ಕರ್ಮಠರು…….

ವಿಜಯ ದರ್ಪಣ ನ್ಯೂಸ್….

ಕರ್ಮಠರು…….

ಕರ್ಮಠರು ಎಂದರೆ ತಮ್ಮ ಜಾತಿ, ಧರ್ಮ, ಸಿದ್ಧಾಂತ, ವಿಚಾರಗಳೇ ಈ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ಎನ್ನುವ ವ್ಯಸನಕ್ಕೆ ಬಿದ್ದವರು. ಅದನ್ನು ಹೊರತುಪಡಿಸಿ ಇತರೆ ಯಾವುದನ್ನೂ ಒಪ್ಪಿಕೊಳ್ಳದವರು, ಜೊತೆಗೆ ಅದರ ಉಳಿವಿಗಾಗಿ ಯಾವ ಹಂತಕ್ಕೆ ಹೋಗಲು ಸಿದ್ದರಾಗಿರುವವರು. ಇವರನ್ನೇ ಕರ್ಮಠರು ಎಂದು ಕರೆಯಲಾಗುತ್ತದೆ…..

ಸಾಮಾನ್ಯವಾಗಿ ಭಾರತೀಯ ಸಮಾಜದಲ್ಲಿ ಬ್ರಾಹ್ಮಣ್ಯ ಪಾಲನೆ ಮಾಡುವ ಕೆಲವು ಬ್ರಾಹ್ಮಣರನ್ನು ಕರ್ಮಠರು ಎಂದು ಕರೆಯಲಾಗುತ್ತಿತ್ತು. ಇವರು ತಮ್ಮ ಸಂಪ್ರದಾಯ, ಆಚರಣೆಗಳಲ್ಲಿ ಅತ್ಯಂತ ಕಠೋರ ನಿಯಮಗಳನ್ನು ಪಾಲಿಸುತ್ತಿದ್ದರು. ಯಾರನ್ನು ಹತ್ತಿರಕ್ಕೆ ಸೇರಿಸುತ್ತಿರಲಿಲ್ಲ. ಅದರ ಒಳಗಿರುವವರಿಗೆ ಅದು ಸಹನೀಯವೆನಿಸಿದರು ಹೊರಗಿನವರಿಗೆ ಅದು ತುಂಬಾ ಕಿರಿಕಿರಿ ಉಂಟು ಮಾಡುತ್ತಿತ್ತು. ತಮ್ಮ ನಡವಳಿಕೆಗಳಲ್ಲಿ ಇತರರಿಗೆ ಭಾವನಾತ್ಮಕ ಹೊಡೆತವನ್ನು ಕೊಡುತ್ತಿದ್ದರು….

ಮುಂದೆ ಇದೇ ಭಾರತೀಯ ಸಮಾಜದಲ್ಲೇ ಕೆಲವು ಮುಸ್ಲಿಂ ಸಮುದಾಯದ ಮೂಲಭೂತವಾದಿಗಳು ತಮ್ಮ ಧರ್ಮದ ಬಗ್ಗೆ ಇದೇ ಕರ್ಮಠ ಆಚರಣೆಗಳನ್ನು ಪಾಲಿಸುತ್ತಿದ್ದರು. ಅದರ ಉಳಿವಿಗಾಗಿ ಪ್ರಾಣ ತ್ಯಾಗಕ್ಕೂ, ಪ್ರಾಣ ಬಲಿಗೂ ಸಿದ್ದರಾಗುತ್ತಿದ್ದರು…..

ಇನ್ನು ಉಳಿದಂತೆ ಇತರ ಜಾತಿ, ಧರ್ಮ, ಸಮುದಾಯಗಳು ಒಂದಷ್ಟು ಉದಾರವಾದಿಗಳಾಗಿದ್ದರು. ಆದರೆ ಇತ್ತೀಚಿನ ಆಧುನಿಕ ಕಾಲದಲ್ಲಿ ಈ ಕರ್ಮಠ ಸಿದ್ದಾಂತ ಇತರ ಸಮುದಾಯಗಳಿಗೂ, ಧರ್ಮ, ಜಾತಿಗಳಿಗೂ ವಿಸ್ತರಿಸುತ್ತಿದೆ. ಇದು ಬ್ರಾಹ್ಮಣೀಕರಣ ಮತ್ತು ಇಸ್ಲಾಮೀಕರಣದ ಕರ್ಮಠವಾದಿಗಳಿಗೆ ಪ್ರತಿಕ್ರಿಯೆ ರೂಪದಲ್ಲಿ ಬೆಳವಣಿಗೆ ಹೊಂದುತ್ತಿರುವಂತೆ ಕಾಣುತ್ತಿದೆ…..

