ದೌರ್ಜನ್ಯ ಪ್ರಕರಣಗಳು ಕಂಡುಬಂದಲ್ಲಿ ಶೀಘ್ರ ಕ್ರಮ ವಹಿಸಿ: ಜಿಲ್ಲಾಧಿಕಾರಿ ಡಾ.ಎನ್. ಶಿವಶಂಕರ್

ವಿಜಯ ದರ್ಪಣ ನ್ಯೂಸ್…

ಜನವರಿ ಮಾಹೆಯಿಂದ ಸೆಪ್ಟೆಂಬರ್ ಮಾಹೆಯ ವರೆಗೆ ಜಿಲ್ಲೆಯಲ್ಲಿ 45 ದೌರ್ಜನ್ಯ ಪ್ರಕರಣಗಳು ದಾಖಲು

ದೌರ್ಜನ್ಯ ಪ್ರಕರಣಗಳು ಕಂಡುಬಂದಲ್ಲಿ ಶೀಘ್ರ ಕ್ರಮ ವಹಿಸಿ: ಜಿಲ್ಲಾಧಿಕಾರಿ ಡಾ.ಎನ್. ಶಿವಶಂಕರ್

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್. 23, 2024 :- ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರ ಮೇಲಿನ ದೌರ್ಜನ್ಯ ಪ್ರಕರಣಗಳು ಕಂಡುಬಂದಲ್ಲಿ ವಿಳಂಬ ತೋರದೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ 2024ನೇ ಕ್ಯಾಲೆಂಡರ್ ವರ್ಷದ 3ನೇ ತ್ರೈಮಾಸಿಕ ಜಿಲ್ಲಾ ಮಟ್ಟದ ಜಾಗೃತಿ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಯಾವುದೇ ರೀತಿಯ ದೌರ್ಜನ್ಯ ಪ್ರಕರಣಗಳು ಕಂಡುಬಂದಲ್ಲಿ ಶೀಘ್ರವಾಗಿ ಪ್ರಕರಣ ದಾಖಲಿಸಿ ಅದರ ವಿರುದ್ಧ ಕ್ರಮ ಕೈಗೊಂಡು, ಮುನ್ನೆಚ್ಚರಿಕಾ ಕ್ರಮವಾಗಿ ಇಂತಹ ಘಟನೆಗಳು ಸಂಭವಿಸದಂತೆ ಅಧಿಕಾರಿಗಳು ಎಚ್ಚರ ವಹಿಸಲು ಸೂಚನೆ ನೀಡಿದರು.

ಎಲ್ಲಾ ತಾಲ್ಲೂಕುಗಳಲ್ಲಿ ತಾಲ್ಲೂಕು ಮಟ್ಟದ ಕುಂದು ಕೊರತೆ ಸಭೆಯನ್ನು ಪ್ರತಿ 3 ತಿಂಗಳಿಗೊಮ್ಮೆ ವರ್ಷದಲ್ಲಿ ಒಟ್ಟು 4 ಸಭೆಗಳನ್ನು ನಡೆಸಬೇಕಾಗಿದ್ದು, 2024ನೇ ಕ್ಯಾಲೆಂಡರ್ ವರ್ಷಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಸಭೆಗಳನ್ನು ಶೀಘ್ರವಾಗಿ ನಡೆಸಿ ಎಂದು ಹೇಳಿದರು.

ಉಪವಿಭಾಗದ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಗಳನ್ನು ಕಡ್ಡಾಯವಾಗಿ ಮೂರು ತಿಂಗಳಿಗೊಮ್ಮೆ ವರ್ಷದಲ್ಲಿ ಒಟ್ಟು ನಾಲ್ಕು ಸಭೆಗಳನ್ನು ನಡೆಸಬೇಕಾಗಿರುತ್ತದೆ, ಈಗಾಗಲೇ ದೊಡ್ಡಬಳ್ಳಾಪುರ ವಿಭಾಗದಲ್ಲಿ ಒಂದು ಸಭೆ ನಡೆಸಲಾಗಿದ್ದು, ಇನ್ನು ಬಾಕಿ ಇರುವ 3 ಸಭೆಗಳು ನಡೆಸಲು ಸೂಚಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಕಾಯ್ದೆಯಲ್ಲಿ ಪ್ರಕರಣಗಳು ದಾಖಲಾದ ಕೂಡಲೇ ಪ್ರಥಮ ವರ್ತಮಾನ ವರದಿ ಆಧಾರದ ಮೇಲೆ ಪರಿಹಾರ ಧರವನ್ನು ಮಂಜೂರು ಮಾಡಬೇಕಾಗಿರುವುದರಿಂದ ಪ್ರಥಮ ವರ್ತಮಾನ ವರದಿ ಹಾಗೂ ಇತರ ದಾಖಲಾತಿಗಳನ್ನು ಜಿಲ್ಲಾ ತಾಲೂಕು ಕಚೇರಿಗಳಿಗೆ ಇ-ಮೇಲ್ ಮೂಲಕ ಕಳುಹಿಸಲು‌ ತಿಳಿಸಿದರು.

