ದೇಶದಲ್ಲಿ ನಡೆಯುವ ಪ್ರತಿ ಅತ್ಯಾಚಾರಕ್ಕೆ ನಾವೂ ಪರೋಕ್ಷ ಕಾರಣವೇ, ಅತ್ಯಾಚಾರಕ್ಕೆ ಪರಿಹಾರ ಉಂಟೇ…….
ವಿಜಯ ದರ್ಪಣ ನ್ಯೂಸ್…
ಅತ್ಯಾಚಾರ…….
ದೇಶದಲ್ಲಿ ನಡೆಯುವ ಪ್ರತಿ ಅತ್ಯಾಚಾರಕ್ಕೆ ನಾವೂ ಪರೋಕ್ಷ ಕಾರಣವೇ, ಅತ್ಯಾಚಾರಕ್ಕೆ ಪರಿಹಾರ ಉಂಟೇ…….
ಪಶ್ಚಿಮ ಬಂಗಾಳ ರಾಜ್ಯದ ಕೊಲ್ಕತ್ತಾ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ರಾಷ್ಟ್ರ ವ್ಯಾಪಿ ಸುದ್ದಿಯಾಗಿದೆ. ಇಂದು ಬಹುತೇಕ ಇಡೀ ದೇಶದ ಎಲ್ಲಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಸಾಂಕೇತಿಕವಾಗಿ ಪ್ರತಿಭಟನಾ ರೂಪದಲ್ಲಿ ಬೆಳಿಗ್ಗೆ 6 ರಿಂದ 24 ಗಂಟೆಗಳ ಬಂದ್ ಆಚರಿಸಲಾಗುತ್ತಿದೆ.
ದೇಶದಲ್ಲಿ ಪ್ರತಿ ನಿಮಿಷಕ್ಕೋ ಗಂಟೆಗೋ ಒಂದೊಂದು ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಆದರೆ ಅಪರೂಪಕ್ಕೆ ಕೆಲವೊಮ್ಮೆ ಕೆಲವು ಅತ್ಯಾಚಾರ ಘಟನೆಗಳು ರಾಷ್ಟ್ರ ವ್ಯಾಪಿ ಪ್ರಾಮುಖ್ಯತೆ ಪಡೆಯುತ್ತವೆ. ಅದರಲ್ಲಿ ದೆಹಲಿಯ ನಿರ್ಭಯ ಪ್ರಕರಣ, ಹೈದರಾಬಾದಿನ ಪಶುವೈದ್ಯೆ ಪ್ರಕರಣ, ಉತ್ತರ ಪ್ರದೇಶದ ಹತ್ರಾಸ್, ಮತ್ತೊಂದಿಷ್ಟು ಬಿಟ್ಟರೆ ಈಗ ಕೊಲ್ಕತ್ತಾದ ಈ ನತದೃಷ್ಟ ವೈದ್ಯಕೀಯ ವಿದ್ಯಾರ್ಥಿನಿಯದು.
ಹೇಗೆ ವಿವರಿಸುವುದು ಈ ಘಟನೆಗಳನ್ನು, ಅಪರಾಧಗಳನ್ನು, ಅಪರಾಧಿಗಳನ್ನು. ಅವರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು, ಗಲ್ಲಿಗೇರಿಸಬೇಕು ಮುಂತಾದ ಪದಗಳು, ಘೋಷಣೆಗಳು, ಮಾತುಗಳು, ಚರ್ಚೆಗಳು ಕೇವಲ ಆ ಕ್ಷಣದ ಪ್ರತಿಕ್ರಿಯೆ ಮಾತ್ರ. ಈ ಅತ್ಯಾಚಾರ ಪ್ರಕರಣಗಳನ್ನು ತೀರಾ ಆಳಕ್ಕೆ ಯೋಚಿಸಿ ಸಾಮಾಜಿಕವಾಗಿ, ಆಡಳಿತಾತ್ಮಕವಾಗಿ ಒಂದಷ್ಟು ಕ್ರಾಂತಿಕಾರಕ ಬದಲಾವಣೆಗಳನ್ನು, ಮಾನಸಿಕ ವ್ಯಕ್ತಿತ್ವವನ್ನು ಇಡೀ ಸಮಾಜದಲ್ಲಿ ರೂಪಿಸದಿದ್ದರೆ ಈ ಅತ್ಯಾಚಾರ ತಡೆಯುವುದು ಬಹಳ ಕಷ್ಟ.
