ಕಾನೂನು ವಿವಿ ವಿರುದ್ದ ಸಿಡಿದೆದ್ದ ವಿದ್ಯಾರ್ಥಿ ಸಮೂಹ: ಕುಲಪತಿ ವಿರುದ್ದ ಕ್ರಮಕ್ಕೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ

ವಿಜಯ ದರ್ಪಣ ನ್ಯೂಸ್…

ವಾರಾಂತ್ಯವೂ ಪರೀಕ್ಷೆ:

ಕಾನೂನು ವಿವಿ ವಿರುದ್ದ ಸಿಡಿದೆದ್ದ ವಿದ್ಯಾರ್ಥಿ ಸಮೂಹ: ಕುಲಪತಿ ವಿರುದ್ದ ಕ್ರಮಕ್ಕೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ; ಮಾನವ ಹಕ್ಕು ಆಯೋಗ, ಮಹಿಳಾ ಆಯೋಗಕ್ಕೂ ದೂರು.

ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ-KSLU ಇದೀಗ ವಿವಾದದ ಕೇಂದ್ರಬಿಂದುವಾಗಿದೆ. ಭಾನುವಾರವೂ ಸೆಮಿಸ್ಟರ್ ಪರೀಕ್ಷೆ ನಿಗದಿಪಡಿಸಿರುವ ಕ್ರಮದ ವಿರುದ್ದ ವಿದ್ಯಾರ್ಥಿಗಳು ಸಿಡಿದೆದ್ದಾರೆ. ಈ ಬೆಳವಣಿಗೆಯೂ ‘ರಾಜಭವನ V/S ಸರ್ಕಾರ’ ಎಂಬ ಬೆಳವಣಗೆಗೆ ಕಾರಣವಾಗುವ ಸಾಧ್ಯತೆಗಳಿವೆ.

ಈ ವಿವಾದ ಹಿನ್ನೆಲೆಯಲ್ಲಿ ಕುಲಪತಿ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿ ಸಂಘಟನೆಯು ರಾಜ್ಯಪಾಲರಿಗೆ ದೂರು ನೀಡಿವೆ. ರಜೆಯ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿ ಹೋರಾಟಗಾರ ಕ್ರಿಸ್ಟನ್ ಮಿನೇಜಸ್ ಅವರು ರಾಜ್ಯ ಮಾನವ ಹಕ್ಕುಗಳ ಆಯೋಗ ಹಾಗೂ ರಾಜ್ಯ ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ, ವಿಧಾನಸಭೆಯ ಸ್ಪೀಕರ್, ವಿಧಾನ ಪರಿಷತ್ ಸಭಾಪತಿ, ಹಾಗೂ ಉಭಯ ಸದನಗಳ ವಿರೋಧ ಪಕ್ಷಗಳ ನಾಯಕರಿಗೂ ದೂರು ನೀಡಿ, ಕಾನೂನು ವಿವಿ ಕುಲಪತಿಗಳ ವಿರುದ್ದ ಸೂಕ್ತ ಕ್ರಮಕ್ಕೆ ಹಾಗೂ ಪರೀಕ್ಷೆಯ ವೇಳಾಪಟ್ಟಿ ಪರಿಷ್ಕರಣೆಗೆ ಮನವಿ ಮಾಡಿದ್ದಾರೆ.

ವಾರಪೂರ್ತಿ ವಿವಿಧ ಕಾಯಕ ಹಾಗೂ ಚಟುವಟಿಕೆಗಳಲ್ಲಿ ಭಾಗಿಯಾಗುವ ವ್ಯಕ್ತಿಗಳಿಗೆ ವಾರಾಂತ್ಯದಲ್ಲಿ ಕನಿಷ್ಠ ಒಂದು ದಿನವಾದರೂ ರಜೆ ನೀಡಬೇಕೆಂಬ ನಿಯಮ ಇದೆ. ಆದರೆ, ಕಾನೂನು ಕ್ಷೇತ್ರದ ಒಂದು ಭಾಗವಾಗಿರಬೇಕಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಈ ವಿಚಾರದಲ್ಲಿ ನಿಯಮ ಉಲ್ಲಂಘಿಸಿದೆ ಎಂದು ಕ್ರಿಸ್ಟನ್ ಮಿನೇಜಸ್ ಆರೋಪಿಸಿದ್ದಾರೆ.

