ಸಾಹಿತ್ಯದ ಮೂಲಕ ಲಾಭ ಪಡೆಯುವ ಸಾಹಿತಿಗಳಿಂದ ಸಮಾಜಕ್ಕೆ ಏನೂ ಲಾಭವಾಗುವುದಿಲ್ಲ: ಹೆಚ್ ಎಲ್ ಪುಷ್ಪ
ವಿಜಯ ದರ್ಪಣ ನ್ಯೂಸ್……
ಸಾಹಿತ್ಯದ ಮೂಲಕ ಲಾಭ ಪಡೆಯುವ ಸಾಹಿತಿಗಳಿಂದ ಸಮಾಜಕ್ಕೆ ಏನೂ ಲಾಭವಾಗುವುದಿಲ್ಲ: ಹೆಚ್ ಎಲ್ ಪುಷ್ಪ
ಮೈಸೂರು: ಕವಿ ಯಾವತ್ತೂ ಅವಕಾಶಕ್ಕಾಗಿ ಹಾತೊರೆಯಬೇಕಿಲ್ಲ. ಸಾಹಿತ್ಯದ ಮೂಲಕ ಲಾಭ ಪಡೆಯುವ ಸಾಹಿತಿಗಳಿಂದ ಸಮಾಜಕ್ಕೆ ಏನೂ ಲಾಭವಾಗುವುದಿಲ್ಲ. ಕವಿಯ ಮನೋಧರ್ಮ ನಿರ್ಲಿಪ್ತವಾಗಿರಬೇಕು. ಪ್ರಭುತ್ವದ ಜೊತೆಗಿದ್ದೂ ನಿಜವಾದ ತಪ್ಪುಗಳು ಕಂಡಾಗ ಪ್ರಭುತ್ವವನ್ನೇ ಪ್ರಶ್ನಿಸುವ ಒಳಿತನ್ನು ಒಪ್ಪಿಕೊಳ್ಳುವ ಸಾಹಿತಿಗಳಿದ್ದಾರೆ. ಅಂಥವರ ಪಥದಲ್ಲಿ ನಡೆಯಬೇಕಾದ ತುರ್ತಿದೆ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ ನುಡಿದರು.
ಮೈಸೂರಿನಲ್ಲಿ ನಡೆದ ವಿಶ್ವವಿಖ್ಯಾತ ಮೈಸೂರು ದಸರಾ ಪಂಚಕವಿಗೋಷ್ಠಿಗಳಲ್ಲಿ ರಾಜ್ಯದ ಮೂವತ್ತೊಂದು ಜಿಲ್ಲೆಗಳಿಂದ ಆಗಮಿಸಿದ್ದ ಸಮೃದ್ಧ ಹೆಸರಿನ ವಿಶಿಷ್ಟ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಅಕ್ಕಪಕ್ಕದವರ ಆಚಾರ ವಿಚಾರಗಳೆಲ್ಲವೂ ವೈವಿಧ್ಯಮಯವಾಗಿದ್ದು ಎಲ್ಲವನ್ನೂ ಒಳಗೊಂಡು, ಒಪ್ಪಿಕೊಂಡು ಬದುಕುವುದನ್ನು ಕಲಿಯುವ ಅಗತ್ಯವಿದೆ. ಒಂದು ದೇಶ ಒಂದು ಭಾಷೆ ಒಂದು ಧರ್ಮ ಒಂದನ್ನೇ ಎಲ್ಲದರಲ್ಲೂ ಬಯಸುವ ಸಮಾಜ ಒಂದೇ ಜಾತಿ ಎಂದು ಏಕೆ ಭಾವಿಸಬಾರದು ಎಂದು ಪ್ರಶ್ನಿಸಿದರು. ಲೈಂಗಿಕ ಅಲ್ಪಸಂಖ್ಯಾತ ರ ಸಾಹಿತ್ಯದ ಬಗ್ಗೆ ಮೃದು ಧೋರಣೆ ತಳೆಯಬೇಕಾದ ಅವಶ್ಯಕತೆಯನ್ನು ಒತ್ತಿ ಹೇಳಿದರು. ಪ್ರಶ್ನಿಸುವ ಹಕ್ಕಿದೆ ಎಂದಾಕ್ಷಣ ಸಿಕ್ಕ ಸಿಕ್ಕದ್ದನ್ನೆಲ್ಲಾ ಪ್ರಶ್ನಿಸುವುದಲ್ಲ. ಯಾವುದನ್ನ ಪ್ರಶ್ನಿಶಬೇಕು ಎಂಬ ತಿಳಿವಳಿಕೆ ಮುಖ್ಯ. ಕವಿತೆಗಳು ಸಾರ್ವಕಾಲಿಕವಾಗಿದ್ದು, ಎಲ್ಲ ಕಾಲಕ್ಕೂ ಕಾಡುವ ಕವಿತೆಗಳು ಬೇಕು.
