ಏಡ್ಸ್ ರೋಗದಿಂದ ಪಾರಾಗಲು ಸುರಕ್ಷಿತ ಕ್ರಮ ಪಾಲಿಸಿ: ತಹಸೀಲ್ದಾರ್ ಬಾಲಕೃಷ್ಣ
ವಿಜಯ ದರ್ಪಣ ನ್ಯೂಸ್…
ಜಿಲ್ಲಾಮಟ್ಟದ 5 ಕಿಲೋಮೀಟರ್ ಮ್ಯಾರಥಾನ್ ಸ್ಪರ್ಧೆ
ಏಡ್ಸ್ ರೋಗದಿಂದ ಪಾರಾಗಲು ಸುರಕ್ಷಿತ ಕ್ರಮ ಪಾಲಿಸಿ: ತಹಸೀಲ್ದಾರ್ ಬಾಲಕೃಷ್ಣ
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್ 2024: ಏಡ್ಸ್ ರೋಗದಿಂದ ತುತ್ತಾಗುವ ವ್ಯಕ್ತಿಗಳು ಶಾಶ್ವತ ಅನಾರೋಗ್ಯಕ್ಕೆ ಒಳಗಾಗುವುದರಿಂದ ಅವರ ಕುಟುಂಬಗಳು ಬೀದಿ ಪಾಲಾಗುತ್ತವೆ. ಅನೈತಿಕ ಸಂಬಂಧ ಹಾಗೂ ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಬಾರದೆಂದು ದೇವನಹಳ್ಳಿ ತಾಲ್ಲೂಕು ತಹಸೀಲ್ದಾರ್ ಬಾಲಕೃಷ್ಣ ಅವರು ಹೇಳಿದರು.
ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ ವತಿಯಿಂದ ದೇವನಹಳ್ಳಿ ತಾಲ್ಲೂಕಿನ ವಿಜಯಪುರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನದಲ್ಲಿ ಯುವ ಜನೋತ್ಸವ ಅಂಗವಾಗಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ 5 ಕಿ.ಮೀ ಮ್ಯಾರಥಾನ್ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಹೆಚ್ ಐವಿಯಿoದ ಹೆಚ್ಚಿನ ಜನರು ಬಾಧಿತರಾಗುತ್ತಿದ್ದಾರೆ. ಇದನ್ನು ನಿಯಂತ್ರಿಸುವ ಸಲುವಾಗಿ ಆರೋಗ್ಯ ಇಲಾಖೆ, ಏಡ್ಸ್ ನಿಯಂತ್ರಣ ಘಟಕ ಹಲವಾರು ಕ್ರಮ ಕೈಗೊಂಡಿದೆ. ಮುಂದಿನ ದಿನಗಳಲ್ಲಿ ಏಡ್ಸ್ ಬಗ್ಗೆ ಜನರಲ್ಲಿ ಹೆಚ್ಚಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ನಾಗೇಶ್ ಮಾತನಾಡಿ, ಯುವಕರು ಯೌವ್ವನದಲ್ಲಿ ಸಂಯಮ ಪಾಲಿಸಬೇಕಾಗಿದೆ. ಸೂಕ್ತ ವಯಸ್ಸು ಬಂದ ನಂತರ ಮದುವೆ ಮಾಡಿಕೊಂಡು ಜೀವನ ಸಾಗಿಸುವುದರಿಂದ ಅನಾವಶ್ಯಕ ತೊಂದರೆಗಳಿಗೆ ಒಳಗಾಗುವುದಿಲ್ಲ ಎಂದು ತಿಳಿಸಿದರು.
ಮ್ಯಾರಥಾನ್ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರ ಹಾಗೂ ಪದಕ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುನೀಲ್ ಕುಮಾರ್ ಎಂ.ಸಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಡಾ.ನಾಗರಾಜು, ದೈಹಿಕ ನಿರ್ದೇಶಕರಾದ ಡಾ. ಶ್ರೀನಿವಾಸ್, ಡಾ.ವರುಣ್, ನೆಹರು ಯುವ ಕೇಂದ್ರ ಮುಖ್ಯಸ್ಥರಾದ ವಾಣಿಶ್ರೀ ಸೇರಿದಂತೆ ಆರೋಗ್ಯ ಸಿಬ್ಬಂದಿಗಳು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.