು ಸಾಮೂಹಿಕ ಚಿಂತನೆಯ ಫಲವಾಗಿ ಆಯ್ಕೆಯಾಗುವುದಿಲ್ಲ. ಹಣ, ಜಾತಿ, ಧರ್ಮ, ಸುಳ್ಳು ಭರವಸೆ, ಭಾವನಾತ್ಮಕ ವಿಷಯಗಳ ಸೇರಿ ಅನೇಕ ಕೆಟ್ಟ ರೀತಿಯ ವಿಧಾನಗಳಲ್ಲಿ ಆಯ್ಕೆಯಾಗುತ್ತಾರೆ. ಅದರ ಪರಿಣಾಮ…………..
ಬರಿದಾಗುತ್ತಿದೆ ಕರ್ನಾಟಕದ ಖಜಾನೆ…….
ಅಂದಿನ ಸಂಪಾದನೆ ಅಂದಂದಿಗೆ ಮಾತ್ರ ಎಂಬಂತಾಗಿದೆ……
ಬಹುತೇಕ ಕೆಳ ಮಧ್ಯಮ ವರ್ಗದ ಅಥವಾ ಬಡವರ ಮನೆಯ ಸಂಸಾರದಂತಾಗಿದೆ…..
ಮೈನಸ್ ಬಜೆಟ್ ಆಗಿ ಮುಂದುವರಿಯುತ್ತಿದೆ…….
ಹೇಗೋ ಕಷ್ಟ ಪಟ್ಟು ತೂಗಿಸಿಕೊಂಡು ಹೋಗುವಂತಾಗಿದೆ……
ಸುಮಾರು 6 ಲಕ್ಷ ಕೋಟಿಯ ಸಾಲ ಕರ್ನಾಟಕದ ಜನರ ತಲೆಯ ಮೇಲಿದೆ. ಆದಾಯ ಮಾತ್ರ ಸುಮಾರು 2 ಲಕ್ಷ ಕೋಟಿ ಮಾತ್ರ. ಬಜೆಟ್ ಗಾತ್ರ ಸುಮಾರು 4 ಲಕ್ಷ ಕೋಟಿ…..
ಕರ್ನಾಟಕ ಮೂಲದ ವಿಪ್ರೋ, ಇನ್ಫೋಸಿಸ್, ಬಯೋಕಾನ್ ಮುಂತಾದ ಖಾಸಗಿ ಸಂಸ್ಥೆಗಳು ಏರು ಮುಖದ ಪ್ರಗತಿ ದಾಖಲಿಸುತ್ತಿವೆ. ( ಸರ್ಕಾರದ ಲೆಕ್ಕವೂ ಏರು ಮುಖದಲ್ಲಿದೆ ಆದರೆ ಸಾಲ ಮತ್ತು ಬಡ್ಡಿಯ ಲೆಕ್ಕದಲ್ಲಿ………! )
ಇದಕ್ಕೆ ಕೇವಲ ಒಂದು ಪಕ್ಷ, ಸರ್ಕಾರ ಅಥವಾ ವ್ಯಕ್ತಿ ಕಾರಣವಲ್ಲ. ಇಡೀ ಸರ್ಕಾರಿ ವ್ಯವಸ್ಥೆಯ ಇತಿಹಾಸ ಕಾರಣವಾಗಿದೆ….
ಇದೇನು ಆಶ್ಚರ್ಯಪಡುವಂತಹ ವಿಷಯವಲ್ಲ. ಸರ್ಕಾರದ ಆದಾಯ ಖರ್ಚು ಲೆಕ್ಕಗಳನ್ನು ಸೂಕ್ಷ್ಮವಾಗಿ ಮತ್ತು ಕೂಲಂಕಷವಾಗಿ ಪರಿಶೀಲಿಸಿದರೆ ಎಲ್ಲರಿಗೂ ಅರ್ಥವಾಗುತ್ತದೆ….
