ಅನುದಾನ ಬಳಕೆ ಮಾಡಿ ಪ್ರಗತಿ ಸಾಧಿಸಿ: ಡಾ. ಪಿ ಸಿ ಜಾಫರ್
ವಿಜಯ ದರ್ಪಣ ನ್ಯೂಸ್….
ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ
ಅನುದಾನ ಬಳಕೆಯಲ್ಲಿ ಶೇಕಡ 100 ರಷ್ಟು ಆರ್ಥಿಕ ಭೌತಿಕ ಪ್ರಗತಿ ಸಾಧಿಸಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಪಿ.ಸಿ ಜಾಫರ್
ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್ 05, 2024:- 2024-25ನೇ ಸಾಲಿಗೆ ಇಲಾಖೆಗಳಿಗೆ ಬಿಡುಗಡೆಯಾಗಿರುವ ಅನುದಾನಕ್ಕೆ ಸಂಬಂಧಿಸಿದಂತೆ ಆಯಾ ಇಲಾಖೆಗಳು ಕ್ರಿಯಾಯೋಜನೆ, ಟೆಂಡರ್ ಪ್ರಕ್ರಿಯೆ, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಬಿಡುಗಡೆಯಾಗಿರುವ ಅನುದಾನವನ್ನು ಸಂಪೂರ್ಣ ಖರ್ಚು ಮಾಡುವ ಮೂಲಕ ಶೇಕಡ 100 ರಷ್ಟು ಆರ್ಥಿಕ ಮತ್ತು ಭೌತಿಕ ಪ್ರಗತಿ ಸಾಧಿಸಿ ಎಂದು ಆರ್ಥಿಕ ಇಲಾಖೆಯ ಕಾರ್ಯದರ್ಶಿಗಳು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ ಡಾ. ಪಿ.ಸಿ ಜಾಫರ್ ಅವರು ಹೇಳಿದರು.
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಲಾಖೆಗಳಿಗೆ ಬಿಡುಗಡೆಯಾದ ಹಣವನ್ನು ಸಂಪೂರ್ಣವಾಗಿ ಖರ್ಚು ಮಾಡಬೇಕು. ಮಾರ್ಚ್ ಅಂತ್ಯದವರೆಗೆ ಕಾಯದೆ ತ್ವರಿತವಾಗಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿ ಡಿಸೆಂಬರ್ ಅಂತ್ಯ ಅಥವಾ ಜನವರಿ ಮಾಹೆಯೊಳಗೆ ಶೇಕಡ 100 ರಷ್ಟು ಆರ್ಥಿಕ ಭೌತಿಕ ಪ್ರಗತಿ ಸಾಧಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನರೇಗಾ ಯೋಜನೆಯ ಸದ್ಬಳಕೆ ಆಗಬೇಕು.
ನರೇಗಾ ಯೋಜನೆಯಡಿ ಹಲವು ಇಲಾಖೆಗಳಿಗೆ ಅನುದಾನ ಬಿಡುಗಡೆ ಆಗುತ್ತದೆ. ಅನುದಾನ ಸದ್ಬಳಕೆಯಾಗಬೇಕು. ಅರಣ್ಯ ಇಲಾಖೆಯಲ್ಲಿ ನರೇಗಾ ಯೋಜನೆಯಡಿ ಗಿಡ ನೆಡುವ ಅರಣ್ಯೀಕರಣ ಕಾರ್ಯಕ್ರಮ ಒಂದು ಉತ್ತಮ ಯೋಜನೆಯಾಗಿದೆ. ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯ ವಿಭಾಗವು ಹೆಚ್ಚು ಹೆಚ್ಚು ಸಸಿಗಳನ್ನು ನಾಟಿ ಮಾಡಿ ಬೇಡಿಕೆ ಅನುಗುಣವಾಗಿ ರೈತರಿಗೆ, ಸಾರ್ವಜನಿಕರಿಗೆ ಹಂಚಬೇಕು. ಹಾಗೆಯೇ ವಿವಿಧ ವನಮಹೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸರ್ಕಾರಿ ಜಾಗಗಳಲ್ಲಿ, ಬೆಟ್ಟಗುಡ್ಡಗಳಲ್ಲಿ, ಪ್ರವಾಸಿ ತಾಣಗಳಲ್ಲಿ, ರಸ್ತೆ ಬದಿಗಳಲ್ಲಿ ಹೆಚ್ಚೆಚ್ಚು ಸಸಿಗಳನ್ನು ನೆಡಬೇಕು. ನೆಟ್ಟ ನಂತರ ಸಸಿಗಳನ್ನು ಪೋಷಿಸಿ ಬೆಳೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಪ್ರಸ್ತುತ ಈಗಿರುವ ವಾತಾವರಣ ಪರಿಸ್ಥಿತಿಯಲ್ಲಿ ಹವಾಮಾನ ವೈಪರೀತ್ಯ, ಪರಿಸರ ಸಂರಕ್ಷಣೆ, ಪ್ರಕೃತಿ ಸಮತೋಲನ ಕಾಪಾಡಲು ಗಿಡ ಮರಗಳನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಉಸ್ತುವಾರಿ ಕಾರ್ಯದರ್ಶಿಗಳು ಅಭಿಪ್ರಾಯ ಪಟ್ಟರು.
