ಭಾರತ ಸರ್ಕಾರದ ಅರ್ಥ ವ್ಯವಸ್ಥೆಯ ಕೆಲವು ಕುತೂಹಲಕಾರಿ ಸರಳ ಅಂಕಿ ಅಂಶಗಳು……

ವಿಜಯ ದರ್ಪಣ ನ್ಯೂಸ್…

ಭಾರತ ಸರ್ಕಾರದ ಅರ್ಥ ವ್ಯವಸ್ಥೆಯ ಕೆಲವು ಕುತೂಹಲಕಾರಿ ಸರಳ ಅಂಕಿ ಅಂಶಗಳು……

ಭಾರತದ ಒಟ್ಟು ವಿಸ್ತೀರ್ಣ ಸುಮಾರು 33 ಲಕ್ಷ ಚದರ ಕಿಲೋ ಮೀಟರ್ ಗಳು, ಭಾರತದ ಒಟ್ಟು ಜನಸಂಖ್ಯೆ ಸುಮಾರು 143 ಕೋಟಿ, ಭಾರತದ ಒಟ್ಟು ಬಜೆಟ್ ಗಾತ್ರ ಸುಮಾರು 49 ಲಕ್ಷ ಕೋಟಿ, ಭಾರತದ ಒಟ್ಟು ಆದಾಯ ಸುಮಾರು 32 ಲಕ್ಷ ಕೋಟಿ, ಭಾರತದ ಒಟ್ಟು ಸಾಲ 182 ಲಕ್ಷ ಕೋಟಿ,
ಭಾರತ ಕಟ್ಟುತ್ತಿರುವ ಸಾಲದ ಮೇಲಿನ ಬಡ್ಡಿ ಸುಮಾರು 11.5 ಲಕ್ಷ ಕೋಟಿ,
ಭಾರತದ ಒಟ್ಟು ಆಂತರಿಕ ಉತ್ಪನ್ನ ಸುಮಾರು 298 ಲಕ್ಷ ಕೋಟಿ…….

ಇದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾಗ ಗಮನಿಸಿದ ಕುತೂಹಲಕರ ಅಂಶವನ್ನು, ನಮ್ಮ ದೇಶದ ಜನರ ಆರ್ಥಿಕ ಪರಿಸ್ಥಿತಿ ತಿಳಿಯಲು ಸಹಾಯ ಆಗಬಹುದು ಎಂದು ಇಲ್ಲಿ ಬರೆಯುತ್ತಿದ್ದೇನೆ.

ಇದರ ಆಧಾರದ ಮೇಲೆ ನಾವುಗಳು ಬಡವರೋ, ಶ್ರೀಮಂತರೋ ನೀವೇ ನಿರ್ಧರಿಸಿ. ಅಲ್ಲದೆ ಭಾರತದಲ್ಲಿ ಬಹುಶಃ ಲೆಕ್ಕಕ್ಕೆ ಸಿಗದ 3 – 4 ಕೋಟಿಗೂ ಹೆಚ್ಚು ಜನ ಇದ್ದಾರೆ ಮತ್ತು ಅಂಬಾನಿ, ಅದಾನಿ, ಟಾಟಾ, ಬಿರ್ಲಾ, ಅಜೀಂ ಪ್ರೇಮ್ಜಿ ಮುಂತಾದ ಬಹುದೊಡ್ಡ ಶ್ರೀಮಂತರು ಮತ್ತು ಊಟಕ್ಕೂ ಪರದಾಡುವ ಅನೇಕ ಬಡವರ ನಡುವಿನ ಅಂತರ ತುಂಬಾ ಇದೆ.

ಸುಮ್ಮನೆ ಭ್ರಮಾಲೋಕದಲ್ಲಿ ಯಾರೋ ಅಂಕಣಕಾರರು, ಭಾಷಣಕಾರರು, ಪ್ರವಚನಕಾರರುಗಳು ಹೇಳುವುದು ಭಾರತ ವಿಶ್ವದ ಬಲಿಷ್ಠ ದೇಶ ಎಂದು.

ವೈಯಕ್ತಿಕವಾಗಿ ಹೇಳಬೇಕೆಂದರೆ ಈ ಅಂಕಿಅಂಶಗಳಿಗಿಂತ ಹೆಚ್ಚಿನ ಬಡತನ ಭಾರತದಲ್ಲಿ ಇದೆ.

