ಬಾಲ್ಯ ವಿವಾಹ ತಡೆಯಲು ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ: ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ

ವಿಜಯ ದರ್ಪಣ ನ್ಯೂಸ್….

ಬಾಲ್ಯ ವಿವಾಹ ತಡೆಯಲು ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ: ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್ 25, 2024 :- ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳ ಬಗ್ಗೆ ಸಾರ್ವಜನಿಕರಿಂದ ದೂರು ಬಂದಲ್ಲಿ ತಕ್ಷಣವೇ ಅಧಿಕಾರಿಗಳು ಸ್ಪಂದಿಸಿ ಬಾಲ್ಯ ವಿವಾಹ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.


ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಡೆದ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಮೇಲ್ವಿಚಾರಣೆ ಸಮಿತಿ, ಪೋಷಣ್ ಅಭಿಯಾನ ಸಮನ್ವಯ ಸಮಿತಿ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣೆ 2005-2006, ಬಾಲ್ಯ ವಿವಾಹ ನಿಷೇಧ ಸಮಿತಿ ಸಭೆ ಸೇರಿದಂತೆ ವಿವಿಧ ಸಮಿತಿ ಸಭೆಗಳ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ರಡಿ ಜಿಲ್ಲೆಯಲ್ಲಿ 2024ರ ಏಪ್ರಿಲ್ ಮಾಹೆಯಿಂದ ಆಗಸ್ಟ್ ಮಾಹೆಯವರೆಗೆ ಒಟ್ಟು-16 ಪ್ರಕರಣಗಳು ದಾಖಲಾಗಿದೆ. ಈ ಪೈಕಿ ದೇವನಹಳ್ಳಿಯಲ್ಲಿ 06, ದೊಡ್ಡಬಳ್ಳಾಪುರ 09, ಹೊಸಕೋಟೆಯಲ್ಲಿ 01 ಬಾಲ್ಯವಿವಾಹ ಪ್ರಕರಣಗಳನ್ನು ತಡೆಯಲಾಗಿದೆ. ಜಿಲ್ಲೆಯ ಪ್ರತಿ ಮನೆಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಕಾನೂನುಗಳ ಕರಪತ್ರವನ್ನು ಹಂಚುವ ಮೂಲಕ ಬಾಲ್ಯ ವಿವಾಹ ನಿಷೇಧ ಕುರಿತಂತೆ ಪೋಷಕರಲ್ಲಿ ಜಾಗೃತಿ ಮೂಡಿಸಬೇಕು. ಬಾಲ್ಯ ವಿವಾಹ ನಿಷೇಧ ಕಾಯ್ದೆ ಅನುಷ್ಠಾನದ ಭಾಗವಾಗಿರುವ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಬಾಲ್ಯ ವಿವಾಹ ಪದ್ಧತಿ ನಿರ್ಮೂಲನೆಗೆ ಕೈಜೋಡಿಸಬೇಕು ಎಂದರು.

ಸಾರ್ವಜನಿಕರು ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವುದು ಗಮನಕ್ಕೆ ಬಂದರೆ ತುರ್ತಾಗಿ ಮಕ್ಕಳ ಸಹಾಯವಾಣಿ-1098, ಪೊಲೀಸ್ ಸಹಾಯವಾಣಿ 112 ಮತ್ತು ಮಕ್ಕಳ ರಕ್ಷಣಾ ಘಟಕ 080-29560034 ಹಾಗೂ ಸಂಬಂಧಪಟ್ಟ ಪೊಲೀಸ್‌ ಠಾಣೆ ಅವರ ಗಮನಕ್ಕೆ ತುರ್ತಾಗಿ ತರಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ತಿಳಿಸಿದರು

ಜಿಲ್ಲೆಯಲ್ಲಿ ಒಟ್ಟು 1277 ಅಂಗನವಾಡಿ ಕೇಂದ್ರಗಳಿದ್ದು, 999 ಸ್ವಂತ ಅಂಗನವಾಡಿ ಕಟ್ಟಡಗಳು, 04 ಪಂಚಾಯಿತಿ ಕಟ್ಟಡಗಳಲ್ಲಿ, 50 ಅಂಗನವಾಡಿಗಳು ಸಮುದಾಯ ಭವನದಲ್ಲಿ, 88 ಅಂಗನವಾಡಿಗಳು ಶಾಲೆಗಳಲ್ಲಿ ಹಾಗೂ 132 ಅಂಗನವಾಡಿಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಸ್ವಂತ ಕಟ್ಟಡವಿಲ್ಲದ ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮವಹಿಸಿ ಸಿ.ಎಸ್.ಆರ್ ಅನುದಾನದಡಿ ಅಂಗನವಾಡಿ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಶೌಚಾಲಯ, ವಿದ್ಯುತ್, ನೀರು ಸೇರಿದಂತೆ ಮೂಲ ಸೌಕರ್ಯಕ್ಕೆ ತೊಂದರೆ ಆಗದಂತೆ ಕ್ರಮ ವಹಿಸಿ ಎಂದರು.

