ಸರ್ಕಾರವೇ ಶೋಷಿಸುತ್ತಿರುವ ದಿನಗೂಲಿ ನೌಕರರು…….
ವಿಜಯ ದರ್ಪಣ ನ್ಯೂಸ್…
ಸರ್ಕಾರವೇ ಶೋಷಿಸುತ್ತಿರುವ ದಿನಗೂಲಿ ನೌಕರರು…….
ಬಿಸಿಯೂಟದ ಕಾರ್ಮಿಕರು ಮನುಷ್ಯರಲ್ಲವೇ ?
ಅವರೇನು ಜೀತದಾಳುಗಳೇ ?
ಅವರಿಗಾಗುತ್ತಿರುವ ಅನ್ಯಾಯಗಳನ್ನು ಕೇಳುವವರಾರು ?
ಬಿಸಿಯೂಟದ ಕಾರ್ಯಕರ್ತರು ಅಂದರೆ ಸರ್ಕಾರಿ ಶಾಲೆಗಳಲ್ಲಿ ಅಡುಗೆ ಮಾಡುವವರಿಗೆ ಪ್ರತಿ ತಿಂಗಳು ಸರ್ಕಾರ 3700 ರೂಪಾಯಿಗಳನ್ನು ನೀಡುತ್ತಿದೆ. ಇದನ್ನು ಸಂಬಳ ಎನ್ನದೆ ಗೌರವಧನ ಎಂದು ಕರೆಯಲಾಗುತ್ತದೆ………
ಬೆಳಗ್ಗೆ 9 ರಿಂದ ಸುಮಾರು ಮಧ್ಯಾಹ್ನ 3 ಗಂಟೆಯವರೆಗೆ ಅವರು ಕಾರ್ಯನಿರ್ವಹಿಸಬೇಕು. ಮಕ್ಕಳಿಗೆ ಹಾಲು ಕಾಯಿಸಿ ಕೊಡುವುದು, ಮೊಟ್ಟೆ ಬೇಯಿಸುವುದು, ಅಡುಗೆ ಮಾಡುವುದು, ಬಡಿಸುವುದು ಹಾಗೂ ಆ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಇವರ ಕೆಲಸ. ಈ ಗೌರವ ಧನವನ್ನು ಸಹ ಪ್ರತಿ ತಿಂಗಳು ಸರಿಯಾಗಿ ಪಾವತಿಸದೆ ಮೂರು ತಿಂಗಳಿಗೋ ನಾಲ್ಕು ತಿಂಗಳಿಗೋ ಒಮ್ಮೆ ನೀಡಲಾಗುತ್ತದೆ. ಅಲ್ಲಿಯವರೆಗೂ ಬಹಳಷ್ಟು ಕೆಲಸಗಾರರು ಅವರಿವರ ಬಳಿ ಕೈಸಾಲ ಮಾಡಿ ಜೀವನ ಸಾಗಿಸುತ್ತಾರೆ. ಏಕೆಂದರೆ ಈ ಕೆಲಸಕ್ಕೆ ಬರುವವರು ಬಹುತೇಕ ಅತ್ಯಂತ ಕಡುಬಡವರೇ ಆಗಿರುತ್ತಾರೆ ಮತ್ತು ಮಹಿಳೆಯರು…….
