ನವೆಂಬರ್ ಅಂತ್ಯದೊಳಗೆ 2500 ನಿವೇಶನ ನೀಡುವ ಗುರಿ : ಕೆ.ಹೆಚ್ ಮುನಿಯಪ್ಪ

ವಿಜಯ ದರ್ಪಣ ನ್ಯೂಸ್….

ದೇವನಹಳ್ಳಿ ತಾಲ್ಲೂಕು ತ್ರೈಮಾಸಿಕ ಕೆ.ಡಿ.ಪಿ ಸಭೆ

ನವೆಂಬರ್ ಅಂತ್ಯದೊಳಗೆ  2500 ನಿವೇಶನ ನೀಡುವ ಗುರಿ : ಕೆ.ಹೆಚ್ ಮುನಿಯಪ್ಪ

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್22 :- ದೇವನಹಳ್ಳಿ ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳಲ್ಲಿ 4,557 ನಿವೇಶನ ರಹಿತರಿದ್ದು ಮೊದಲ ಹಂತದಲ್ಲಿ2500 ನಿವೇಶನ ನೀಡುವ ಗುರಿ ಇದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಹೇಳಿದರು.

ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ದೇವನಹಳ್ಳಿ ತಾಲ್ಲೂಕು ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಲ್ಲೂಕುವಾರು ಹಲವರು ನಿವೇಶನ ರಹಿತ, ವಸತಿ ರಹಿತ ಜನರಿದ್ದಾರೆ. ಸರ್ಕಾರ ವು ಅವರನ್ನು ಗುರ್ತಿಸಿ ನಿವೇಶನ, ವಸತಿ ನೀಡಲು ಕಾರ್ಯಕ್ರಮ ರೂಪಿಸಿದೆ. ದೇವನಹಳ್ಳಿಯಲ್ಲಿ 4557 ನಿವೇಶನ ರಹಿತರಿದ್ದು ಈಗಾಗಲೇ 296 ಜನರಿಗೆ ಹಕ್ಕು ಪತ್ರ ನೀಡಲು ಕ್ರಮವಹಿಸಲಾಗುತ್ತಿದೆ. ಉಳಿದ 4261 ಜನರಿಗೆ ತುರ್ತಾಗಿ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು. ಒಂದು ತಿಂಗಳ ಒಳಗೆ ಸರ್ಕಾರಿ ಜಮೀನು ನಿವೇಶನಗಳನ್ನು ಗುರುತುಪಡಿಸಿ, ವಸತಿ ರಹಿತರ ಪಟ್ಟಿಯನ್ನು ಸಿದ್ದಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಕಂದಾಯ ಇಲಾಖೆಯವರು ಅಧಿಕಾರಿಗಳು ಹಾಗೂ ಪಂಚಾಯಿತಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.

ನವೆಂಬರ್ ಅಂತ್ಯದೊಳಗೆ ಮೊದಲ ಹಂತದಲ್ಲಿ ಕನಿಷ್ಟ 2500 ನಿವೇಶನ ಹಂಚಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಯಾವುದೇ ಗ್ರಾಮದಲ್ಲಿ ರೈತರ ಜಮೀನುಗಳಿಗೆ ತೆರಳಲು , ಸ್ಮಶಾನ ಕ್ಕೆ ಹೋಗಲು ರಸ್ತೆ ಇಲ್ಲದಿದ್ದಲ್ಲಿ ಅಂತಹ ರೈತರು , ಸಾರ್ವಜನಿಕರು ತಾಲ್ಲೂಕು ಕಚೇರಿಗೆ ಒಂದು ವಾರದೊಳಗೆ ಅರ್ಜಿ ಸಲ್ಲಿಸಿ, ಅರ್ಜಿಯನ್ನು ಅಧಿಕಾರಿಗಳು ಪರಿಶೀಲಿಸಿ ಶೀಘ್ರ ಕ್ರಮ ಕೈಗೊಳ್ಳುವರು ಎಂದರು.

ಜೆ.ಜೆ.ಎಂ.ಯೋಜನೆಯಡಿ ಮನೆ ಮನೆಗೂ ಕೊಳವೆ ನಲ್ಲಿಗಾಗಿ ರಸ್ತೆ ಅಗೆದಿದ್ದು, ಅದನ್ನು ಮುಚ್ಚಿದ ನಂತರವೇ ಗುತ್ತಿಗೆದಾರರಿಗೆ ಬಿಲ್ಲು ಪಾವತಿಸುವಂತೆ ಸೂಚಿಸಲಾಯಿತು. ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯರಂಭ ಮಾಡುತ್ತಿದ್ದು ದುರಸ್ಥಿಯಾಗಬೇಕಿರುವ ಘಟಕಗಳನ್ನು ತುರ್ತಾಗಿ ದುರಸ್ಥಿಗೊಳಿಸುವಂತೆ ಸೂಚಿಸಿದರು.

ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಸಿ.ಎಸ್.ಆರ್ ಅನುದಾನದಲ್ಲಿ 10 ಶಾಲೆಗಳನ್ನು ಉನ್ನತಿಕರಿಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗಿದೆ. ಶಾಲೆಗಳು ಸಣ್ಣ ಹಾಗೂ ದೊಡ್ಡ ಪ್ರಮಾಣದ ದುರಸ್ಥಿ ಇದ್ದಲ್ಲಿ ತಾಲ್ಲೂಕು ಪಂಚಾಯಿತಿ ಅನುದಾನದಲ್ಲಿ ಬಳಕೆ ಮಾಡಿ, ಗ್ರಾಮ ಪಂಚಾಯಿತಿಗಳ ಅನುದಾನ ಬಳಕೆ ಮಾಡಿ ಕೂಡಲೇ ದುರಸ್ಥಿಗೊಳಿಸಬೇಕು. 17 ವಿವೇಕ್ ಶಾಲೆಗಳ ಕೊಠಡಿಗಳ ಪ್ರಾರಂಭವಾಗಿದ್ದು ಮಕ್ಕಳಿಗೆ ಬಳಕೆಯಾಗುತ್ತಿವೆ. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಶಿಕ್ಷಕರು ಹೆಚ್ಚು ಶ್ರಮ ವಹಿಸಬೇಕಿದೆ. ಸಿ.ಆರ್.ಪಿ./ ಬಿ.ಆರ್.ಪಿ. ಗಳು ಶಾಲೆಗಳಿಗೆ ಹೆಚ್ಚಿನ ಭೇಟಿ ನೀಡಿಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕೆಂದರು.

ಎಸ್.ಎಸ್.ಎಲ್.ಸಿ / ಪಿ.ಯು.ಸಿ. ಪರೀಕ್ಷೆ ಫಲಿತಾಂಶ ಶೇ.100 ಆಗಬೇಕಿದ್ದು ಈಗಿನಿಂದಲೇ ಕ್ರಿಯಾಯೋಜನೆ ರೂಪಿಸಿಕೊಂಡು ಜಿಲ್ಲೆಗೆ ಉತ್ತಮ ಹೆಸರು ತರಲು ಶಿಕ್ಷಕರು ಶ್ರಮಿಸಬೇಕು.

ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳಿಂದ 2,556 ಮನೆಗಳ ಬೇಡಿಕೆ ಇದ್ದು ಈಗಾಗಲೇ 1,500 ಮನೆಗಳ ಮಂಜೂರಾತಿಗಾಗಿ ವಸತಿ ಸಚಿವರಿಗೆ ಮನವಿ ಮಾಡಲಾಗಿದೆ.

ಮನೆ ನಿರ್ಮಾಣದ ಘಟಕ ವೆಚ್ಚ ಸಾಮಾನ್ಯರಿಗೆ ರೂ. 1.20 ಲಕ್ಷ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡರವರಿಗೆ ರೂ. 1.75 ಲಕ್ಷವಿದ್ದು ರಾಜ್ಯ ಸರ್ಕಾರದಿಂದ ಅಂಬೇಡ್ಕರ್ ಯೋಜನೆಯಡಿ ರೂ. 2.00 ಲಕ್ಷ ಇದ್ದು ಘಟಕ ವೆಚ್ಚ ಹೆಚ್ಚಿಸಲು ಸರ್ಕಾರ ಕ್ಕೆ ಮನವಿ ಮಾಡಲಾಗಿದೆ ಎಂದರು.

ಗ್ರಾಮೀಣ ಭಾಗಗಳಲ್ಲಿ ಅನಧಿಕೃತವಾಗಿ ಕಿರಾಣಿ ಅಂಗಡಿಯಲ್ಲಿ ಮದ್ಯ ಮಾರಾಟ ತಡೆಯಲು ಅಬಕಾರಿ ಅಧಿಕಾರಿಗಳು ಕಾಲಕಾಲಕ್ಕೆ ದಾಳಿಗಳನ್ನು ನಡೆಸಿ ಅಕ್ರಮ ಮಾರಾಟ ತಡೆಗಟ್ಟಲು ಕ್ರಮವಹಿಸಿ ಎಂದರು.

ಪೋಡಿ ಮುಕ್ತ ತಾಲ್ಲೂಕು ಹಾಗೂ ಜಿಲ್ಲೆಯನ್ನಾಗಿ ಮಾಡಲು ಜಿಲ್ಲಾಡಳಿತದಿಂದ ಕಾರ್ಯ ನಡೆಯುತ್ತಿದ್ದು , ರಾಜ್ಯದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಪೋಡಿ ಮುಕ್ತ ವಾಗುವ ಜಿಲ್ಲೆಗಳಲ್ಲಿ ಮೊದಲ ಸ್ಥಾನದಲ್ಲಿ ಇದೆ. ಕಂದಾಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಸಾಕಷ್ಟು ಕಾರ್ಯ ಪ್ರವೃತ್ತರಾಗಿದ್ದಾರೆ ಎಂದರು.

ಗುಣಮಟ್ಟದ ಆಹಾರ ಪದಾರ್ಥಗಳನ್ನು, ತರಕಾರಿಗಳನ್ನು ಬೆಳೆಯಲು ರೈತರಿಗೆ ಅರಿವು ಮೂಡಿಸಿ , ರೈತರು ಪಾಲಿಹೌಸ್ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಮನವರಿಕೆ ಮಾಡಿ ಎಂದು ಕೃಷಿ, ತೋಟಗಾರಿಕೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನಸಮಿತಿ ಜಿಲ್ಲಾ ಅಧ್ಯಕ್ಷ ರಾಜಣ್ಣ , ಕಾರ್ಯನಿರ್ವಹಣಾಧಿಕಾರಿ ಶ್ರೀನಾಥ್ ಗೌಡ, ತಹಶಿಲ್ದಾರ್ ಬಾಲಕೃಷ್ಣ, ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.