ದೌರ್ಜನ್ಯ ಪ್ರಕರಣಗಳ ದಾಖಲು, ಪರಿಹಾರ ಧನದ ಮಂಜೂರಾತಿ ವಿವರಗಳ ಪರಿಶೀಲನೆ ನಡೆಸಿದ ಅವರು 2024ರ ಜುಲೈ. 1 ರಿಂದ 2024ರ ಸೆಪ್ಟೆಂಬರ್. 22 ವರೆಗೆ ಒಟ್ಟು 78 ಜನ ಸಂತ್ರಸ್ತರಿಗೆ ಒಟ್ಟು ರೂ. 51,02,500/- ಗಳ ಪರಿಹಾರ ಧನವನ್ನು ಮಂಜೂರು ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸುವ ಚಾರ್ಜ್ ಶೀಟ್ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಳ್ಳೆಯ ಪ್ರಗತಿ ಇದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ದೌರ್ಜನ್ಯ ಪ್ರಕರಣಗಳು ಹಾಗೂ ಗಲಭೆ/ಗುಂಪು ಗಲಭೆಗಳು ಹೆಚ್ಚಾಗಿ ಕಂಡುಬಂದ ಹಳ್ಳಿಗಳನ್ನು ಗುರುತಿಸಿ ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಶಾಂತಿಸಭೆ ನಡೆಸಲು ನಿರ್ದೇಶನ‌ ನೀಡಿದರು.

ಪೊಲೀಸ್ ಠಾಣೆಗಳಲ್ಲಿ ನಡೆಯುವ ಕುಂದು ಕೊರತೆ ಸಭೆಗಳಿಗೆ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರನ್ನು ಆಹ್ವಾನಿಸಿದ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳ ಬಳಿ ಪಡೆದುಕೊಂಡರು.

ಜನವರಿ ಮಾಹೆಯಿಂದ ಸೆಪ್ಟೆಂಬರ್ ಮಾಹೆಯ ವರೆಗೆ ಜಿಲ್ಲೆಯಲ್ಲಿ ದಾಖಲಾದ ದೌರ್ಜನ್ಯ ಪ್ರಕರಣಗಳ ಸಂಖ್ಯೆ 45 ಆಗಿದೆ‌ ಎಂದು ಅವರು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿ.ಕೆ ಬಾಬಾ, ನೆಲಮಂಗಲ ತಾಲ್ಲೂಕು ತಹಶೀಲ್ದಾರ್ ಅಮೃತ್ ಆತ್ರೇಶ, ಡಿವೈಎಸ್ಪಿ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಪ್ರೇಮಾ ಟಿ.ಎಲ್‌.ಎಸ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಅಲ್ಪಸಂಖ್ಯಾತರ ಕಾನೂನು ಪದವೀಧರರಿಂದ ಕಾನೂನು ತರಬೇತಿಗಾಗಿ ಅರ್ಜಿ ಆಹ್ವಾನ