ಕರ್ನಾಟಕ ರಾಜ್ಯದಲ್ಲಿ ಒಬ್ಬ ವ್ಯಕ್ತಿ ಮತ್ತು ಕುಟುಂಬ ಸಹಜವಾಗಿ ಸಾಮಾನ್ಯ ರೀತಿಯಲ್ಲಿ ಬದುಕಲು ಎಷ್ಟು ಹಣ ಬೇಕಾಗಬಹುದು. ಸರ್ಕಾರವೇ ಕನಿಷ್ಠ ವೇತನವನ್ನು ಸುಮಾರು 15/18 ಸಾವಿರ ಮಾಸಿಕ ಎಂದು ನಿಗದಿಪಡಿಸಿರುವಾಗ ಇದೇ ಸರ್ಕಾರ ಅಡುಗೆಯವರಿಗೆ ಕೇವಲ 3700 ರೂಪಾಯಿಗಳನ್ನು ಗೌರವ ಧನದ ಹೆಸರಿನಲ್ಲಿ ಕೊಟ್ಟು ಅವರನ್ನು ನಿರಂತರವಾಗಿ ಶೋಷಿಸುತ್ತಿರುವುದು ಬಹುದೊಡ್ಡ ಅನ್ಯಾಯವಲ್ಲವೇ. ಅಷ್ಟು ಹಣದಲ್ಲಿ ಜೀವನ ಸಾಗಿಸುವುದು ಸಾಧ್ಯವೇ, ಅವರು ನಮ್ಮವರೇ ಅಲ್ಲವೇ………
ಕನಿಷ್ಠ ಮಾನವೀಯತೆ ಸರ್ಕಾರದ ಮುಖ್ಯಮಂತ್ರಿಗಳಿಗಾಗಲಿ, ಸಂಬಂಧಿಸಿದ ಮಂತ್ರಿಗಳಿಗಾಗಲಿ, ಮುಖ್ಯ ಕಾರ್ಯದರ್ಶಿಗಳಿಗಾಗಲಿ, ಇಲಾಖೆಯ ಆಯುಕ್ತರಿಗಾಗಲಿ ಅಥವಾ ಇದನ್ನು ಅರ್ಥೈಸಬೇಕಾದ ಮುಖ್ಯ ನ್ಯಾಯಾಧೀಶರಿಗಾಗಲಿ ಕಾಣುತ್ತಿಲ್ಲವೇ. ನಮ್ಮದೇ ದೇಶದ, ನಮ್ಮದೇ ರಾಜ್ಯದ ಪ್ರಜೆಗಳ ಅಸಹಾಯಕತೆಯನ್ನು ಇಷ್ಟೊಂದು ಕೀಳಾಗಿ ಕಂಡು ಅವರನ್ನು ಈ ರೀತಿ ದುಡಿಸಿಕೊಳ್ಳುವುದು ಯಾವ ನ್ಯಾಯ…….
ಕರ್ನಾಟಕ ಇಡೀ ದೇಶದಲ್ಲೇ ಅತ್ಯಂತ ಸಂಪದ್ಭರಿತವಾದ ರಾಜ್ಯ. ಇಲ್ಲಿನ ವಿಧಾನಸಭಾ ಚುನಾವಣಾ ವೆಚ್ಚಕ್ಕೆ ಒಬ್ಬ ಅಭ್ಯರ್ಥಿ ಸರಾಸರಿ 25 ಕೋಟಿಗೂ ಹೆಚ್ಚು ಹಣ ಖರ್ಚು ಮಾಡುತ್ತಾರೆ. ದೇಶದಲ್ಲೇ ಎಮ್ಮೆಲ್ಲೆಗಳ ಸರಾಸರಿ ವಾರ್ಷಿಕ ಆದಾಯ ಸುಮಾರು 70 ಕೋಟಿ ಇರುವುದು ಕರ್ನಾಟಕದಲ್ಲಿ. ಈ ವಿಷಯದಲ್ಲಿ ಕರ್ನಾಟಕ ಮೊದಲನೆಯ ಸ್ಥಾನದಲ್ಲಿದೆ. ಇಲ್ಲಿನ ರಾಜಧಾನಿ ಬೆಂಗಳೂರು ವಿಶ್ವದಲ್ಲೇ ಐಟಿ ಬಿಟಿ ಸಿಟಿ ಎಂದು ಹೆಸರಾಗಿದೆ. ದೇಶದಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಏಳು ಕೋಟಿ ಜನಸಂಖ್ಯೆಯ ಈ ರಾಜ್ಯದ ಬಜೆಟ್ ಸುಮಾರು 4 ಲಕ್ಷ ಕೋಟಿ. ಹೀಗಿರಬೇಕಾದರೆ ಮಕ್ಕಳಿಗೆ ಬಿಸಿಯುಟ ತಯಾರಿಸುವ ಕೆಲಸಗಾರರಿಗೆ ತಿಂಗಳಿಗೆ 3700 ರೂಪಾಯಿಗಳನ್ನು ಕೊಡುತ್ತಿರುವ ತೀರಾ ಮೋಸವಲ್ಲವೇ…..
