ಸೋಲು ಎಂಬುದು ಬಿಟ್ಟಸ್ಥಳವಿದ್ದಂತೆ ’ಜಯ್ ನುಡಿ’ (ವ್ಯಕ್ತಿತ್ವ ವಿಕಸನ ಮಾಲಿಕೆ)
ವಿಜಯ ದರ್ಪಣ ನ್ಯೂಸ್…
ಸೋಲು ಎಂಬುದು ಬಿಟ್ಟಸ್ಥಳವಿದ್ದಂತೆ ’ಜಯ್ ನುಡಿ’ (ವ್ಯಕ್ತಿತ್ವ ವಿಕಸನ ಮಾಲಿಕೆ)
ಇನ್ನು ಮುಂದೆ ಒಂದು ಹೆಜ್ಜೆ ಇಡಲು ಆಗುವುದಿಲ್ಲ. ಸೋತು ಸುಣ್ಣವಾಗಿದಿನಿ. ಸೋಲುಗಳ ಸಾಲು ನನ್ನನ್ನು ಅಕ್ಷರಶಃ ಹಿಂಡಿ ಹಿಪ್ಪಿ ಮಾಡಿದೆ. ಸೋಲಿನ ಕಹಿ ಅನುಭವಗಳ ಮೂಟೆಯನ್ನು ಹೊತ್ತು ನಡೆಯುವುದು ಅಷ್ಟು ಸುಲಭದ ಕೆಲಸವೇನಲ್ಲ. ಯಾವುದನ್ನು ಗೆಲುವು ಅಂತ ಕರಿತಾರೋ ಅದನ್ನು ಪಡೆಯಲು ಇಷ್ಟೊಂದು ಒದ್ದಾಡಬೇಕಾ? ಅಂತ ಮನಸ್ಸು ಚೀರಿ ಚೀರಿ ಹೇಳುತ್ತದೆ. ಬಿಟ್ಟು ಬಿಡು ಗೆಲುವಿನ ಕನಸು. ಕಣ್ಣುಗಳಿರುವುದೇ ಕನಸು ಕಾಣೋದಕ್ಕೆ. ಲೆಕ್ಕವಿಲ್ಲದಷ್ಟು ಕನಸುಗಳನ್ನು ಉತ್ಪಾದಿಸುವ ಮನಸ್ಸು ದಡ ಸೇರುವವರೆಗೂ ನನ್ನೊಂದಿಗೆ ಇರುವುದೇ ಇಲ್ಲ. ಇಂಥ ಮಂಗನಂಥ ಮನಸ್ಸನ್ನು ತಿದ್ದುವುದು ಯಾವನಿಗೆ ಬೇಕಾಗಿದೆ? ಮಾಡಿದ ತಪ್ಪುಗಳನ್ನು ಗುರುತಿಸಿ ಮುಂದೆ ಸಾಗಬೇಕು ಎನ್ನುವಷ್ಟರಲ್ಲಿ ಚಂಚಲ ಮನಸ್ಸು ಮತ್ತೆ ನಾಯಿ ಬಾಲ ಆಗಿರುತ್ತದೆ. ಮತ್ತೆ ಅ ಆ ಇ ಈ ಮೊದಲಿನಿಂದ ಶುರು. ಇದು ಗೆಲ್ಲಲು ಹಂಬಲಿಸುವವರ ಮನದಳಲು.
