ಪರಂಪರೆಯ ಕೊಂಡಿ ಕಳಚಿಕೊಂಡ ಸಾಹಿತ್ಯ ಶ್ರೇಷ್ಠವಾಗುವುದಕ್ಕೆ ಸಾಧ್ಯವಿಲ್ಲ !

ವಿಜಯ ದರ್ಪಣ ನ್ಯೂಸ್….

ಸಾಹಿತ್ಯ ವಿಮರ್ಶಗಳು ಸತ್ತ ಕಾಲಕ್ಕೆ….!!!

ನಾನು ಆಗಾಗ ಓದಿಕೊಳ್ಳುವ ಕವಿ ಘನಶ್ಯಾಮ್ ಅಗರವಾಲ್ ಅವರ ಕವಿತೆಯ ಸಾರಾಂಶ ಹೀಗಿದೆ:

ಈತ ರಾಜಕಾರಣಿ / 
ಈತ ಬಾಂಬ್ ಸೃಷ್ಟಿಸಿದ / 
ಈತನಿಗೆ ಹತ್ತು 
ಬಾರುಕೋಲಿನಿಂದ ಬಾರಿಸಿರಿ.

ಈತ ಧರ್ಮಗುರು / 
ಈತ ಬಾಂಬಿಗೆ ಧರ್ಮದ ಬಣ್ಣ ನೀಡಿದ/ 
ಈತನಿಗೆ ಇಪ್ಪತ್ತು 
ಬಾರುಕೋಲಿನಿಂದ ಬಾರಿಸಿರಿ.

ಈತ ಕವಿ ಲೇಖಕ/ 
ಈತನಿದ್ದೂ ಬಾಂಬ್ ಸೃಷ್ಟಿಯಾಯಿತು/ 
ಈತನಿಗೆ ನೂರು 
ಬಾರುಕೋಲಿನಿಂದ ಬಾರಿಸಿರಿ!

ಒಬ್ಬ ಸಾಹಿತಿ/ಲೇಖಕ/ಕಲಾವಿದನ ಸಾಮಾಜಿಕ ಜವಾಬ್ದಾರಿ ಮತ್ತು ಬದ್ಧತೆಯ ಪ್ರಶ್ನೆಗಳು ಹಿಂದಿಗಿಂತಲೂ ಈಗ ಹೆಚ್ಚು ಪ್ರಶ್ನಾರ್ಹವಾಗಿವೆ. ಸಾಮಾಜಿಕ ಹೊಣೆಗಾರಿಕೆಯ ಪರಿಕಲ್ಪನೆ ಮರೆಯಾಗಿ ಸ್ವಹಿತ, ಆತ್ಮರತಿ ಮೊದಲಾಗಿ ಬರೆದುದೆಲ್ಲವು ಸಾಹಿತ್ಯ ಎಂಬ ವಿಕ್ಷಿಪ್ತ ಕಾಲಘಟ್ಟದಲ್ಲಿ ನಾವಿದ್ದೇವೆ.ಇಂದು ನಿರ್ಮಾಣವಾಗುತ್ತಿರುವ ಸಾಹಿತ್ಯದ ಔಚಿತ್ಯ ಮತ್ತು ಪ್ರಸ್ತುತತೆಗಳ ನಡುವೆ ಜಾಗತಿಕವಾಗಿ ಶ್ರೇಷ್ಠ ಪರಂಪರೆ ಎನ್ನಿಸಿಕೊಂಡ ಕನ್ನಡ ಸಾಹಿತ್ಯ ಪರಂಪರೆಯ ನೆಲೆಗಳನ್ನು ಗುರುತಿಸದೆ ಸಾಗಿರುವುದು ನಿಜಕ್ಕೂ ವಿಷಾದನೀಯ.

