ಐಪಿಎಸ್ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಬೇಕೆಂದು ಜೆಡಿಎಸ್ ಆಗ್ರಹ

ವಿಜಯ ದರ್ಪಣ ನ್ಯೂಸ್..

ಐಪಿಎಸ್ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಬೇಕೆಂದು  ಜೆಡಿಎಸ್ ಆಗ್ರಹ

ಬೆಂಗಳೂರು ಸೆಪ್ಟೆಂಬರ್ 01: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಅವಾಚ್ಯ, ಅಸಭ್ಯ ಹಾಗೂ ಅವಹೇಳನಕಾರಿ ಪದಬಳಕೆ ಮಾಡಿದ ಆರೋಪಕ್ಕೆ ಒಳಗಾಗಿರುವ ಹಿರಿಯ ಪೊಲೀಸ್ ಅಧಿಕಾರಿ ಚಂದ್ರಶೇಖರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ಜೆಡಿಎಸ್ ಶಾಸಕರ ನಿಯೋಗ ಇಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಮನವಿ ಸಲ್ಲಿಸಿದೆ.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‌ ಬಾಬು ನೇತೃತ್ವದಲ್ಲಿ ಜೆಡಿಎಸ್‌ನ ಶಾಸಕರ ನಿಯೋಗ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದೆ. ಮನವಿ ಪತ್ರದಲ್ಲಿ ಎಂ.ಚಂದ್ರಶೇಖರ್ ಅವರನ್ನು ಭಾರತೀಯ ಪೊಲೀಸ್ ಸೇವೆಯಿಂದ ಅಮಾನತುಗೊಳಿಸಿ ಅವರ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಲು ಅಗತ್ಯವಿರುವ ದಾಖಲಾತಿಗಳೊಂದಿಗೆ ಭಾರತೀಯ ಪೊಲೀಸ್ ಸೇವೆಗಳ ವೃಂದದ ಪ್ರಾಧಿಕಾರವಾಗಿರುವ ಕೇಂದ್ರ ಗೃಹ ಮಂತ್ರಾಲಯಕ್ಕೆ ಪ್ರಸ್ತಾವನೆಯನ್ನು ಸೂಕ್ತ ಶಿಫಾರಸ್ಸಿನೊಂದಿಗೆ ತಿಳಿಸಬೇಕು ಎಂದು ಒತ್ತಾಯಿಸಲಾಗಿದೆ. ಚಂದ್ರಶೇಖರ್ ಮೂಲತಃ ಹಿಮಾಚಲ ಪ್ರದೇಶದ ಐಪಿಎಸ್ ಕೇಡರ್‌ಗೆ ಸೇರಿದವರಾಗಿದ್ದಾರೆ.

ಅವರು ತಮ್ಮ ಪತ್ನಿಯ ಅನಾರೋಗ್ಯ ಮತ್ತು ಹಿಮಾಚಲ ಪ್ರದೇಶದ ವಾತಾವರಣ ಹೊಂದುವುದಿಲ್ಲ ಎಂಬ ನೆಪ ಹೇಳಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಹಾಗೂ ರಾಜಕೀಯ ಪ್ರಭಾವ ಬೀರಿ ಕರ್ನಾಟಕ ರಾಜ್ಯಕ್ಕೆ ವರ್ಗಾವಣೆಗೊಂಡು ಕರ್ನಾಟಕ ಐಪಿಎಸ್ ಕೇಡರ್‌ನಲ್ಲಿ ವಿಲೀನಗೊಂಡಿದ್ದಾರೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ಮಾಧ್ಯಮಗಳ ಪ್ರತಿನಿಧಿಗಳೊಂದಿಗೆ ಮಾತನಾಡಿ, ತಾವು ಬರೆದಿರುವ ಪತ್ರದಲ್ಲಿನ ಅಂಶಗಳನ್ನು ಆ ಅಧಿಕಾರಿ ದೃಢೀಕರಿಸಿ ಮಾತನಾಡಿದ್ದಾರೆ. ಅವರ ವಿರುದ್ಧ ಹಲವು ಎಫ್‌ಐಆರ್‌ಗಳು ದಾಖಲಾಗಿದ್ದು, ನ್ಯಾಯಾಲಯಗಳಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಹೇಳಲಾಗಿದೆ. ಶ್ರೀಧರ್‌ರವರ ವಿರುದ್ದ ಚಂದ್ರಶೇಖರ್ ರವರು ಕೇಸು ದಾಖಲಿಸಿ ಮಧ್ಯಂತರ ಆದೇಶ ಪಡೆದಿದ್ದಾರೆ. ರಾಜ್ಯದ ಪೊಲೀಸ್ ಅಧಿಕಾರಿ ವಿರುದ್ಧ ದಾಖಲಾಗಿರುವ ಪ್ರಕರಣಗಳ ಬಗ್ಗೆ ರಾಜ್ಯಸರ್ಕಾರ ಕೈಗೊಂಡಿರುವ ಕ್ರಮದ ಬಗ್ಗೆ ಕೇಂದ್ರ ಗೃಹ ಮಂತ್ರಾಲಯಕ್ಕೆ ಯಾವ ವರದಿಯನ್ನು ಸಲ್ಲಿಸಿದೆ ಎಂಬುದು ಇದುವರೆಗೂ ಯಾರಿಗೂ ತಿಳಿದಿಲ್ಲ ಎಂದು ಉಲ್ಲೇಖಿಸಲಾಗಿದೆ.

