ವಿಜಯಪುರ ಜಿಲ್ಲೆಯನ್ನು ದತ್ತು ಸ್ವೀಕರಿಸಿದ ಲಾಡಲಿ ಫೌಂಡೇಷನ್ ಟ್ರಸ್ಟ್

ವಿಜಯ ದರ್ಪಣ ನ್ಯೂಸ್….

ವಿಜಯಪುರ ಜಿಲ್ಲೆಯನ್ನು ದತ್ತು ಸ್ವೀಕರಿಸಿದ ಲಾಡಲಿ ಫೌಂಡೇಷನ್ ಟ್ರಸ್ಟ್

ವಿಜಯಪುರ -ನೈರ್ಮಲ್ಯದ ಅರಿವು ಮೂಡಿಸುವಲ್ಲಿ ದೇಶದಾದ್ಯಂತ ಸಮಾಜ ಸೇವೆಯಲ್ಲಿ ತೊಡಗಿರುವ ಪ್ರತಿಷ್ಠಿತ ನವದೆಹಲಿಯ ಲಾಡಲಿ ಫೌಂಡೇಷನ್ ಟ್ರಸ್ಟ್ ವಿಜಯಪುರ ಜಿಲ್ಲೆಯನ್ನು ದತ್ತು ಸ್ವೀಕರಿಸಿದೆ ಎಂದು ಲಾಡಲಿ ಫೌಂಡೇಷನ್ ನಾ ರಾಷ್ಟ್ರೀಯ ಸಲಹೆಗಾರ ಡಾ. ಜಾವೀದ ಜಮಾದಾರ ತಿಳಿಸಿದ್ದಾರೆ .

ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಅತ್ಯಾಧುನಿಕ ಎ.ಐ. ತಂತ್ರಜ್ಞಾನ ಆಧರಿಸಿದ ಶೌಚಾಲಯ ನಿರ್ಮಾಣದಲ್ಲಿ ತೊಡಗಿರುವ ಲಾಡಲಿ ಫೌಂಡೇಷನ್ ಸ್ವಚ್ಛತೆ, ನೈರ್ಮಲ್ಯ, ಹವಾಮಾನ ಬದಲಾವಣೆ ಹಾಗೂ ಮಹಿಳಾ ಆರೋಗ್ಯ ಹಾಗೂ ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ವಿಜಯಪುರದಲ್ಲಿ ಸೆಪ್ಟೆಂಬ‌ರ್ 15 ರಂದು ಬೃಹತ್ `ವಾಷ್-ಥಾನ್’ ಹಾಗೂ ವಾಕ್ -ಥಾನನ್ (ಓಟ ಹಾಗೂ ನಡಿಗೆ)ಆಯೋಜಿಸಲು ನಿರ್ಣಯಿಸಿದೆ.

ಈ ವಾಷ್‌ಥಾನ್‌ನಲ್ಲಿ ಭಾಗವಹಿಸಲು ಯಾವ ರೀತಿಯ ನೊಂದಣಿ ಶುಲ್ಕವನ್ನು ನಿಗದಿಗೊಳಿಸಿಲ್ಲ ಸಂಪೂರ್ಣ ಉಚಿತ ನೊಂದಣಿಯಾಗಿದ್ದು ಆರಂಭದಲ್ಲಿ ಹೆಸರು ನೊಂದಾಯಿಸುವ 2 ಸಾವಿರ ಜನರಿಗೆ ಉಚಿತವಾಗಿ ಟೀ- ಶರ್ಟ್ ಹಾಗೂ ಪ್ರಮಾಣಪತ್ರ ವಿತರಣೆಗೆ ನಿರ್ಧರಿಸಲಾಗಿದೆ. ನಮ್ಮ ನಿರೀಕ್ಷೆಯಂತೆ ಸರಿಸುಮಾರು ಐದು ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ.

ಐತಿಹಾಸಿಕ ಗೋಳಗುಮ್ಮಟದಿಂದ ಈ ವಾಷ್‌ಥಾನ್ ನಡೆಯಲಿದೆ, 5 ಕಿ.ಮೀ, 10 ಕಿ.ಮೀ. ಹಾಗೂ 21 ಕಿ.ಮೀ. ವಿಭಾಗದಲ್ಲಿ ಮ್ಯಾರಾಥಾನ್ (ಓಟ) ನಡೆಯಲಿದೆ. ಯಾವ ರೀತಿಯ ವಯಸ್ಸಿನ ನಿರ್ಬಂಧವೂ ಇಲ್ಲ ಎಲ್ಲರೂ ಸಹ ಉಚಿತವಾಗಿ ಹೆಸರು ನೊಂದಾಯಿಸಿ ಈ ವಾಷ್‌ಥಾನ್‌ನಲ್ಲಿ ಭಾಗವಹಿಸಬಹುದಾಗಿದೆ. ಎಲ್ಲ ವಯಸ್ಕರು ಈ ಅಭಿಯಾನದಲ್ಲಿ ಕೈ ಜೋಡಿಸಬೇಕು ಎಂಬ ಅಗತ್ಯತೆಯಿಂದ ಗೋಳಗುಮ್ಮಟದಿಂದ ಡಾ.ಬಿ.ಆರ್. ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣದವರೆಗೆ 1.5 ಕಿ.ಮಿ ವಾಕ್‌ಥಾನ್ (ನಡಿಗೆ) ಸಹ ಇದೇ ಸಂದರ್ಭದಲ್ಲಿ ನಡೆಯಲಿದೆ.

