ವಿಶಿಷ್ಟ ಐತಿಹಾಸಿಕ ನಾಟಕ ದೇವಾನಾಂಪ್ರಿಯ ಅಶೋಕ

ವಿಜಯ ದರ್ಪಣ ನ್ಯೂಸ್…
 ವಿಶಿಷ್ಟ ಐತಿಹಾಸಿಕ ನಾಟಕ ದೇವಾನಾಂಪ್ರಿಯ ಅಶೋಕ
ರಾಮನಗರ : ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ತನ್ನದೇ ಸ್ವಂತ ಸಂಸ್ಕೃತಿ ಕೇಂದ್ರ ರಾಮನಗರ ತಾಲ್ಲೂಕು, ಕೆರೆಮೇಗಳದೊಡ್ಡಿಯ ಮುದ್ದುಶ್ರೀ ದಿಬ್ಬದಲ್ಲಿ ಇಪ್ಪತ್ತೊಂದು ದಿನಗಳ ರಂಗತರಬೇತಿ ಕಾರ್ಯಾಗಾರವೊಂದನ್ನು ಆಯೋಜಿಸಿತ್ತು. ಕರ್ನಾಟಕ ಬಂಜಾರ ಭಾಷೆ ಮತ್ತು ಸಂಸ್ಕೃತಿ ಅಕಾಡೆಮಿಯ ಅಧ್ಯಕ್ಷ ಕಾರ್ಯಾಗಾರವನ್ನು ಉದ್ಘಾಟಿಸಿದ್ದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ  ಬಾಬು ಕುಂಬಾಪುರ, ಅಪರ ಜಿಲ್ಲಾಧಿಕಾರಿ ಆರ್ ಚಂದ್ರಯ್ಯ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ರಮೇಶ್‌ಬಾಬು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕತೆಗಾರ ಆರ್.ಬಿ. ಶೆಟ್ಟಿ, ಶಿಬಿರ ನಿರ್ದೇಶಕ ನವೀನ್ ಭೂಮಿ, ಸಿನಿಮಾಟೋಗ್ರಾಫರ್ ಚಂದ್ರಮೌಳಿ ಕೆ.ಪಿ. ಕೆ.ಎಸ್.ಎಂ. ಟ್ರಸ್ಟ್ ಕಾರ್ಯದರ್ಶಿ, ಜಾನಪದ ವಿದ್ವಾಂಸ ಡಾ. ಎಂ. ಬೈರೇಗೌಡ ಉಪಸ್ಥಿತರಿದ್ದರು.
ಸುಮಾರು ಒಂದು ತಿಂಗಳ ಅವಧಿಯಲ್ಲಿ ರಂಗ ತಂತ್ರಗಳು, ಧ್ವನಿ ಸಂಸ್ಕರಣೆ, ಸಂಗೀತದ ಬಳಕೆ, ಯೋಗ, ಧ್ಯಾನ,  ಆಂಗಿಕ, ಮೌಖಿಕ, ಶಾರೀರಿಕ ತರಬೇತಿಗಳನ್ನು ರಂಗಕರ್ಮಿಗಳಾದ ರಾಜೇಶ್ ಮಾಧವನ್, ರಂಗನಾಥ್ ಶಿವಮೊಗ್ಗ, ರಂಗ ಸಂಗೀತ ನಿರ್ದೇಶಕ ಗಜಾನನ ಟಿ. ನಾಯಕ್ ಇವರು ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳು. ಇವರೆಲ್ಲರ ಪ್ರಯತ್ನದ ಫಲ ಶಿವಮೊಗ್ಗ, ಯಾದಗಿರಿ, ಕನಕಪುರ, ರಾಮನಗರ, ಬೆಂಗಳೂರು, ತುಮಕೂರು, ಹೊಸಪೇಟೆ, ವಿಜಯನಗರ ಹೀಗೆ ನಾಡಿನ ಮೂಲೆ ಮೂಲೆಗಳಿಂದ ಪ್ರಾತಿನಿಧಿಕವಾಗಿ ಆಗಮಿಸಿದ್ದ 12 ಮಂದಿ ಶಿಬಿರಾರ್ಥಿಗಳಿಗೆ ಒಂದು ವಾರದ ತರಬೇತಿ ನೀಡಿದರು.