ಏಕೆಂದರೆ ಅಂಬೇಡ್ಕರ್ ವಾದದ ಕೆಲವರು ಇತರರನ್ನು ಅದಕ್ಕೆ ಸೇರಿಸದೆ ಬಾಬಾ ಸಾಹೇಬರನ್ನು ವಿಶ್ವಮಾನ್ಯಗೊಳಿಸದೆ ತಮ್ಮ ಪಂಗಡ, ಸಮುದಾಯಕ್ಕೆ ಸೀಮಿತಗೊಳಿಸುವ ಕರ್ಮಠತನವನ್ನು ಪ್ರದರ್ಶಿಸುತ್ತಿದ್ದಾರೆ. ತಾವು ಮಾತ್ರವೇ ಬಾಬಾ ಸಾಹೇಬರ ಅನುಯಾಯಿಗಳು ಎಂಬ ಮೋಹದ ಬಲೆಯಲ್ಲಿ ಸಿಲುಕಿದ್ದಾರೆ….

ಹಾಗೆಯೇ ಬಸವಣ್ಣನವರ ವಚನ ಚಳುವಳಿಯ ಕೆಲವರು ವಿಶ್ವಗುರು ಬಸವಣ್ಣನವರನ್ನು ಒಂದು ಜಾತಿಗೆ ಸೀಮಿತಗೊಳಿಸಿ, ಒಂದು ತತ್ವಕ್ಕೆ, ಸೈದ್ಧಾಂತಿಕ ನಿಲುವಿಗೆ ಸೀಮಿತಗೊಳಿಸಿ ಇತರರನ್ನು ಪ್ರವೇಶಿಸಲು ಬಿಡದೆ ಸಕಲ ಜೀವಾತ್ಮಗಳಿಗೆ ಲೇಸನ್ನು ಬಯಸು ಎನ್ನುವ ತತ್ವಕ್ಕೆ ವಿರುದ್ಧವಾಗಿ ಕರ್ಮಠತನವನ್ನು ಪ್ರದರ್ಶಿಸುತ್ತಿದ್ದಾರೆ. ಇತರರನ್ನು ಅಳಿಯುವ ಮುಖಾಂತರ ಬಸವ ತತ್ವವನ್ನು ಕಟ್ಟಿಹಾಕುವ ಕೆಟ್ಟ ಸಂಪ್ರದಾಯವನ್ನು ಅನುಸರಿಸುತ್ತಿದ್ದಾರೆ…ಳ

ಹಾಗೆಯೇ ಇದು ಗಾಂಧಿ ವಾದಕ್ಕೂ ಅನ್ವಯಿಸುತ್ತದೆ. ಗಾಂಧಿಯವರ ಕಟ್ಟಾ ಅನುಯಿಗಳು ಮತ್ತೊಂದು ರೀತಿಯ ಕರ್ಮಠ ಸತ್ಯ, ಅಹಿಂಸೆ, ಸರಳತೆಯ ಆಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಗಾಂಧಿಯೇ ಸರ್ವಶ್ರೇಷ್ಠ ಎನ್ನುವ ನಿಲುವು ಇವರದಾಗಿರುತ್ತದೆ. ಇದು ಸಹ ಒಂದು ಕರ್ಮಠ ವ್ಯಸನವೇ….