ಈ ಅಂಶಗಳನ್ನು ನಾವು ಸರಿಯಾಗಿ ಅರ್ಥಮಾಡಿಕೊಂಡರೆ ನಾವು ಸಾಗಬೇಕಾದ ಹಾದಿ, ನಮ್ಮ ಆದ್ಯತಾ ವಲಯಗಳು, ಅದಕ್ಕಾಗಿ ನಾವು ಪಡಬೇಕಾಗಿರುವ ಶ್ರಮ, ನಮ್ಮ ಜವಾಬ್ದಾರಿ ಎಲ್ಲವೂ ಸ್ಪಷ್ಟವಾಗುತ್ತದೆ.

ಚುನಾವಣೆ ಗೆಲ್ಲುವುದೇ ಒಂದು ದೊಡ್ಡ ಸಾಧನೆ ಎಂದು ನಮ್ಮ ರಾಜಕೀಯ ಪಕ್ಷಗಳು ಭಾವಿಸುವುದಾದರೆ ನಮ್ಮ ನಿಜವಾದ ಅಭಿವೃದ್ಧಿ ಕನಸೇ ಆಗಬಹುದು.

ಯಾರೋ ಎಲ್ಲಿಂದಲೋ ನೀಡುವ ಅಂಕಿ ಅಂಶಗಳಿಗಿಂತ ನಾವು ನಮ್ಮ ಸುತ್ತಮುತ್ತ ಗಮನಿಸುವ ಸಾಮಾಜಿಕ ಆರ್ಥಿಕ ಪರಿಸ್ಥಿತಿಯೇ ನಿಜವಾದ ವರದಿಗಳು. ಆ ಪ್ರಕಾರ ಎಷ್ಟೋ ಜನ ಇನ್ನೂ ಅಪೌಷ್ಟಿಕತೆಯಿಂದ ನರಳುತ್ತಿರುವುದನ್ನು ಕಾಣುತ್ತೇವೆ. ಏಕೆಂದರೆ ಅವರು ಇಷ್ಟಪಟ್ಟ ಊಟ, ಬಟ್ಟೆ, ವಸತಿ ಪೂರೈಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆರೋಗ್ಯ ಮತ್ತು ಶಿಕ್ಷಣದ ಗುಣಮಟ್ಟವನ್ನು ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರ ಜೀವನ ಮಟ್ಟದಲ್ಲಿ ನೋಡಿದಾಗ ತುಂಬಾ ಕಳಪೆಯಾಗಿದೆ. ಭ್ರಷ್ಟಾಚಾರ, ಜಾತಿ ಪದ್ಧತಿ, ನಾಗರೀಕ ಪ್ರಜ್ಞೆ ಸಹ ಸಮಾಧಾನಕರ ಮಟ್ಟದಲ್ಲಿಲ್ಲ. ಒಟ್ಟಿನಲ್ಲಿ ಸಾಕಷ್ಟು ಬದಲಾವಣೆಗಳ ಅವಶ್ಯಕತೆ ಇದೆ…..

ವಿಶ್ವದಲ್ಲಿ ನಮಗಿಂತ ಹಿಂದುಳಿದ ಅನೇಕ ದೇಶಗಳು ಇವೆ, ಹಾಗೆಯೇ ನಮಗಿಂತ ಬಹಳಷ್ಟು ಮುಂದುವರಿದ ದೇಶಗಳು ಇವೆ, ಹೋಲಿಕೆ ಮಾಡಿಕೊಂಡು ಖುಷಿಪಡಬಹುದು, ಸಮಾಧಾನವಾಗಬಹುದು, ಅಥವಾ ಬೇಸರವೂ ಆಗಬಹುದು. ಆದರೆ ಅದೆಲ್ಲವನ್ನು ಮೀರಿ ನಮ್ಮನ್ನು ನಾವು ಉತ್ತಮಪಡಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಬೇಕು…..

ಸಣ್ಣ ಪ್ರಮಾಣದಲ್ಲೇ ಆದರೂ ನಾವು ಬದಲಾವಣೆಯತ್ತ ಸಾಗೋಣ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.


ವಿವೇಕಾನಂದ. ಎಚ್. ಕೆ.
9844013068…….