ಕನ್ನಡ ರಾಜ್ಯೋತ್ಸವ ಅರ್ಥಪೂರ್ಣ ಆಚರಣೆಗೆ ಸಿದ್ಧತೆ ಕೈಗೊಳ್ಳಿ: ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ

ವಿಜಯ ಕರ್ನಾಟಕ ನ್ಯೂಸ್…

ನವೆಂಬರ್ 01 ರಂದು 69 ನೇ ಕನ್ನಡ ರಾಜ್ಯೋತ್ಸವ

ಕನ್ನಡ ರಾಜ್ಯೋತ್ಸವ ಅರ್ಥಪೂರ್ಣ ಆಚರಣೆಗೆ ಸಿದ್ಧತೆ ಕೈಗೊಳ್ಳಿ: ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್ 18, 2024 :- ನವೆಂಬರ್ 01 ರಂದು ದೇವನಹಳ್ಳಿ ಟೌನ್ ನ ಸರ್ಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಅಗತ್ಯವಾದ ಸಕಲ ಸಿದ್ದತೆಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ ಅವರು ಸೂಚಿಸಿದರು.

ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನವೆಂಬರ್ 01 ರಂದು ಜಿಲ್ಲಾಡಳಿತ ಭವನದ ಆವರಣದಲ್ಲಿ ಬೆಳಿಗ್ಗೆ 07:30 ಗಂಟೆಗೆ ಧ್ವಜಾರೋಹಣ ಹಾಗೂ ನೂತನವಾಗಿ ನಿರ್ಮಿಸಿರುವ ಹಲ್ಮಿಡಿ ಶಾಸನ ಅನಾವರಣ ಮಾಡಲಾಗುವುದು. ಬೆಳಿಗ್ಗೆ 09:00 ಗಂಟೆಗೆ ದೇವನಹಳ್ಳಿ ಟೌನ್ ನ ಸರ್ಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನದಲ್ಲಿ ಜಿಲ್ಲಾಮಟ್ಟದ ವೇದಿಕೆ ಕಾರ್ಯಕ್ರಮ ನಡೆಯಲಿದೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ 08:00 ಗಂಟೆಗೆ ದೇವನಹಳ್ಳಿಯ ವೇಣುಗೋಪಾಲಸ್ವಾಮಿ ದೇವಸ್ಥಾನದಿಂದ ದೇವನಹಳ್ಳಿ ಕ್ರೀಡಾಂಗಣ ವರೆಗೆ ತಾಯಿ ಭುವನೇಶ್ವರಿದೇವಿಯ ರಥದ ಮೆರವಣಿಗೆ ನಡೆಯಲಿದೆ ಎಂದರು.

ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆಯನ್ನು ಮುದ್ರಿಸಿ ಜನಪ್ರತಿನಿಧಿಗಳಿಗೆ ತಲುಪಿಸಿ ಎಂದು ದೇವನಹಳ್ಳಿ ತಾಲ್ಲೂಕು ತಹಶೀಲ್ದಾರ್ ಗೆ ಸೂಚಿಸಿದರು. ವೇದಿಕೆ ಮತ್ತು ಧ್ವಜ ಕಟ್ಟೆ ಅಲಂಕಾರವನ್ನು ಅಚ್ಚುಕಟ್ಟಾಗಿ ನೆರವೇರಿಸಿ, ಪಥ ಸಂಚಲನಕ್ಕೆ ಅಗತ್ಯ ಕ್ರಮ ವಹಿಸಿ ಎಂದು ಪೋಲಿಸ್ ಅಧಿಕಾರಿಗಳಿಗೆ ಸೂಚಿಸಿದರು. ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು.

ಲಘು ಉಪಹಾರ ವ್ಯವಸ್ಥೆಯು ಘಾಟಿ ಸುಬ್ರಮಣ್ಯ ದೇವಸ್ಥಾನದವರು ನೀಡಲಿದ್ದು, ನಿರ್ವಹಣೆಯನ್ನು ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯವರು ನೋಡಿಕೊಳ್ಳಬೇಕು. ಆಯಾ ಇಲಾಖೆಗಳಿಗೆ ವಹಿಸಿರುವ ಜವಾಬ್ದಾರಿಯನ್ನು ನಿರ್ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕ್ರಮ ವಹಿಸಿ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.‌ಎನ್ ಅನುರಾಧ, ಅಪರ ಜಿಲ್ಲಾಧಿಕಾರಿ ಆರ್.‌ಸುಮಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಡಿ.ಎಂ, ದೇವನಹಳ್ಳಿ ತಹಶೀಲ್ದಾರ್ ಬಾಲಕೃಷ್ಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೃಷ್ಣಪ್ಪ, ಕನ್ನಡಪರ ಸಂಘಟನೆಗಳ ಮುಖ್ಯಸ್ಥರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