ಯಾವುದೇ ಸಿದ್ಧಾಂತ ಪರಿಪೂರ್ಣವೂ ಅಲ್ಲ, ಯಾವುದೇ ವ್ಯಕ್ತಿಯು ಸರ್ವಶ್ರೇಷ್ಠವಲ್ಲ, ಕಾಲದಿಂದ ಕಾಲಕ್ಕೆ ಸಾಕಷ್ಟು ಬದಲಾವಣೆಗಳನ್ನ ಹೊಂದುತ್ತಲೇ ಇರುತ್ತದೆ. ಅದಕ್ಕನುಗುಣವಾಗಿ ಸಮಾಜ ಮತ್ತು ವ್ಯಕ್ತಿ ಬದಲಾಗುತ್ತಾರೆ.
ಮೌಲ್ಯಗಳೇ ಆಗಿರಲಿ, ಪ್ರಜಾಪ್ರಭುತ್ವ, ತಾಂತ್ರಿಕ ಅಭಿವೃದ್ಧಿಯೇ ಆಗಿರಲಿ ಎಲ್ಲವೂ ಬದಲಾಗುತ್ತದೆ. ಅದನ್ನು ಗ್ರಹಿಸದೆ ನಾವು ಕರ್ಮಠಕ್ಕೆ ಬಲಿಯಾದರೆ ಖಂಡಿತವಾಗಿ ಸಂಕುಚಿತತೆ ನಮ್ಮನ್ನು ಆಕ್ರಮಿಸಿಕೊಳ್ಳುತ್ತದೆ….

ಇವತ್ತು ಇಡೀ ದೇಶದಲ್ಲಿ ವ್ಯಾಪಕವಾಗಿ ಹರಡಬಹುದಾಗಿದ್ದ ಗಾಂಧಿ ಚಿಂತನೆ ಅಥವಾ ಅಂಬೇಡ್ಕರ್ ವಾದ ಅಥವಾ ಬಸವ ತತ್ವ ಅಥವಾ ಸಮಾಜವಾದ ಯಾವುದು ಸಹ ವಿಶಾಲವಾಗಿ ಬೆಳೆಯಬಹುದಾದ ಸಾಧ್ಯತೆಯಿದ್ದರೂ ಅದರ ಅನುಷ್ಠಾನದಲ್ಲಿ ಕೆಲವು ವ್ಯಕ್ತಿಗಳು ಕರ್ಮಠಕ್ಕೆ ಬಲಿಯಾದ ಕಾರಣದಿಂದ ಇಂದು ಅವು ಸೀಮಿತ ಪ್ರದೇಶಗಳಿಗೆ ಸೀಮಿತ ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗಿದೆ. ಯಾವುದೇ ಸಿದ್ಧಾಂತದ ನಿಜವಾದ ವ್ಯಾಪಕತೆ ಸಾಧ್ಯವಾಗುವುದರಲ್ಲಿ ಆ ಸಿದ್ಧಾಂತ ಮತ್ತು ಅದರ ಅನುಷ್ಠಾನದಲ್ಲಿ ಪಾತ್ರವಹಿಸುವ ವ್ಯಕ್ತಿಗಳ ಸಹ ಮುಖ್ಯವಾಗುತ್ತಾರೆ……

ಈ ವೇದ – ಉಪನಿಷತ್ತುಗಳು, ಸ್ಮೃತಿಗಳು, ಭಗವದ್ಗೀತೆಯ ಶ್ಲೋಕಗಳನ್ನು ಸಂಪೂರ್ಣ ಅರೆದು ಕುಡಿದು ಅದರ ಎಲ್ಲಾ ಸಾರವನ್ನು ತಿಳಿದಿರುವ ವ್ಯಕ್ತಿಗಳೊಂದಿಗೆ ಮಾತನಾಡುತ್ತಿದ್ದರೆ ಯಾಕೋ ಅಸಹಜ – ವಿಚಿತ್ರ – ಸಂಕುಚಿತ ಮನೋಭಾವದವರು ಎನಿಸುತ್ತದೆ….

ಮಹಾತ್ಮ ಗಾಂಧಿಯವರ ಸರಳತೆ – ಸತ್ಯ – ಅಹಿಂಸೆಗಳ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಮಾಡುತ್ತಾ, ಅವರ ಪ್ರತಿ ದಿನಚರಿಯನ್ನು ತಾನೇ ನೋಡಿದಂತೆ ಹೇಳುವ ವ್ಯಕ್ತಿಗಳೊಂದಿಗೆ ಸಂಭಾಷಣೆ ನಡೆಸಿದರೆ ಕೃತಕತೆಯ ಅವಾಸ್ತವಿಕ ವ್ಯಕ್ತಿತ್ವದವರು ಎನಿಸುತ್ತದೆ…..

