ಒಂದು ಲಾಜಿಕ್……

ವಿಜಯ ದರ್ಪಣ ನ್ಯೂಸ್…

ಒಂದು ಲಾಜಿಕ್……

ರಾಜಕಾರಣಿಗಳು ಭ್ರಷ್ಟರು — ಮತದಾರರು,
ಮತದಾರರು ಭ್ರಷ್ಟರು — ರಾಜಕಾರಣಿಗಳು……

ಪೊಲೀಸರು ಸರಿ ಇಲ್ಲ — ಜನಗಳು,
ಜನಗಳು ಸರಿ ಇಲ್ಲ — ಪೊಲೀಸರು,……..

ವಿದ್ಯಾರ್ಥಿಗಳಿಗೆ ಓದುವುದರಲ್ಲಿ ಆಸಕ್ತಿ ಇಲ್ಲ —
ಶಿಕ್ಷಕರು,
ಶಿಕ್ಷಕರಿಗೆ ಪಾಠ ಮಾಡುವುದರಲ್ಲಿ ಆಸಕ್ತಿ ಇಲ್ಲ — ವಿದ್ಯಾರ್ಥಿಗಳು,…….

ಟಿವಿಯವರು ಒಳ್ಳೆಯ ಕಾರ್ಯಕ್ರಮ ಮಾಡುವುದಿಲ್ಲ — ವೀಕ್ಷಕರು,
ವೀಕ್ಷಕರು ಒಳ್ಳೆಯ ಕಾರ್ಯಕ್ರಮ ನೋಡುವುದಿಲ್ಲ — ಟಿವಿಯವರು,……..

ನಮ್ಮ ಅತ್ತೆ ಸರಿ ಇಲ್ಲ — ಸೊಸೆ,
ನಮ್ಮ ಅಳಿಯ ಸರಿ ಇಲ್ಲ — ಮಾವ,……..

ಹೋಟೆಲಿನವರಿಗೆ ಸ್ವಚ್ಛತೆ ಗೊತ್ತಿಲ್ಲ — ಗ್ರಾಹಕರು,
ಗ್ರಾಹಕರಿಗೆ ಸ್ವಚ್ಛತೆ ಗೊತ್ತಿಲ್ಲ — ಹೋಟೆಲಿನವರು,……

ಮಠಾಧೀಶರಿಗೆ ನೈತಿಕತೆಯೇ ಇಲ್ಲ — ಭಕ್ತಾದಿಗಳು,
ಭಕ್ತಾದಿಗಳಿಗೆ ನೈತಿಕತೆಯೇ ಇಲ್ಲ — ಮಠಾಧೀಶರು……..

ಎಲ್ಲೆಂದರಲ್ಲಿ ಕಸ ಹಾಕುವ ನಮ್ಮ ಜನರಿಗೆ ಬುದ್ದಿಯೇ ಇಲ್ಲ — ಕಾರ್ಪೋರೇಷನ್ನಿನವರು,
ಕಾರ್ಪೋರೇಷನ್ನಿನವರಿಗೆ ಕಸ ಸಂಗ್ರಹಿಸುವ ಬುದ್ದಿಯೇ ಇಲ್ಲ — ಕಸ ಹಾಕುವವರು,…….

ವಾಹನ ಚಲಾಯಿಸುವವರಿಗೆ ಕಾಮನ್ ಸೆನ್ಸ್ ಇಲ್ಲ — ಪಾದಚಾರಿಗಳು,
ಪಾದಚಾರಿಗಳಿಗೆ ಕಾಮನ್ ಸೆನ್ಸ್ ಇಲ್ಲ — ವಾಹನ ಚಲಾಯಿಸುವವರು……..

ಸಾಲ ಕೊಡುವ ಬ್ಯಾಂಕಿನವರು ಅಪ್ರಾಮಾಣಿಕರು — ರೈತರು,
ಕಂತು ಕಟ್ಟುವ ರೈತರು ಅಪ್ರಾಮಾಣಿಕರು — ಬ್ಯಾಂಕಿನವರು,…….