2024ರ ನರೇಗಾ ಯೋಜನೆಯಡಿ 5720 ಸಸಿಗಳನ್ನು ನೆಟ್ಟು, 26 ಕಿಮೀ ರಸ್ತೆ ಬದಿ ನೆಡುತೋಪು ನಿರ್ಮಾಣ ಮಾಡಲಾಗಿದೆ. 44.16 ಹೆಕ್ಟೇರ್ ಬ್ಲಾಕ್ ಪ್ಲಾಂಟೇಶನ್ ನೆಡುತೋಪು ನಿರ್ಮಾಣ ಮಾಡಲಾಗಿದೆ. 2025ರ ವೇಳೆಗೆ 42840 ಸಸಿ ನೆಡುವುದು, ಸಾರ್ವಜನಿಕರ ವಿತರಣೆಗಾಗಿ 1,28,660 ಸಸಿಗಳನ್ನು ತಾಲ್ಲೂಕು ನರ್ಸರಿಗಳಲ್ಲಿ ಬೆಳೆಸಲಾಗುತ್ತಿದೆ ಎಂದು ಅರಣ್ಯಾಧಿಕಾರಿ ಮಾಹಿತಿ ನೀಡಿದರು.
ವಲಸಿಗರ ಮೇಲೆ ನಿಗಾ ಇಡಿ
ಜಿಲ್ಲೆಗೆ ಬೇರೆ ಪ್ರದೇಶದಿಂದ, ಬೇರೆ ರಾಜ್ಯದಿಂದ ಅಥವಾ ಬೇರೆ ರಾಷ್ಟ್ರಗಳಿಂದ ಉದ್ಯೋಗಕ್ಕೆ ಅಥವಾ ಇನ್ನಿತರ ಕಾರ್ಯ ಚಟುವಟಿಕೆಗಳಿಗೆ ಆಗಮಿಸುವ ವಲಸಿಗರ ಬಗ್ಗೆ ನಿಗಾ ವಹಿಸಿ. ಜಿಲ್ಲೆಯ ಯಾವ ಪ್ರದೇಶಗಳಲ್ಲಿ ವಲಸಿಗರು ವಾಸವಾಗಿದ್ದಾರೆ ಎಂಬ ಮಾಹಿತಿಯನ್ನು ಕಲೆ ಹಾಕಿ ಯಾವ ಉದ್ದೇಶಕ್ಕಾಗಿ ಬಂದಿದ್ದಾರೆ, ಆರ್ಥಿಕ ಸ್ಥಿತಿಗತಿ, ಆರೋಗ್ಯ, ಶಿಕ್ಷಣ ಇವುಗಳ ಬಗ್ಗೆ ಮಾಹಿತಿ ಕಲೆ ಹಾಕಲು ಆರೋಗ್ಯ, ಕಾರ್ಮಿಕ, ಪೋಲಿಸ್ ಇಲಾಖೆಗೆ ಸೂಚಿಸಿದರು.
ಸೆಪ್ಟೆಂಬರ್ ತಿಂಗಳಲ್ಲಿ ಕಡಿಮೆ ಮಳೆ.
ಪ್ರಸ್ತುತ ಸಾಲಿನಲ್ಲಿ ಜನವರಿ 01 ರಿಂದ ಸೆಪ್ಟೆಂಬರ್ 25 ರ ವರೆಗೆ 557 ಮಿ.ಮೀ ವಾಡಿಕೆ ಮಳೆಗೆ 535 ಮಿ.ಮೀ ಮಳೆಯಾಗಿದೆ. ಕಳೆದ ಏಳು ದಿನಗಳಲ್ಲಿ ಅಂದರೆ ಸೆಪ್ಟೆಂಬರ್ 19 ರಿಂದ 25 ರವರೆಗೆ 47.01 ಮಿ.ಮೀ ವಾಡಿಕೆ ಮಳೆಗೆ 23.04 ಮಿ.ಮೀ ಮಳೆಯಾಗಿದೆ ಎಂದು ಕೃಷಿ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಎಸ್.ಎಸ್.ಎಲ್.ಸಿ, ಪಿಯುಸಿ ಯಲ್ಲಿ ಈ ವರ್ಷ ಉತ್ತಮ ಫಲಿತಾಂಶ ಬರಲು ಯೋಜನೆ ರೂಪಿಸಿ. ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸರ್ಕಾರಿ ಶಾಲೆಗಳನ್ನು ದತ್ತು ನೀಡಿ. ಶಾಲಾ ಕಾಲೇಜು ಶಿಕ್ಷಕರಿಗೆ, ಮುಖ್ಯೋಪಾಧ್ಯಾಯರಾಗಿ, ಪ್ರಾಂಶುಪಾಲರಿಗೆ ಸೂಕ್ತ ತರಬೇತಿ, ಮಾರ್ಗಸೂಚಿಗಳನ್ನು ನೀಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಎನ್ ಅನುರಾಧ, ಅಪರ ಪೋಲಿಸ್ ವರಿಷ್ಠಾಧಿಕಾರಿ ನಾಗರಾಜ್, ಪ್ರಾದೇಶಿಕ ಅರಣ್ಯ ವಿಭಾಗದ ಉಪವಿಭಾಗಾಧಿಕಾರಿ ಸರೀನಾ ಸಿಕ್ಕಲಿಗಾರ್, ಉಪವಿಭಾಗಾಧಿಕಾರಿ ಎನ್. ದುರ್ಗಶ್ರೀ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೆ.ರಮೇಶ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.
&&&&&&&&&&&&&&&&&&&&&&&&
ಬಂಜಾರ ನಾಟಕ, ಸಾಹಿತ್ಯ ಹಾಗೂ ಕಾವ್ಯರಚನಾ ವಸತಿ ಸಹಿತ ಕಮ್ಮಟಕ್ಕೆ ಅರ್ಜಿ ಆಹ್ವಾನ
ಕರ್ನಾಟಕ ಬಂಜಾರ ಸಂಸ್ಕೃತಿ ಹಾಗೂ ಭಾಷಾ ಅಕಾಡೆಮಿಯ ಹಾಗೂ ಕೃಷ್ಣಾಪುರದೊಡ್ಡಿಯ ಕೆಎಸ್ ಮುದ್ದಪ್ಪ ಸ್ಮಾರಕ ಟ್ರಸ್ಟ್ ಸಂಯುಕ್ತವಾಗಿ ಅಕ್ಟೋಬರ್ ತಿಂಗಳ ಕೊನೇ ವಾರದಲ್ಲಿ ಹದಿನೈದು ದಿನಗಳ ಬಂಜಾರ ನಾಟಕ ಸಾಹತ್ಯ ಹಾಗೂ ಕಾವ್ಯಕಮ್ಮಟವನ್ನು ಹಮ್ಮಿಕೊಂಡಿದೆ. 20ರಿಂದ 50 ವರ್ಷದೊಳಗಿನ ಆಸಕ್ತರು ಕೂಡಲೇ ತಮ್ಮ ಹೆಸರು ನೋಂದಾಯಿಸಬಹುದು.
ಬಂಜಾರ ಸಮುದಾಯದ ಅಭ್ಯರ್ಥಿಗಳಿಗೆ, ಕವಿ, ಸಾಹಿತಿಗಳಿಗೆ ಮೊದಲ ಆಧ್ಯತೆ. ಉಳಿದಂತೆ ಶೇ. 10% ಇತರೆ ವರ್ಗದವರು ಪಾಲ್ಗೊಳ್ಳಲು ಅವಕಾಶವಿದೆ. ತಮ್ಮ ಸ್ವಹಸ್ತದಿಂದ ಬರೆದ ಅರ್ಜಿಯನ್ನು ಈ ಕೂಡಲೇ ಅಧ್ಯಕ್ಷರು/ರಿಜಿಸ್ಟಾçರ್, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಕನ್ನಡಭವನ, ಮೊದಲನೇ ಮಹಡಿ, ಜೆ.ಸಿ. ರಸ್ತೆ ಬೆಂಗಳೂರು ಇವರಿಗೆ ತಲುಪುವಂತೆ ಕಳುಹಿಸಬಹುದು.
ಹೆಚ್ಚಿನ ವಿವರಗಳಿಗೆ ಡಾ. ಎ.ಆರ್. ಗೋವಿಂದಸ್ವಾಮಿ ಅಧ್ಯಕ್ಷರು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ 09448462620/9113243344 ಹಾಗೂ ಡಾ. ಎಂ. ಬೈರೇಗೌಡ, ಕಾರ್ಯದರ್ಶಿ ಕೆಎಸ್ ಮುದ್ದಪ್ಪ ಸ್ಮಾರಕ ಟ್ರಸ್ಟ್ 9448102158/7899906116 ಇವರನ್ನು ಸಂಪರ್ಕಿಸಬಹುದು ಎಂದು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
9448102158