ಒತ್ತಡವನ್ನು ಹದಗೊಳಿಸಿ ವಾಸ್ತವದಲ್ಲಿ ಒತ್ತಡ ಗೆಲುವಿಗೆ ಬೇಕಿರುವ ಮೂಲ ಅಂಶ ಎನ್ನುವುದು ಸ್ಪಷ್ಟ. ಒತ್ತಡವಿಲ್ಲದದಿದ್ದರೆ ಗೆಲುವಿಲ್ಲ ಎನ್ನುವುದು ಕೆಲವು ಅನುಭವಿಗಳ ನುಡಿಯೂ ಹೌದು. ಗೆಲುವಿಗೂ ಒತ್ತಡಕ್ಕೂ ಅವಿನಾಭಾವ ಸಂಬಂಧವಿದೆ. ಒತ್ತಡವಿಲ್ಲದಿದ್ದರೆ ಪ್ರಯತ್ನಿಸಲು ಆಗುವುದೇ ಇಲ್ಲ ಎನ್ನುವ ಮನಸ್ಥಿತಿ ಉಳ್ಳವರು ತಾವೇ ಅತಿಯಾದ ಒತ್ತಡಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ಆತಂಕಕ್ಕೊಳಗಾಗಿ ಸಹನೆ ಕಳೆದುಕೊಳ್ಳುತ್ತಾರೆ. ಕೆಲಸ ಆರಂಭಿಸುವಾಗಿನ ಆತುರತೆ ಮಾಡುವಾಗ ಇರುವುದಿಲ್ಲ. ನಡುವೆ ಕೈ ಬಿಟ್ಟು ಸೋತೆನೆಂದು ಒದ್ದಾಡುತ್ತಾರೆ. ಅತಿ ಒತ್ತಡವಿದ್ದರೆ ಏಕಾಗ್ರತೆಯಿಂದ ಕಾರ್ಯ ನಿರ್ವಹಿಸಲಾಗುವುದಿಲ್ಲ. ದೈಹಿಕ ಮಾನಸಿಕ ಅಸಮತೋಲನಕ್ಕೆ ಕಾರಣವಾಗುತ್ತದೆ ಎನ್ನುವವರು ಅತಿ ಒತ್ತಡದಿಂದ ಸ್ವಲ್ಪ ಅಂತರ ಕಾಪಾಡಿಕೊಂಡು ಗೆಲುವಿಗೆ ತಕ್ಕಷ್ಟು ಒತ್ತಡ (ರುಚಿಗೆ ತಕ್ಕಷ್ಟು ಉಪ್ಪಿನಂತೆ) ಇರಿಸಿಕೊಂಡು ಸಮಾಧಾನಿಗಳಾಗಿ ಹೆಜ್ಜೆ ಹಾಕಬೇಕು. ಅತಿ ಒತ್ತಡದ ಸಮಸ್ಯೆಯಿಂದ ಬಳಲುತ್ತಿದ್ದರೆ ಮಾನಸಿಕ ವೈದ್ಯರನ್ನು ಕಾಣುವುದು ಸೂಕ್ತ. ಅವರು ಒತ್ತಡವನ್ನು ನಿಯಂತ್ರಿಸುವ ಹಾಗೂ ನಿರ್ವಹಿಸುವ ಬಗೆಯನ್ನು ಹೇಳಿಕೊಡುತ್ತಾರೆ. ಕೆಲಸದ ನಡುವೆ ಅಲ್ಪ ವಿಶ್ರಾಂತಿ, ಮನರಂಜನೆ, ಧ್ಯಾನ ಇವೆಲ್ಲ ಒತ್ತಡವನ್ನು ತಗ್ಗಿಸಿ ಮನವನ್ನು ಹಗುರಗೊಳಿಸುವವು. ಒತ್ತಡವನ್ನು ಹದಗೊಳಿಸುವವು. ಒತ್ತಡದಲ್ಲಿ ಎಷ್ಟು ಗೆಲುವಿದೆ ಎನ್ನುವುದಕ್ಕಿಂತ ಗೆಲುವಿನಲ್ಲಿ ಒತ್ತಡದ ಪಾತ್ರ ಎಷ್ಟಿದೆ ಎನ್ನುವುದು ಮುಖ್ಯ.
ಎ
ಚೆಂಡಿನಂತೆ ಪುಟಿದೇಳಿ
ಎಲ್ಲ ಆಸೆ ಆಮಿಷಗಳನ್ನು ಧಿಕ್ಕರಿಸಿ ಗೆಲುವಿನ ದಿಕ್ಕನ್ನು ನೋಡಲೇಬಾರದು ಎಂದು ನಿಶ್ಚಯಿಸಲು ನೀನೇನು ಎಲ್ಲವನ್ನೂ ಬಿಟ್ಟ ವೈರಾಗಿಯೇ? ಎಂದು ಮನಸ್ಸು ನಗುತ್ತ ಪ್ರಶ್ನಿಸಿ ಅವಮಾನಿಸುತ್ತದೆ. ಗೆಲುವಿನ ಮುಂದೆ ಇಲ್ಲಗಳ ಪಟ್ಟಿ ಲೆಕ್ಕಕ್ಕೆ ಬರುವುದಿಲ್ಲ. ಇರುವುದನ್ನೇ ಬಳಸಿಕೊಂಡು ಸವಾಲನ್ನು ಎದುರಿಸುವ ಛಾತಿ ಬೆಳಸಿಕೊಳ್ಳಬೇಕು. ಸೋಲನ್ನೆದುರಿಸುವ ಛಾತಿ ಮಾತ್ರ ಗೆಲುವು ತಂದು ಕೊಡಬಲ್ಲದು. ಸೋಲೆಂಬ ಬಿಟ್ಟ ಸ್ಥಳದಲ್ಲಿ ಗೆಲುವೆಂಬ ಸೂಕ್ತ ಶಬ್ದ ಬರೆಯಲು ಮನಸನ್ನು ಹದಗೊಳಿಸುವುದು ಸಾಧ್ಯವಿದೆ. ಗೆಲುವಿಗೆ ಯಶಸ್ಸಿನ ಕಥೆಗಳಿಗಿಂತ ಸಾಕಷ್ಟು ಓರೆ ಕೋರೆಗಳಿರುವ ಸೋಲಿನ ಕಥೆಗಳು ಬಹಳಷ್ಟನ್ನು ಕಲಿಸಬಲ್ಲವು. ಎಲ್ಲಕ್ಕೂ ಮುಖ್ಯವಾಗಿ ಸೋಲುಗಳು ನಮ್ಮಲ್ಲಿರುವ ನ್ಯೂನತೆಗಳತ್ತ ಬೆಳಕು ಚೆಲ್ಲುತ್ತವೆ. ಸಾಮರ್ಥ್ಯವನ್ನು ಗುರುತಿಸಿಕೊಳ್ಳಲು ಪೋಷಿಸಲು ಸಹಕರಿಸುತ್ತವೆ. ನೆಲಕ್ಕೆ ಒಗೆದಾಗೊಮ್ಮೆ ಪುಟಿದೇಳುವ ಚೆಂಡಿನಂತೆ ಪುಟಿದೇಳಬೇಕು.
