ಏಕವ್ಯಕ್ತಿಯ ಬಹುಪಾತ್ರ ದರ್ಶನ
ಹೆಸರಿಗೆ ಏಕವ್ಯಕ್ರಿ ಪ್ರದರ್ಶನ. ಆದರೆ ಕಾಳಿದಾಸನ ಮೇಘಧೂತ ಖಂಡಕಾವ್ಯದ ಮೇಘನಾಗಿ ಕಾಣಿಸಿತು. ಶಾಪಗ್ರಸ್ಥ ಯಕ್ಷ ಮಣಿಕಂಠನಾಗಿ ಅರ್ಥೆಸುವಲ್ಲಿ ಯಶಸ್ಸು ಕಂಡಿತು. ಬೆಟ್ಟ ಗುಡ್ಡ, ಕಾಡು, ಆಮ್ರಕೂಟ ಮಾವಿನ ವನವಾಗಿ ಪ್ರೇಕ್ಷಕರನ್ನು ಕರೆದೊಯ್ಯುವಲ್ಲಿ ಯಶಸ್ಸಿತ್ತು. ದಂಡಕಾರಣ್ಯದ ಸೀತೆಯಾಗಿ, ರಾಮ-ಲಕ್ಷಣ, ಗಂಭೀರೆಯೆಂಬ ನದಿಗಳ ದರ್ಶನ ಮಾಡಿಸಿತು. ಚಂಬಲ್ ಕಣಿವೆಯಾಗಿ ಮಾರ್ಪಟ್ಟ ಚರ್ಮಣ್ವತಿ ನದಿಯ ಭೀಕರತೆ, ಯಜ್ಞದ ಹೆಸರಿನಲ್ಲಿ ಅಂದಿನ ಪುರೋಹಿತರ ದರ್ಪ, ದೌರ್ಜನ್ಯಗಳು ಅನಾವರಣಗೊಂಡಿತು. ವಿಶ್ವಕವಿ ಕಾಳಿದಾಸನ ಕಾಲದ ನಿಚ್ಚೆöಸ್ ತಳಬೆಟ್ಟದ ಮೋಜು ಮಸ್ತಿಗಳಲ್ಲಿ ನಟಿಸಿದ ಕಲಾವಿದ ಇಂದಿನ ಪಬ್ಬು ಕ್ಲಬ್ಬುಗಳ ಸ್ಥಿತಿಯನ್ನು ತೆರೆದಿಟ್ಟರು. ಹಿಮಾಲಯದ ಮಾನಸೆ, ಗಂಗೋತ್ರಿ, ಬದರಿನಾಥ ಯಾತ್ರಿಗಳು, ಕೈಲಾಸ, ಅಲಕಾನಗರ, ಯಕ್ಷನ ಪತ್ನಿ ಮತ್ತು ಮೇಘನ ಸ್ಪಂದನೆ ಇವೆಲ್ಲವನ್ನೂ ಒಂದು ಗಂಟೆಯ ಏಕವ್ಯಕ್ತಿ ಪ್ರದರ್ಶನದಲ್ಲಿ ಕಂಡಂತಾಯಿತು.