ಸರ್ಕಾರಕ್ಕೆ ಶಿಸ್ತಿಲ್ಲ — ಸಾರ್ವಜನಿಕರು,
ಸಾರ್ವಜನಿಕರಿಗೆ ಶಿಸ್ತಿಲ್ಲ — ಸರ್ಕಾರದವರು,……

ಯಥಾ ರಾಜಾ ತಥಾ ಪ್ರಜಾ — ಯಥಾ ಪ್ರಜಾ ತಥಾ ರಾಜಾ…..

ಸಾಕಲ್ಲವೆ ಇಡೀ ವ್ಯವಸ್ಥೆಯ ಬೇಜಾವಾಬ್ದಾರಿತನಕ್ಕೆ ಉದಾಹರಣೆಗಳು,….

ಇದೇನು ದೊಡ್ಡ ಸಮಸ್ಯೆಯಲ್ಲ, ಒಂದಷ್ಟು ತಿಳಿವಳಿಕೆ ಇದ್ದರೆ
ಸರಳವಾಗಿ ಪರಿಹರಿಸಿಕೊಳ್ಳಬಹುದು…..

ನಾವೆಲ್ಲರೂ ವ್ಯವಸ್ಥೆಯ ಭಾಗವೇ ಅಲ್ಲವೇ, ಆದರೆ…..

ಜನರು ಸರಿ ಇಲ್ಲ,
ವೀಕ್ಷಕರು ಸರಿ ಇಲ್ಲ,
ಗ್ರಾಹಕರು ಸರಿ ಇಲ್ಲ,
ಮತದಾರರು ಸರಿ ಇಲ್ಲ,
ಭಕ್ತರು ಸರಿ ಇಲ್ಲ,
ಪ್ರೇಕ್ಷಕರು ಸರಿ ಇಲ್ಲ……..

ಇತ್ತೀಚೆಗೆ ಈ ರೀತಿಯ ಹೊಸ ಟ್ರೆಂಡ್ ಪ್ರಾರಂಭವಾಗಿದೆ. ಮೊದಲೂ ಸಹ ಈ ರೀತಿಯ ಆಪಾದನೆ ಇತ್ತು. ಆದರೆ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಬೆಳವಣಿಗೆಯಿಂದ ಇದು ತುಂಬಾ ಜಾಸ್ತಿಯಾಗಿದೆ…….

ತಮ್ಮ ವೈಫಲ್ಯಗಳನ್ನು ಮರೆಮಾಚಲು ಈ ಪಲಾಯನವಾದದ ತಂತ್ರಕ್ಕೆ ಮೊರೆ ಹೋಗಿದ್ದಾರೆ…..

ಹಿಂದೆ ಆಡಳಿತ ಸರಿ ಇಲ್ಲ ಎನ್ನುತ್ತಿದ್ದರು, ಈಗ ಪ್ರಜೆಗಳೇ ಸರಿ ಇಲ್ಲ ಎಂಬ ಲೆಕ್ಕಾಚಾರ…….!!!!!!

ಹೌದು, ಜನರು ಸರಿ ಇಲ್ಲ, ಅವರಿಗೆ ವಿವೇಚನಾ ಶಕ್ತಿ ಇಲ್ಲ, ಅವರೇ ಎಲ್ಲವನ್ನೂ ನಿರ್ವಹಿಸುವುದು ಕಷ್ಟ ಎಂಬ ಕಾರಣದಿಂದಾಗಿಯೇ ಜನರಿಂದ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಕಾನೂನು ರಚಿಸಲಾಗಿದೆ…….

ಈ ವಿಷಯ ಸ್ವಲ್ಪ ವಿಚಿತ್ರವಾದರು ಇದರಲ್ಲಿರುವ ವಾಸ್ತವ ಮತ್ತು ಸತ್ಯದ ಹುಡುಕಾಟ ನಡೆಸಬೇಕಾಗಿದೆ….