ಇದರ ನಡುವೆ ರಾಜಕೀಯ ತಿಕ್ಕಾಟಗಳು ಬೇರೆ ನಡೆಯುತ್ತದೆ. ಇದು ನಾಚಿಕೆಗೇಡು. ಏಕೆಂದರೆ ಅತ್ಯಾಚಾರ, ಕೊಲೆ ನಡೆದ ನಂತರ ಅದೊಂದು ಹೀನ ಹಿಂಸಾತ್ಮಕ ಕೃತ್ಯ. ಅದರಲ್ಲಿ ರಾಜಕೀಯ ಪಕ್ಷಗಳಿಗೆ ಏನು ಕೆಲಸ, ಸಂಘಟನೆಗಳಿಗೆ ಏನು ಕೆಲಸ. ಅದೇನಿದ್ದರೂ ಪೊಲೀಸರು, ಕಾನೂನು ತೀಕ್ಷ್ಣವಾಗಿ ಪ್ರತಿಕ್ರಿಯಿಸಿ ಕ್ರಮ ಕೈಗೊಳ್ಳಬೇಕಾದ ವಿಷಯ. ಅದನ್ನು ರಾಜಕೀಯಗೊಳಿಸಿ, ಮಾಧ್ಯಮಗಳಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ಏನಿದೆ. ನೇರವಾಗಿ ಸಿಸಿಟಿವಿಯ ದೃಶ್ಯಾವಳಿಗಳಿವೆ. ಹೆಚ್ಚು ಕಡಿಮೆ ಅಪರಾಧಿಗಳ ಗುರುತು ಸಿಗುತ್ತಿದೆ. ಇನ್ನು ತಡ ಮಾಡುವುದು ಏಕೆ, ಅದಕ್ಕೆ ಯಾರ ವಿರುದ್ಧ ಪ್ರತಿಭಟಿಸಬೇಕು, ಯಾಕಾಗಿಯಾದರೂ ಪ್ರತಿಭಟಿಸಬೇಕು ಅರ್ಥವಾಗುತ್ತಿಲ್ಲ. ಅಂದರೆ ಅಪರಾಧಿಗಳನ್ನು ರಕ್ಷಿಸುವ ಪ್ರಯತ್ನ ಏನಾದರೂ ನಡೆಯುತ್ತಿದೆಯೇ. ಒಂದು ವೇಳೆ ಅದು ನಿಜವಾಗಿದ್ದರೆ ಈ ಸಮಾಜ ಮತ್ತು ಸರ್ಕಾರದ ನೈತಿಕತೆಯೇ ಪ್ರಶ್ನಾರ್ಹ.
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಒಂದು ಅತ್ಯಾಚಾರ ಪ್ರಕರಣವನ್ನು ಭೇದಿಸಿ ಕಠಿಣ ಶಿಕ್ಷೆಗೆ ಒಳಪಡಿಸುವ ಪ್ರಕ್ರಿಯೆ ಸಹಜವಾಗದೆ ಅಸಹಜವಾದರೆ ಅದೊಂದು ವಿಕೃತ ಮನಸ್ಥಿತಿಯ ಆಳ್ವಿಕೆ ಎಂದೇ ಕರೆಯಬೇಕಾಗುತ್ತದೆ. ಅನಾಗರಿಕ ಸಮಾಜ ಎನ್ನಲೂ ಬಹುದು. ಇದರಲ್ಲಿ ಚರ್ಚಿಸುವುದು ಏನು ಉಳಿದಿಲ್ಲ. ಅಪರಾಧಿಗಳಿಗೆ ಶಿಕ್ಷೆಯಾಗುವುದು ಮಾತ್ರ ಬಾಕಿ ಇರುತ್ತದೆ. ಇಂತಹ ಸನ್ನಿವೇಶದಲ್ಲೂ ಕೆಟ್ಟ ರಾಜಕೀಯ ಒಳ ಪ್ರವೇಶಿಸಿದರೆ ಅದು ಈ ದೇಶದ ದುರಂತವಾಗುತ್ತದೆ.