ಬದಲಾಗುತ್ತಿರುವ ಹವಾಮಾನ ಮೊದಲಾದ ಕಾರಣಗಳಿಂದಾಗಿ ಮಹಿಳೆಯರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಹೀಗಾಗಿ ನೈರ್ಮಲ್ಯವೇ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಲಿದೆ. ಹೀಗಾಗಿ ವಿಶೇಷವಾಗಿ ವಿದ್ಯಾರ್ಥಿನಿಯರಲ್ಲಿ ಸ್ವಯಂ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವುದು ಈ ಅಭಿಯಾನದ ಮೂಲ ಉದ್ದೇಶವಾಗಿದ್ದು, ಈ ಎಲ್ಲದರ ಜೊತೆಗೆ ಜಲ ಸಂರಕ್ಷಣೆ, ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮ, ಬಾಲ್ಯ ವಿವಾಹ ತಡೆಗೆ ಕೈಗೊಳ್ಳಬೇಕಾದ ಸಂಕಲ್ಪದ ಬಗ್ಗೆಯೂ ಅರಿವು ಮೂಡಿಸುವ ಗುರಿ ಹೊಂದಲಾಗಿದೆ.

ಲಾಡಲಿ ಫೌಂಡೇಷನ್ www.ladifoundation.org ಜಾಲತಾಣಕ್ಕೆ ಭೇಟಿ ನೀಡಿ ಅಲ್ಲಿ ಹೆಸರು ನೊಂದಾಯಿಸಬಹುದಾಗಿದ್ದು ಮಾಹಿತಿಗಾಗಿ ೯೧೧೦೬೪೫೫೫೩ (9110645553) ಸಂಪರ್ಕಿಸಬಹುದಾಗಿದೆ ಎಂದು ಲಾಡಲಿ ಫೌಂಡೇಷನ್‌ ಟ್ರಸ್ಟ್  ನಾ ರಾಷ್ಟ್ರೀಯ ಸಲಹೆಗಾರ ಡಾ. ಜಾವಿದ ಜಮಾದಾರ  ಮಾಹಿತಿ ತಿಳಿಸಿದ್ದಾರೆ.

ಲಾಡಲಿ ಫೌಂಡೇಷನ್ ವತಿಯಿಂದ ವಿವಿಧ ಹಂತದ. ಸಮಾಜ ಸೇವೆ.

ನವದೆಹಲಿ ಲಾಡಲಿ ಫೌಂಡೇಷನ್ ವಿಜಯಪುರ ಜಿಲ್ಲೆಯಲ್ಲಿ ತನ್ನ ಸಮಾಜ ಸೇವಾ ವೃಕ್ಷವನ್ನು ನೆಟ್ಟಿದ್ದು ಆ ಮೂಲಕ 3 ಕೋಟಿ ರೂ.ಗಳಲ್ಲಿ ವಿವಿಧ ರೀತಿಯ ಸಮಾಜ ಸೇವಾ ಕಾರ್ಯಗಳನ್ನು ಕೈಗೊಳ್ಳಲು ಈಗಾಗಲೇ ಅಣಿಯಾಗಿದೆ. ಇಡೀ ದೇಶದಲ್ಲಿಯೇ ಎಐ ಟೆಕ್ನಾಲಜಿ ಆಧರಿಸಿ ಸರ್ಕಾರಿ ಶಾಲೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿರುವ ಪ್ರಥಮ ಸಮಾಜ ಸೇವಾ ಸಂಸ್ಥೆಯಾಗಿ ಲಾಡಲಿ ಫೌಂಡೇಷನ್ ಗುರುತಿಸಿಕೊಂಡಿದೆ.

ಮೊಲನೆಯ ಹಂತದಲ್ಲಿ ವಿಜಯಪುರ ನಗರ, ತಿಕೋಟಾ, ತಾಜಪೂರ, ಮನಗೂಳಿ, ಬಸವನ ಬಾಗೇವಾಡಿ ಸೇರಿದಂತೆ 9 ಸರ್ಕಾರಿ ಶಾಲೆಗಳಲ್ಲಿ ಅತ್ಯಾಧುನಿಕ ಎ.ಐ. ತಂತ್ರಜ್ಞಾನ ಆಧಾರಿತ ಶೌಚಾಲಯ ನಿರ್ಮಾಣ, ಅಕ್ಕಮಹಾದೇವಿ ಮಹಿಳಾ ವಿವಿ, ತಿಕೋಟಾ ಬಸ್ ನಿಲ್ದಾಣ ಹಾಗೂ ಬಸವನ ಬಾಗೇವಾಡಿ ತಹಶೀಲ್ದಾರ ಕಚೇರಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಕಾರ್ಯಯೋಜನೆ ರೂಪಿಸಿದೆ. ಸರ್ಕಾರಿ ಶಾಲೆಗಳಲ್ಲಿರುವ ಇದ್ದ ಶೌಚಾಲಯಗಳನ್ನು ತಲಾ 3 ಲಕ್ಷ ರೂ.ವೆಚ್ಚದಲ್ಲಿ ನವೀಕೃತಗೊಳಿಸುವ ಕಾರ್ಯಯೋಜನೆ ಸಹ ರೂಪಿಸಿದ್ದು ಆರಂಭದಲ್ಲಿ 12 ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು  ಲಾಡಲಿ ಫೌಂಡೇಷನ್ ನ ರಾಷ್ಟ್ರೀಯ ಸಲಹೆಗಾರ ಡಾ. ಜಾವೀದ ಜಮಾದಾರ ತಿಳಿಸಿದ್ದಾರೆ .