ರಂಗತಂತ್ರಗಳ ಬಳಕೆ, ಅಂಗಾಂಗಗಳ ಬಳಕೆ, ಧ್ವನಿಯ ಬಳಕೆ, ನೋಟ, ಸಹಕಲಾವಿದರೊಡನೆ ಸಂಭಾಷಿಸುವ ವಿಧಾನ, ಪ್ರೇಕ್ಷಕನೊಡನೆ ಸಂವಹಿಸುವ ರೀತಿ ರಂಗಭೂಮಿಯ ಎಲ್ಲ ಮಗ್ಗಲುಗುಳ ಕಲಿಕೆ ಈಶಿಬಿರದಲ್ಲಿ ಸಾಧ್ಯವಾಯಿತು. ಹದಿನೈದು ದಿನಗಳ ಸತತ ತರಬೇತಿ ಆರಂಭವಾಯಿತು. ಈ ದೇಶ ಕಂಡ, ಕನ್ನಡ ನಾಡು ಹೆಸರು ನೀಡಿದ ದೇವಾನಾಂಪ್ರಿಯ ಅಶೋಕ ನಾಟಕದ ಕಲಿಕೆ ಅರಂಭವಾಯಿತು.
ಇದೇ ಆಗಸ್ಟ್ 15ರಂದು ಸ್ವಾತಂತ್ರ್ಯ  ದಿನಾಚರಣೆಯಂದು ನಗರದ ಗ್ರಂಥಾಲಯ ಸಭಾಂಗಣದಲ್ಲಿ ಪ್ರದರ್ಶನ ಕಂಡಿತು. ಇತಿಹಾಸದಲ್ಲಿ ದಾಖಲಾಗದ ಅಶೋಕನ ವಿವಿಧ ವಿಚಾರಗಳನ್ನು ಮಾಲೆಮಾಡಿ ಸುಂದರವಾದ ಹಾರ ಸಿದ್ಧಪಡಿಸಿದ ಪ್ರದರ್ಶನ ಎಲ್ಲ ರೀತಿಯಲ್ಲೂ ಸಶಕ್ತವಾಗಿ ಮೂಡಿ ಬಂತು. ಅಶೋಕನ ಜೀವನ ತಂದೆಯ ಅವಜ್ಞೆ, ಸಹೋದರರ ಕಲಹ, ಅದರಿಂದಾದ ಸಾವು ನೋವುಗಳು ಕಳಿಂಗದ ಯುದ್ಧದ ಭೀಕರತೆಗಳನ್ನು ನಾಟಕದಲ್ಲಿ ಅಡಕಗೊಳಿಸಲಾಗಿದೆ.
ಬುದ್ಧದೇವನ ತತ್ವಗಳನ್ನಾಧರಿಸಿದ ಸಿದ್ಧಾರ್ಥನ ಬಾಲ್ಯ, ಅವನ ನಡವಳಿಕೆಗಳೂ ಇಲ್ಲಿ ಸ್ಥಾನ ಪಡೆದಿವೆ. ಅಶೋಕ ಸಿದ್ಧಾರ್ಥನ ಪಾತ್ರ ವಹಿಸಿದ ವಿಧಿಷಾದೇವಿಯನ್ನು ವಿವಾಹವಾಗುವ ತಂತ್ರವನ್ನು ನಾಟಕಕಾರರು ಚಂದವಾಗಿ ದುಡಿಸಿಕೊಂಡಿದ್ದಾರೆ.