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್. 23, :- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ 2024-25ನೇ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್ ಮತ್ತು ಪಾರ್ಸಿ ಸಮುದಾಯಕ್ಕೆ ಸೇರಿದ ಕಾನೂನು ಪದವೀಧರರಿಂದ ನ್ಯಾಯಾಂಗ ಆಡಳಿತದಲ್ಲಿ 4 ವರ್ಷಗಳ ಅವಧಿಗೆ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ನಿಗದಿತ ಅವಧಿಯೊಳಗೆ ಕಛೇರಿ ವೇಳೆಯಲ್ಲಿ ಪಡೆದು ಭರ್ತಿ ಮಾಡಲಾದ ಅರ್ಜಿಗಳನ್ನು ಸದಸ್ಯ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೊಠಡಿ ಸಂಖ್ಯೆ:216, 2ನೇ ಮಹಡಿ, ಜಿಲ್ಲಾಢಳಿತ ಭವನ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು. ಇಲ್ಲಿಗೆ ಆಕ್ಟೋಬರ್. 07 ರೊಳಗೆ ಸಲ್ಲಿಸುವುದು.
ಕಾನೂನು ತರಬೇತಿ ಪಡೆಯುವ ಅಭ್ಯರ್ಥಿಯು ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್ ಮತ್ತು ಪಾರ್ಸಿ ಸಮುದಾಯಗಳಲ್ಲಿ ಯಾವುದಾದರೊಂದು ಸಮುದಾಯಕ್ಕೆ ಸೇರಿದ್ದು ರಾಜ್ಯದ ನಿವಾಸಿಯಾಗಿರಬೇಕು. ಅಭ್ಯರ್ಥಿಯ ಕುಂಟುಬದ ವಾರ್ಷಿಕ ಆದಾಯವು ರೂ. 3.50,000/-ಕ್ಕೆ ಮೀರಿರಬಾರದು. ಅಭ್ಯರ್ಥಿಗಳು ಬಾರ್ ಕೌನ್ಸಿಲ್ನಲ್ಲಿ ಹೆಸರನ್ನು ನೊಂದಾಯಿಸಿರಬೇಕು. ಅಭ್ಯರ್ಥಿಯು ಕಾನೂನು ಪದವೀಧರರಾಗಿದ್ದು, ಈ ತರಬೇತಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯ ವಯಸ್ಸು 30 ವರ್ಷದೊಳಗೆ ಇರಬೇಕು ಮತ್ತು ಅರ್ಜಿ ಸ್ವೀಕರಿಸಲು ನಿಗದಿಪಡಿಸಿರುವ ಕಡೆಯ ದಿನಾಂಕಕ್ಕೆ ಅಭ್ಯರ್ಥಿಯು 2 ವರ್ಷಗಳ ಅವಧಿಯೊಳಗೆ ಕಾನೂನು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗರಬೇಕು.ಅಭ್ಯರ್ಥಿಗಳನ್ನು ಜಿಲ್ಲಾ ಆಯ್ಕೆ ಸಮಿತಿಯ ಮೂಲಕ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ತಿಂಗಳಿಗೆ ರೂ.5000/-ಗಳ ತರಬೇತಿ ಭತ್ಯೆಯನ್ನು ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಯು ಇಲಾಖೆಯ ನಿಬಂಧನೆಗಳು ಹಾಗೂ ಸರ್ಕಾರದ ಆದೇಶಗಳಿಗೆ ಬದ್ದನಾಗಿರುತ್ತೇನೆಂದು ಮುಚ್ಚಳಿಕೆಯನ್ನು ಬರೆದುಕೊಡಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ 4 ವರ್ಷಗಳ ತರಬೇತಿ ಅವಧಿ ಇದ್ದು, ಮಧ್ಯದಲ್ಲಿ ತರಬೇತಿಯನ್ನು ಬಿಡಲು ಅವಕಾಶವಿರುವುದಿಲ್ಲ. ಈ ಬಗ್ಗೆ ಮುಚ್ಚಳಿಕೆ ಪತ್ರ ನೀಡಬೇಕು. ಒಂದು ವೇಳೆ ಸರ್ಕಾರಿ ಉದ್ಯೋಗ ದೊರಕಿದಲ್ಲಿ ಅಥವಾ ನ್ಯಾಯಾಧಿಕಾರಿಯಾಗಿ ನೇಮಕಾತಿ ಹೊಂದಿದಲ್ಲಿ ಜಿಲ್ಲಾ ಸಮಿತಿಯ ಗಮನಕ್ಕೆ ತಂದು ತರಬೇತಿ ಬಿಡಬಹುದು. ವಿಶೇಷ ಸಂದರ್ಭದಲ್ಲಿ ತರಬೇತಿ ಬಿಡಬೇಕಾದಲ್ಲಿ ಸರ್ಕಾರದ ಅನುಮತಿ ಪಡೆಯಬೇಕು. ಆಯ್ಕೆಯಾದ ಅಭ್ಯರ್ಥಿಯು ಸುಳ್ಳು ಮಾಹಿತಿ/ದಾಖಲೆಗಳನ್ನು ನೀಡಿದ್ದಲ್ಲಿ ಅಥವಾ ತರಬೇತಿ ಅವಧಿಯ ಮಧ್ಯದಲ್ಲಿ ತರಬೇತಿಯಿಂದ ಬಿಟ್ಟುಹೋದಲ್ಲಿ ಸರ್ಕಾರ ಅವರಿಗಾಗಿ ಖರ್ಚು ಮಾಡಿದ ಹಣವನ್ನು ವರ್ಷಕ್ಕೆ ಶೇ.10ರ ಬಡ್ಡಿಯೊಂದಿಗೆ ಭೂ ಕಂದಾಯದ ಬಾಕಿ ಎಂದು ಪರಿಗಣಿಸಿ ವಸೂಲಿ ಮಾಡಲಾಗುವುದು.