&&&&&&&&&&&&&&&&&&&&&&&&&&

ವಿವಿಧ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸಲಕರಣೆ ಪಡೆಯಲು ಅರ್ಜಿ ಆಹ್ವಾನ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್. 19, 2024 :- ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಖಾದಿ ಗ್ರಾಮೋದ್ಯೋಗ ವಿಭಾಗದ ವತಿಯಿಂದ 2024-25ನೇ ಸಾಲಿನ ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ ಜಿಲ್ಲೆಯ ಗ್ರಾಮೀಣ ಭಾಗದ ಅರ್ಹ 624 ವೃತ್ತಿಪರ ಕುಶಲಕರ್ಮಿಗಳಿಗೆ ಸುಧಾರಿತ ಸಲಕರಣೆ ಸರಬರಾಜು ಯೋಜನೆಯಡಿ ಉಚಿತವಾಗಿ ಸುಧಾರಿತ ಸಲಕರಣೆ ವಿತರಿಸಲು ಆಯ್ಕೆಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ನಮೂನೆಯನ್ನು ಗ್ರಾಮ ಪಂಚಾಯಿತಿ ಅಥವಾ ತಾಲ್ಲೂಕು ಕೈಗಾರಿಕಾ ವಿಸ್ತರಣಾಧಿಕಾರಿಗಳ ಕಛೇರಿಯಿಂದ ಪಡೆದು ಭರ್ತಿ ಮಾಡಿ ಅಗತ್ಯ ದಾಖಲಾತಿಗಳು ಹಾಗೂ ಗ್ರಾಮ ಪಂಚಾಯಿತಿ ಧೃಡೀಕರಣದೊಂದಿಗೆ ನವ್ಹೆಂಬರ್ 30 ರೊಳಗಾಗಿ ಸಂಬಂಧಿಸಿದ ತಾಲ್ಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿ ಕಛೇರಿಗೆ ಸಲ್ಲಿಸಬಹುದಾಗಿದೆ.

ನಿಬಂದನೆಗಳು:-
ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಕನಿಷ್ಟ 18 ವರ್ಷ. ಅರ್ಜಿದಾರರು ಗ್ರಾಮದಲ್ಲಿ ವಾಸವುಳ್ಳವರಾಗಿರಬೇಕು. ಸಮಾಜದಲ್ಲಿ ಸಾಮಾಜಿಕ ತೊಂದರೆಗೊಳಗಾದವರಿಗೆ ಅದ್ಯತೆ ಮೇರೆಗೆ ಪರಿಗಣಿಸಲಾಗುವುದು (ವಿಧವೆಯರು ವಿಚ್ಚೇದಿತರು, ಅನಾಥರು), ಉಚಿತ ಉಪಕರಣ ಪಡೆಯಲು ಜಿಲ್ಲೆಯ 624 ಗ್ರಾಮೀಣ ಆಧುನಿಕ ಕಸುಬುಗಳಲ್ಲಿ ತೊಡಗಿರುವ ಕುಶಲ ಕರ್ಮಿಗಳಿಗೆ ವಿದ್ಯುತ್ ಚಾಲಿತ ಉಪಕರಣಗಳಾದ Welding, Barbending, Carpentry, Borewell repair/ Motor Rewinding steel fabrication, plumbing and Electrician, ಬಡಗಿ, ಕಮ್ಮಾರಿಕೆ, ಕಲ್ಲುಕುಟಿಕೆ, ದೋಬಿ, ಕ್ಷೌರಿಕ, ಗಾರೆ, ಮತ್ತು ಇತ್ಯಾದಿ ಕೆಲಸದ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತಾ ಸಲಕರಣ ಕಿಟ್‌ಗಳನ್ನು ನೀಡುವ ಕಾರ್ಯಕ್ರಮ.
ಕುಶಲಕರ್ಮಿಗಳು ಮಾತ್ರ ಅರ್ಜಿಸಲ್ಲಿಸತಕ್ಕದ್ದು.

ಈ ಇಲಾಖೆಯ ಯಾವುದೇ ಯೋಜನೆಯಡಿ ಈಗಾಗಲೇ ಉಪಕರಣಗಳನ್ನು ಪಡೆದಿರುವ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅರ್ಹವಿರುವುದಿಲ್ಲ. ಒಂದು ಕುಟುಂಬಕ್ಕೆ ಒಂದು ಅರ್ಜಿ ಸಲ್ಲಿಸಲು ಮಾತ್ರ ಅವಕಾಶವಿರುತ್ತದೆ. ಸರ್ಕಾರದ ಮಾರ್ಗಸೂಚಿಯಂತೆ ಮೀಸಲಾತಿ ಅನ್ವಯ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಖಾದಿ ಗ್ರಾಮೋದ್ಯೋಗ ವಿಭಾಗದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.