ಆಕಾಶದತ್ತ ಚಿಗುರಿತು, ಬೇರು ಮುತ್ತಾಯ್ತಲೇ ಪರಾಕ್
ವಿಜಯ ದರ್ಪಣ ನ್ಯೂಸ್…
ಆಕಾಶದತ್ತ ಚಿಗುರಿತು, ಬೇರು ಮುತ್ತಾಯ್ತಲೇ ಪರಾಕ್
ಹೂವಿನಹಡಗಲಿ: ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆ ಹೊಂದಿರುವ ನಾಡಿನ ಪ್ರಸಿದ್ಧ ದೇವಸ್ಥಾನ ದೇವರಗುಡ್ಡದ ಶ್ರೀ ಮಾಲತೇಶ ಸ್ವಾಮಿಯ ಕಾರ್ಣಿಕ ಇಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಮಾಲತೇಶ ಸ್ವಾಮಿಯ ಭಕ್ತಿಯ ಸೇವೆಯಲ್ಲಿದ್ದ ಸಹಸ್ರಾರು ಗೊರವಯ್ಯನವರ, ಎಲೆಚಂಚಿ ಚೌರ (ಚಾಮರ ಬೀಸುವವರು) ಕುದುರೆಕಾರರು, ವೀರಗಾರರ ಭಕ್ತಿಯ ಪರಾಕಾಷ್ಠೆಯಲ್ಲಿ ಶಿವನ ಪ್ರಿಯವಾದ್ಯ ಡಮರಿನ ನಿನಾದ ಅಲೆಅಲೆಯಾಗಿ ಅನುರಣಿಸುತ್ತಿತ್ತು. ಏಳುಕೋಟಿ ಏಳುಕೋಟಿ ಏಳುಕೋಟಿಗೋ ಚಾಂಗ್ಮಲೋ ಎನ್ನುವುದು ಲಕ್ಷಾಂತರ ಭಕ್ತರಿಂದ ಹೊರಹೊಮ್ಮುತಿತ್ತು…
ಸಾಯಂಕಾಲ ೫.೪೫ ಸುಮಾರಿಗೆ ಕರಿಯಾಲದ ಹತ್ತಿರ ಇರುವ ಕಾರ್ಣಿಕ ನುಡಿಯುವ ಜಾಗೃತ ಸ್ಥಳದಲ್ಲಿ ಕಾರ್ಣಿಕದ ಅಜ್ಜ ಬಿಲ್ಲನ್ನೇರಿ ದಿಗಂತವನ್ನು ಒಮ್ಮೆ ದಿಟ್ಟಿಸಿ ಸದ್ದಲೇ ಎನ್ನುತ್ತಿದ್ದಂತೆ ಕೂಡಿದ ಪರ್ಸಿ ಶಾಂತವಾಯಿತು. *ಆಕಾಶದತ್ತ ಚಿಗುರಿತು, ಬೇರು ಮುತ್ತಾತಲೇ ಪರಾಕ್* ಎನ್ನುತ್ತಾ ಬಿಲ್ಲಿನಿಂದ ಧರೆಯ ಕಡೆ ಹೊರಳಿದನು. ಕೆಳಗೆ ನಿಂತಿದ್ದ ಗೊರವಯ್ಯನವರು ಕಾರ್ಣಿಕದ ಅಜ್ಜನನ್ನು ಹಾಗೆ ಹೂವಿನಂತೆ ಎತ್ತಿಕೊಂಡು ಏಳುಕೋಟಿ ಏಳುಕೋಟಿ ಏಳುಕೋಟಿಗೋ ಚಾಂಗ್ಮಲೋ ಎನ್ನುತ್ತಾ ದೇವಸ್ಥಾನದ ಕಡೆ ಹೆಜ್ಜೆ ಹಾಕಿದರು.
ಕಾರ್ಣಿಕದ ಅಜ್ಜ ಒಂಬತ್ತು ದಿನಗಳ ಉಪವಾಸ ಇದ್ದು, ಭಗವಂತನ ಕೃಪೆಯಿಂದ ಕಾರ್ಣಿಕ ನುಡಿಯುತ್ತಾರೆ. ಕಾರ್ಣಿಕದ ದಿನದಂದು ಅಜ್ಜನನ್ನು ಕರೆದುಕೊಂಡು, ಸ್ವಾಮಿಯ ಬಿಲ್ಲು, ಪಾಲಿಕೆ ಮತ್ತು ಅಂಬಾರಿಯೂ ಶ್ರೀ ಮಾಲತೇಶ ಸ್ವಾಮಿಯ ದೇವಸ್ಥಾನದಿಂದ ಹೊರಟು ಕರಿಯಾಲದಲ್ಲಿ ಪೂಜೆ ಸಲ್ಲಿಸಿ ಕಾರ್ಣಿಕ ನುಡಿಯುವ ಜಾಗೃತ ಸ್ಥಳಕ್ಕೆ ಬಂದ್ಮೇಲೆ ಕಾರ್ಣಿಕ ನುಡಿಯುವ ವಿಧಿವಿಧಾನಗಳು ಪ್ರಾರಂಭವಾಗುತ್ತವೆ. ಇದರ ನಡುವೆ ಸ್ವಾಮಿಯ ನಿಶಾನೆ ಹರಾಜು ಕೂಗುವ ಕಾರ್ಯವೂ ನೆರವೇರುತ್ತದೆ…. ಈ ಸಲದ ಸ್ವಾಮಿಯ ಕರಿ ಕಂಬಳಿಯ ನಿಶಾನೆ ಎರಡು ಲಕ್ಷದ ಮೂವತ್ತು ಸಾವಿರ ರೂಪಾಯಿಗಳಿಗೆ ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ಸದ್ಭಕ್ತನ ಪಾಲಾಯಿತು. ಪ್ರತಿವರ್ಷವೂ ಸ್ವಾಮಿಯ ಕರಿ ಕಂಬಳಿ ಹರಾಜು ಕೂಗುವ ಸಂಪ್ರದಾಯ ಇದೆ.
ಸ್ವಾಮಿಯ ಕಾರ್ಣಿಕವು ಪ್ರತಿವರ್ಷ ಮಳೆಬೆಳೆಗೆ ಸಂಬಂಧಿಸಿದಂತೆ ವ್ಯಾಖ್ಯಾನ ಆದ್ರೆ, ಹೂವಿನಹಡಗಲಿ ತಾಲ್ಲೂಕಿನ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕ ಮಳೆ ಬೆಳೆ ಸೇರಿದಂತೆ ರಾಜಕೀಯ ವಿದ್ಯಮಾನಗಳನ್ನು ಕುರಿತಂತೆ ವ್ಯಾಖ್ಯಾನ ಮಾಡಲಾಗುತ್ತದೆ.ಕಾರ್ಣಿಕದ ನುಡಿಯೂ ಒಗಟಿನ ರೂಪದಲ್ಲಿರುತ್ತದೆ. ಸ್ವಾಮಿಯೂ ನುಡಿದ ಕಾರ್ಣಿಕವೂ ಹಲವು ರಾಜಕೀಯ ವಿದ್ಯಮಾನಗಳು ಸೇರಿದಂತೆ , ಮಳೆಬೆಳೆಗೆ ಸಂಬಂಧಿಸಿದಂತೆ ಖಚಿತವಾದ ವಾಣಿಯಾಗಿ ಭಕ್ತರ ಎದೆಯಾಳದಲ್ಲಿದೆ.
ಮಲ್ಲಪ್ಪ ಫ ಕರೇಣ್ಣನವರ
ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು 9742486813