ಬಿಟ್ಟ ಸ್ಥಳ ತುಂಬಿರಿ
ಕೆಟ್ಟ ಜನರೊಡನೆ ಒಳ್ಳೆಯ ವ್ಯವಹಾರ ಮಾಡಲು ಸಾಧ್ಯವಿಲ್ಲ. ಅಂತೆಯೇ ಸೋಲುಗಳಿಲ್ಲದೇ ಗೆಲ್ಲಲು ಸಾಧ್ಯವಿಲ್ಲ. ಸೋಲು ಕಹಿ ಅನುಭವಗಳಿಂದ ಕೂಡಿದೆ ಎಂದು ಅಂದುಕೊಳ್ಳುವುದಕ್ಕಿಂತ ಸೋಲಿನಲ್ಲೇ ಗೆಲುವನ್ನು ಹುಡುಕುವುದು ಉತ್ತಮ ಮಾರ್ಗ ಅಂದುಕೊಳ್ಳುವುದು ಕ್ಷೇಮಕರ. ಗೆಲುವಿಗೆ ಹೇಗೆ ಕಾಯುತ್ತಿರೋ ಹಾಗೆ ಪ್ರತಿಯೊಂದು ಸೋಲನ್ನು ಅಷ್ಟೇ ಶ್ರದ್ಧೆಯಿಂದ ಸ್ವೀಕರಿಸಲು ಕಲಿಯಬೇಕು. ಸೋಲು ಒಂದು ತರಹ ಬಿಟ್ಟ ಸ್ಥಳವನ್ನು ತುಂಬಲು ಬಿಟ್ಟಿರುವ ಚುಕ್ಕಿಗಳಂತೆ. ಬಿಟ್ಟಿರುವ ಚುಕ್ಕಿಗಳ ಮೇಲೆ ನಿರ್ಧಿಷ್ಟವಾದ ಉತ್ತರವನ್ನು ಬರೆದರೆ ಕನಸಿನ ಗೆಲುವು ಸಾಧ್ಯ. ಸೋಲಿನಿಂದ ಪಾಠ ಕಲಿಯದಿದ್ದರೆ, ಅದೃಷ್ಟವಶಾತ್ ದೊರೆತ ಗೆಲುವಿನ ಹಿಂದೆ ಸೋಲುಗಳು ಇದ್ದೇ ಇರುತ್ತವೆ ಎಂಬುದನ್ನು ನೆನಪಿಡಬೇಕು. ಪ್ರತಿ ಕಾರ್ಮೋಡದ ಅಂಚಿನಲ್ಲಿ ಬೆಳ್ಳಿ ರೇಖೆ ಇರುವಂತೆ ಗೆಲುವು ಇರುತ್ತದೆ. ಕಾರ್ಮೋಡದತ್ತ ಚಿತ್ತ ಹರಿಸದೇ ಬೆಳ್ಳಿ ರೇಖೆಯತ್ತ ಗಮನ ಹರಿಸಿದರೆ ಬಿಟ್ಟ ಸ್ಥಳವನ್ನು ಗೆಲುವಿನ ನಗೆಯಿಂದ ತುಂಬಬಹುದು.
ಲೇಖಕರು
– ಜಯಶ್ರೀ ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ ಮೊ: ೯೪೪೯೨೩೪೧೪೨
B