ನವೋದಯದಿಂದಾಚೆ ನವ್ಯದಿಂದೀಚೆ ಸೃಷ್ಟಿಸಲ್ಪಟ್ಟ ಸಾಹಿತ್ಯ ಪರಂಪರೆಯೊಂದಿಗಿನ ಗಾಢ ನವ್ಯೋತ್ತರದ ಉದಯಕಾಲದಲ್ಲೂ ಸಾಹಿತ್ಯ  ಸಮಾಜ ಮತ್ತು ಸಾಹಿತ್ಯದ ಸಂಬಂಧವನ್ನು ಗಾಢಗೊಳಿಸುವ ಮತ್ತು ವ್ಯಕ್ತಿ ವೈಪರೀತ್ಯಗಳನ್ನು ಹೋಗಲಾಡಿಸುವ ಸಾಧನವಾಗಿಯೇ ಇತ್ತು. ಅದಕ್ಕೆ ಬಹುದೊಡ್ಡ ಕಾರಣ ಅಂದಿನ ಕಾಲಕ್ಕೆ ಸಾಹಿತ್ಯ ವಿಮರ್ಶೆಯ ಕುಲುಮೆಯಲ್ಲಿ ಬೆಂದು ಹದವಾಗಿ ಓದುಗನ ಕೈ ಸೇರುತ್ತಿದ್ದುದು. ಹಾಗೆಂದು ಇಂದಿನ ಕಾಲಕ್ಕೆ ವಿಮರ್ಶೆಯ ವಿಧಾನಗಳು ಬದಲಾಗಿವೆ ಮತ್ತು ಹೊಸ ಹೊಸ ವಿಚಾರಧಾರೆಗಳು, ಸಿದ್ಧಾಂತಗಳು, ಪರಿಭಾಷೆ ಮತ್ತು ಮಾನದಂಡಗಳು ಸೇರ್ಪಡೆಯಾಗಿವೆ ಎಂದೇನೂ ತಿಳಿಯಬೇಕಿಲ್ಲ. 

ಅಸಲಿಯತ್ತು ಬೇರೆಯೇ ಇದೆ. ಹಿರಿಯ ಸಾಹಿತಿಗಳು/ವಿಮರ್ಶಕರು ಎನಿಸಿಕೊಂಡವರಲ್ಲಿ ಕೆಲವರು ತಮ್ಮ ತನವನ್ನು  ಮರೆತು  ದೀರ್ಘ ವಿಸ್ಮೃತಿಗೆ ಜಾರಿ  ‘ಉತ್ಸವ’ ಮೂರ್ತಿಗಳಾಗಿ ಹಾರ, ಶಾಲು, ತುರಾಯಿ, ಬಿನ್ನವತ್ತಳೆಗಳಿಗೆ ಅಷ್ಟೇ ಸೀಮಿತರಾಗಿದ್ದಾರೆ. ಹೊಸಬರ ಸಾಹಿತ್ಯವನ್ನು ತಿದ್ದುವುದಿರಲಿ, ಓದುವ ಉಸಾಬರಿಗೂ ಇವರ್ಯಾರು ಹೋಗುತ್ತಿಲ್ಲ. ನಮಗೇಕೆ ಎಂಬಂತೆ ಎಡಕ್ಕೆ ಗಲಿ ಬೀಸಿದರೆ ಎಡಕ್ಕೆ, ಬಲಕ್ಕೆ ಗಾಳಿ ಬೀಸಿದರೆ ಬಲಕ್ಕೆ ‘ಗಾಳಿ ಬಂದ ಕಡೆ ತೂರಿಕೋ’  ಎಂಬ ಅನುಕೂಲ ಪಂಥಿಗಳಾಗಿ ಮಾರ್ಪಟ್ಟಿದ್ದಾರೆ. ಸಾಮಾಜಿಕ, ಬೌದ್ಧಿಕ, ರಾಜಕೀಯ ಮತ್ತು ಆರ್ಥಿಕ, ತಾತ್ವಿಕ ನಿಲುವುಗಳು, ಪರಿಕಲ್ಪನೆಗಳು, ತರ್ಕಗಳು ಕೃತಿಯನ್ನು ಒರೆಗೆ ಹಚ್ಚಿನೋಡಲು, ಬಗೆದು ನೋಡಲು ಇವರೆಲ್ಲರೂ ಒಬ್ಬ ಸಾಮಾನ್ಯ ಓದುಗನಿಗೆ ಯಾವ ರೀತಿಯಲ್ಲೂ ಸಹಾಯ ಮಾಡದೆ ಇರುವುದು ಈ ಕಾಲದ ಬಹುದೊಡ್ಡ ಸತ್ಯ.