ಖುರಾನಿನ ಪ್ರತಿ ಶ್ಲೋಕಗಳನ್ನು ಕಂಠಪಾಠ ಮಾಡಿಕೊಂಡು ಅದರ ಪ್ರತಿ ಶಬ್ದಗಳನ್ನು ಅರ್ಥೈಸಿ ಹೇಳುವ ವ್ಯಕ್ತಿಗಳೊಂದಿಗಿನ ಮಾತುಕತೆ ಏನೋ ನಿಗೂಢ – ವಿಚಿತ್ರ – ಭಯ ಮಿಶ್ರಿತ ಆಶ್ಚರ್ಯಕರವಾಗಿರುತ್ತದೆ….

ಅಂಬೇಡ್ಕರ್ ಅವರ ಚಿಂತನೆಗಳನ್ನು ಆಳವಾಗಿ ಅಧ್ಯಯನ ಮಾಡಿ ಮಾತಿಗೊಮ್ಮೆ ಅವರ ವಿಚಾರಗಳನ್ನು ಉದಾಹರಿಸುವ ವ್ಯಕ್ತಿಗಳ ಜೊತೆಗೆ ಚರ್ಚಿಸಿದರೆ ಎಲ್ಲೋ ದಾರಿ ತಪ್ಪಿರಬೇಕು ಎಂಬ ಅನುಮಾನ ಮೂಡಿ ಕಸಿವಿಸಿಯಾಗುತ್ತದೆ…..

ಬೈಬಲ್ ಅನ್ನು ಪ್ರತಿಕ್ಷಣವೂ ಕಂಕುಳಲ್ಲಿ ಇಟ್ಟುಕೊಂಡು ಏಸುವೇ ಮೈಮೇಲೆ ಬಂದಂತೆ ಮಾತನಾಡುವ ವ್ಯಕ್ತಿಗಳೊಡನೆ ಚರ್ಚಿಸಿದರೆ ಕಪಟಿಗಳೂ, ಯಾರೋ ಅಪರಿಚಿತರು ಎಂಬ ಭಾವನೆ ಉಂಟಾಗುತ್ತದೆ….

ವಿವೇಕಾನಂದರ ಅಪರಾವತಾರ ಎಂಬಂತೆ ಅವರ ಸಂಪೂರ್ಣ ಜೀವನ ಚರಿತ್ರೆಯನ್ನು ಓದಿಕೊಂಡವರ ಬಳಿ ಸಂವಹನ ನಡೆಸಿದರೆ, ಅವರೊಬ್ಬರೇ ಭಾರತೀಯ ಸಂಸ್ಕೃತಿಯ ವಕ್ತಾರರೆಂಬ ಹುಸಿ ದೇಶಭಕ್ತಿಯ ಸ್ವಾರ್ಥದ – ದುರಹಂಕಾರದ ವಾಸನೆ ಮನಸ್ಸಿಗೆ ತಾಗುತ್ತದೆ….

ವಚನ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿ ಬಸವಣ್ಣನವರ ಬಗ್ಗೆ ಸದಾ ಅತಿರೇಕದ ಭಾವನೆ ವ್ಯಕಪಡಿಸುತ್ತಾ ಲಿಂಗ, ವಿಭೂತಿ, ಪ್ರವಚನಗಳಲ್ಲಿ ಕಳೆಯುವ ಕೆಲವರನ್ನು ನೋಡಿದಾಗ ಎಲ್ಲೋ ಇವರು ಬದುಕಿನ ಸವಾಲುಗಳಿಗೆ ಹೆದರಿ ಪಲಾಯನ ಮಾಡಿದ್ದಾರೆ ಎಂಬ ಭಾವನೆ ಉಂಟಾಗುತ್ತದೆ….

ಪ್ರತಿ ಸಂದರ್ಭವನ್ನೂ ಬಡತನ ಶೋಷಣೆ ದೌರ್ಜನ್ಯ ಹಿಂಸೆಗಳ ಹಿನ್ನೆಲೆಯಲ್ಲಿಯೇ ಗ್ರಹಿಸುವ ಮಾರ್ಕ್ಸ್‌ವಾದವನ್ನು ಉಸಿರಾಗಿಸಿಕೊಂಡಿರುವವರೊಂದಿಗೆ ಮಾತನಾಡಿದರೆ ಅವರ ಆಕ್ರೋಶದ ಮಾತು ಕೇಳಿಯೇ ಭಯ ಮಿಶ್ರಿತ ಆತಂಕವಾಗುತ್ತದೆ…..

