ಸ್ವಾತಂತ್ರ್ಯ ಸೇನಾನಿ ಚಂದ್ರಶೇಖರ್ ಆಜಾದ್ ಅವರ ಜನುಮ ದಿನದಂದು ಅವರಿಗೆ ನನ್ನ ಶತ ಶತ ನಮನಗಳು.
ವಿಜಯ ದರ್ಪಣ ನ್ಯೂಸ್…
ಅಪ್ರತಿಮ ಸ್ವಾತಂತ್ರ್ಯ ಸೇನಾನಿ ಚಂದ್ರಶೇಖರ್ ಆಜಾದ್ ಅವರ ಜನುಮ ದಿನದಂದು ಅವರಿಗೆ ನನ್ನ ಶತ ಶತ ನಮನಗಳು. ಅವರ ಕುರಿತು ಒಂದಿಷ್ಟು ಮಾಹಿತಿ..
ಚಂದ್ರಶೇಖರ ಆಜಾದ್
ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ದೇಶಭಕ್ತಿ ಪ್ರಜ್ವಲಿಸುವಂತೆ ಮಾಡುವ ಮತ್ತು ಮೈನವಿರೇಳಿಸುವ ಪ್ರಮುಖ ಹೆಸರು ಚಂದ್ರಶೇಖರ ಅಜಾದ್. ಬಾಬು ಕೃಷ್ಣಮೂರ್ತಿ ಅವರ ‘ಅಜೇಯ’ ಪುಸ್ತಕ ಕನ್ನಡ ನಾಡಿನಲ್ಲಿ ಹಲವಾರು ದಶಕಗಳಿಂದ ಪ್ರಭಾವ ಮೂಡಿಸಿದ್ದು, ನೀವು ಅದನ್ನು ಓದಿದ್ದಲ್ಲಿ ಅದರ ಪ್ರಭಾವ ನಿಮಗರಿಯದಂತೆ ನಿಮ್ಮೊಳಗೆ ಅಂತರ್ಗತವಾಗಿಬಿಟ್ಟಿರುತ್ತದೆ.
ಚಂದ್ರಶೇಖರ “ಆಜಾದ್” ಎಂದೇ ಲೋಕ ಗುರುತಿಸಿರುವ ಚಂದ್ರಶೇಖರ ಸೀತಾರಾಮ್ ತಿವಾರಿಯವರು 1906ರ ಜುಲೈ 23ರಂದು ಮಧ್ಯಪ್ರದೇಶದ ಝಬುವಾ ಜಿಲ್ಲೆಯಲ್ಲಿರುವ ಭಾವ್ರಾ ಎಂಬ ಹಳ್ಳಿಯಲ್ಲಿ ಜನಿಸಿದರು. ಭಾರತದ ಬಹು ಪ್ರಮುಖ ಕ್ರಾಂತಿಕಾರಿಗಳಲ್ಲಿ ಒಬ್ಬರಾದ ಅವರನ್ನು ಭಗತ್ ಸಿಂಗ್‌ರ ಮಾರ್ಗದರ್ಶಕ – ಗುರು ಎಂದು ಪರಿಗಣಿಸಲಾಗಿದೆ.
