ಜಾನಪದ ಪರಂಪರೆಯು ಹಿನ್ನೆಲೆಗೆ ಜಾರುತ್ತಾ ಬಂದಿದೆ : ಪ್ರೊ. ಪುರುಷೋತ್ತಮ ಬಿಳಿಮಲೆ ವಿಷಾಧ .
ವಿಜಯ ದರ್ಪಣ ನ್ಯೂಸ್…..
ಜಾನಪದ ಪರಂಪರೆಯು ಹಿನ್ನೆಲೆಗೆ ಜಾರುತ್ತಾ ಬಂದಿದೆ : ಪ್ರೊ. ಪುರುಷೋತ್ತಮ ಬಿಳಿಮಲೆ ವಿಷಾಧ
ತಾಲ್ಲೂಕಿನ ಕೆರೆಮೇಗಳದೊಡ್ಡಿಯ ಮುದ್ದುಶ್ರೀ ದಿಬ್ಬದಲ್ಲಿ ಭಾನುವಾರ ನಡೆದ ಡಾ. ಎಂ. ಬೈರೇಗೌಡ ಸಂಪಾದಕತ್ವದ ‘ಜಾನಪದ ತಿಜೋರಿ’ ಮಾಸಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ಈಶಾನ್ಯ ರಾಜ್ಯಗಳು ಸೇರಿದಂತೆ ಬುಡಕಟ್ಟು ಜನರು ಹೆಚ್ಚಾಗಿರುವೆಡೆ ಬೇರೂರಿರುವ ಸಂಘ ಪರಿವಾರ, ಅಲ್ಲಿನವರಿಗೆ ತಮ್ಮ ಬುಡಕಟ್ಟಿನ ಮೂಲ ಸಂಸ್ಕೃತಿಯನ್ನೇ ಮರೆಸಿ ವೈದಿಕ ಸಂಸ್ಕೃತಿಯತ್ತ ವಾಲುವಂತೆ ಮಾಡಿದೆ. ಅಲ್ಲಿ ವೈದಿಕ ದೇವಾಲಯಗಳ ನಿರ್ಮಾಣವಾಗುತ್ತ, ಬುಡಕಟ್ಟು ದೇವರುಗಳು ಮತ್ತವರ ಆಚರಣೆಗಳೇ ಕಣ್ಮರೆಯಾಗುತ್ತಿವೆ. ಬುಡಕಟ್ಟು ಜನಾಂಗದ ಮನೆಯ ಗೋಡೆಗಳ ಮೇಲೆ ಸೀತಾರಾಮ ಲಕ್ಷ್ಮಣರ ಫೋಟೊ ನೇತಾಡುತ್ತಿದೆ’ ಎಂದರು.
‘ಬುಡಕಟ್ಟು ಜನರ ಮೇಲಿನ ಹಿಂದುತ್ವದ ಪ್ರಯೋಗವು ಬಿಜೆಪಿಯ ಮತ ಬ್ಯಾಂಕ್ ಹೆಚ್ಚಿಸಿದ್ದು, ಈಶಾನ್ಯ ರಾಜ್ಯಗಳಲ್ಲಿ ಅದರ ನೆಲೆಯನ್ನು ವಿಸ್ತರಿಸಿದೆ. ಊರು ಕಾಪಾಡುವೆ ಎನ್ನುತ್ತಿದ್ದ ರಾಜ್ಯದ ಕರಾವಳಿಯ ಭೂತಗಳು, ಈಗ ಹಿಂದೂಗಳನ್ನು ನಾನು ಕಾಪಾಡುತ್ತೇನೆ ಎನ್ನತೊಡಗಿವೆ’ ಎಂದು ವಿಶ್ಲೇಷಿಸಿದರು.