ನಿರ್ಭಯ ಎಂಬ ಜ್ಯೋತಿ ಸಿಂಗ್ ಭಾರತದ ರಾಜಧಾನಿ ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಗೆ ಒಳಗಾಗಿ 12 ವರ್ಷಗಳು ಉರುಳಿದವು. ಇಡೀ ದೇಶದ ಗಮನ ಸೆಳೆದ – ಅತ್ಯಾಚಾರದ ಬಗ್ಗೆ ಅತ್ಯಂತ ಆಕ್ರೋಶ ವ್ಯಕ್ತವಾದ ಘಟನೆಯಿದು. ಅತ್ಯಾಚಾರಿಗಳಿಗೆ ಉಗ್ರ ಶಿಕ್ಷೆ ನೀಡುವ ಹೊಸ ಕಠಿಣ ಕಾನೂನು ಸಹ ಜಾರಿ ಮಾಡಲಾಯಿತು.
ಆದರೂ ಇಡೀ ದೇಶದಲ್ಲಿ ಅತ್ಯಾಚಾರಗಳ ಸರಣಿ ಇನ್ನೂ ನಿಂತಿಲ್ಲ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಕಡಿಮೆಯಾಗಿಲ್ಲ.
ಅತ್ಯಾಚಾರಕ್ಕೆ ಒಳಗಾಗುವ ನತದೃಷ್ಟ ಹೆಣ್ಣುಮಕ್ಕಳನ್ನು ನೆನೆದು ಸಂಕಟಪಡುವುದೋ ?
ಅದಕ್ಕೆ ಕಾರಣರಾದ ಕಿರಾತಕರಿಗೆ ಶಿಕ್ಷೆ ಆಗುವುದನ್ನು ನೆನೆದು ಸಂಭ್ರಮಪಡುವುದೋ ?
ಆ ದುರಾದೃಷ್ಟರು ಭಾರತದಲ್ಲಿ ಹೆಣ್ಣಾಗಿ ಹುಟ್ಟಿದ್ದಕ್ಕೆ ಮರುಕಪಡುವುದೋ ?
ಅರ್ಥವಾಗುತ್ತಿಲ್ಲ.
ಸೃಷ್ಟಿಯ ಸಹಜ ಜೀವಿ ಹೆಣ್ಣನ್ನು ನಮ್ಮ ಅನುಕೂಲಕ್ಕಾಗಿ ಪೂಜನೀಯಗೊಳಿಸಿದ ದಿನದಿಂದಲೇ ಆಕೆಯ ಮೇಲೆ ನಿಯಂತ್ರಣ ಸಾಧಿಸಿ ಆಕೆಯನ್ನು ಭೋಗದ ವಸ್ತುವೆಂದು ತೀರ್ಮಾನಿಸಲಾಯಿತು. ಅಲ್ಲಿಂದ ಶುರುವಾದ ಹೆಣ್ಣಿನ ಶೋಷಣೆ ಈ ಕ್ಷಣದವರೆಗೂ ನಿರಂತರವಾಗಿ ಬೇರೆ ಬೇರೆ ರೂಪದಲ್ಲಿ ನಡೆಯುತ್ತಲೇ ಇದೆ……..