ಶ್ರದ್ಧಾವಂತರಾಗಿದ್ದ ಆಜಾದ್, ಇತರರ ಒಳಿತಿಗಾಗಿ ಹೋರಾಡುವುದು ತಮ್ಮ ಧರ್ಮ ಎಂದು ನಂಬಿದ್ದರು. ಓರ್ವ ಯೋಧ ಎಂದಿಗೂ ಶಸ್ತ್ರವನ್ನು ತ್ಯಜಿಸಲಾರನೆಂಬುದು ಅವರ ಅಭಿಪ್ರಾಯವಾಗಿತ್ತು. 1919ರಲ್ಲಿ ಅಮೃತಸರದಲ್ಲಿ ನಡೆದ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ಘಟನೆಯಿಂದ ಚಂದ್ರಶೇಖರ ಆಜಾದರು ಮಾನಸಿಕವಾಗಿ ಜರ್ಜರಿತರಾಗಿದ್ದರು. ಮಹಾತ್ಮಾ ಗಾಂಧಿಯವರು 1921ರಲ್ಲಿ ಅಸಹಕಾರ ಚಳುವಳಿಯನ್ನು ಹಮ್ಮಿಕೊಂಡಾಗ ಅದರಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡರು. ಈ ನಾಗರಿಕ ಶಾಸನಭಂಗಕ್ಕಾಗಿ ಅವರು ಬಂಧಿತರಾದುದೇ ಅಲ್ಲದೆ, ತಮ್ಮ ಹದಿನೈದನೇ ವಯಸ್ಸಿನಲ್ಲಿಯೇ ತೀವ್ರ ಶಿಕ್ಷೆಗೆ ಗುರಿಯಾದರು. ಮ್ಯಾಜಿಸ್ಟ್ರೇಟರು ನಿನ್ನ ಹೆಸರೇನೆಂದು ಕೇಳಿದಾಗ, ‘ಆಜಾದ್’ ಎಂದು ಹೇಳಿದರು. ಆಜಾದ್ ಎಂದರೆ ‘ಸ್ವತಂತ್ರ ವ್ಯಕ್ತಿ’ ಎಂದು ಅರ್ಥ. ಈ ಉದ್ಧಟತನಕ್ಕಾಗಿ ಅವರಿಗೆ ಹದಿನೈದು ಛಡಿಏಟುಗಳ ಶಿಕ್ಷೆಯನ್ನು ನೀಡಲಾಯಿತು. ಛಾಟಿಯಿಂದ ಹೊಡೆದ ಪ್ರತಿ ಏಟಿಗೂ ಯುವ ಚಂದ್ರಶೇಖರ, “ಭಾರತ್ ಮಾತಾ ಕಿ ಜೈ” ಎಂದು ಘೋಷಣೆ ಮಾಡುತ್ತಿದ್ದರು. ಈ ಘಟನೆಯಿಂದ ಚಂದ್ರಶೇಖರರಿಗೆ ‘ಆಜಾದ್’ ಎಂಬ ಬಿರುದು ಪ್ರಾಪ್ತವಾಯಿತಲ್ಲದೇ, ಜನ ಅವರನ್ನು ಚಂದ್ರಶೇಖರ ಆಜಾದ್ ಎಂದೇ ಕರೆಯತೊಡಗಿದರು.
ಅಸಹಕಾರ ಚಳುವಳಿ ಸ್ಥಗಿತಗೊಂಡ ನಂತರ, ಇನ್ನೂ ಹೆಚ್ಚಿನ ಆಕ್ರಮಣಶಾಲಿ ಹಾಗೂ ಉಗ್ರ ಕ್ರಾಂತಿಕಾರಿ ಆದರ್ಶಗಳಿಂದ ಆಕರ್ಷಿತರಾದ ಅಜಾದರು, ಯಾವುದೇ ಮಾರ್ಗದಿಂದಾದರೂ ಸರಿಯೇ, ಸಂಪೂರ್ಣ ಸ್ವಾತಂತ್ರ್ಯ ಪಡೆಯುವ ಧ್ಯೇಯಕ್ಕೆ ತಮ್ಮನ್ನು ಮುಡಿಪಾಗಿಡಲು ನಿರ್ಧರಿಸಿದರು. ಈ ನಿಟ್ಟಿನಲ್ಲಿ ಪ್ರಥಮ ಹೆಜ್ಜೆಯಾಗಿ ‘ಹಿಂದೂಸ್ತಾನ್ ಸೋಷಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್-HSRA’ ಎಂಬ ಸಂಘಟನೆಯನ್ನು ಆರಂಭಿಸಿ ಭಗತ್ ಸಿಂಗ್, ಸುಖದೇವ್, ಬಟುಕೇಶ್ವರ ದತ್ತ, ರಾಜಗುರು ಸೇರಿದಂತೆ ಅನೇಕ ಕ್ರಾಂತಿಕಾರಿಗಳಿಗೆ ಮಾರ್ಗದರ್ಶಕರಾದರು. ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ದೊರಕಿಸಿಕೊಳ್ಳುವುದೇ HSRA ಸಂಘಟನೆಯ ಗುರಿಯಾಗಿತ್ತು. ಜೊತೆಗೆ ಸಮಾಜವಾದಿ ತತ್ವದ ಮೇಲೆ ನವೀನ ಭಾರತವನ್ನು ಕಟ್ಟುವ ಮಹದುದ್ದೇಶವನ್ನು ಹೊಂದಿತ್ತು.