ಈಗ ರಾಜ್ಯದಲ್ಲಿ ಉಪ ಚುನಾವಣಾ ಪರ್ವ. ಅದಕ್ಕಾಗಿ ಮೂರೂ
ಪಕ್ಷಗಳು ಮಾಡಿಕೊಳ್ಳುತ್ತಿರುವ ಸಿದ್ಧತೆ, ಮುಂದೆ ಮಾಡಬಹುದಾದ ಹಣಕಾಸಿನ ಖರ್ಚು ವೆಚ್ಚ, ರಾಜ್ಯದ ಶಾಸಕರುಗಳು, ಸಂಸದರು ವಾಸಿಸುತ್ತಿರುವ ಮನೆ, ಓಡಾಡುತ್ತಿರುವ ವಾಹನ, ಸೇವಿಸುತ್ತಿರುವ ಆಹಾರ, ತೊಡುತ್ತಿರುವ ಬಟ್ಟೆ, ಅಧಿಕಾರಿಗಳು ಪಡೆಯುತ್ತಿರುವ ಸಂಬಳ ಎಲ್ಲವನ್ನು ಒಮ್ಮೆ ನೋಡಿದರೆ ಬಿಸಿಯೂಟದ ಕೆಲಸದವರು ಪಡೆಯುತ್ತಿರುವ ಹಣ ಎಷ್ಟು ಕಡಿಮೆ ಎಂಬುದು ಮನದಟ್ಟಾಗುತ್ತದೆ……
ಅವರೂ ಮನುಷ್ಯರೇ ಅಲ್ಲವೇ, ಅವರಿಗೂ ಕುಟುಂಬವಿದೆಯಲ್ಲವೇ, ಜೀವನ ಸಾಗಿಸಬೇಕಲ್ಲವೇ. ಈಗಿನ ಸಂದರ್ಭದಲ್ಲಿ ಇಷ್ಟು ಗಂಟೆ ಇಲ್ಲಿ ಕೆಲಸ ಮಾಡಿ ಮತ್ತೆ ಯಾವುದಾದರೂ ಉಪ ಕಸುಬು ಮಾಡಲು ಎಲ್ಲರಿಗೂ ಸಾಧ್ಯವೇ, ಸಮಯ ಸಿಗುತ್ತದೆಯೇ ಅಥವಾ ಕೆಲಸ ಸಿಗುತ್ತದೆಯೇ…….
ಏನಾದರೂ ಆಗಲಿ ಒಂದು ಕೆಲಸಕ್ಕೆ ಒಬ್ಬ ವ್ಯಕ್ತಿಗೆ ಕನಿಷ್ಠ ವೇತನದ ಮಾನದಂಡ ಬೇಡವೇ, ಅಡುಗೆ ಕೆಲಸ ಏನು ಸುಲಭವೇ, ಅತ್ಯಂತ ಜವಾಬ್ದಾರಿ ಕೆಲಸವಲ್ಲವೇ. ಶ್ರಮವೂ ಇದೆ, ಜವಾಬ್ದಾರಿಯೂ ಇದೆ, ಸುರಕ್ಷತೆಯೂ ಇರಬೇಕು, ರುಚಿ ಮತ್ತು ಸ್ವಚ್ಚತೆಯೂ ಇರಬೇಕು. ಈ ಎಲ್ಲವನ್ನು ಅವರು ನಿಭಾಯಿಸಬೇಕಾಗಿರುವಾಗ ಆರ್ಥಿಕವಾಗಿ ಅವರಿಗೂ ಸಹ ಸಮಾಧಾನವಾಗುವ ಒಂದಷ್ಟು ಹಣ ನೀಡಬೇಕಲ್ಲವೇ…..
ಮಾನ್ಯ ಮುಖ್ಯಮಂತ್ರಿಗಳು, ಕಾರ್ಮಿಕ ಸಚಿವರು, ಶಿಕ್ಷಣ ಮಂತ್ರಿಗಳು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ತಾವು ಈ ಮುಂದಿನ ಉಪ ಚುನಾವಣೆಗಳನ್ನು ಗೆಲ್ಲುವುದು ಸೋಲುವುದು ಮುಖ್ಯವಲ್ಲ. ತಮ್ಮ ಅಧಿಕಾರದ ಅವಧಿಯಲ್ಲಿ ಈ ರೀತಿ ಅಸಹಾಯಕರಿಗೆ ಎಷ್ಟು ಸಹಾಯ ಮಾಡಿದ್ದೀರಿ ಎಂಬುದು ಬಹಳ ಮುಖ್ಯ. ಅದೇ ನಿಜವಾದ ರಾಜಕೀಯ ಮತ್ತು ಸಾರ್ವಜನಿಕ ಸೇವೆ…….