ಸರ್ಕಾರವೆಂಬುದು ಆಳುವ ಪಕ್ಷಗಳಿಗೆ ಬಾಡಿಗೆ ಮನೆ ಇದ್ದಂತೆ. ಅದು ಯಾವತ್ತಿಗೂ ತಾತ್ಕಾಲಿಕ ಎಂಬ ಅರಿವು ಅಧಿಕಾರಸ್ಥರಿಗೆ ತಿಳಿದಿರುತ್ತದೆ. ಆದ್ದರಿಂದ ಅವರು ಎಷ್ಟು ಸಾಧ್ಯವೋ ಅಷ್ಟು ತಮ್ಮ ಹಿತಾಸಕ್ತಿಗೆ ಅನುಕೂಲಕರ ಕೆಲಸಗಳನ್ನು ಮಾಡಿ ತಕ್ಷಣದ ಲಾಭಗಳನ್ನು ಮಾಡಿಕೊಂಡು ದೀರ್ಘಕಾಲದಲ್ಲಿ ಅದರ ಪರಿಣಾಮಗಳನ್ನು ನಿರ್ಲಕ್ಷಿಸುತ್ತಾರೆ….
ಅದರಿಂದಾಗಿಯೇ ಇವತ್ತಿನ ಖಜಾನೆಯ ಪರಿಸ್ಥಿತಿ. ಇದು ತಾತ್ಕಾಲಿಕವೇ ಇರಬಹುದು. ಮುಂದೆ ಸರಿ ಹೋಗಬಹುದು. ಆದರೆ ಸರ್ಕಾರದ ಮಟ್ಟದಲ್ಲಿ ಈ ಸ್ಥಿತಿ ಒಳ್ಳೆಯದಲ್ಲ. ಒಬ್ಬ ವ್ಯಕ್ತಿ ಅಥವಾ ಒಂದು ಖಾಸಗಿ ಸಂಸ್ಥೆಯ ಏರಿಳಿತಗಳು ಸಹಜ ಮತ್ತು ಅದರ ಪರಿಣಾಮ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಆದರೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳ ಹದ್ದಿನ ಕಣ್ಣಿನಲ್ಲಿ, ಅಂಕಗಳ ದೃಷ್ಟಿಯಿಂದ ಅತಿ ಬುದ್ದಿವಂತರಾದವರು ಇದನ್ನು ನಿರ್ವಹಿಸುತ್ತಿರುತ್ತಾರೆ. ರಾಜ್ಯದ ಎಲ್ಲಾ ಅಧಿಕಾರ ಮತ್ತು ಸಂಪನ್ಮೂಲಗಳು ಅವರ ನಿಯಂತ್ರಣದಲ್ಲಿಯೇ ಇರುತ್ತವೆ. ಅಲ್ಲದೆ ಇಡೀ ರಾಜ್ಯದ ಜನರ ಬದುಕಿನ ಪ್ರಶ್ನೆ ಅಡಗಿರುತ್ತದೆ. ಆದ್ದರಿಂದ ತುಂಬಾ ತುಂಬಾ ಜವಾಬ್ದಾರಿಯುತವಾಗಿ ಆರ್ಥಿಕ ಪರಿಸ್ಥಿತಿ ನಿಭಾಯಿಸಬೇಕಾಗುತ್ತದೆ….
ಕೇವಲ ಇಷ್ಟೇ ಅಲ್ಲ. ಈ ಸರ್ಕಾರ ನಡೆಸಲು ರಾಜ್ಯ ಆದಾಯದ ಅತಿದೊಡ್ಡ ಭಾಗ ಅದರ ನಿರ್ವಹಣೆಗೇ ಹೋಗುತ್ತದೆ. ಹೀಗಿದ್ದರೂ ಅವ್ಯವಸ್ಥೆ ಇದೆ ಎಂದರೆ ಸರ್ಕಾರದ ಅದಕ್ಷತೆಗೆ ಇದಕ್ಕಿಂತ ಉದಾಹರಣೆ ಬೇಕಿಲ್ಲ…..
ಹಾಗಾದರೆ,
ಕರ್ನಾಟಕ ಭಾರತದಲ್ಲಿ ಬಡ ರಾಜ್ಯವೇ ? ಇಲ್ಲಿನ ಆದಾಯ ಕಡಿಮೆಯಾಗುತ್ತಿದೆಯೇ ? ಸಂಪನ್ಮೂಲಗಳು ಬರಿದಾಗಿವೆಯೇ ?