ಅಭಿನಯ, ಕಾವ್ಯಾತ್ಮಕ ಸಂಭಾಷಣೆ, ಸಂಗೀತದ ಸಾಹಚರ್ಯೆ, ನೃತ್ಯ ಎಲ್ಲವೂ ಮೇಳೈಸಿ ಒಂದು ಗಂಟೆಗಳ ಕಾಲ ಪ್ರೇಕ್ಷಕರನ್ನು ಯಾತ್ರೆಗೆ ಕರೆದುಕೊಂಡು ಹೋದವರು ನಟ ಎಂ. ಬೈರೇಗೌಡ. ನಿಜ ಅರ್ಥದಲ್ಲಿ ರಾಮಗಿರಿ ಕ್ಷೇತ್ರದಿಂದ ಆರಂಭವಾದ ಪಯಣ ಎಲ್ಲೂ ನಿಲ್ಲದೆ ಅಲಕೆಯ ಯಕ್ಷನರಮನೆ ಯಕ್ಷಿಯ ವಿರಹದುರಿಯ ದಳ್ಳುರಿ ಮತ್ತು ಅವಳನ್ನು ಸಾಂತ್ವನಗೊಳಿಸಿದ ಮೇಘ ಮತ್ತು ಸ್ವತಃ ಯಕ್ಷ ಎಲ್ಲವೂ ಮಾಂತ್ರಿಕತೆಯ ಸ್ಪರ್ಶ ಪಡೆದದ್ದು ಉತ್ಪೆಕ್ಷೆಯಲ್ಲ. ಬೈರೇಗೌಡರ ನಟನಾ ಸಾಮರ್ಥ್ಯಕೊಂಡು ಸವಾಲಾದ ಈ ಪ್ರದರ್ಶನದ ಸವಾಲನ್ನು ಅವರು ಸ್ವೀಕರಿಸಿ, ಅದನ್ನು ಸಮರ್ಥವಾಗಿ ನಿರ್ವಹಿಸಿದರು. ಪ್ರೇಕ್ಷಕ ಬೈರೇಗೌಡರ ನೃತ್ಯ ವೈಖರಿಗೆ ಮೂಗಿನ ಮೇಲೆ ಬೆರಳಿಟ್ಟುಕೊಂಡದ್ದು ನಿಜ. ಮಾತುಗಳಲ್ಲಿಯ ನಿಖರತೆ, ಪಯಣದ ಆಯಾಸದ ತೋರ್ಪಡಿಕೆ, ಒಂದೊಂದೂ ಪ್ರದೇಶಗಳನ್ನೂ ಪರಿಚಯಿಸಿದ ರೀತಿ ಕಣ್ಣಿಗೆ ಕಟ್ಟುವಂತಿತ್ತು. ತಾನೊಬ್ಬ ಅದ್ಭುತ ನಟ ಎಂಬುದನ್ನು ಬೈರೇಗೌಡರು ಸಾಬೀತು ಪಡಿಸಿಕೊಂಡರು.
ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ವಿಶ್ವಕವಿ ಕಾಳಿದಾಸನ ಮೇಘಧೂತ ಆಧಾರಿತ ಕನ್ನಡ ಅವತರಣಿಕೆಯ ರಂಗರೂಪ ಯಕ್ಷಾಲಾಪ ಏಕವ್ಯಕ್ತಿ ಪ್ರದರ್ಶನವನ್ನು ಬೆಂಗಳೂರು ನಗರ ಮಲ್ಲತ್ತಹಳ್ಳಿ ಕಲಾಗ್ರಾಮದ ಸಾಂಸ್ಕೃತಿಕ ಸಮುಚ್ಛಯದಲ್ಲಿ 29ನೇ ಆಗಸ್ಟ್ 2024ರ ಗುರುವಾರ ಹಮ್ಮಿಕೊಂಡಿತ್ತು. ಆ ಪ್ರದರ್ಶನದಲ್ಲಿ ನಟಿಸಿದ ಕವಿ, ನಾಟಕಕಾರ, ಜಾನಪದ ವಿದ್ವಾಂಸ ತಾನೊಬ್ಬ ಸಮರ್ಥ ನಟನೆಂಬುದನ್ನು ಸಾಬೀತು ಪಡಿಸಿದರು.
