ರಸ್ತೆ ಅಪಘಾತ ತಗ್ಗಿಸಲು ಕ್ರಮ: ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್

ವಿಜಯ ದರ್ಪಣ ನ್ಯೂಸ್….

ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆ

1033′ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ತುರ್ತು ಆಂಬುಲೆನ್ಸ್ ಸೇವೆ ಪಡೆಯಿರಿ

ರಸ್ತೆ ಅಪಘಾತ ತಗ್ಗಿಸಲು ಕ್ರಮ: ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜುಲೈ 25 :- ಜಿಲ್ಲೆಯಲ್ಲಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವ ಸ್ಪಾಟ್ ಗಳನ್ನು ಗುರುತಿಸಿ ಅಪಘಾತಗಳನ್ನು ತಪ್ಪಿಸಲು ವೈಜ್ಞಾನಿಕವಾಗಿ ರೂಪುರೇಷೆ ಸಿದ್ಧಪಡಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ಅವರು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿ ಮತ್ತು ಇತರೆ ಎಲ್ಲೆಲ್ಲಿ ಅಪಘಾತಗಳು ಸಂಭವಿಸುತ್ತಿವೆ ಎಂಬ ಅಂಕಿ ಅಂಶಗಳನ್ನು ಸಂಗ್ರಹಿಸಿ ಪದೇ ಪದೇ ಅಪಘಾತವಾಗಿದ್ದಲ್ಲಿ ಆ ಸ್ಥಳವನ್ನು ಜಂಟಿ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿ ವೈಜ್ಞಾನಿಕವಾಗಿ ವರದಿ ಸಿದ್ಧಪಡಿಸಿ ಅಪಘಾತ ವಲಯದಿಂದ ಮುಕ್ತವಾಗುವಂತೆ ಕ್ರಮ ಕೈಗೊಳ್ಳಬೇಕು.

ವೇಗದ ಚಾಲನೆಗೆ ಕಡಿವಾಣ ಹಾಕಿ.

ಜಿಲ್ಲೆಯಲ್ಲಿ ಹೊಸದಾಗಿ ನೆಲಮಂಗಲದ ಡಾಬಸ್ ಪೇಟೆಯಿಂದ ಹೊಸಕೋಟೆ ವರೆಗೂ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಚೆನೈ ಎಕ್ಸ್ಪ್ರೆಸ್ ಹೈವೇ ಕಾಮಗಾರಿ ನಡೆಯುತ್ತಿದೆ. ಈ ರಸ್ತೆಗಳಲ್ಲಿ ವಾಹನಗಳು ನಿಗದಿತ ವೇಗಕ್ಕಿಂತ ಹೆಚ್ಚು ವೇಗವಾಗಿ ಚಲಿಸುವುದಕ್ಕೆ ಕಡಿವಾಣ ಹಾಕಬೇಕು. ವೇಗವಾಗಿ ಚಲಿಸುವಾಗ ನಿಯಂತ್ರಣ ತಪ್ಪಿ ಅಪಘಾತಗಳು ಉಂಟಾಗುವ ಸಂಭವ ಹೆಚ್ಚಾಗಿದ್ದು, ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳು ಅಪಘಾತ ತಡೆಗೆ ಕ್ರಮ ವಹಿಸಬೇಕು ಎಂದರು.

ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ರಸ್ತೆ ದಾಟುವ ಪ್ರದೇಶಗಳಲ್ಲಿ ಸೂಚನಾ ಫಲಕ ಅಳವಡಿಸುವ ಜೊತೆಗೆ ಜಾಗೃತಿ ಮೂಡಿಸಬೇಕು.
ರಾಷ್ಟ್ರೀಯ ಹೆದ್ದಾರಿ 648 ರಲ್ಲಿ ಕೆಲವು ಕಡೆ ಸರ್ವಿಸ್ ರೋಡ್ ಹಾಗೂ ಕೆಳ ಸೇತುವೆ(ಅಂಡರ್ ಪಾಸ್) ಬೇಕೆಂದು ಸಾರ್ವಜನಿಕರು ಮನವಿ ಸಲ್ಲಿಸಿದ್ದಾರೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಕಡ್ಡಾಯವಾಗಿ ಅವಶ್ಯಕತೆ ಇರುವ ರಸ್ತೆ ಭಾಗಗಳಲ್ಲಿ ಸೂಚನಾ ಫಲಕಗಳು(ಸೈನ್ ಬೋರ್ಡ್), ಹಂಸ್ ಗಳು, ರಸ್ತೆ ದುರಸ್ತಿ ಕಾಮಗಾರಿಗಳ ಸ್ಥಳಗಳಲ್ಲಿ ಸೈನ್ ಬೋರ್ಡ್ ಅಳವಡಿಕೆ, ಇತರೆ ಇಲಾಖೆಗಳು ನಡೆಸುವ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳುವಾಗ, ಗುಂಡಿಗಳನ್ನು ತೆಗೆದಾಗ ಅಲ್ಲಿ ಕಡ್ಡಾಯವಾಗಿ ಸುತ್ತಲೂ ಸೂಚನಾ ಫಲಕಗಳನ್ನು ಅಳವಡಿಸಿ ಬ್ಯಾರಿಕೇಡ್ ಅಳವಡಿಸಬೇಕು.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಟೋಲ್ ಫ್ರೀ “1033” ಸಹಾಯವಾಣಿ ಸಂಖ್ಯೆಯನ್ನು
ತುರ್ತು/ತುರ್ತು ಅಲ್ಲದ ಸಮಸ್ಯೆಗಳ ಸಂಭವವಿದ್ದಲ್ಲಿ 24×7 ಸೇವೆಯನ್ನು ನೀಡಲು ಪ್ರಾರಂಭಿಸಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳು ಸಂಭವಿಸಿದರೆ ಕೂಡಲೇ ‘1033’ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ತುರ್ತು ಅಂಬುಲೆನ್ಸ್ ಸೇವೆಯನ್ನು ಒದಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ತಿಳಿಸಿದ್ದಾರೆ.

ರಸ್ತೆಗಳಲ್ಲಿ ಅಪಘಾತ ಸಂಭವಿಸಿ ಪ್ರಾಣಾಪಾಯದಿಂದ ಪಾರಾಗುವ ಸಂಭವ ಹೆಚ್ಚಿದ್ದಾಗ ಅಮೂಲ್ಯ ಸಮಯ(ಗೋಲ್ಡನ್ ಅವರ್ಸ್) ಬಹಳ ಪ್ರಾಮುಖ್ಯತೆ ವಹಿಸುತ್ತದೆ. ಇಂತಹ ಸಂದರ್ಭದಲ್ಲಿ ಮಾಹಿತಿ ಬಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ ಸಮಯ ವ್ಯರ್ಥಮಾಡದೆ ಕಾರ್ಯಪ್ರವೃತ್ತರಾಗಿ ಅಪಘಾತವಾದ ವ್ಯಕ್ತಿಯನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿರುತ್ತದೆ ಎಂದು ಸಿ.ಕೆ ಬಾಬಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿ ಕೆ ಬಾ ಬಾ ಹೇಳಿದರು.

ಸಭೆಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು, ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.