ಅಶೋಕ ಪಾತ್ರಧಾರಿ ಹಾಸನದ ಕುಮಾರ್ ಮಟ್ಟನವಿಲೆ ಅತ್ಯಂತ ಲವಲವಿಕೆಯಿಂದ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ಚಕ್ರವರ್ತಿ ಬಿಂದುಸಾರನಾಗಿ ರಾಮನಗರದ ಶ್ರೀನಿವಾಸ್ ನೈಜವಾಗಿ ನಟಿಸಿ ಜನಮೆಚ್ಚುಗೆಗೆ ಪಾತ್ರರಾದರು. ಇಡೀ ನಾಟಕವನ್ನು ನಡೆಸಿಕೊಂಡು ಹೋಗುವ ನಿರೂಪಕರಾಗಿ ಕೃಷ್ಣಾಪುರದೊಡ್ಡಿಯ ವಿದ್ಯಾ, ಹೊಸಪೇಟೆಯ ನಾಗರಾಜ್ ಎಲ್ಲೂ ಕುಂದುಬಾರದಂತೆ ನೋಡಿಕೊಂಡಿದ್ದಾರೆ.
ಉಳಿದಂತೆ ಅಶೋಕನ ಗೆಳೆಯ ವಜ್ರನ ಪಾತ್ರದಲ್ಲಿ ಮಂಜುನಾಥ್ ಶಿವಮೊಗ್ಗ, ಶೃಂಖಲೆಯ ಪಾತ್ರದಲ್ಲಿ ಬೆಂಗಳೂರಿನ ಶ್ವೇತ, ವಿದಿಷಾದೇವಿ ಪಾತ್ರದಲ್ಲಿ ತುಮಕೂರಿನ ಶೋಭ, ನಿಜಧರ ತುಮಕೂರಿನ ಯಶವಂತ, ಬಾವುಕನಾಗಿ ಕನಕಪುರದ ಹರ್ಷವರ್ಧನ ಚಂದದ ಅಭಿನಯ ನೀಡಿದ್ದಾರೆ.
ಬೌದ್ಧಭಿಕ್ಕು ಉಪಗುಪ್ತ ಮತ್ತು ಅಶೋಕನ ಸಹೋದರನ ಕುಮಾರ ನ್ಯಗ್ರೋದನ ಪಾತ್ರದ ಯಾದಗಿರಿಯ ಭೀಮಣ್ಣನ ಮನೋಜ್ಞ ಅಭಿನಯ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿತು. ದೇವನಹಳ್ಳಿ ವಿಶ್ವಾಸ್ ಕಳಿಂಗದರಸು ಮೇಘವಾಹನನಾಗಿ ಮಿಂಚಿದರು. ಮೂರು ಪಾತ್ರಗಳಲ್ಲಿ ಅಬಿನಯಿಸಿದ ಮಂಡ್ಯದ ಸಚಿನ್ ಎಲ್ಲರ ಅಭಿನಯದಲ್ಲಿ ಮಾಗುವಿಕೆ ಕಂಡಿತು.
ನಿರ್ದೇಶನದ ಜೊತೆಗೆ ಬೆಳಕಿನ ವಿನ್ಯಾಸ ಮಾಡಿಕೊಮಡ ನವೀನ್ ಭೂಮಿ ತಮ್ಮೆಲ್ಲ ಪ್ರತಿಭೆಯನ್ನು ಈ ನಾಟಕ ಕಟ್ಟುವಲ್ಲ್ಲಿ ಧಾರೆಯೆರೆದಿದ್ದಾರೆ ಎನ್ನಲಡ್ಡಿಯಿಲ್ಲ. ವಸ್ತ್ರ ವಿನ್ಯಾಸಕಿ ರೂಪ ತಿಪಟೂರು, ಪ್ರಸಾದನ ರಂಗನಾಥ್ ಶಿವಮೊಗ್ಗ, ರಂಗಪರಿಕರಗಳನ್ನು ತಯಾರಿಸಿದ ಮನೋಜ್ ಮೂಕಹಳ್ಳಿ ಅವರು ಪಾತ್ರಧಾರಿಗಳ ಕಿರೀಟಗಳನ್ನು ಸಿದ್ಧಪಡಿಸುವಲ್ಲಿ ಸ್ವಲ್ಪ ಆಸ್ಥೆವಹಿಸಬೇಕಿತ್ತು.