ತನ್ನ ತಾಯಿ ತಂಗಿ ಅಕ್ಕ ಎಂಬ ಕೆಲವು ರಕ್ತ ಸಂಬಂಧದ ಹೆಣ್ಣುಗಳನ್ನು ಹೊರತುಪಡಿಸಿ ಪ್ರತಿ ಹೆಣ್ಣನ್ನು ನೋಡುವ ಮಾನಸಿಕ ಸ್ಥಿತಿ ಆಕೆಯ ಲಿಂಗಾಧಾರಿತವಾಗಿರುತ್ತದೆಯೇ ಹೊರತು ಅವರೂ ಸೃಷ್ಟಿಯ ಸ್ವತಂತ್ರ ಜೀವಿ ಎಂಬ ಮನೋಭಾವ ಮೂಡುವ ವ್ಯವಸ್ಥೆ ಇಲ್ಲ. ಕಾನೂನಿನ ಭಯದಿಂದ ಮಾತ್ರ ಒಂದಷ್ಟು ನಾಗರಿಕ ವರ್ತನೆ ಇದೆಯೇ ಹೊರತು ಆಂತರ್ಯದಲ್ಲಿ ಅದು ಇರುವುದು ಅತ್ಯಂತ ಕಡಿಮೆ.
ಈ ಕ್ಷಣದಲ್ಲೂ ಪ್ರತಿನಿತ್ಯ ನಮ್ಮ ದೇಶದಲ್ಲಿ ಅತ್ಯಾಚಾರಗಳು ನಡೆಯುತ್ತಲೇ ಇದೆ. ಇದನ್ನು ಮೂರು ರೀತಿಯಲ್ಲಿ ವಿಂಗಡಿಸಬಹುದು…..
ಮೊದಲನೇ ವರ್ಗದಲ್ಲಿ ಶ್ರೀಮಂತ ರಾಜಕಾರಣಿಗಳು, ದೊಡ್ಡ ದೊಡ್ಡ ದಲ್ಲಾಳಿಗಳು, ಶಕ್ತಿವಂತ ಅಧಿಕಾರಿಗಳು, ಡೋಂಗಿ ಧಾರ್ಮಿಕ ಮುಖಂಡರುಗಳು, ದೊಡ್ಡ ಉದ್ಯಮಿಗಳು, ರೌಡಿಗಳು, ಮಾಫಿಯಾದವರು, ಸಿನಿಮಾ ನಟರು ( ಎಲ್ಲರೂ ಅಲ್ಲ ಕೆಲವರು ಮಾತ್ರ ) ಮುಂತಾದವರು ಅವರಿಗಿರುವ ಚಟಕ್ಕೆ ಅನುಸಾರವಾಗಿ ಹಣದಿಂದಲೋ, ಬಲದಿಂದಲೋ, ಬೆದರಿಕೆಯಿಂದಲೋ, ಆಮಿಷದಿಂದಲೋ ನಿರಂತರವಾಗಿ ಅತ್ಯಾಚಾರ ಮಾಡುತ್ತಲೇ ಇರುತ್ತಾರೆ. ಆದರೆ ಇದು ಬಲವಂತದ ಒಪ್ಪಿತ ಅತ್ಯಾಚಾರವಾಗುವುದರಿಂದ ಅದಕ್ಕೆ ಒಳಗಾದ ಹೆಣ್ಣಿನ ಪ್ರತ್ಯಕ್ಷ ಅಥವಾ ಪರೋಕ್ಷ ಒಪ್ಪಿಗೆ ಇರುವುದರಿಂದ ಕಾನೂನಿನ ರೀತಿ ಅತ್ಯಾಚಾರವಾಗುವುದಿಲ್ಲ. ಆಕೆ ಏನಾದರೂ ದೂರು ಕೊಟ್ಟರೆ ಮಾತ್ರ ಅದು ದಾಖಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಆ ಸಾಧ್ಯತೆ ಕಡಿಮೆ ಮತ್ತು ಆಕೆಗೆ ಯಾವ ಸುರಕ್ಷತೆಯೂ ಇರುವುದಿಲ್ಲ.ಇದೊಂದು ಬಲಾಢ್ಯರ ಕೂಟ.