ಸಾಹಿತ್ಯಾವಲೋಕನದ ರಸಜ್ಞತೆ, ಹೊಸದೃಷ್ಟಿ, ಒಳನೋಟ, ಸೂಕ್ಷಚಿಂತನ, ತುಲನಾತ್ಮಕ ನೋಟ ಕಾಣಸಿಗುವುದೇ ವಿಮರ್ಶೆಯಲ್ಲಿ. ವಯಕ್ತಿಕ ಹಾಗು ಪ್ರಾತಿಭ ನೆಲೆಗಳಲ್ಲಿ ಕವಿ ಓದುಗನನ್ನು ತಲುಪಲಾಗದ ಹತಾಷ ಸ್ಥಿತಿಗೆ ತಲುಪಿರುವುದು ಸ್ಪಷ್ಟ. 

ಕನ್ನಡ ಕಾವ್ಯ ಪರಂಪರೆಯ ಅನುಸಂಧಾನವಾಗಬೇಕಾದರೆ ಅಧ್ಯನವೂ ಆಗಬೇಕು ಎಂಬುದು ಸೂರ್ಯ-ಚಂದ್ರರಷ್ಟೇ ಸತ್ಯ. ಹಿಂದಣ ಹಾದಿಯ ಅರಿಯದೆ ಅಡಿಯಿಟ್ಟ ಮುಂದಣ ಹೆಜ್ಜೆಗಳು ಧೃಢವಾಗಲಾರವು. ಕಾವ್ಯಾಧ್ಯಯನ ಕಾವ್ಯಾನುಸಂಧಾನ ಪರಸ್ಪರ ಪ್ರೇರಕ ಹಾಗು ಪೂರಕ.ಆದರೆ ಈಗಿನ ಬಹುತೇಕ ಸಾಹಿತ್ಯ ಅನಧ್ಯಯನ ನಿರತರಿಂದ ನಿರ್ಮಾಣವಾಗಿಟ್ಟಿರುವುದು ಪರಂಪರೆಯೊಂದಿಗಿನ ಕೊಂಡಿ ಕಳಚಿರುವುನ್ನು ನಿಚ್ಚಳವಾಗಿ ತೋರಿಸುತ್ತಿದೆ.

ಇಂತಹ ಸಾಹಿತ್ಯ ಒಂದು ನಿಶ್ಚಿತ ಧೋರಣೆಯನ್ನು, ಮನಸ್ಥಿತಿಯನ್ನು ಗುರುತಿಸಲು ಸಾಧ್ಯವಾಗದ  ಅಂತಹುದೊಂದು ನೆಲೆಗಟ್ಟು ಯಾವುದೇ ಹಣೆಪಟ್ಟಿಯಿಲ್ಲದ – ಸ್ವಾಯತ್ತತೆಯನ್ನ, ಮುಕ್ತತೆಯ ಅರಾಜಕತೆಯನ್ನ, ಅತೀ ಸ್ವಾತಂತ್ರ್ಯದ ಅರಾಜಕತೆಯನ್ನು ತಂದೊಡ್ಡಿದೆ.ಇದೆಲ್ಲವೂ ಚರ್ಚಾಸ್ಪದ ವಿಷಯಗಳೇ. ಕಾಲಘಟ್ಟದ ವಿಭಜನಾ ಕ್ರಮವನ್ನು ಮೀರಿ, ಮನೋಧರ್ಮದ ಹಣೆಪಟ್ಟಿಯನ್ನು ಲಗತ್ತಿಸಲು ಸೋತು ಅಂತಿಮವಾಗಿ ಈ ವಿಮರ್ಶಾ ಶೋಧ ವರ್ತಮಾನದಲ್ಲಿ ಒಂದು ಕ್ಷಣ ನಿಂತು ಬಿಟ್ಟಿದೆ ಮತ್ತೆ ಇದನ್ನು ಚಲನಶೀಲವಾಗಿಸಲು ನಾವೆಲ್ಲ ಪಣ ತೊಡಬೇಕಿದೆ. ಏನಂತೀರಿ?

