ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಶೇ.80ರಷ್ಟು ಉದ್ಯೋಗ ನೀಡಲು ಮನವಿ
ವಿಜಯ ದರ್ಪಣ ನ್ಯೂಸ್…
ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಶೇ.80ರಷ್ಟು ಉದ್ಯೋಗ ನೀಡಲು ಮನವಿ
ದೊಡ್ಡಬಳ್ಳಾಪುರ ಆಗಸ್ಟ್ 02 :ಕನ್ನಡಿಗರಿಗೆ ಶೇ.80ರಷ್ಟು ಉದ್ಯೋಗ ನೀಡುವಂತೆ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ತಾಲ್ಲೂಕಿಗೆ ಸಮೀಪದ ಫಾಕ್ಲಾನ್ ಐಫೋನ್ ತಯಾರಿಕಾ ಕಂಪನಿಯ ಸ್ಥಳೀಯ ಮುಖ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ವೇದಿಕೆಯ ಮುಖಂಡ ಎ.ನಂಜಪ್ಪ ಮಾತನಾಡಿ, ‘ರಾಜ್ಯದಲ್ಲಿನ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಪಡೆದು ಸ್ಥಾಪನೆಯಾಗುವ
ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡದೆ ಕೈಗಾರಿಕೆಗಳಲ್ಲಿ ಕನ್ನಡಿಗರು ಎರಡನೇ ದರ್ಜೆ ನೌಕರಿಯನ್ನು ಪಡೆಯುವಂತಾಗಿರುವುದು ಖಂಡನೀಯ. ಈ ತಾರತಮ್ಯವನ್ನು ಸರಿಪಡಿಸುವ ಸಲುವಾಗಿ ಸರ್ಕಾರ ಕರ್ನಾಟಕದಲ್ಲಿ ಸ್ಥಾಪಿತವಾಗುವ ಖಾಸಗಿ ಕಾರ್ಖಾನೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಶೇ.80ರಷ್ಟು ಉದ್ಯೋಗ ಮೀಸಲು ಪ್ರಸ್ತಾವನೆಯನ್ನು ಮುನ್ನೆಲೆಗೆ ತಂದಿದ್ದು ಅದು ಕಟ್ಟುನಿಟ್ಟಾಗಿ ಜಾರಿಯಾಗಬೇಕು’ ಎಂದು ಹೇಳಿದರು.
ತಾಲ್ಲೂಕಿನಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಯಾಗುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಕೈಗಾರಿಕೆಗಳು ಡಾ.ಸರೋಜಿನಿ ಮಹಿಷಿ ವರದಿಯಂತೆ ಕನ್ನಡಿಗರಿಗೆ ಉದ್ಯೋಗ ನೀಡುವಂತಾಗಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ವೇದಿಕೆಯ ಮುಖಂಡರಾದ ನಯಾಜ್ ಖಾನ್, ಫಣೀಶ್, ಅಜಯ್, ದರ್ಶನ್, ಪೀರ್ ಪಾಷ, ಚರಣ್ ರಾಜ್, ನವೀನ್, ಸೋಮರಾಜು ಮುಂತಾದವರು ಹಾಜರಿದ್ದರು.