ಡಿ. ದೇವರಾಜ ಅರಸು ಅವರ ಜಯಂತಿಗೆ ಅಗತ್ಯ ಸಿದ್ಧತೆ ಕೈಗೊಳ್ಳಿ: ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ್

ವಿಜಯ ದರ್ಪಣ ನ್ಯೂಸ್…

ಡಿ. ದೇವರಾಜ ಅರಸು ಅವರ ಜಯಂತಿಗೆ ಅಗತ್ಯ ಸಿದ್ಧತೆ ಕೈಗೊಳ್ಳಿ: ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ್

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಆಗಸ್ಟ್ 09,2024 :- ಆಗಸ್ಟ್ 20 ರಂದು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 109ನೇ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ ಅವರು ಸೂಚಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ ಡಿ. ದೇವರಾಜ ಅರಸು ಅವರ 109 ನೇ ಜಯಂತಿ ಆಚರಣೆಯ ಪ್ರಯುಕ್ತ ಕರೆಯಲಾಗಿದ್ದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಡಿ. ದೇವರಾಜು ಅರಸು ಅವರ 109 ನೇ ಜಯಂತಿಯನ್ನು ಜಿಲ್ಲಾಮಟ್ಟದಲ್ಲಿ ದೇವನಹಳ್ಳಿ ಟೌನ್ ಲ್ಲಿರುವ ಡಿ. ದೇವರಾಜು ಅರಸು ಭವನದಲ್ಲಿ ಆಚರಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆಗಳ ಮುದ್ರಿಸಿ ಎಲ್ಲಾ ಗಣ್ಯರನ್ನು ಆಹ್ವಾನಿಸಬೇಕು, ಕಾರ್ಯಕ್ರಮದ ವೇದಿಕೆ ಅಚ್ಚುಕಟ್ಟಾಗಿ ನಿರ್ಮಿಸಿ, ವಿಶೇಷ ಉಪನ್ಯಾಸ ನೀಡಲು ಪರಿಣಿತರನ್ನು ಕರೆಸಿ, ಕಲಾ ತಂಡಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಏರ್ಪಡಿಸಿ. ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿ. ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕ್ರಮ ವಹಿಸಿ, ಉಪಹಾರ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಕೈಗೊಂಡು ಕಾರ್ಯಕ್ರಮ ಅರ್ಥ ಪೂರ್ಣವಾಗಿ ಆಚರಿಸಲು ಕ್ರಮ ವಹಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಎನ್ ಅನುರಾಧ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ನಿರುಪಮಾ ಸಿ ಮೌಳಿ ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.

&&&&&&&&&&&&&&&&&&&&&&&&&&

ಹಿಂದುಳಿದ ವರ್ಗಗಳ ನಿಗಮಗಳ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಗಸ್ಟ್ 2024 :- 2024-25ನೇ ಸಾಲಿಗೆ ಹಿಂದುಳಿದ ವರ್ಗಗಳ ನಿಗಮಗಳ ವಿವಿಧ ಯೋಜನೆಗಳಡಿ ಸೌಲಭ್ಯ ಒದಗಿಸಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ(ನಿ), ಕರ್ನಾಟಕ ಒಕ್ಕಲಿಗ ಸಮುದಾಯಗಳ ಅಭಿವೃದ್ಧಿ ನಿಗಮ(ನಿ), ಕರ್ನಾಟಕ ವೀರಶೈವ ಲಿಂಗಾಯತ ಸಮುದಾಯ ಅಭಿವೃದ್ಧಿ ನಿಗಮ(ನಿ), ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ(ನಿ), ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ(ನಿ), ಕರ್ನಾಟಕ ಮರಾಠ ಸಮುದಾಯ ಅಭಿವೃದ್ಧಿ ನಿಗಮ(ನಿ), ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ(ನಿ), ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ(ನಿ), ಕರ್ನಾಟಕ ಅಲೆಮಾರಿ/ಅರೆಅಲೆಮಾರಿ ಅಭಿವೃದ್ಧಿ ನಿಗಮ(ನಿ), ಕರ್ನಾಟಕ ವಿಶ್ವಕರ್ಮ ಸಮುದಾಗಳ ಅಭಿವೃದ್ಧಿ ನಿಗಮ(ನಿ), ಕರ್ನಾಟಕ ಕಾಡುಗೊಲ್ಲ ಅಭಿವೃದ್ಧಿ ನಿಗಮ(ನಿ), ಈ ನಿಗಮಗಳ ಆಯಾ ಸಮುದಾಯದವರು ಯೋಜನವಾರು ಸೌಲಭ್ಯ ಕೋರಿ ಆನ್ ಲೈನ್ ಮೂಲಕ ಸೇವಾ ಸಿಂಧು ಪೋರ್ಟಲ್ ನಲ್ಲಿ https://sevasindhu.karnataka.gov.in ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಸೇವಾ ಕೇಂದ್ರಗಳಲ್ಲಿಅರ್ಜಿ ಸಲ್ಲಿಸಬಹುದಾಗಿರುತ್ತದೆ.
ನಿಗಮದ ವಿವಿಧ ಯೋಜನೆಗಳು- ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಸಾಲ ಯೋಜನೆ, ಸ್ವಾವಲಂಭಿ ಸಾರಥಿ ಯೋಜನೆ, ಸ್ವಯಂ ಉದ್ಯೋಗ ಸಾಲ ಯೋಜನೆ (ವಾಣಿಜ್ಯ ಬ್ಯಾಂಕ್ ಗಳ ಸಹಯೋಗದೊಂದಿಗೆ), ಸ್ವಾತಂತ್ರ್ಯ ಅಮೃತ ಮಹೋತ್ಸವ ಮುನ್ನಡೆ ಯೋಜನೆ ಕೌಶಲ್ಯಾಭಿವೃದ್ಧಿ ತರಬೇತಿ, ಹೊಲಿಗೆ ಯಂತ್ರ ವಿತರಣೆ ಯೋಜನೆ(ಡಿ.ದೇವರಾಜ ಅರಸು ನಿಗಮದ ಫಲಾಪೇಕ್ಷಿಗಳಿಗೆ ಮಾತ್ರ), ಮರಾಠ ಮಿಲಿಟರಿ ಹೋಟೆಲ್ ಯೋಜನೆ(ಮರಾಠ ಸಮುದಾಯದವರಿಗೆ ಮಾತ್ರ), ಭೋಜನಾಲಯ ಕೇಂದ್ರ(ವೀರಶೈವ ಲಿಂಗಾಯತ ಸಮುದಾಯದವರಿಗೆ ಮಾತ್ರ), ವಿಭೂತಿ ನಿರ್ಮಾಣ ಘಟಕ(ವೀರಶೈವ ಲಿಂಗಾಯತ ಸಮುದಾಯದವರಿಗೆ ಮಾತ್ರ), ಪಂಚವೃತ್ತಿ ಸಾಲ ಯೋಜನೆ (ವಿಶ್ವಕರ್ಮ ಸಮುದಾಯದವರಿಗೆ ಮಾತ್ರ)