ಮಣಿಕಂಠನೆಂಬ ಯಕ್ಷ ಅಲಕಾಪುರ ನಿವಾಸಿ. ಕುಬೇರನರಮನೆಯ ಸುಂದರ ಪರಿಸರದಲ್ಲಿ ಅವನ ಮನೆ. ಇಂತಿರಲು ಕುಬೇರನಿಗೆ ಪ್ರಿಯವಾದ ಹೂದೋಟವನ್ನು ಇಂದ್ರನ ಐರಾವತ ಹಾಳುಮಾಡಿತ್ತು. ತೋಟದ ಅಧಿಕಾರಿ ಯಕ್ಷ. ಆತನ ಅಜಾಗರೂಕತೆ ಕಾರಣದಿಂದಲೇ ಹೀಗಾಯಿತೆಂದು ಭಾವಿಸಿದ ಕುಬೇರ ಅವನಿಗೆ ಒಂದು ವರ್ಷದ ಗಡಿಪಾರಿನ ಕಠಿಣಶಿಕ್ಷೆ ವಿಧಿಸಿದ. ಆಗಷ್ಟೇ ದಾಂಪತ್ಯಕ್ಕೆ ಅಡಿಯಿಟ್ಟಿದ್ದ ಯಕ್ಷ ಅತ್ಯಂತ ನೋವಿಂದ ತನ್ನ ಶಾಪವಿಮೋಚನೆಗೆ ವಿಂಧ್ಯಪರ್ವತ ತಪ್ಪಲಿನ ರಾಮಗಿರಿಯನ್ನು ಆಯ್ದುಕೊಂಡ. ನಂತರ ಯಕ್ಷ ಅನುಭವಿಸುವ ವಿರಹದ ತಾಪವೇ ಯಕ್ಷಾಲಾಪ. ಮೇಘನ ಮೂಲಕ ತನ್ನ ಮನದಿಂಗಿತವನ್ನು ಪ್ರಿಯತಮೆಗೆ ಕಳಿಸುವ ವಿಭಿನ್ನ ರಂಗರೂಪ ಯಕ್ಷಾಲಾಪ.
ಸಂಸ್ಕೃತ ವಿದ್ವಾನ್ ಪ್ರೊ. ನಾರಾಯಣ ಘಟ್ಟ ಕನ್ನಡೀಕರಿಸಿ ರಂಗರೂಪಕ್ಕಿಳಿಸಿದ್ದಾರೆ. ಎಲ್.ಎನ್. ಮುಕುಂದರಾಜ್ ರೂಪಣಾ ಧ್ವ, ಎಂ.ಎಸ್. ಪ್ರಸನ್ನಕುಮಾರ್ ಸಂಗೀತ, ಕಂಗಕರ್ಮಿ ರೇಣುಕಾರೆಡ್ಡಿ ವಸ್ತವಿನ್ಯಾಸ, ವಿಶ್ವನಾಥಮಂಡಿ ರಂಗಪರಿಕರಗಳನ್ನು ಸಿದ್ಧಪಡಿಸಿದ್ದಾರೆ. ಜೋಸೆಫ್ ಜಾನ್ ನಿರ್ದೇಶಿಸಿದ್ದರು. ಗಜಾನನ ಟಿ. ನಾಯ್ಕ ಸಂಗೀತ ನಿರ್ವಹಣೆ ಮಾಡಿದರು. ನೀನಾಸಂ ಪದವೀಧರ ನವೀನ್ ಭೂಮಿ ಮರು ನಿರ್ದೇಶನ ಮಾಡಿ, ಬೆಳಕಿನ ವಿನ್ಯಾಸದ ಮೂಲಕ ಪ್ರೇಕ್ಷಕರಲ್ಲಿ ಹೊಸ ಭಾವ ಮೂಡಿಸಿದರು.. ಈ ಪ್ರದರ್ಶನದ ವಿಶೇಷತೆ ಎಂದರೆ ಕನಕಪುರದ ರಂಗಕರ್ಮಿ ನಾಗರಾಜು ತಮ್ಮ ಪ್ರತಿಭೆಯನ್ನು ಬೈರೇಗೌಡರಿಗೆ ಧಾರೆಯೆರೆದಿದ್ದರು. ಮನ್ವಂತರದ ಧನಂಜಯ ಅವರ ಸಹಕಾರವಿತ್ತು.