ಅಂಗನವಾಡಿ ಕಾರ್ಯಕರ್ತರೇ ಆಗಿರಲಿ, ಆಶಾ ಕಾರ್ಯಕರ್ತೆಯರೇ ಆಗಿರಲಿ ಅಥವಾ ಯಾವುದೇ ಇಲಾಖೆಯ ದಿನಗೂಲಿ ನೌಕರರಾಗಿರಲಿ ಸರ್ಕಾರ ಮಾಡಿರುವ ಆ ಕನಿಷ್ಠ ವೇತನವನ್ನು ಜಾರಿಗೊಳಿಸಲೇಬೇಕು. ಕಾನೂನಿನ ಯಾವುದೋ ನೆಪ ಹೇಳಿ ಅಥವಾ ಇನ್ಯಾವುದೋ ಹೆಸರಿನಲ್ಲಿ ನಿರುದ್ಯೋಗಿಗಳ ಅಸಹಾಯಕತೆಯನ್ನು ಹೀಗೆ ದುರುಪಯೋಗ ಪಡಿಸಿಕೊಳ್ಳುವುದು ಅತ್ಯಂತ ಅಮಾನವೀಯ. ಇದನ್ನು ಮುಂದಿನ ಅಧಿವೇಶನದಲ್ಲಿ ಯಾರಾದರೂ ಶಾಸಕರು ಪ್ರಸ್ತಾಪಿಸಿ ದಯವಿಟ್ಟು ಅವರಿಗೆ ನ್ಯಾಯ ಒದಗಿಸಬೇಕು…..
ಇಂತಹ ಒಂದು ವಿಷಯವನ್ನು ನಿಜಕ್ಕೂ ಮಾಧ್ಯಮಗಳು ಗಂಭೀರವಾಗಿ ಚರ್ಚಿಸಬೇಕು. ಯಾವುದೋ ಮೂರು ಕ್ಷೇತ್ರಗಳ ಉಪ ಚುನಾವಣೆಯನ್ನು ಬಹುದೊಡ್ಡವಾಗಿ ಚಿತ್ರಿಸಿ ಅನಾವಶ್ಯಕ ಚರ್ಚೆಗಳನ್ನು ದಿನಗಟ್ಟಲೆ ಮಾಡುವ ಬದಲು, ಈ ರೀತಿಯ ಒಂದು ಸಾಮಾಜಿಕ ಸಮಸ್ಯೆಯನ್ನು ಚರ್ಚಿಸಿ ಜನಾಭಿಪ್ರಾಯ ರೂಪಿಸಿ ಸರ್ಕಾರದ ಮೇಲೆ ಒತ್ತಡ ತಂದು ಈ ಬಿಸಿಯೂಟದ ನೌಕರರಿಗೆ ಹೆಚ್ಚು ಹಣ ಸಿಗುವಂತೆ ಮಾಡುವುದು ನಿಜವಾದ ಅಭಿವ್ಯಕ್ತಿ ಸ್ವಾತಂತ್ರ್ಯ ಅಥವಾ ಮಾಧ್ಯಮ ಸ್ವಾತಂತ್ರ್ಯದ ಜವಾಬ್ದಾರಿ…….
ಸರ್ಕಾರವೇ ಕಣ್ಣು ತೆರೆದು ನೋಡಿ. ಬೇಕಾದರೆ ವಿಶ್ವದಲ್ಲೇ ಅತ್ಯುತ್ತಮ ಗುಣಮಟ್ಟದ ಉದ್ಯೋಗಿಗಳ ಯೋಗಕ್ಷೇಮ ನೋಡಿಕೊಳ್ಳುವ ಗೂಗಲ್ ಕಂಪನಿಯ ಬಗ್ಗೆ ಅಧ್ಯಯನ ಮಾಡಿ ಮಾಹಿತಿ ಪಡೆದು ವರದಿ ಸಂಗ್ರಹಿಸಿ. ಆಗ ನಿಮಗೆ ಅರ್ಥವಾಗುತ್ತದೆ…….
ಒಂದು ದೊಡ್ಡ ಹೋರಾಟ ರೂಪುಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ, ಯಾವುದೋ ನೆಪಗಳು ಬೇಡ. ನಿಮ್ಮದೇ ಕನಿಷ್ಠ ವೇತನ ಜಾರಿಗೊಳಿಸಲು ಮುಂದಾಗಿ,
ಧನ್ಯವಾದಗಳು, ಶುಭೋದಯ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068…….