ಕವಿಗೋಷ್ಠಿ ಉಪಸಮಿತಿ ಆಯ್ಕೆ ಸಮಿತಿ ಮುಖ್ಯಸ್ಥೆ ಲೋಲಾಕ್ಷಿ ಪ್ರಾಸ್ತಾವಿಕವಾಗಿ ಮಾತನಾಡಿ, ಆಂಗಿಕವಾಗಿ ಕವಿತೆ ಓದುವ ಮೂಲಕ ಮೂಕ ಮಕ್ಕಳಿಗೆ ಈ ವೇದಿಕೆ ಧನಿಯಾಯಿತು, ಮಾವುತನ ಮಗಳು ಈ ವೇದಿಕೆಯಲ್ಲಿ ಕವಿತೆ ವಾಚಿಸಿದಳು. ಹೀಗೆ ಐದು ದಿನಗಳಲ್ಲೂ ಒಂದಲ್ಲ ಒಂದು ವಿಶೇಷತೆಯಿತ್ತು. ಆದರೆ ಇಂದಿನ ಕವಿಗೋಷ್ಠಿ ಮಹತ್ತರವಾದುದು, ಸಮಗ್ರ ಕರ್ನಾಟಕವನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಾತಿನಿಧಿಕವಾಗಿ ಜಿಲ್ಲೆಗೊಬ್ಬೊಬ್ಬರಂತೆ ಆಯ್ಕೆ ಮಾಡಲಾಗಿದೆ. ಕವಿತೆಗೊಂದು ಕೇಂದ್ರವಿರುತ್ತದೆ. ಕೇಂದ್ರವಿಲ್ಲದ ಕವಿತೆ ಯಾವತ್ತೂ ಕವಿತೆಯಾಗಲಾರದು. ಅವಸರದ ಕವಿರತೆಗಳು ಸಹ್ಯವಲ್ಲ. ಗದ್ಯವೂ ಕಾವ್ಯವಾಗಬಲ್ಲದು ಎಂದು ಹೇಳಿದರು.
ಪ್ರಾಧ್ಯಾಪಕಿ ಕವಿತಾ ರೈ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ, ಈ ವೇದಿಕೆಯಲ್ಲಿನ ಕವಿತೆಗಳು ಮೂರು ನಾಲ್ಕು ತಲೆಮಾರಿನ ಕವಿಗಳ ಆತ್ಮಗೌರವದ ಧ್ವನಿಯಾಗಿ ಕೇಳಿಸ್ತಿದೆ. ಪರಂಪರೆಯ ಎಲ್ಲ ಕವಿಗಳ ಧ್ವನಿಗಳು ಧೀನರ ದಲಿತರ ಧನಿಗಳಾಗಿ ಹೊಮ್ಮುತ್ತಿದೆ. ಸ್ವತಗತದ ಹಾದಿಯನ್ನು ಬಿಟ್ಟು ಸಾರ್ವತ್ರಿಕ ಹಾದಿಯನ್ನು ತುಳಿಯುವ ಹಿನ್ನೆಲೆಯಲ್ಲಿ ಕವಿತೆಗಳು ಬಿತ್ತರವಾಗುತ್ತಿರುವುದ ಸಂತಸ ತಂದಿದೆ. ಅಧಿಕಾರದ ಸಂಘರ್ಷ ಪ್ರಭುತ್ವ ಇತ್ಯಾದಿಗಳ ನೆಲೆಯಲ್ಲು ವರ್ತಮಾನದ ಕಾವ್ಯ ಅಶಾಭಾವನೆಯನ್ನು ಉಂಟುಮಾಡುತ್ತಿದೆ. ಈ ಎಲ್ಲದರ ನಡುವೆ ಕೋಮುವಾದ, ಮತೀಯವಾದ, ಎಡ ಮತ್ತು ಪಬಲಪಂತೀಯ ವಾದಗಳು ತಲ್ಲಣ ಉಂಟುಮಾಡುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೈಸೂರು ಆಕಾಶವಾಣಿಯ ಅಬ್ದುಲ್ ರಶೀದ್, ಮೌಲ್ಯಗಳು ವಿನಾಶದ ಅಂಚಿಗೆ ಜರುಗುತ್ತಿವೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅವಕಾಶ ನೀಡಬೇಕೆಂದು ವೇದಿಕೆಯಲ್ಲಿ ಭಾಷಣ ಮಾಡುವವರೇ ಅವಕಾಶಗಳನ್ನು ಕಸಿಯುತ್ತಿರುವ ಕಾರಣದಿಂದ ಕವಿಗಳ ಮೌಲ್ಯ ಕಡಿಮೆಯಾಗುತ್ತಿದೆ. ಕವಿತೆಯ ಕಲ್ಪನಾರಾಜ್ಯದಲ್ಲಿ ಅಖಂಡ ಕರ್ನಾಟಕ ಕವಿತೆಯಲ್ಲಿ ಕುವೆಂಪು ಅವರು ಉಲ್ಲೇಖಿಸಿರುವ ಗುಣಗಳು ಇವೆಯೇ ಎಂಬ ಪ್ರಶ್ನೆಯನ್ನು ಹೇಳಲಿಚ್ಛಿಸುತ್ತೇನೆ. ಕವಿತೆಯ ಗುಣಮಟ್ಟವನ್ನು ಗಮನದಲ್ಲಿರಿಸಿಕೊಂಡು ಕವಿಗಳ ಆಯ್ಕೆಯಾಗಬೇಕೆಂದು ಆಶಿಸುವೆ. ಈ ಹಿನ್ನೆಲೆಯಲ್ಲಿ ಆ ಬಗೆಯ ಕವಿಗಳ ಆಯ್ಕೆ ನಡೆದಿದೆಯೆಂಬುದು ಈ ಕವಿಗೋಷ್ಠಿಯಲ್ಲಿ ಸಾಬೀತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕವಿ, ನಾಟಕಕಾರ ಡಾ. ಎಂ. ಬೈರೇಗೌಡ ರಾಮನಗರ ಜಿಲ್ಲೆಯನ್ನು ಪ್ರತಿನಿಧಿಸಿದ್ದರು. ಉಳಿದಂತೆ ಅಕ್ಕಿಮಂಗಲ ಮಂಜುನಾಥ್, ಅಕ್ಷತಾ ಕೃಷ್ಣಮೂರ್ತಿ, ಉಮಾದೇವಿ ಬಾಗಲಕೋಟೆ, ಕೋಲಾರದ ಗುಣವಂತ ಮಂಜು, ಹಾವೇರಿಯ ದೇವರಾಜ್ ಹುಣಸಿಕಟ್ಟೆ, ಬೆಳಗಾವಿಯ ಮೈನುದ್ದೀನ್ ರೇವಡಿಗಾರ, ಕೊಡಗಿನ ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಮಂಡ್ಯದ ಡಾ. ಮಂಜುಳಾ ಹುಲ್ಲಹಳ್ಳಿ, ಮೈಸೂರಿನ ರುದ್ರಪ್ಪ ಅನಗವಾಡಿ, ಹುರುಕಡ್ಲಿ ಶಿವಕುಮಾರ್ ಮುಂತಾದ ಇಪ್ಪತ್ತೊಂಬತ್ತು ಕವಿಗಳು ತಮ್ಮ ಕವನಗಳನ್ನು ವಾಚಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಸರ್ಕಾರದ ವಿಶೇಷ ಅಧಿಕಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಕವಿಗೋಷ್ಠಿ ಸಮತಿಯ ಅಧಿಕಾರಿ, ಆದಿಕಾರೇತರ ಸದಸ್ಯರೆಲ್ಲರೂ ಪಾಲ್ಗೊಂಡಿದ್ದರು.
ವಿಶ್ವವಿಖ್ಯಾತ ದಸರಾ ಕಾವ್ಯೋತ್ಸವ 2024ರ ಸಮೃದ್ಧ ಕವಿಗೋಷ್ಟಿಯಲ್ಲಿ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿ ಹೋದ ಡಾ. ಎಂ. ಬೈರೇಗೌಡ ಓದಿದ ಕವಿತೆ.
ಅಲೆಮಾರಿ!