ಅಪೌಷ್ಟಿಕತೆಯಿಂದ ಬಳಲುತ್ತಿರುವ ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳಿಗೆ ಪೋಷಣ್ ಅಭಿಯಾನದಡಿ ಪೌಷ್ಠಿಕ ಆಹಾರ ನೀಡಿ ಅವರನ್ನು ಸದೃಢರನ್ನಾಗಿಸಬೇಕು ಎಂದರಲ್ಲದೆ ಐ.ಸಿ.ಡಿ.ಎಸ್ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ, ಪೋಷಣ್ ಅಭಿಯಾನ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಜಿಲ್ಲೆಯನ್ನು ಅಪೌಷ್ಟಿಕ ಮುಕ್ತ ಜಿಲ್ಲೆಯನ್ನಾಗಿಸಬೇಕು ಎಂದರು.

ಕೌಟುಂಬಿಕ ಹಿಂಸೆಗೊಳಗಾದ ಮಹಿಳೆಯರಿಗೆ ಸಕಾಲದಲ್ಲಿ ಆಪ್ತ ಸಮಾಲೋಚನೆ ನಡೆಸಿ ಆತ್ಮಸ್ಥೈರ್ಯ ತುಂಬಬೇಕು. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ದೌರ್ಜನ್ಯಗೊಳಗಾದ ಮಹಿಳೆಯರಿಗೆ, ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿ ನ್ಯಾಯ ಒದಗಿಸಬೇಕು. ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ 2005 ರಡಿ ನಿಯಮ ಪ್ರಸಕ್ತ ಸಾಲಿನಲ್ಲಿ ಸಖಿ ಯೋಜನೆಯ ಅಡಿ ದಾಖಲಾದ 94 ಪ್ರಕರಣಗಳಲ್ಲಿ 83 ಪ್ರಕರಣಗಳು ಇತ್ಯರ್ಥಗೊಳಿಸಲಾಗಿದೆ. ಸಂರಕ್ಷಣಾಧಿಕಾರಿಗಳ ಹಂತದಲ್ಲಿ ದಾಖಲಾದ 17 ಪ್ರಕರಣಗಳಲ್ಲಿ 11 ಪ್ರಕರಣಗಳನ್ನು ಸಮಾಲೋಚನೆಯಿಂದ ಇತ್ಯರ್ಥಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಕಾನೂನು ಪ್ರಾಧಿಕಾರ ಸದಸ್ಯ ನ್ಯಾಯಮೂರ್ತಿ ಬೋಲಾ ಪಂಡಿತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಮುದ್ದಣ್ಣ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಅನೀತಾಲಕ್ಷ್ಮೀ, ಹೊಸಕೋಟೆ ವಿಭಾಗದ ಡಿವೈಎಸ್ಪಿ ಶಂಕಗೌಡ ಅಣ್ಣಾ ಸಾಹೇಬ್ ಪಾಟೀಲ್, ದೊಡ್ಡಬಳ್ಳಾಪುರ ವಿಭಾಗದ ಡಿವೈಎಸ್ಪಿ ರವಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಿಬ್ಬಂದಿ, ಇತರರು ಉಪಸ್ಥಿತರಿದ್ದರು.

&&&&&&&&&&&&&&&&&&&&&&&&&&

ಕಾನೂನು ಪದವೀಧರಿಂದ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್ 25,2024 :-2024-25ನೇ ಸಾಲಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ ಕಾನೂನು ಪದವೀಧರರಿಗೆ ವೃತ್ತಿ ತರಬೇತಿ ಕಾರ್ಯಕ್ರಮದಡಿ ಶಿಷ್ಯವೇತನ ನೀಡುವ ಸಲುವಾಗಿ ಪರಿಶಿಷ್ಟ ಪಂಗಡದ ಕಾನೂನು ಪದವೀಧರರಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲಾಖಾ ವತಿಯಿಂದ ಎರಡನೇ ಹಂತದಲ್ಲಿ ಅವಕಾಶ ಕಲ್ಪಿಸಲಾಗಿರುತ್ತದೆ. ಇಲಾಖಾ ವೆಬ್ಸೈಟ್ www.twd.kar.nic.in ನಲ್ಲಿ ಸೆಪ್ಟೆಂಬರ್ 26 ರಿಂದ ಅಕ್ಟೊಬರ್ 07 ರ ವರೆಗೆ ಅರ್ಜಿಯನ್ನು ಈ ಕೆಳಗೆ ನಮೂದಿಸಿರುವ ಷರತ್ತುಗಳ ಪ್ರಕಾರ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಷರತ್ತುಗಳು:-