ಎರಡನೆಯದಾಗಿ, ಮಧ್ಯಮವರ್ಗದ ಕೆಲವು ಜನರು ಬದುಕಿನ ಸುಖಲೋಲುಪತೆಯ ಅಂಗವಾಗಿ ಬೆಲೆವೆಣ್ಣಿನ ರೂಪದ ಮಾರುಕಟ್ಟೆಯಲ್ಲಿ – ಹೌದು ಮಾರುಕಟ್ಟೆಯಲ್ಲಿಯೇ ದೊರೆಯುವ ಹೆಣ್ಣುಗಳನ್ನು ಅತ್ಯಾಚಾರ ಮಾಡುತ್ತಾರೆ. Again ಇದೂ ಕೂಡ ಒಪ್ಪಿತ ಕ್ರಿಯೆಯಾಗುವುದರಿಂದ ಕಾನೂನಿನ ವ್ಯಾಪ್ತಿಯಿಂದ ಬಚಾವಾಗುತ್ತಾರೆ.
ನೆನಪಿರಲಿ ಈ ಎರಡೂ ಸಂದರ್ಭದಲ್ಲಿ ಹೆಣ್ಣನ್ನು ಬಲವಂತ ಒಪ್ಪಿಸುವಿಕೆಯ ಮುಂಖಾಂತರವೇ ಭೋಗದ ವಸ್ತುವೆಂದು ಅತ್ಯಾಚಾರ ಮಾಡಲಾಗುತ್ತದೆಯೇ ವಿನಹ ಸಹಜ ಗಂಡು ಹೆಣ್ಣಿನ ಪ್ರೀತಿಯ ಮಿಲನವಾಗಿರುವುದಿಲ್ಲ. ಕೆಲವು ಅಪರೂಪದ ಪ್ರಕರಣಗಳನ್ನು ಹೊರತುಪಡಿಸಿ.
ಇನ್ನು ಮೂರನೆಯದಾಗಿ, ತೀರಾ ಕೆಳ ಹಂತದ, ಬದುಕಿನ ಭರವಸೆಯನ್ನೇ ಕಳೆದುಕೊಂಡ, ಮಾದಕ ವಸ್ತುಗಳಿಗೆ ದಾಸರಾಗಿರುವ, ಅಜ್ಞಾನವೇ ತುಂಬಿಕೊಂಡಿರುವ, ಹೆಣ್ಣಿನೊಂದಿಗಿನ ಮಿಲನವೇ ಸ್ವರ್ಗ ಮತ್ತು ಅದೇ ಬದುಕಿನ ಧ್ಯೇಯ ಎಂದು ಭಾವಿಸುವ, ಮೇಲ್ನೋಟಕ್ಕೆ ನೋಡಲು ಸಭ್ಯವಾಗಿರುವ ಕೆಲವು ವಿಕೃತ ಕಾಮಿಗಳು ಒಂಟಿಯಾಗಿ ಸಿಗುವ, ಅಸಹಾಯಕ ಅಥವಾ ತಾವೇ ಹೊಂಚುಹಾಕಿ ಹಿಡಿಯುವ ಹೆಣ್ಣನ್ನು ತಿಂದು ಮುಗಿಸುತ್ತಾರೆ.
ಇವರಿಗೆ ಕಾನೂನಿನ ಭಯವೂ ಇರುವುದಿಲ್ಲ. ಧರ್ಮದ ಭಯವೂ ಇರುವುದಿಲ್ಲ ಸಾವಿನ ಭಯವೂ ಇರುವುದಿಲ್ಲ. ಇದನ್ನು ಮಾತ್ರ ಕಾನೂನಿನ ರೀತಿಯಲ್ಲಿ ಅತ್ಯಾಚಾರ ಎಂದು ಪರಿಗಣಿಸಲಾಗುತ್ತದೆ.
ಈಗ ಅನಿಸುವುದೇನೆಂದರೆ,
ಕೇವಲ ಅವರು ಮಾತ್ರವಲ್ಲದೆ ನಾವೂ ನೇರವಾಗಿಯೇ ಈ ಪರಿಸ್ಥಿತಿಯ ಪಾಲುದಾರರು. ಸಿನಿಮಾ – ಸಾಹಿತ್ಯ – ಕಲೆ – ಧಾರ್ಮಿಕ ನಂಬಿಕೆಗಳು – ಇತ್ಯಾದಿಗಳ ಮುಖಾಂತರ ಹೆಣ್ಣನ್ನು ಭೋಗದ ವಸ್ತುವೆಂದು ಪ್ರಚಾರಮಾಡಿ ಸಾಮಾನ್ಯರಲ್ಲಿ ಆಕೆಯ ಬಗೆಗೆ ವಿಚಿತ್ರ ಕಲ್ಪನೆ ಮೂಡಿಸಿ ಈ ರೀತಿಯ ದುರಂತ ಘಟನೆಗಳಿಗೆ ಕಾರಣವಾಗಿದ್ದೇವೆ.