ಸಂಗೀತದ ಟಚ್ ನೀಡಿದ ಮಾಂತ್ರಿಕತೆ ಮತ್ತು ನಾಟಕಕಾರ ಬೈರೇಗೌಡರ ಹಾಡುಗಳ ರಚನೆಯಲ್ಲಿ ಕಾವ್ಯದ ತಿರುಳು ಎದ್ದು ಕಾಣುತ್ತಿತ್ತು. ಮೇರೆಮೀರಿದ ರಣೋತ್ಸಾಹ, ಸಾಮ್ರಾಜ್ಯ ವಿಸ್ತರಣೆಯ ದಾಹ ಮನುಷ್ಯನ ಜೀವನವನ್ನು ಎಲ್ಲಿಗೆ ಕೊಂಡೊಯ್ಯುತ್ತದೆ ಎಂಬುದನ್ನು ತಿಳಿಸಿಕೊಡುತ್ತದೆ.
2014ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ನಾಟಕದ ವಸ್ತು ಮತ್ತು ಬಳಸಿಕೊಂಡಿರುವ ಭಾಷೆ ಪ್ರಬುದ್ಧವಾಗಿದೆ.
ನಾಟಕ ಮುಗಿದು ಪ್ರೇಕ್ಷಕ ಎದ್ದು ಹೊರನಡೆವಾಗ ಒಂದು ಧ್ವನಿ ಬರುತ್ತದೆ. ಅದರ ಸಾರಾಂಶವನ್ನು ಕೆಲವೇ ಮಾತುಗಳಲ್ಲಿ ಹೇಳಿದ್ದಾರೆ. ಅವರದೇ ಧ್ವನಿಯಲ್ಲಿ ಬಂದ ಆ ಮಾತುಗಳನ್ನು ಕೇಳಿದ ಹೊರನಡೆಯಲಿದ್ದ ಪ್ರೇಕ್ಷಕ ಮರಳಿ ಬಂದು ಅದನ್ನು ಆಲಿಸಿ ಹೋದದ್ದು ವಿಶೇಷವೆನಿಸಿತು. ಆ ಸಾಲುಗಳನ್ನು ಇಲ್ಲಿ ಉಲ್ಲೇಖಿಸಲೇಬೇಕು.
ಪ್ರಿಯ ಗೆಳೆಯ ವಜ್ರನ ಮರಣ, ಸುಸೀಮಕುಮಾರ ನ್ಯಗ್ರೋದನ ಸಮಾಧಾನ ಅಶೋಕನ ರಣೋತ್ಸಾಹವನ್ನು ಮಣ್ಣುಗೂಡಿಸಿತು. ಪರಿಣಾಮ ಅಶೋಕ ಶಸ್ತ್ರತ್ಯಾಗ ಮಾಡಿ ಸಹೋದರ ಕುಮಾರನ ಮೂಲಕ ಮೊಗ್ಗಲಿಪುತ್ಥತಿಸ್ಸಾರ ಮಾರ್ಗದರ್ಶನ ಪಡೆದು ಪ್ರಭುತ್ವ ಮತ್ತು ಧರ್ಮಗಳನ್ಮು ಸಮಾಗಮಗೊಳಿಸಿದ. ಅದು ಕಾರಣ ದೇಶ ಕಾಯುವ ಶೌರ್ಯದ ಸಂಕೇತವಾಗಿ ನಾಲ್ಕು ತಲೆಗಳ ಸಿಂಹಲಾಂಚನ, ಧರ್ಮದ ಪರವಾಗಿ ಅಶೋಕಚಕ್ರಗಳನ್ನು ಕೊಡುಗೆಯಾಗಿ ನೀಡಿದ. ಈ ಬಗೆಯ ಪ್ರಭುತ್ವ ಮತ್ತು ಧರ್ಮಗಳ ಸಮ್ಮಿಲನ ಸುಖೀರಾಜ್ಯ ಸ್ಥಾಪನೆಯನ್ನು ಸಾಬೀತುಪಡಿಸಿತು.
ಇಂಥದೊಂದು ಮಹತ್ವದ ನಾಟಕವನ್ನು ರಂಗಕ್ಕೆ ಅಳವಡಿಸಿದ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ನ ಕಾರ್ಯ ಮತ್ತು ಇಡೀ ತಾಂತ್ರಿಕ ವರ್ಗ ಮತ್ತು ಕಲಾವಿದರನ್ನು ಅಭಿನಂದಿಸಲೇಬೇಕು.