ನೊಂದವರ ನೋವ ನೋಯದವರೆತ್ತ ಬಲ್ಲರೋ………..
ವಿಜಯ ದರ್ಪಣ ನ್ಯೂಸ್….
ನೊಂದವರ ನೋವ ನೋಯದವರೆತ್ತ ಬಲ್ಲರೋ………..
ಇಲ್ಲದವರ ನೋವನ್ನು ಅರಿಯಲಾಗದ ಸಾಹಿತ್ಯ,
ಉಳ್ಳವರ ಕ್ರೌರ್ಯವನ್ನು ಖಂಡಿಸಲಾಗದ ಬರಹ,
ಶೋಷಿತರ ಧ್ವನಿಯನ್ನು ಎತ್ತಿಹಿಡಿಯಲಾಗದ ಲೇಖನ,
ಶೋಷಕರ ದೌರ್ಜನ್ಯ ಟೀಕಿಸಲಾಗದ ಪ್ರಬಂಧ,
ಸಮಾನತೆಯನ್ನು ಮೂಡಿಸಲಾಗದ ಚರ್ಚೆ,
ಅಮಾನವೀಯತೆಯನ್ನು ದಿಕ್ಕರಿಸಲಾಗದ ಕವಿತೆ,
ಪರಿಸರ ನಾಶವನ್ನು ತಡೆಯಲಾಗದ ಕಥೆ,
ಭ್ರಷ್ಟತೆಯನ್ನು ಹೋಗಲಾಡಿಸಲಾಗದ ಅಂಕಣಗಳು,
ಸಂಬಂಧಗಳನ್ನು ಬೆಸೆಯಲಾಗದ ಕಾದಂಬರಿ,
ವಿಷವಿಕ್ಕುವ ಜನರನ್ನು ಗುರುತಿಸಲಾಗದ ಅಕ್ಷರಗಳು,
ಪ್ರೀತಿಯನ್ನು ಪ್ರೀತಿಸಲಾಗದ ಮನಸ್ಸುಗಳು,
ಮೌಲ್ಯಗಳು ನಾಶವಾಗುವುದನ್ನು ರಕ್ಷಿಸದ ಪದಗಳು,
ಇತರರ ಮನ ನೋಯಿಸುವ ವಾಕ್ಯಗಳು,
ಕಷ್ಠಗಳನ್ನು ನಿವಾರಿಸಲಾಗದ ಪ್ರವಚನಗಳು,
ದುಷ್ಟತನವನ್ನು ಮೆಟ್ಟಿ ನಿಲ್ಲದ ಭಾಷಣಗಳು,
ಭ್ರಮೆಗಳನ್ನು ಸೃಷ್ಟಿ ಮಾಡುವ ಹರಿಕಥೆಗಳು,
ಸತ್ಯವನ್ನು ಹೇಳಲಾಗದ ಚಿತ್ರಕಲೆ,
ಮಾನವೀಯ ಮೌಲ್ಯಗಳಿಲ್ಲದ ಸಿನಿಮಾ,
ಅವಾಸ್ತವಿಕ ಆದರ್ಶಗಳನ್ನು ತುಂಬುವ ಗ್ರಂಥಗಳು,
ಮನಸ್ಸಿನ ದುಗುಡವನ್ನು ಕಡಿಮೆ ಮಾಡಲಾಗದ ಜ್ಞಾನ,
ಭಾವನೆಗಳನ್ನು ನಿಯಂತ್ರಿಸಲಾಗದ ಭಕ್ತಿ,
ಇವು ನಿಮ್ಮ ಅಭಿವ್ಯಕ್ತಿಯ ಮಾಧ್ಯಮಗಳಾದರೂ,
ಅದನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ನಿಮಗಿದ್ದರೂ,
ಅದು ಕೇವಲ ನಿಮ್ಮ ಬುದ್ದಿಯ ಪ್ರದರ್ಶನ,
ಸ್ವಾರ್ಥದ ಪ್ರತಿಬಿಂಬ,
ಅಹಂನ ತೋರ್ಪಡೆ,
ಅಂತರಾಳದ ಅಸಹಿಷ್ಣುತೆಯ ಪ್ರಕಟಣೆ,
ಪ್ರಶಸ್ತಿ, ಬಿರುದು ಬಾವಲಿಗಳ ಆಸೆ ಅಷ್ಟೇ,
ಮೇಲೆ ಹೇಳಿದ ಎಲ್ಲವೂ ವ್ಯಕ್ತಿಯ, ಸಮಾಜದ, ದೇಶದ, ವಿಶ್ವದ,
ಜೀವಪರ ಹಿತದೃಷ್ಟಿ ಹೊಂದಿದ್ದರೆ ಮಾತ್ರ ಅದು ನಿಜಕ್ಕೂ,
ನಿಸ್ವಾರ್ಥ ಹೃದಯಗಳ ಆತ್ಮಸಾಕ್ಷಿಯ ಪ್ರತಿಬಿಂಬ,
ಅದು ಸಾಧ್ಯವಾದದ್ದೇ ಆದರೆ,
ನಿಮ್ಮ ವ್ಯಕ್ತಿತ್ವ,
ಉತ್ಕೃಷ್ಟ ಮಟ್ಟದಲ್ಲಿದೆ ಎಂದೇ ಅರ್ಥ,
ಅದಕ್ಕಾಗಿ…….