ನನ್ನ ತಾಯಿ, ನನ್ನ ಭಾಷೆ, ನನ್ನ ಜಾತಿ, ನನ್ನ ಧರ್ಮ, ನನ್ನ ದೇಶ ಹೀಗೆ ಅವಶ್ಯಕತೆ ಇಲ್ಲದಿದ್ದರೂ ಅದನ್ನು ಪ್ರಸ್ತಾಪಿಸುವ ಸಂಧರ್ಭವಲ್ಲದಿದ್ದರೂ ಪ್ರತಿ ಮಾತಿಗೂ ಇದನ್ನೇ ಗುರಾಣಿಯಾಗಿ ಬಳಸುವವರೊಂದಿಗೆ ಚರ್ಚಿಸಿದರೆ ಅಸಹನೆ ಮಿಶ್ರಿತ ಹಾಸ್ಯಾಸ್ಪದವಾದ ಪ್ರತಿಕ್ರಿಯೆ ಮೂಡುತ್ತದೆ….

ಈ ರೀತಿಯಲ್ಲಿ ಇನ್ನೂ ಅನೇಕ ವ್ಯಕ್ತಿಗಳು ನಮ್ಮ ನಡುವೆ ಕಾಣಿಸುತ್ತಾರೆ. ಯಾವುದೋ ಸಿದ್ದಾಂತಕ್ಕೋ ವಾದಕ್ಕೋ ದಾಸರಾದಾಗ ಈ ಮನಸ್ಥಿತಿ ಉಂಟಾಗುತ್ತದೆ. ಅತಿಯಾದ ಅಂಧಾಭಿಮಾನ – ಅಜ್ಞಾನ – ಸಮಷ್ಟಿ ಪ್ರಜ್ಞೆಯ ಕೊರತೆಯೂ ಇದಕ್ಕೆ ಕಾರಣವಾಗಿರಬಹುದು.

ಆ,

ನನಗೆ ಕೇಳಿಸುತ್ತಿದೆ ನಿಮ್ಮ ಮನಸ್ಸಿನಲ್ಲಿ ಮೂಡಿದ ಪ್ರಶ್ನೆ .
” ಹಾಗಾದರೆ ನೀನ್ಯಾರು ? ”

ನಾನೂ ಕೂಡ ಈ ವ್ಯವಸ್ಥೆಯ ಒಂದು ಭಾಗವಾಗಿರುವುದರಿಂದ ಇವುಗಳಲ್ಲಿ ಯಾವುದಾದರೂ ಒಂದು ಆಗಿರಬಹುದು. ಆದರೆ ಇದು ಅಷ್ಟು ಒಳ್ಳೆಯ ವ್ಯಕ್ತಿತ್ವವಲ್ಲ ಎಂಬ ಅಭಿಪ್ರಾಯ ನನ್ನದಾಗಿರುವುದರಿಂದ ನಾನು ಯಾವ ಇಸಂಗೂ ಒಳಗಾಗದ ಸಹಜವಾದ ಜೀವಪರವಾದ ನಿಲುವು ಹೊಂದಲು ಪ್ರಯತ್ನಿಸುತ್ತಿರುತ್ತೇನೆ.

ಹಾಗೆಯೇ ಎಲ್ಲರೂ ಈ ವಾದಗಳನ್ನು ಇಸಂಗಳನ್ನು ಅರಿತು ಅವುಗಳಿಂದ ಸ್ಪೂರ್ತಿ ಮಾರ್ಗದರ್ಶನ ಪಡೆದರೂ ಯಾವುದೋ ಒಂದಕ್ಕೆ ಅಡಿಯಾಳಾಗದೆ ಅವುಗಳನ್ನು ಮೀರಿ ಮಾನವೀಯ ಮೌಲ್ಯಗಳ ಜೀವನ ಶೈಲಿ ರೂಪಿಸಿಕೊಂಡು ಸಮಾಜದಲ್ಲಿ ಶಾಂತಿ ಸಹಭಾಳ್ವೆ ಮತ್ತು ಬದುಕಿನಲ್ಲಿ ನೆಮ್ಮದಿ ಕಾಣುವಂತಾಗಲಿ ಎಂದು ಆಶಿಸುತ್ತಾ………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್.ಕೆ.
9844013068……