ಚುನಾವಣೆಗಳಲ್ಲಿ ಮತ ಹಾಕಲು ಹಣ ಪಡೆಯುವವರಿಗೆ ಬೇಡ ಎಂದು ಹೇಳುವುದಕ್ಕಿಂತ ಅತಿ ಹೆಚ್ಚಿನ ಮಹತ್ವ, ಹಣ ನೀಡುವ ಖದೀಮರಿಗೆ ಕಠಿಣ ಶಿಕ್ಷೆ ನೀಡಲು ಅಥವಾ ಅವರ ಮನಃಪರಿವರ್ತನೆಗೆ ನೀಡಬೇಕು…….

ಲಂಚ ನೀಡುವ ಸಾಮಾನ್ಯ ಜನರಿಗೆ ನೀಡಬೇಡಿ ಎಂದು ಹೇಳುವುದಕ್ಕಿಂತ ಅದನ್ನು ಪಡೆಯುವ ಭ್ರಷ್ಟರಿಗೆ ಬಹಿಷ್ಕಾರ ಹಾಕಬೇಕು……

ಕೆಟ್ಟ ಕಾರ್ಯಕ್ರಮ ನೋಡಬೇಡಿ ಎಂದು ವೀಕ್ಷಕರಿಗೆ ಹೇಳುವುದಕ್ಕಿಂತ ಆ ರೀತಿಯ ಕೆಟ್ಟ ಕಾರ್ಯಕ್ರಮ ರೂಪಿಸಿ ಪ್ರಸಾರ ಮಾಡುವ ಚಾನಲ್ ಗಳಿಗೆ ಎಚ್ಚರಿಕೆ ಕೊಟ್ಟು ದಂಡ ವಿಧಿಸಬೇಕು……

ಮೌಢ್ಯವನ್ನು ನಂಬಿ ಜ್ಯೋತಿಷಿಗಳ ಮಾತು ಕೇಳುವ ಜನರಿಗೆ ಬುದ್ಧಿ ಹೇಳುವುದಕ್ಕಿಂತ ಜ್ಯೋತಿಷಿಗಳಲ್ಲೇ ವೈಜ್ಞಾನಿಕ ಮನೋಭಾವ ಬೆಳೆಸಲು ಪ್ರಯತ್ನಿಸಬೇಕು ಅಥವಾ ಅವರನ್ನು ಹೊರಹಾಕಬೇಕು…..

ಕಲಬೆರಕೆ, ಮೋಸ, ವಂಚನೆಗೆ ಒಳಗಾಗುವ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಿಂತ ಅದನ್ನು ಮಾಡುವ ದುರುಳರನ್ನು ನಿಯಂತ್ರಿಸಲು ಆಸಕ್ತಿ ವಹಿಸಬೇಕು…..

ಏಕೆಂದರೆ ನಮ್ಮ ದೇಶದ ಜನಸಂಖ್ಯೆ 140 ಕೋಟಿಗೂ ಹೆಚ್ಚು. ಇಷ್ಟೊಂದು ಬೃಹತ್ ಮತ್ತು ವೈವಿಧ್ಯಮಯ ಜನರಿಗೆ ಸತ್ಯದ ನೆಲೆಯಲ್ಲಿ ವಾಸ್ತವಾಂಶ ತಿಳಿಸಿ ಬದಲಾಯಿಸುವುದು ಎಂತಹ ಮಹಾತ್ಮನಿಗೂ ಸಾಧ್ಯವಿಲ್ಲ…….

ಅದಕ್ಕೆ ಬದಲು ಹಣ ಹಂಚುವ, ಲಂಚ ಪಡೆಯುವ, ಮೌಢ್ಯ ಬಿತ್ತುವ, ಕೆಟ್ಟ ಕಾರ್ಯಕ್ರಮ ರೂಪಿಸುವ, ಕಲಬೆರಕೆ ಮಾಡುವ ಜನರ ಸಂಖ್ಯೆ ಕಡಿಮೆ ಇದೆ…….