ಅಭ್ಯರ್ಥಿಗಳು 40 ವರ್ಷ ವಯೋಮಿತಿಯೊಳಗಿರಬೇಕು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ಮತ್ತು ನೆಲಮಂಗಲ ತಾಲ್ಲೂಕುಗಳ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು, ಕಾನೂನು ಪದವೀಧರರ ಕುಟುಂಬದ ವಾರ್ಷಿಕ ಆದಾಯ 2.50 ಲಕ್ಷಗಳನ್ನು ಮೀರಿರಬಾರದು, ವಕೀಲರ ಸಂಘದಲ್ಲಿ ಅಭ್ಯರ್ಥಿಯು ಹೆಸರನ್ನು ನೋಂದಾಯಿಸಿರಬೇಕು,ತರಬೇತಿ ಅವಧಿ 2 ವರ್ಷಗಳಾಗಿದ್ದು, ಮಾಸಿಕ ರೂ.10,000/-ಗಳ ಶಿಷ್ಯ ವೇತನ ನೀಡಲಾಗುವುದು, ಆಯ್ಕೆಯಾದ ಅಭ್ಯರ್ಥಿಗಳನ್ನು ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರ್ ಅಥವಾ 20 ವರ್ಷಕ್ಕಿಂತ ಹೆಚ್ಚಿನ ಅನುಭವ ಹೊಂದಿರುವ ಹಿರಿಯ ವಕೀಲರಲ್ಲಿ ತರಬೇತಿ ನಿಯೋಜಿಸಲಾಗುವುದು, ಆಯ್ಕೆಯಾದ ಅಭ್ಯರ್ಥಿಗಳು ಯಾವುದೇ ಕಾರಣಕ್ಕೂ ತರಬೇತಿಯನ್ನು ಪೂರ್ಣಗೊಳಿಸದೆ ಮಧ್ಯಂತರದಲ್ಲಿ ಬಿಟ್ಟು ಹೋಗಬಾರದು ಹಾಗೆ ಬಿಟ್ಟು ಹೊದ ಪಕ್ಷದಲ್ಲಿ ತರಬೇತಿ ಅವಧಿಯಲ್ಲಿ ಪಾವತಿಸಿದ ಶಿಷ್ಯವೇತನ ವಾಪಸ್ಸು ಪಡೆಯಲಾಗುವುದು ಹಾಗೂ ಈ ನಿಯಮ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ದಿಮೆಯಲ್ಲಿ ನೇಮಕ ಹೊಂದುವವರಿಗೆ ಅನ್ವಯಿಸುವುದಿಲ್ಲ, ಸುಳ್ಳು ದಾಖಲೆ ಮಾಹಿತಿಯನ್ನು ಒದಗಿಸಿ ಆಯ್ಕೆಯಾದ ಅಭ್ಯರ್ಥಿಗಳನ್ನು ಕಾನೂನಿನ ಅನ್ವಯ ಶಿಕ್ಷೆಗೆ ಗುರಿ ಪಡಿಸಲಾಗುವುದು ಹಾಗೂ ತರಬೇತಿ ಅವಧಿಯಲ್ಲಿ ಪಾವತಿಸಿದ ಶಿಷ್ಯವೇತನ ಶೇ.10 ರಂತೆ ಬಡ್ಡಿಯೊಂದಿಗೆ ವಸೂಲಿ ಮಾಡಲಾಗುವುದು, ಅರ್ಜಿಯಲ್ಲಿನ ಮಾಹಿತಿಯು ಅಪೂರ್ಣವಾಗಿದ್ದಲ್ಲಿ ಅಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ, ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ 080-29787448, ಸಹಾಯಕ ನಿರ್ದೇಶಕರ ಕಛೇರಿ, ಸಮಾಜ ಕಲ್ಯಾಣ ಇಲಾಖೆ, ದೇವನಹಳ್ಳಿ 080-27681784, ಸಹಾಯಕ ನಿರ್ದೇಶಕರ ಕಛೇರಿ, ಸಮಾಜಕ ಲ್ಯಾಣ ಇಲಾಖೆ, ದೊಡ್ಡಬಳ್ಳಾಪುರ 080-27623681, ಸಹಾಯಕ ನಿರ್ದೇಶಕರ ಕಛೇರಿ, ಸಮಾಜ ಕಲ್ಯಾಣ ಇಲಾಖೆ, ನೆಲಮಂಗಲ 080-27723172, ಸಹಾಯಕ ನಿರ್ದೇಶಕರ ಕಛೇರಿ, ಸಮಾಜ ಕಲ್ಯಾಣ ಇಲಾಖೆ, ಹೊಸಕೋಟೆ 080- 27931528, ಕಛೇರಿಗಳನ್ನು ಸಂಪರ್ಕಿಸುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.