ವರಮಹಾಲಕ್ಷ್ಮೀ ಹಬ್ಬದ ಖರೀದಿ ಭರಾಟೆ ಜೋರು
ವಿಜಯ ದರ್ಪಣ ನ್ಯೂಸ್ ….
ವರಮಹಾಲಕ್ಷ್ಮೀ ಹಬ್ಬದ ಖರೀದಿ ಭರಾಟೆ ಜೋರು
ವಿಜಯಪುರ: ಎಲ್ಲೆಡೆ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಹಬ್ಬದ ಮುನ್ನಾ ದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಮಾರುಕಟ್ಟೆಯಲ್ಲಿ ಹಾಗೂ ಅಂಗಡಿ ಮಳಿಗೆಗಳಲ್ಲಿ ಖರೀದಿ ಭರಾಟೆ ಜೋರಾಗಿದೆ.
ಪ್ರಮುಖವಾಗಿ ಹಬ್ಬಕ್ಕೆ ಬೇಕಾಗಿರುವಂತಹ ಹೂವು, ಹಣ್ಣು, ಸಿಹಿ ತಿಂಡಿ ಸೇರಿದಂತೆ ಅಲಂಕಾರಿಕ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿರುವ ಕಾರಣ ಸಾಮಾನ್ಯ ದಿನಗಳಿಗಿಂತ ಇದೀಗ ಬೆಲೆಯು ದುಬಾರಿಯಾಗಿದೆ.
ಹೂವಿನ ದರ ದುಬಾರಿ:
ವಿಜಯಪುರ ಪಟ್ಟಣದ ಮಾರುಕಟ್ಟೆಯಲ್ಲಿ 1 ಕೆ.ಜಿ. ಕನಕಾಂಬರ 1500 ರೂ, ಮಲ್ಲಿಗೆ ಮತ್ತು ಕಾಕಡ 1200 ರೂ., ತಾವರೆ ಒಂದಕ್ಕೆ 60 ರೂ, ಚೆಂಡು 80 ರಿಂದ 100, ಸೇವಂತಿ 300 ರೂ, ಸೇವಂತಿ ಕಲರ್ ಒಂದು ಕಟ್ 50 ರಿಂದ 60 ರೂ, ಬಾಳೆದಿಂಡು ಒಂದು ಜೊತೆ 60 ರೂ.ಗೆ ಮಾರಾಟವಾಗುತ್ತಿತ್ತು.
ಹಣ್ಣುಗಳ ಬೆಲೆ ಹೆಚ್ಚು:
1 ಕೆ.ಜಿ. ಬಾಳೆಹಣ್ಣು 80 ರೂ, ಚಿಕ್ಕ ಬಾಳೆ 127 ರೂ. ಸೇಬು 290 ರಿಂದ 250 ರೂ., ಸಪೋಟ 140, ಮೋಸಂಬಿ 85, ದಾಂಳಿಬೆ 290, ಮರದ ಸೇಬು 155 ರೂ, ಪೈನಾಪಲ್ 90 ರೂ. ಮಾವು 200, ಮಿಕ್ಸ್ ಹಣ್ಣು 250 ರೂ. ಮಾರಾಟವಾಗುತ್ತಿತ್ತು.
ಹೊಸ ಬಟ್ಟೆ ಖರೀದಿ ಜೋರು:
ವರಮಹಾಲಕ್ಷ್ಮೀಗೆ ಹೊಸ ಬಟ್ಟೆಯ ಜೊತೆಗೆ ಲಕ್ಷ್ಮಿ ಮುಖವಾಡವಿಟ್ಟು ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಮಹಿಳೆಯರು ನಾನಾ ಬಗೆಯ ಲಕ್ಷ್ಮೀ ಮುಖವಾಡ ಖರೀದಿಸುತ್ತಿದ್ದ ದೃಶ್ಯ ಕಂಡು ಬಂತು. ಕೆಲ ಮಹಿಳೆಯರು ಕೆಂಪು ಮತ್ತು ಹಸಿರು ಬಣ್ಣದ ಸೀರೆ, ಬಳೆ, ತೆಂಗಿನಕಾಯಿ ಕಳಶವಿಟ್ಟು ಪೂಜಿಸಲು ಮುಂದಾಗಿದ್ದು ಇದರ ಖರೀದಿಯೂ ಜೋರಾಗಿದೆ.
ಹೊಸ ವಾಹನ ಖರೀದಿ:
ಇನ್ನೂ ವರಮಹಾಲಕ್ಷೀ ಹಬ್ಬದ ದಿನದಂದು ಹೊಸ ವಾಹನ ಖರೀದಿಸಿದರೆ ಮನೆಗೆ ಲಕ್ಷ್ಮೀ ಬಂದಂತೆ ಅಂತ ಕೆಲವರು ಒಂದು ತಿಂಗಳ ಮುಂಚಿತವಾಗಿಯೇ ವಾಹನ ಖರೀದಿಸಿ ಶೋ ರೂಂಗಳ ಬಳಿ ವಾಹನ ಡೆಲಿವರಿಗೆ ಕಾಯುತ್ತಿದ್ದದ್ದು ಕಂಡುಬಂತು.
ಕಳೆದ ಬಾರಿ ಎಲ್ಲಾ ದಿನಸಿ ಬೆಲೆಗಳು ಕಡಿಮೆ ಇತ್ತು, ಈ ಬಾರಿ ದಿನಸಿ ಬೆಲೆ ಅಧಿಕವಾಗಿದೆ, ಇತ್ತ ಹಣ್ಣು ತರಕಾರಿ ಹೂವು ಸಹ ಹೆಚ್ಚು ಬೆಲೆಯಾಗಿದ್ದು, ಇದರಿಂದ ಸಣ್ಣ ಪ್ರಮಾಣದಲ್ಲಿ ಖರೀದಿಸಿ ಹಬ್ಬ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಗೃಹಿಣಿ ಭಾಗ್ಯಮ್ಮ ಹೇಳುತ್ತಾರೆ.
– ಕೊಮ್ಮಸಂದ್ರ ಸಿ ಪ್ರಕಾಶ್