ಸಾಮಾನ್ಯ ಅರ್ಹತೆಗಳು:-
ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಗೆ ಕಡ್ಡಾಯವಾಗಿ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯನ್ನು ಜೋಡಣೆ ಮಾಡಿರುಬೇಕು, ಅರ್ಜಿದಾರರು ನಿಗಮವಾರು ಆಯಾ ಸಮುದಾಯದ ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು, ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮಾಂತರ ಪ್ರದೇಶದವರಿಗೆ ರೂ. 98,000/- ಗಳಿಗಿಂತ ಹಾಗೂ ಪಟ್ಟಣ ಪ್ರದೇಶದವರಿಗೆ ರೂ. 1,20,000/- ಗಳಿಗಿಂತ ಕಡಿಮೆ ಇರಬೇಕು, ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಸೌಲಭ್ಯ ಪಡೆಯುವ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ವರಮಾನವು ರೂ. 3.50 ಲಕ್ಷಗಳ ಮಿತಿಯಲ್ಲಿರುಬೇಕು. ಹಾಗೂ ವಿದೇಶಿ ವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕಾಗಿ ಸೌಲಭ್ಯ ಪಡೆಯುವ ವಿದ್ಯಾರ್ಥಿಗಳ ಕುಟುಂಬ ವಾರ್ಷಿಕ ವರಮಾನ 8.00 ಲಕ್ಷಗಳ ಮಿತಿಯಲ್ಲಿರಬೇಕು, ಅರ್ಜಿದಾರರ ವಯೋಮಿತಿ 18-55 ವರ್ಷಗಳ ಮಿತಿಯಲ್ಲಿರಬೇಕು. (ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಹೊಲಿಗೆ ಯಂತ್ರ ವಿತರಣೆ ಯೋಜನೆ, ಸ್ವಯಂ ಉದ್ಯೋಗ ಸಾಲ ಯೋಜನೆ (ವಾಣಿಜ್ಯ ಬ್ಯಾಂಕ್ ಗಳ ಸಹಯೋಗದೊಂದಿಗೆ), ಸ್ವಾವಲಂಭಿ ಸಾರಥಿ ಯೋಜನೆಯಡಿ ಅರ್ಜಿದಾರರ ವಯೋಮಿತಿ 21 -45 ವರ್ಷಗಳ ಒಳಗಿರಬೇಕು, ಈ ಹಿಂದೆ ನಿಗಮದ ಯಾವುದಾದರೂ ಯೋಜನೆ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಂದು ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ವಿಶೇಷ ಸೂಚನೆ:-
2023-24ನೇ ಸಾಲಿನಲ್ಲಿ ನಿಗಮಗಳ ವಿವಿಧ ಯೋಜನೆಗಳಡಿ ಅರ್ಜಿ ಸಲ್ಲಿಸಿ, ಸೌಲಭ್ಯ ಪಡೆಯದೆ ಇರುವ ಫಲಾಪೇಕ್ಷಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯತೆ ಇರುವುದಿಲ್ಲ.ಹಿಂದಿನ ವರ್ಷದ ಅರ್ಜಿಗಳನ್ನು ಈ ವರ್ಷಕ್ಕೆ ಪರಿಗಣಿಸಲಾಗುತ್ತದೆ.

ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ: ಆಯಾ ನಿಗಮಗಳ ವೆಬ್ ಸೈಟ್ ಗಳನ್ನು ಸಂಪರ್ಕಿಸುವುದು.(bcwdcorporations.karnataka.gov.in) ಅಥವಾ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಛೇರಿ ದೂ.ಸಂ:080-29605761 ಇಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ(ನಿ), ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.