ಸದರಿ ವಿಶ್ವವಿದ್ಯಾಲಯವು, 5 ಹಾಗೂ 3 ವರ್ಷಗಳ LLB ಪದವಿ ಕೋರ್ಸ್‌ಗಳಿಗೆ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಪರೀಕ್ಷೆಗೆ ದಿನಾಂಕ ನಿಗದಿಪಡಿಸಿದೆ. 21.08.2024ರಿಂದ 04.09.2024ರ ವರೆಗೆ ಭಾನುವಾರದ ರಜಾದಿನವನ್ನೂ ಲೆಕ್ಕಿಸದೆ ವಾರದ ಎಲ್ಲಾ ದಿನಗಳಲ್ಲಿ ಪರೀಕ್ಷೆ ನಿಗದಿಪಡಿಸಲಾಗಿದೆ. ವಿದ್ಯಾರ್ಥಿಗಳು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರೂ ಇದ್ದಾರೆ. ವಿದ್ಯಾರ್ಥಿನಿಯರೂ ತಮ್ಮದೇ ಆದ ಸಮಸ್ಯೆಗಳನ್ನು ಎದುರಿಸುವರು. ಹೀಗಿರುವಾಗ ವಾರಾಂತ್ಯದ ರಜಾ ದಿನಗಳಂದೂ ವಿರಾಮ ನೀಡದೆ, ಪರೀಕ್ಷೆ ನಡೆಸುವ ಅಮಾನವೀಯ ನಡೆ ಸರಿಯಲ್ಲ. ಕಾನೂನು ವಿವಿಯ ಈ ಕ್ರಮದಿಂದ ಮಾನವ ಹಕ್ಕುಗಳ ಉಲ್ಲಂಘನೆ ಮಾತ್ರವಲ್ಲ, ಮಹಿಳೆಯರ ಹಕ್ಕುಗಳೂ ಉಲ್ಲಂಘನೆಯಾಗುತ್ತದೆ ಎಂದು ಕ್ರಿಸ್ಟನ್ ಅವರು ಈ ದೂರಿನಲ್ಲಿ ಗಮನಸೆಳೆದಿದ್ದಾರೆ.

ಈ ಪರೀಕ್ಷಾ ದಿನಗಳಂದೇ ಶ್ರೀಕೃಷ್ಣ ಜನ್ಮಾಷ್ಠಮಿ ಸಹಿತ ಹಬ್ಬವೂ ಇರುವುದರಿಂದ ವಿವಿಯ ನಡೆಯು ಪ್ರಮುಖ ಧಾರ್ಮಿಕ ಆಚರಣೆಗಳಿಗೂ ಅಡ್ಡಿಪಡಿಸುವ ಕ್ರಮವಾಗಿದ್ದು ಈ ಬಗ್ಗೆ, ವಿದ್ಯಾರ್ಥಿ ಸಂಘಟನೆಗಳ ಪ್ರಮುಖರು, ವಕೀಲರ ಸಹಿತ ಕಾನೂನು ತಜ್ಞರ ಸಲಹೆಗಳನ್ನಾಧರಿಸಿ, ದಿನಾಂಕ 08.08.2024ರಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಪತ್ರ ಬರೆದು ಕಾನೂನು ವಿದ್ಯಾರ್ಥಿಗಳ ಸಮಸ್ಯೆ ಬಗ್ಗೆ ಗಮನಸೆಳೆದಿದ್ದರೂ ಪರೀಕ್ಷಾ ವೇಳಾಪಟ್ಟಿ ಪರಿಷ್ಕರಿಸಲು ಕುಲಪತಿಗಳು ಪ್ರಯತ್ನ ಮಾಡಿಲ್ಲ ಎಂದವರು ದೂರಿದ್ದಾರೆ.

ವಾರಾಂತ್ಯದ ರಜೆ ವಿದ್ಯಾರ್ಥಿಗಳ ಮೂಲಭೂತ ಹಕ್ಕು. ಈ ಹಕ್ಕುಗಳಿಗೆ ಅಡ್ಡಿಯಾಗದಂತೆ ಪರೀಕ್ಷಾ ವೇಳಪಟ್ಟಿಯನ್ನು ಪರಿಷ್ಕರಿಸಬೇಕೆಂದು ಹಾಗೂ ಮಾನವ ಹಕ್ಕುಗಳನ್ನು ಗೌರವಿಸದ ಕುಲಪತಿ ಹಾಗೂ ವಿವಿ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಕ್ರಿಸ್ಟನ್ ಅವರು ರಾಜ್ಯಪಾಲರನ್ನು ಆಗ್ರಹಿಸಿದ್ದಾರೆ.