ಅವರನ್ನೇ ಗುರಿಯಾಗಿಸಿ, ದಕ್ಷ ಕಾರ್ಯಪಡೆ ರಚಿಸಿ, ಅವರ ಮೇಲೆ ಕಠಿಣ ಕ್ರಮ ಕೈಗೊಂಡು, ಅವರ ನಾಗರಿಕ ಹಕ್ಕುಗಳನ್ನು ಕಿತ್ತುಕೊಂಡು, ಬಯಲು ಜೈಲುಗಳನ್ನು ನಿರ್ಮಿಸಿ, ಅಲ್ಲಿ ಅವರನ್ನು ಬಂಧಿಸಿ, ಅಲ್ಲಿಂದಲೇ ಅವರಿಂದ ದುಡಿಸಿಕೊಂಡು, ಅವರ ಆತ್ಮಾವಲೋಕನಕ್ಕೆ ಅವಕಾಶ ಕಲ್ಪಿಸಬೇಕು……..

ಅದುಬಿಟ್ಟು, ಜನ ಸರಿಯಿಲ್ಲ ಎಂಬುದನ್ನೇ ನೆಪವಾಗಿ ಇಟ್ಟುಕೊಂಡು ತಮ್ಮ ಅನೈತಿಕ ದಂಧೆಗಳನ್ನು ಮುಂದುವರಿಸಿಕೊಂಡು ಹೋಗಲು ಅವಕಾಶ ನೀಡಬಾರದು……

ಇಷ್ಟೊಂದು ದೊಡ್ಡ ಗಾತ್ರದ, ಅಭಿವ್ಯಕ್ತಿ ಸ್ವಾತಂತ್ರ್ಯವಿರುವ , ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಮಾನ ಮನಸ್ಸುಗಳು ಒಗ್ಗಟ್ಟು ಪ್ರದರ್ಶಿಸುವುದು ಸಾಧ್ಯವಿಲ್ಲದ ಮಾತು……

ಸಿಗರೇಟು ಕ್ಯಾನ್ಸರ್ ಗೆ ಕಾರಣ ಎಂದು ಹೇಳುವ ಬದಲು ಅದರ ಉತ್ಪಾದನೆಯನ್ನೇ ತಡೆಯಬಹುದಲ್ಲವೇ,…..

ಪ್ಲಾಸ್ಟಿಕ್ ಉಪಯೋಗಿಸುವ ಸಣ್ಣ ಅಂಗಡಿಗಳ ಮೇಲೆ ದಾಳಿ ಮಾಡುವ ಬದಲು ಇಡೀ‌ ಪ್ಲಾಸ್ಟಿಕ್ ಉತ್ಪಾದನೆಯನ್ನೇ ನಿಲ್ಲಿಸಬಹುದಲ್ಲವೇ……

ಸಂಪೂರ್ಣ ಅಧಿಕಾರ ಹೊಂದಿದ ಒಂದು ಒಳ್ಳೆಯ ಸರ್ಕಾರ ಇದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗುತ್ತದೆ……

ಅದಕ್ಕಾಗಿ ನಮ್ಮೆಲ್ಲರ ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ ಅಂತರಂಗದ ಚಳವಳಿ ರೂಪಿಸಿಕೊಂಡು ಕ್ರಾಂತಿಕಾರಕ ಬದಲಾವಣೆಯ ಮುಖಾಂತರ ಅತ್ಯುತ್ತಮ ಸರ್ಕಾರ ರಚಿಸಿದರೆ ಇದು ಸುಲಭವಾಗುತ್ತದೆ…….

ನಮ್ಮ ಗಮನ ಆ ಕಡೆಯೇ ಹೆಚ್ಚು ಕೇಂದ್ರೀಕರಿಸಬೇಕಿದೆ…….

ಸಣ್ಣ ಪುಟ್ಟ ಬದಲಾವಣೆಗಳಿಂದ ವ್ಯವಸ್ಥೆಯ ಬದಲಾವಣೆ ಸಾಧ್ಯವಿಲ್ಲ. ಅದಕ್ಕಾಗಿ ನಿಮ್ಮೊಂದಿಗೆ ……………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ. ಎಚ್. ಕೆ.
9844013068………