ಪ್ರಯತ್ನ ಮಾತ್ರ ನಮ್ಮದು…

ವಿಜಯ ದರ್ಪಣ ನ್ಯೂಸ್..

  • ಪ್ರಯತ್ನ ಮಾತ್ರ ನಮ್ಮದು

ಹಿಂದಿಗಿಂತ ಇಂದು ಬದುಕು ತರಹೇವಾರಿಯಾಗಿ ತೆರೆದುಕೊಳ್ಳುತ್ತಿದೆ. ಇಂದಿನ ಜನ ಜೀವನ ಕಂಡಾಗ ಸೌಕರ್ಯ ಹೆಚ್ಚಿದ್ದರೂ ನೋವು ಕಡಿಮೆಯಾಗಿಲ್ಲ. ನಲಿವು ಎಲ್ಲೋ ಅವಿತುಕೊಂಡು ಕುಳಿತಿದೆ. ಎಂದೆನಿಸುತ್ತದೆ. ಯಾವಾಗಲೋ ಒಮ್ಮೆ ಸಂತೋಷವು ಕಿಟಕಿಯಲ್ಲಿ ಇಣುಕಿ ನೋಡಿ ಜಾಗ ಖಾಲಿ ಮಾಡುತ್ತಿದೆ. ಹೀಗಾಗಿ ನೆಮ್ಮದಿ ಗಗನ ಕುಸುಮವೆನಿಸುತ್ತಿದೆ. ಇದಕ್ಕೆ ಕಾರಣ ವಿಧಿಯಾಟ ಹಣೆಬರಹ ಎಂದು ಹೆಸರಿಟ್ಟು ಕಣ್ಣೊರೆಸಿಕೊಳ್ಳುತ್ತ ಕೈ ಚೆಲ್ಲಿ ಕುಳಿತಿರುವುದೇ ಆಗಿದೆ. ಜಗದ ಪ್ರತಿಯೊಂದು ಆಗು ಹೋಗುಗಳನ್ನು ನಮ್ಮಿಂದ ಬದಲಿಸಲು ಸಾಧ್ಯವಿಲ್ಲ ಬದುಕು ಜಟಕಾ ಬಂಡಿಯ ಚಕ್ರದಂತೆ ಉರುಳುತ್ತಲೇ ಇರುತ್ತವೆ.

ಏರಿಳಿತವೇ ಬದುಕಿನ ಉಸಿರಾಟ. ಬಡವನಿರಲಿ ಬಲ್ಲಿದನಿರಲಿ ಒಳ್ಳೆಯವನಿರಲಿ ಕೆಟ್ಟವನಿರಲಿ ಕಷ್ಟ ಸುಖಗಳು ಬಾಳಿನ ಹಾದಿಯಲ್ಲಿ ಸದಾ ಸಾಗುತ್ತಲೇ ಇರುತ್ತವೆ. ಒಮ್ಮೊಮ್ಮೆ ಬಿರುಸಾದ ಬಿರುಗಾಳಿ ಹೊಡೆತಕ್ಕೆ ಜೀವನದ ದೋಣಿ ತಲೆ ಕೆಳಗಾಗಿ ನಿಂತು ಬಿಡುತ್ತದೆ. ಇನ್ನೊಮ್ಮೆ ಎಲ್ಲಿಂದಲೋ ತಂಪಾದ ತಂಗಾಳಿ ತಲೆ ನೇವರಿಸಿ ಮೈ ಮನಸ್ಸಿಗೆ ಮುದ ನೀಡಿ ನಕ್ಕು ನಗಿಸುತ್ತದೆ.

ಕರ್ಮ ಮಾತ್ರ ನಿನ್ನದು ಫಲಾಫಲ ಭಗವಂತನದು ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಉಪದೇಶಿಸಿದ. ಇದನ್ನೇ ಮಹಾತ್ಮಾ ಗಾಂಧೀಜಿ ಅತ್ಯುತ್ತಮವಾದುದನ್ನು ಸಾಧಿಸಲು, ನಿರಂತರ ಪರಿಶ್ರಮ ಮನುಷ್ಯನ ಕರ್ತವ್ಯ. ಕರ್ತವ್ಯವೇ ಅದರ ಫಲ. ಉಳಿದ ಪ್ರತಿಯೊಂದೂ ಭಗವಂತನ ಕೈಲ್ಲಿದೆ ಎಂದು ಹೇಳಿದರು.

ನಮ್ಮ ಕರ್ತವ್ಯಗಳನ್ನು ಮಾಡಿದಾಗ ನಾವು ಯಾವತ್ತೂ ವಿಫಲರಾಗುವುದಿಲ್ಲ. ನಾವು ನಮ್ಮ ಕರ್ತವ್ಯಗಳನ್ನು ಕಡೆಗಣಿಸಿದಾಗಲೇ ಪ್ರತಿಸಲ ಸೋಲುವುದು ಎನ್ನತ್ತಾನೆ. ಸ್ಕೌಟ್ ಸಂಸ್ಥಾಪಕ ಬೆಡೆನ್ ಪೊವೆಲ್ ಈ ಭೂಮಿ ಮನುಷ್ಯನ ಕರ್ಮಸ್ಥಳ. ವಿಧಿಯೆಂಬ ಯಂತ್ರದ ಚಲನೆಯನ್ನು ನಂಬಿ ಕೈ ಕಟ್ಟಿ ಕುಳಿತರೆ ಭಯ ಹತಾಶೆ ನಿರಾಸೆ ಆತಂಕಗಳು ಬಾಳಿನ ಹೊಸ್ತಿಲು ದಾಟಿ ಒಳಬಂದು ಮಲಗಿಬಿಡುತ್ತವೆ. ಇಂಥ ಬದುಕು ಕೆಲವರಲ್ಲಿ ಮರುಕವನ್ನು ಹುಟ್ಟಿಸುತ್ತದೆ. ದೈವವೂ ಮರುಕ ತೋರಿಸಿದಂತೆ ನಟನೆ ಮಾಡುತ್ತದೆ. ಬಲಿ ಕೊಡುವ ಮುನ್ನ ಕುರಿಯನ್ನು ಬೆಳೆಸಿದಂತೆ, ಕಟುಕ ಬೇಟೆಯನ್ನಾಡುವ ಮುನ್ನ ಹಕ್ಕಿಗಳಿಗೆ ಧಾನ್ಯ ನೀಡುವಂತೆ ತಲೆ ಕೆಳಗೆ ಮಾಡಿ ನಿಂತರೂ ಜೀವನ ಬದಲಾಗಲ್ಲ.

ಏಕೆಂದರೆ ನನ್ನ ಗ್ರಹಗತಿಗಳು ಸರಿ ಇಲ್ಲ, ಯಾವ ಜ್ಯೋತಿಷಿಯೂ ನನ್ನ ಗ್ರಹಗತಿಗಳನ್ನು ತಿದ್ದಲಾರ, ಸರಿ ಪಡಿಸಲಾರ ಎನ್ನುವವರನ್ನು, ಕಷ್ಟಗಳಿಂದ ಪಾಠ ಕಲಿಯದೇ ಕಲ್ಲು ಬಂಡೆಯಂತೆ ಇದ್ದವರನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ. ಅವರೇ ಬದಲಾಗಬೇಕೆಂದು ಮನಸ್ಸು ಮಾಡಿದರೆ ಖಂಡಿತ ಸಾಧ್ಯ. ಒಂದು ಕೆಲಸ ಉತ್ತಮವಾಗಿ ಆಗಬೇಕೆಂದಿದ್ದರೆ ನೀವೇ ಮಾಡಿ ಎನ್ನುವುದು ಅನುಭವದ ನುಡಿಮುತ್ತು. ಪ್ರಯತ್ನ ಎನ್ನುವ ಶಬ್ದ ಸಣ್ಣದಿರಬಹುದು ಆದರೆ ಅದರ ಫಲ ಮಾತ್ರ ಅಗಾಧವಾದುದು. ವಿಧಿ ಹಣೆ ಬರಹ ಗ್ರಹಗತಿ ಎಂದು ಕೊರಗಬೇಡಿ. ಹೃದಯ ಭಗ್ನವಾಗದಂತೆ ನೋಡಿಕೊಳ್ಳಿ. ಸತತ ಪ್ರಯತ್ನವೇ ಜೀವಂತಿಕೆಯ ಲಕ್ಷಣ. ಉತ್ತಮತೆಯಡೆಗೆ ಸಾಗಲು ಪ್ರಯತ್ನಿಸಿ ತಕ್ಕ ಫಲ ತಾನಾಗಿಯೇ ನಿಮ್ಮ ಬದುಕಿನ ಬಾಗಿಲು ತಟ್ಟುತ್ತದೆ.

– ಜಯಶ್ರೀ.ಜೆ. ಅಬ್ಬಿಗೇರಿ,
ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ, ಮೊ:೯೪೪೯೨೩೪೧೪೨