ಮೇಲೋಗರ : ಈಗ್ಗೆ ಕೆಲ ದಿನಗಳ ಹಿಂದೆ ಉದಯೋನ್ಮುಖ ಲೇಖಕಿಯೊಬ್ಬರು ತಮ್ಮ ಕವಿತೆ ಮತ್ತು ಕವಿತೆಯ ವಿಮರ್ಶೆ ಕನ್ನಡದ ಹೆಸರಾಂತ ಪತ್ರಿಕೆಯಲ್ಲಿ ಪ್ರಕಟವಾಗಿರುವುದಾಗಿಯೂ ಮತ್ತು ನಾನದನ್ನು ಓದಿ ಅಭಿಮತಿಸಬೇಕು ಎಂಬುದಾಗಿಯೂ ಕೇಳಿಕೊಂಡರು. ಸಾಹಿತ್ಯ ವ್ಯಸನಿಯಾದ ನಾನು ತಕ್ಷಣ ಆ ಪತ್ರಿಕೆಯ ಆನ್ ಲೈನ್ ಆವೃತ್ತಿಯನ್ನು ಹುಡುಕಿ ತೆಗೆದು ಓದಿ ಅಲ್ಲಿ ನನ್ನ ಓದಿಗೆ ಸಿಕ್ಕ ಅತಿರಂಜಿತ ಮತ್ತು ಕೃತಕ ಎಣಿಸಿದ ವಿಮರ್ಶೆಯ ಬಗ್ಗೆ ಕೇಳಬೇಕೆಂದುಕೊಂಡು ಫೋನಾಯಿಸಿ “ನಿಮ್ಮ ಕವಿತೆಯ ಬಗ್ಗೆ ಒಳ್ಳೆಯ ವಿಮರ್ಶೆ ವ್ಯಕ್ತವಾಗಿದೆ ಅಭಿನಂದನೆಗಳು, ಆದಾಗ್ಯ ಒಬ ಸಾಮಾನ್ಯ ಓದುಗನಾಗಿ ಈ ವಿಮರ್ಶೆಗೆ ಹೊರತಾದ ನನ್ನ ನಿಲುವುಗಳಿವೆ” ಎಂದೆ, ಆಗ ಆಕೆ ಮಧ್ಯದಲ್ಲಿಯೇ ನನ್ನ ತಡೆದು ‘ಅಯ್ಯೋ ಸರ್ ಅದು ನಾನೆ ಬರೆದದ್ದು, ವಿಮರ್ಶಕರು  ನಿಮ್ಮದೊಂದು ಪದ್ಯಕ್ಕೆ ನೀವೇ ವಿಮರ್ಶೆ ಬರೆದು ಕಳಿಸಿಕೊಡಿ ಅಂದಿದ್ದರು ಹಾಗಾಗಿ ….ಈ ವಿಮರ್ಶೆ ಗಿಮರ್ಶೆ ಎಲ್ಲ ನನಗರ್ಥವಾಗೋಲ್ಲ …..ಚನ್ನಗಿಲ್ವಾ ಸರ್” ಎಂದಾಗ ಥೇಟ್ ಇಂಗು ತಿಂದ ಮಂಗನಂತಾಗಿದ್ದೆ. 

✍🏻ರಾಜ್ ಆಚಾರ್ಯ

     ೧೪-೦೮-೨೦೨೪