ಖಂಡಿತ ಇಲ್ಲ. ಹಣವೇ ಅಭಿವೃದ್ಧಿ ಎಂದು ಭಾವಿಸಿರುವ ಈ ಆಧುನಿಕ ಕಾಲದಲ್ಲಿ, ಮಾಹಿತಿ ತಂತ್ರಜ್ಞಾನದ ಸೇವೆಯಲ್ಲಿ ಬೆಂಗಳೂರು ವಿಶ್ವದ ಒಂದೋ, ಎರಡನೆಯದೋ, ಮೂಲನೆಯದೋ ಅತಿ ಹೆಚ್ಚು ಹಣ ಸಂಪಾದನೆಯ ನಗರವಾಗಿದೆ. ಶಿಕ್ಷಣ, ಆರೋಗ್ಯ ವಿಷಯದಲ್ಲೂ ಮುಂಚೂಣಿಯಲ್ಲಿದೆ. ಪ್ರವಾಸೋದ್ಯಮದಲ್ಲಿ ಮೈಸೂರು, ರೇಷ್ಮೆ ಬೆಳೆಯಲ್ಲಿ ರಾಮನಗರ, ಮತ್ಸೋದ್ಯಮದಲ್ಲಿ ಕರಾವಳಿ ಕರ್ನಾಟಕ, ಅಡಿಕೆ ಕಾಫಿ ಉತ್ಪಾದನೆಯಲ್ಲಿ ಮಲೆನಾಡು, ವಾಣಿಜ್ಯ ನಗರಗಳಾಗಿ ಹುಬ್ಬಳ್ಳಿ ಬೆಳಗಾವಿ, ದ್ರಾಕ್ಷಿ ದಾಳಿಂಬೆ ತರಕಾರಿ ಕೃಷಿಯಲ್ಲಿ ಬಿಜಾಪುರ ಯಾದಗಿರಿ, ಸಿದ್ದ ಉಡುಪು ಕ್ಷೇತ್ರದಲ್ಲಿ ದಾವಣಗೆರೆ, ಚಿನ್ನದ ಉತ್ಪಾದನೆಯಲ್ಲಿ ಕೋಲಾರ, ಹಟ್ಟಿ ಮುಂತಾದ ಲಾಭದಾಯಕ ಪ್ರದೇಶಗಳನ್ನು ಕರ್ನಾಟಕ ಒಳಗೊಂಡಿದೆ.
ಆದರೂ ಈ ಪರಿಸ್ಥಿತಿ ಏಕೆ ?
ವಾಸ್ತವದಲ್ಲಿ ಸರ್ಕಾರದ ಆದಾಯ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಆದರೆ ಅದನ್ನು ಖರ್ಚು ಮಾಡುವ ರೀತಿ ಅಸಮರ್ಪಕವಾಗಿದೆ. ಮುಖ್ಯವಾಗಿ ಭ್ರಷ್ಟಾಚಾರ ಮತ್ತು ದುಂದು ವೆಚ್ಚ ಇದಕ್ಕೆ ಅತಿಮುಖ್ಯ ಕಾರಣವಾಗಿದೆ. ಉದಾಹರಣೆಗೆ 100 ರೂಪಾಯಿ ಖರ್ಚು ಮಾಡುವ ಅವಶ್ಯಕತೆ ಇರುವಲ್ಲಿ ಸುಮಾರು 500 ರಷ್ಟು ರೂಪಾಯಿ ಅಧಿಕೃತವಾಗಿಯೇ ಖರ್ಚಾಗುತ್ತದೆ. ಪಾರದರ್ಶಕ ಕಾನೂನು, ಟೆಂಡರ್ ಪ್ರಕ್ರಿಯೆ ಎಲ್ಲಾ ಇದ್ದರೂ ಆ ನಿಯಮಗಳನ್ನು ಸಹ ವಂಚಿಸಲಾಗುತ್ತದೆ…..