ಹಗೆಯ ಹೊಗೆಯಲಿ ಕುಹಕ ನಗೆಯಲಿ ಕುತ್ಸಿತ ಬಗೆಯಲಿ
ಮಿಗಗಳ ಬೇಂಟೆಯಾಡಿದ ಮಹಾಜ್ಞಾನಿ ಏ ಅರೆಮನುಜ
ಚಣವೂ ಅರಿವಿನಂಚ ದಾಂಟದ ಪರಿಯ ಬಲ್ಲೆವಯ್ಯ
ದಳ್ಳುರಿಯ ಧಾರುಣತೆ ಮೆರೆದವನೆಂಬ ಜಾಹೀರು
ಆವೆಡೆಯಿಂದಾಗಮಿಸಿತು ಈ ಘೋರಸಂಯಮ!
ಸೋದರಿಗಾಸರೆಯಾಗಿ ಬಂದ ಸೋದರಮಾವ!
ಆದರಿಸಿದವರನೇ ಆವರಿಸಿ ಹಸಿದ ನರಿಯವೊಲು
ಆಕ್ರಮಿಸಿ ಆಪೋಶನಗೈದವ ಕುಲಘಾತಕ
ಪುರಾಣದಲಿ ಒದಗಿ ಇತಿಹಾಸದೊಳು ಅಡಗಿ
ವರ್ತಮಾನದಿ ನರ್ತಿಸಿಹೆ ಕುರುಕುಲ ಸಂಹಾರಿ
ಏಕೆ ಹೇಗೆ ಏನಾಗಿದೆಯೆಂಬವಸರದ ಸರದಾರ||
ಕಂಡು ಕೇಳರಿಯದ ಹಗೆಯೆಂಬ ದಿವ್ಯಾಸ್ತçವ ಬಳಸಿ
ಕದನಕಿಳಿಯದೆ ಜಗ್ಗಿ ಜಂಗಿಸಿದೆ ನಿರ್ದಯವ ನಿರ್ಮಿಸಿ
ಒಲ್ಲೆನೆಂದರೂ ಹೋರಾಟಕೆ ಒಗ್ಗಿಸಿದ ಮಹಾಮಾಯಾವಿ
ಬಲ್ಲೆನೆಂಬರ ಹೆಡೆಮುರಿ ಬಿಗಿದು ಒಗೆದು ಬಿಸುಡಿದೆ
ಸೊಲ್ಲು ಸೊಲ್ಲಲೂ ದ್ವೇಷದ ದಳ್ಳುರಿಯನೇ ಹರಡಿ!
ರಣಾಂಗಣದ ಹುರಿಬೆಂಕಿಯಲಿ ಕರ ಕಾಸಿಕೊಂಡವ
ಹೆಣದ ಬಣವೆಯ ಮೇಲೆ ಗದ್ದುಗೆಗಳ ನಿರ್ಮಿಸಿದವ
ಅಡಿಪಾಯಕೂ ಶವಗಳ ಮಲಗಿಸಿ ಮುಚ್ಚಿ ಮೆರೆದವ
ಅಂತರAಗವ ತೆರೆಯದೆಯೇ ತಿಮಿರದೋಕುಳಿಯಾಡಿದೆ
ಕೆಡುಕಿನ ಅಡಗುತಾಣಗಳ ಜಾಲಾಡಿ ಜತನ ಮಾಡಿದೆ!
ಬೆದೆ ಬಂದ ಕರಡಿಯೋ ಬಿದಿರಿಗಾತರಿಸುವ ಮದಗಜವೋ
ಕಥನಕ್ಕಾಧಾರವಾದ ನೀನೇ ಕತೆಯಾಗಿ ಕಾಲಗರ್ಭದಲಡಗಿದೆ
ಜಗಿವ ದವಡೆಗೆ ರಸವಶವಾದೆ ರಭಸ ಧಾರುಣವಾಗಿ
ಛೇ ಯಾಕೋ ಯಾಕೀಪರಿಗೈದೆ? ಏನು ಸಾಧಿಸಿದೆ?
ಪ್ರಶ್ನೆಗಳು ಬರೀ ಪ್ರಶ್ನೆಗಳು! ಉತ್ತರದ ಹುಡುಕಾಟದಿ
ಇನ್ನೂ ಅಲೆಯುತಿಹೆ ಅವಿಚ್ಛಿನ್ನ ಅಲೆಮಾರಿ!