ಅರ್ಹ ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲು ಸಂದರ್ಶನದ ದಿನಾಂಕ ಹಾಗೂ ಸ್ಧಳವನ್ನು ತಿಳಿಸಲಾಗುವುದು. ಸಂದರ್ಶನಕ್ಕೆ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗತಕ್ಕದ್ದು. ಅಭ್ಯರ್ಥಿಗಳು ಭರ್ತಿ ಮಾಡಲಾದ ಅರ್ಜಿಯೊಂದಿಗೆ ಅವಶ್ಯಕ ಮಾಹಿತಿಗಳಾದ ಕಾನೂನು ಪದವಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿಗಳ ದೃಢೀಕರಣ ಪ್ರತಿ ಹಾಗೂ ಜನ್ಮ ದಿನಾಂಕದ ಆಧಾರಕ್ಕಾಗಿ ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಅಥವಾ ಟಿ.ಸಿ ದೃಢೀಕೃತ ಪ್ರತಿ ಹಾಗೂ ಆಹಾರ ಪಡಿತರ ಚೀಟಿ ಅಥವಾ ತಹಶೀಲ್ದಾರ್ ರವರಿಂದ ಪಡೆದ ವಾಸಸ್ಧಳದ ದೃಢೀಕೃತ ಪತ್ರ ಸಲ್ಲಿಸಬೇಕು. ಅಪೂರ್ಣ ಮಾಹಿತಿಗಳಿಂದ ಕೂಡಿದ ಅರ್ಜಿಗಳನ್ನು ಹಾಗೂ ನಿಗದಿತ ದಿನಾಂಕ, ವೇಳೆ ಮೀರಿ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಅರ್ಜಿಯನ್ನು ಸ್ವೀಕರಿಸುವುದಕ್ಕೆ ಆಕ್ಟೋಬರ್. 07 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೊಠಡಿ ಸಂಖ್ಯೆ:216, 2ನೇ ಮಹಡಿ, ಜಿಲ್ಲಾಢಳಿತ ಭವನ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು. ಇವರ ಕಚೇರಿಯಲ್ಲಿ ಕೆಲಸದ ವೇಳೆಯಲ್ಲಿ ಪಡೆಯಬಹುದು ಎಂದು ಸದಸ್ಯ ಕಾರ್ಯದರ್ಶಿಗಳು ಹಾಗೂ ಬೆಂಗಳೂರು ಗ್ರಾಮಾಂತರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬ್ಯೂಟಿ ಪಾರ್ಲರ್‌ ಉಚಿತ ತರಬೇತಿಗೆ ಆಸಕ್ತರಿಂದ ಅರ್ಜಿ ಆಹ್ವಾನ

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್ 23, :- ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್ಸೆಟ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಬ್ಯೂಟಿ ಪಾರ್ಲರ್ ಕುರಿತ 30 ದಿನಗಳ ಉಚಿತ ತರಬೇತಿಯು ನವೆಂಬರ್ 05 ರಿಂದ ಪ್ರಾರಂಭವಾಗಲಿದ್ದು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ ಹಾಗೂ ತುಮಕೂರು ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ.

ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಬಿಪಿಎಲ್ ಕಾರ್ಡ್ ಅಥವಾ ಜಾಬ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ನ್ನು ಕಡ್ಡಾಯವಾಗಿ ಹೊಂದಿರುವ ಗ್ರಾಮೀಣ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಅರ್ಜಿ ಸಲ್ಲಿಸಲು ಅಕ್ಟೋಬರ್ 18 ಕೊನೆಯ ದಿನವಾಗಿದೆ

ತರಬೇತಿಯು ಕಡ್ಡಾಯವಾಗಿ ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು.

ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್ ಸಂಖ್ಯೆ: 9380162042, 9740982585, 9113880324 ಅನ್ನು ಸಂಪರ್ಕಿಸಬಹುದಾಗಿದೆ ಎಂದು ರುಡ್ಸೆಟ್ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕ ರವಿಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.