ಸಿನಿಮಾ ಮಾಡೋಣ ಬನ್ನಿ,
ಹೊಡೆದಾಟಗಳಿಲ್ಲದ – ರಕ್ತ ಚೆಲ್ಲದ – ಕುತಂತ್ರಗಳಿಲ್ಲದ –
ಆಕರ್ಷಕ – ಸೃಜನಾತ್ಮಕ – ಮನೋರಂಜನಾತ್ಮಕ –
ಮೌಲ್ಯಗಳನ್ನು ಎತ್ತಿ ಹಿಡಿಯುವ ಚಿತ್ರ,
ಸಾಹಿತ್ಯ ರಚಿಸೋಣ ಬನ್ನಿ,
ದ್ವೇಷಕಾರದ – ವಿಷಕಕ್ಕದ – ಪ್ರತಿಷ್ಠೆ ಮೆರೆಯದ –
ಚೆಂದದ ಭಾಷೆಯ – ಪ್ರೀತಿಯ ಚುಂಬನದ – ಮಾನವೀಯ ಬರಹ,
ಚಿತ್ರ ಬಿಡಿಸೋಣ ಬನ್ನಿ,
ಆತ್ಮವಂಚನೆಯಿಲ್ಲದ – ಬೆಂಕಿಯುಗುಳದ – ಅಶ್ಲೀಲವಲ್ಲದ –
ಪ್ರಕೃತಿಯ ಮಡಿಲಿನ – ಸೌಂದರ್ಯದ ಬೀಡಿನ – ಮನಮೋಹಕ ದೃಶ್ಯ,
ಸಂಗೀತ ನುಡಿಸುತ್ತಾ ಹಾಡೋಣ ಬನ್ನಿ,
ಅಹಂಕಾರಗಳಿಲ್ಲದ – ಪಂಥಬೇದಗಳಿಲ್ಲದ – ಕೃತಿಮತೆಯಿಲ್ಲದ –
ಮನಕೆ ಮುದನೀಡುವ – ಆಹ್ಲಾದಕರ – ಆರಾಧನಾ ಭಾವದಿಂದ,
ಪರಿಸರ ಉಳಿಸೋಣ ಬನ್ನಿ,
ವಿಷಗಾಳಿಯಿಲ್ಲದ – ಕಲ್ಮಶನೀರಲ್ಲದ – ಆಹಾರ ಕಲಬೆರಕೆಯಾಗದ
– ಹಚ್ಚಹಸಿರಿನ – ಸ್ವಚ್ಚ ಗಾಳಿಯ – ಶುಧ್ಧ ನೀರಿನ ಪ್ರಕೃತಿ,
ಸಂಘಟಿತರಾಗೋಣ ಬನ್ನಿ,
ಸ್ವಾರ್ಥಿಗಳಾಗದ – ಘರ್ಷಣೆಗಳಿಲ್ಲದ – ಸೇವಾಮನೋಭಾವದ –
ತ್ಯಾಗದ – ಪ್ರಾಮಾಣಿಕತೆಯ – ಅರ್ಪಣಾಮನೋಭಾವದ ಸಂಸ್ಥೆಯೊಂದಿಗೆ,
ಆಡಳಿತ ನಡೆಸೋಣ ಬನ್ನಿ,
ಭ್ರಷ್ಟತೆಯಿಲ್ಲದ – ದೌರ್ಜನ್ಯಗಳಿಲ್ಲದ – ಅನ್ಯಾಯ ಮಾಡದ –
ಸಮಾನತೆ – ಸ್ವಾತಂತ್ರ್ಯ – ಸೋದರತೆಯ ಜೀವಪರ ಸರ್ಕಾರ,
ಬದುಕೋಣ ಬನ್ನಿ,
ಚಿಂತೆಗಳಿಲ್ಲದ – ಜಿಗುಪ್ಸೆಗಳಿಲ್ಲದ – ನೋವುಗಳಿಲ್ಲದ –
ನೆಮ್ಮದಿಯ – ಆನಂದದಾಯಕ – ಸುಖದ ಜೀವನ,
ಮನುಷ್ಯರಾಗೋಣ ಬನ್ನಿ,
ಕಪಟತನವಿಲ್ಲದ – ದುರ್ಬುದ್ಧಿಗಳಿಲ್ಲದ – ಮನೋವಿಕಾರಗಳಿಲ್ಲದ –
ಜ್ಞಾನಸ್ಥ – ಧ್ಯಾನಸ್ಥ – ಯೋಗಸ್ಥ – ಕರ್ಮಸ್ಥ – ಜೀವಿಗಳಾಗಿ.
ಇದು ತಿರುಕನ ಕನಸಲ್ಲ ………
ನನಸಾಗಬಹುದಾದ ನಾಗರೀಕತೆಯ ಹೊಸ ಮನ್ವಂತರ ……………
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068……