ಇದನ್ನು ಕಾನೂನಾತ್ಮಕವಾಗಿ ನಿಯಂತ್ರಿಸುವುದು ಬಹಳ ಕಷ್ಟ. ಅದಕ್ಕಿಂತ ಹೆಚ್ಚಾಗಿ ಇಡೀ ವ್ಯವಸ್ಥೆಯನ್ನು ಹೆಚ್ಚು ನಾಗರಿಕವಾಗಿ ರೂಪಿಸುವುದೇ ಇದಕ್ಕಿರುವ ಬಹುಮುಖ್ಯ ಪರಿಹಾರವೆನಿಸುತ್ತದೆ. ಏಕೆಂದರೆ ನಮಗಿಂತ ಹೆಚ್ಚು ಮುಂದುವರಿದ ಮತ್ತು ಹೆಚ್ಚು ನಾಗರಿಕವಾದ ಪಾಶ್ಚಾತ್ಯ ದೇಶಗಳಲ್ಲಿ ಇದು ಬಹಳ ಕಡಿಮೆ ಎಂದು ಕೇಳಿದ್ದೇನೆ.
ಹಾಗೆಯೇ ಅತ್ಯಂತ ಆಳ ಧಾರ್ಮಿಕ ನಂಬುಗೆಯ ಮತ್ತು ಅತ್ಯಂತ ಅಮಾನುಷ ಕಠಿಣ ಕಾನೂನು ಹೊಂದಿರುವ ಷರಿಯತ್ ಕಾನೂನು ಇರುವ ದೇಶಗಳಲ್ಲಿ ಸಹ ಸ್ವಲ್ಪ ಕಡಿಮೆ ಎನಿಸುತ್ತದೆ.
ಏನಾದರಾಗಲಿ ಹೆಣ್ಣು ಶ್ರೇಷ್ಠಳೂ ಅಲ್ಲ. ಕನಿಷ್ಠಳೂ ಅಲ್ಲ. ಭೋಗದ ವಸ್ತುವೂ ಅಲ್ಲ. ಆಕೆ ನಮ್ಮ ನಿಮ್ಮಂತೆ ಸೃಷ್ಟಿಯ ಸಹಜ ಜೀವಿ. ನಿಮ್ಮ ತಾಯಿ ತಂಗಿ ಅಕ್ಕ ಹೆಂಡತಿ ಪ್ರೇಯಸಿಯರು ಮಾತ್ರ ಹೆಣ್ಣುಗಳು ಉಳಿದವರು ನಿಮ್ಮ ಆಡು ಗೊಂಬೆಗಳು ಎಂಬ ಭಾವನೆ ಬಿಡಿ.
ತಿಳಿವಳಿಕೆ ನಡವಳಿಕೆಯಾಗಿ ಪರಿವರ್ತನೆ ಹೊಂದಿದರೆ ಸಮಾಜ ಖಂಡಿತವಾಗಿ ಉತ್ತಮ ನಾಗರಿಕ ಸಮಾಜವಾಗಿ ರೂಪಗೊಳ್ಳುತ್ತದೆ…..
ಅತ್ಯಾಚಾರಕ್ಕಿಂತ ಹತ್ತು ಪಟ್ಟು ಹೆಚ್ಚು ಸುಖ ಪ್ರೀತಿ ಪ್ರೇಮ ಪ್ರಣಯಗಳು ಹೊಂದಾಣಿಕೆಯ ಎರಡು ಜೀವಗಳಲ್ಲಿ ಅಡಗಿದೆ ಎಂಬ ಅರಿವಿರಲಿ……..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068…