ರಾಜ್ಯಪಾಲರಿಗೆ ದೂರು:

ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಸುರೇಶ್‌ಬಾಬು, ಹೆಚ್ ಡಿ ಕುಮಾರಸ್ವಾಮಿ ಅವರ ಬಗ್ಗೆ ಅವಹೇಳನಕಾರಿ ಪದಬಳಕೆ ಮಾಡಿದ ಐಪಿಎಸ್ ಅಧಿಕಾರಿ ಚಂದ್ರಶೇಖರ್ ವಿರುದ್ದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಕೊಟ್ಟಿದ್ದೇವೆ. ಈ ಸಂಬಂಧ ರಾಜ್ಯಪಾಲರಿಗೂ ದೂರು ನೀಡುತ್ತೇವೆ ಎಂದು ತಿಳಿಸಿದರು.

ಬೇರೆ ರಾಜ್ಯದ ಕೇಡರ್‌ನಲ್ಲಿ ನೇಮಕವಾಗಿದ್ದ ಚಂದ್ರಶೇಖರ್ ಹಲವು ಕಾರಣ ಕೊಟ್ಟು ಕರ್ನಾಟಕ ರಾಜ್ಯದ ಸೇವೆಯಲ್ಲಿ ಮುಂದುವರೆಯುತ್ತಿದ್ದಾರೆ.

ಅಲ್ಲದೆ ರಾಜ್ಯಪಾಲರ ಕಚೇರಿಯ ಸಿಬ್ಬಂದಿ ತನಿಖೆ ಮಾಡಲು ಅನುಮತಿ ಕೋರಿದ್ದಾರೆ. ಅವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಆ ಅಧಿಕಾರಿ ಸೇವೆಯನ್ನು ರಾಜ್ಯದಲ್ಲಿ ಮುಂದುವರೆಸಬಾರದು ಎಂದರು. ಚಂದ್ರಶೇಖರ್‌ರವರು ಉದ್ದಟತನದಿಂದ ಮಾತನಾಡಲು ಯಾರದೋ ಕುಮ್ಮಕ್ಕು ಇವರಿಗಿರಬೇಕು ಎಂದರು.

ಶಾಸಕ ಎ.ಮಂಜು ಮಾತನಾಡಿ, ಚಂದ್ರಶೇಖರ್ ಪದಬಳಕೆ ಮಾಡಿರುವುದು ಖಂಡನೀಯ, ಅವರು ಕ್ಷಮೆ ಕೇಳಬೇಕು. ಕುಮಾರಸ್ವಾಮಿ ಅವರಿಗೆ ಅವಮಾನವಾಗಿದೆ ಎಂದು ಖುಷಿ ಪಡಬಾರದು. ನಾಳೆ ನಿಮಗೂ ಆಗಬಹುದು ಎಂದು ಹೇಳಿದರು.

ಅವರ ಕೆಲಸ ತನಿಖೆ ಮಾಡುವುದಷ್ಟೇ ಮಾಹಿತಿಯನ್ನು ಸೋರಿಕೆ ಮಾಡುವುದು ಸರಿಯಲ್ಲ. ಕುಮಾರಸ್ವಾಮಿ ಅವರಿಗೆ ಅವಮಾನ ಮಾಡಿದರೆ ಶಾಸಕರಿಗೂ ಅವಮಾನ ಮಾಡಿದಂತೆ. ಚುನಾಯಿತ ಪ್ರತಿನಿಧಿ ಬಗ್ಗೆ ಈ ರೀತಿ ಪದಬಳಕೆ ಮಾಡಿರುವುದು ತಪ್ಪು. ಯಾರೂ ಸಹಿಸುವಂತದ್ದಲ್ಲ ಎಂದರು.

ಜೆಡಿಎಸ್ ನಿಯೋಗದಲ್ಲಿ ಶಾಸಕರಾದ ವೆಂಕಟಶಿವರೆಡ್ಡಿ, ಶಾರದ ಪೂರ್ಯಾನಾಯಕ್, ಕರೆಮ್ಮ, ಗೋವಿಂದರಾಜ್, ಬೋಜೇಗೌಡ, ಟಿ.ಎ.ಶರವಣ, ಕೆ.ಎ.ತಿಪ್ಪೇಸ್ವಾಮಿ, ಮಾಜಿ ಶಾಸಕರಾದ ಸಿ.ಎಸ್.ಪುಟ್ಟರಾಜು, ಬಿ.ಎಂ. ಫಾರುಖ್, ರಮೇಶ್ ಗೌಡ, ಜೆಡಿಎಸ್ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಪಿ.ರಂಗನಾಥ್, ಬೆಂಗಳೂರು ನಗರ ಕಾನೂನು ಘಟಕದ ಅಧ್ಯಕ್ಷ ಪ್ರದೀಪ್ ಕುಮಾರ್ ಮತ್ತಿತರರಿದ್ದರು.