‘ಹಿಂದುತ್ವದಿಂದಾಗಿ ನಮ್ಮ ಜಾನಪದೀಯ ದೇವತೆಗಳು ಪ್ರಾಣ ಕಳೆದುಕೊಳ್ಳುತ್ತಿದ್ದು, ಜನ ಈಗ ವೈದಿಕ ದೇವರುಗಳ ಮೊರೆ ಹೋಗುತ್ತಿದ್ದಾರೆ. ನಮ್ಮ ಪರಂಪರೆಯು ಬಿಕ್ಕಟ್ಟಿನಲ್ಲಿದೆ. ಜಾನಪದ ಸಾಹಿತ್ಯದ ಪರಂಪರೆ ಕಳೆದುಕೊಂಡಷ್ಟು ಭಾರತದ ಸಾಂಸ್ಕೃತಿಕತೆ ನಾಶವಾಗಿ ಹೋಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ದೇಶದ ಪ್ರಮುಖ ವಿ.ವಿ.ಗಳ ಸೀಟುಗಳನ್ನು ಆಕ್ರಮಿಸುತ್ತಿರುವ ವಿದೇಶಿ ವಿದ್ಯಾರ್ಥಿಗಳಿಂದಾಗಿ, ನಮ್ಮ ಶಿಕ್ಷಣದ ವ್ಯವಸ್ಥೆಯೇ ಬದಲಾಗುತ್ತಿದೆ. ಅಂತರರಾಷ್ಟ್ರೀಯ ಮಟ್ಟದ ಕ್ರೆಡಿಟ್‌ಗೆ ಹಾತೊರೆಯುತ್ತಿರುವ ನಮ್ಮ ವಿ.ವಿ.ಗಳಲ್ಲಿ ಪ್ರಾದೇಶಿಕ ಸಂಸ್ಕೃತಿಗೆ ಬೆಲೆಯೇ ಇಲ್ಲವಾಗಿದೆ. ಇದರ ನಡುವೆ ಬಹುದೊಡ್ಡ ಪ್ರಮಾಣದಲ್ಲಿ ವಿದೇಶಿ ಯೂನಿವರ್ಸಿಟಿಗಳು ದೇಶದಲ್ಲಿ ತಲೆ ಎತ್ತುತ್ತಿದ್ದು, ದೆಹಲಿ ಒಂದರಲ್ಲೇ ಇಪ್ಪತ್ತೆರಡು ವಿ.ವಿ.ಗಳಿವೆ’ ಎಂದು ಹೇಳಿದರು.
‘ಜಾಗತೀಕರಣದ ಈ ಕಾಲಘಟ್ಟದಲ್ಲಿ ಸಾಮಾಜಿಕ ನ್ಯಾಯವೇ ಅಪ್ರಸ್ತುತವಾಗಿದೆ. ಆದರೂ, ನಾವು ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಮೀಸಲಾತಿಗೆ ಬಡಿದಾಡುತ್ತಿದ್ದೇವೆ. ಕಬ್ಬು ಬೆಳೆದು ಬೆಲ್ಲ ತಯಾರು ಮಾಡುತ್ತಿದ್ದ ಗೂಡು(ಬೆಲ್ಲ)ಗಾಂವ್ ಜಾಗತೀಕರಣದ ಪ್ರಭಾವಕ್ಕೆ ಸಿಲುಕಿ, ದ್ರೋಣಾಚಾರ್ಯರಿದ್ದ ಜಾಗವೆಂಬ ಪ್ರತೀತಿಯೊಂದಿಗೆ ಗುರುಗಾಂವ್ ಆಗಿಹೋಗಿದೆ. ತನ್ಮೂಲಕ ಅಲ್ಲಿನ ಜಾನಪದ ನಶಿಸಿ ಹೋಗುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳು ಬೀಡುಬಿಟ್ಟಿರುವ ಇಲ್ಲಿ ಹನ್ನೆರಡು ಲಕ್ಷ ಉದ್ಯೋಗಿಗಳಿದ್ದಾರೆ. ಸರ್ಕಾರ ಸೃಷ್ಟಿಸಿದ ಉದ್ಯೋಗಗಳ ಸಂಖ್ಯೆ ಐದುನೂರನ್ನೂ ದಾಟದು. ಗ್ರೂಪ್ ‘ಸಿ’ ಮತ್ತು ‘ಡಿ’ ಹುದ್ದೆಗಳನ್ನು ಹೊರಗುತ್ತಿಗೆ ಮೇಲೆ ನೇಮಕ ಮಾಡಿಕೊಳ್ಳುತ್ತಿದೆ. ಖಾಲಿ ಹುದ್ದೆಗಳ ಭರ್ತಿಗೆ ಗ್ರಹಣವೇ ಹಿದುಬಿಟ್ಟಿದೆ. ವಿಶ್ವವಿದ್ಯಾಲಯಗಳಲ್ಲಿ ಖಾಲಿಯಾಗುವ ಬೋಧಕ, ಬೋಧಕೇತರ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರು, ಸಿಬ್ಬಂಧಿಗಳನ್ನು ತಂದು ತುಂಬುತ್ತಿದ್ದಾರೆ. ಸಾಮಾಜಿಕ ನ್ಯಾಯ ಎಂಬ ಆಶಯವೇ ದಿನದಿಂದ ದಿನಕ್ಕೆ ಸವಕಲಾಗುತ್ತಿದೆ’ ಎಂದು ಬಿಳಿಮಲೆ ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ ‘ಇತ್ತೀಚಿನ ವರ್ಷಗಳಲ್ಲಿ ಕನ್ನಡದಲ್ಲಿ ‘ಹೊಡಿ ಮಗಾ… ಬಿಡಬೇಡ ಅವನ್ನಾ…’, ‘ಅಪ್ಪ ಲೂಸಾ… ಅಮ್ಮ ಲೂಸಾ…’, ‘ಸಾರಾಯಿ ಸೀಸೆಯಲ್ಲಿ ನನ್ನ ದೇವಿ ಕಾಣುವಳು…’ ಇತ್ಯಾದಿ ಹಾಡುಗಳ ಸಾಹಿತ್ಯ ಜನಪ್ರಿಯವಾಗುತ್ತಿದೆ. ಹಾಡುಗಬ್ಬದ ಪರಂಪರೆಗೇ ಕಪ್ಪುಚುಕ್ಕೆಯಾಗಿರುವ ಈ ಬಗೆಯ ಹಾಡು-ಸಂಗೀತಕ್ಕೆ ದೊಡ್ಡ ಮಾರುಕಟ್ಟೆ ಇದೆ. ಇದನ್ನು ಪ್ರಶ್ನಿಸುವವರೇ ಇಲ್ಲವಾಗಿದೆ. ಈಗ ಪ್ರಶ್ನಿಸುವುದೂ ಅಪರಾಧ ಎನ್ನುವ ಮಟ್ಟಿಗೆ ಸಮಾಜ ಇಂತಹದ್ದನ್ನೆಲ್ಲಾ ಒಪ್ಪಿಕೊಂಡಿದೆ. ಬೈರೇಗೌಡರು ಇಟ್ಟಿರುವುದು ದೊಡ್ಡ ಹೆಜ್ಜೆ. ಬೆಳೆ ಮತ್ತು ಕಳೆ ಒಂದೇ ಕಡೆ ಇರುತ್ತದೆ. ರೈತ ಕಳೆ ಕಿತ್ತು ಹಾಕಿ ಬೆಳೆ ಉಳಿಸಿಕೊಳ್ಳುತ್ತಾನೆ. ಗೌಡರು ಈ ಆಶಯವನ್ನು ಸಾಕಾರಗೊಳಿಸುವರು ಎಂಬ ಭರವಸೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ನಮ್ಮಲ್ಲಿನ ಹಲವು ವಿ.ವಿ.ಗಳು ತಾವು ಮಾಡಬೇಕಾದ ಕೆಲಸ ಮಾಡುತ್ತಿಲ್ಲ. ಪ್ರಕಟಣೆಗಳು ಸಂಪೂರ್ಣ ಸ್ಥಗಿತವಾಗಿದ್ದು, ಸಂಘ-ಸಂಸ್ಥೆಗಳು ನೈಜ ಆಶಯವನ್ನೇ ಮರೆತುಹೋಗಿವೆ. ಜಾನಪದ ಅಧ್ಯಯನಕ್ಕೆ ತೀರ ಅಗತ್ಯ ಮತ್ತು ಮೂಲವೆನಿಸುವ ಕ್ಷೇತ್ರಕಾರ್ಯ ನಿಂತಿದೆ. ಹಳ್ಳಿಗಳತ್ತ ಯಾರೂ ಸುಳಿಯುತ್ತಿಲ್ಲ. ಮಾಯಾಪೆಟ್ಟಿಗೆ ಟಿ.ವಿ.ಯಲ್ಲಿ ಹಾಡುವುದು, ಪ್ರದರ್ಶಿಸುವುದೇ ಜಾನಪದ ಕಲೆ ಎಂಬಂತಾಗಿ ಗೊಂದಲ ಉಂಟುಮಾಡುತ್ತಿರುವುದು ಹಗಲಿನಷ್ಟೇ ಸತ್ಯ. ನಮ್ಮ ಮುಂದಿನ ತಲೆಮಾರಿಗೆ ನಾನೇನು ಕೊಡಬಲ್ಲೆ ಎಂಬ ಉದಾತ್ತ ಆಶಯದೊಂದಿಗೆ ಈ ಪತ್ರಿಕೆ ಆರಂಭಿಸಿದ್ದೇನೆ’ ಎಂದು ‘ಜಾನಪದ ತಿಜೋರಿ’ ಸಂಪಾದಕ ಡಾ. ಎಂ. ಬೈರೇಗೌಡ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಬಿ.ಟಿ. ನಾಗೇಶ್, ರಾಮನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಸೂರ್ಯಪ್ರಕಾಶ್ ಮಾತನಾಡಿದರು. ಸಾಹಿತಿ ಅರುಣ್ ಕವಣಾಪುರ ನಿರೂಪಣೆ ಹಾಗೂ ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಟಿ. ದಿನೇಶ್ ಬಿಳಗುಂಬ ವಂದನಾರ್ಪಣೆ ಮಾಡಿದರು.
ಡಾ. ಎಂ ಬೈರೇಗೌಡ ,9448102158