ಈ ಅವ್ಯವಸ್ಥೆ ತಡೆಯಲು ನಮ್ಮಲ್ಲಿ ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ ಎಂಬ ಲೆಕ್ಕ ಪತ್ರ ಇಲಾಖೆಯಿದೆ. ರಿಸರ್ವ್ ಬ್ಯಾಂಕ್, ಚುನಾವಣಾ ಆಯೋಗ, ತೆರಿಗೆ ಇಲಾಖೆಯ ರೀತಿ ಇದೂ ಸಹ ಸರ್ಕಾರದ ನಿಯಂತ್ರಣದಲ್ಲಿ ಇಲ್ಲದ ಸ್ವಾಯುತ್ತ ಸಂಸ್ಥೆ. ಸರ್ಕಾರದ ಪ್ರತಿ 1 ರೂಪಾಯಿ ಖರ್ಚು ವೆಚ್ಚ ಮತ್ತು ಅದರ ಸದುಪಯೋಗದ ಮೇಲೆ ನಿಗಾ ಇಡುವ ಸಂಸ್ಥೆ ಇದು. ಆದರೂ ವ್ಯವಸ್ಥೆಯ ಮೇಲೆ ನಿಯಂತ್ರಣ ಸಾಧ್ಯವಾಗುತ್ತಿಲ್ಲ….
ಸಾಮಾನ್ಯ ಪರಿಸ್ಥಿತಿಯಲ್ಲಿಯೇ ಹಣದ ಕೊರತೆಯ ವಿಷಯದಲ್ಲಿ ಎದುಸಿರು ಬಿಡುತ್ತಿರುವಾಗ ಇನ್ನು ಪ್ರಾಕೃತಿಕ ವಿಕೋಪ ಮುಂತಾದ ಸಂದರ್ಭದಲ್ಲಿ ಭೀಕರತೆ ಎದುರಾಗದೆ ಇರುತ್ತದೆಯೇ ?
ಸರ್ಕಾರಗಳು ಓಟಿನ ರಾಜಕೀಯದಲ್ಲಿ ತಮಗೆ ಇಷ್ಟ ಬಂದಂತೆ ಯೋಜನೆಗಳನ್ನು ಘೋಷಿಸುತ್ತಾರೆ. ಯಾವುದೇ ಪೂರ್ವ ತಯಾರಿ, ಹಣಕಾಸಿನ ನಿರ್ಧಿಷ್ಟ ಮಾನದಂಡ ಇರುವುದಿಲ್ಲ. ಹೇಗೋ ಮುಂದೆ ನೋಡೋಣ. ಈಗ ಜನ ಮೆಚ್ಚಿದರೆ ಸಾಕು ಎಂದು ಧೋರಣೆ ಇವರದು. ಜನರೂ ಸಹ ತಾತ್ಕಾಲಿಕ ಲಾಭಕ್ಕೆ ಹೆಚ್ಚು ಕಾತುರರಾಗಿರುತ್ತಾರೆ. ಅದಕ್ಕಾಗಿ ಮತ್ತೆ ಮತ್ತೆ ಬಹುದೊಡ್ಡ ಸಾಲ. ಆ ಎಲ್ಲದರ ಪರಿಣಾಮ ಸದ್ಯಕ್ಕೆ ದಿವಾಳಿಯತ್ತ ಕರ್ನಾಟಕ ಸರ್ಕಾರದ ಆರ್ಥಿಕ ಪರಿಸ್ಥಿತಿ…..
ಭಯ ಪಡುವ ಅವಶ್ಯಕತೆ ಇಲ್ಲ. ಕರ್ನಾಟಕ ನಿಜಕ್ಕೂ ಸಂಪದ್ಭರಿತ ರಾಜ್ಯ. ಆದರೆ ಇತ್ತೀಚಿನ ಕೆಟ್ಟ ರಾಜಕೀಯದಲ್ಲಿ, ಜಾತಿ ಅಭಿಮಾನದಲ್ಲಿ,
ಮತ್ತು ಒಟ್ಟು ವ್ಯವಸ್ಥೆಯ ಭ್ರಷ್ಟಾಚಾರದಲ್ಲಿ ನಲುಗುತ್ತಿದೆ….
ಜನರು ಚುನಾವಣಾ ವ್ಯವಸ್ಥೆಯಲ್ಲಿ ಜಾಗೃತರಾದರೆ ಇದಕ್ಕೆ ಪರಿಹಾರ ಖಂಡಿತ ಸಿಗುತ್ತದೆ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯದ ಜನತೆಯ ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ ಪ್ರಬುದ್ದರಾಗಿಸುವ ಕೆಲಸ ನಾವು ಮಾಡೋಣ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068…..