ಆಜಾದರು ಮತ್ತು ಅವರ ಅನುಯಾಯಿಗಳು ಬ್ರಿಟಿಷರ ವಿರುದ್ಧ ಅನೇಕ ಕ್ರಾಂತಿಕಾರೀ ಪ್ರತಿಭಟನೆಗಳನ್ನು ಯೋಜಿಸಿ ಕಾರ್ಯಗತಗೊಳಿಸಿದರು. ಕಾಕೊರಿ ರೈಲು ದರೋಡೆ (1925), ವೈಸರಾಯ್‌ರ ರೈಲನ್ನು ಸ್ಫೋಟಿಸಲು ನಡೆಸಿದ ವಿಫಲ ಯತ್ನ (1926), ಮತ್ತು ಲಾಲಾ ಲಜಪತ ರಾಯ್‌ರನ್ನು ಕೊಂದುದರ ಪ್ರತೀಕಾರವಾಗಿ ಲಾಹೋರ್‌ನಲ್ಲಿ (1928) ಜಾನ್ ಪಾಯಂಟ್ಜ್ ಸಾಂಡರ್ಸ್‌ನನ್ನು ಗುಂಡು ಹಾರಿಸಿ ಕೊಂದಂತಹಾ ಅನೇಕ ಚಟುವಟಿಕೆಗಳಲ್ಲಿ ಆಜಾದ್ ಪ್ರಮುಖ ಪಾತ್ರಧಾರಿಯಾಗಿದ್ದರು.
1931ರ ಫೆಬ್ರವರಿ 27ರಂದು, ಚಂದ್ರಶೇಖರ ಆಜಾದರು ಅಲಹಾಬಾದ್‌ನ ಆಲ್‌ಫ್ರೆಡ್ ಉದ್ಯಾನವನದಲ್ಲಿ ತಮ್ಮ ಇಬ್ಬರು ಸಂಗಡಿಗರನ್ನು ಭೇಟಿ ಮಾಡಲು ಬಂದಾಗ ಅವರನ್ನು ಪೊಲೀಸರು ಗುರುತು ಹಿಡಿದರು, ಇಡೀ ಉದ್ಯಾನವನ್ನು ಸುತ್ತುವರಿದ ಪೊಲೀಸರು ಚಂದ್ರಶೇಖರ ಆಜಾದ್‌ರಿಗೆ ಶರಣಾಗಲು ಆದೇಶಿಸಿದರು. ಆಜಾದರು ಏಕಾಕಿಯಾಗಿ ಹೋರಾಡಿದರಲ್ಲದೆ ಮೂವರು ಪೊಲೀಸರನ್ನು ಕೊಂದರು. ಆದರೆ, ಅವರ ತೊಡೆಗೆ ಗುಂಡೇಟು ಬಿದ್ದಿತ್ತು. ತಮ್ಮಲ್ಲಿದ್ದ ಬಹುತೇಕ ಮದ್ದುಗುಂಡುಗಳೆಲ್ಲಾ ಖಾಲಿಯಾದ ನಂತರ, ತಪ್ಪಿಸಿಕೊಳ್ಳಲು ಬೇರೆ ದಾರಿಯಿಲ್ಲವೆಂದು ಮನಗಂಡ ಅವರು ತಮ್ಮಲ್ಲಿ ಉಳಿದಿದ್ದ ಕೊನೆಯ ಗುಂಡಿನಿಂದ ತಲೆಗೆ ಗುಂಡು ಹೊಡೆದುಕೊಂಡರು. ಅಷ್ಟೊಂದು ಪೊಲೀಸರ ಮಧ್ಯೆ ಅಭಿಮನ್ಯುವಿನಂತೆ ಹೋರಾಡಿದ ಆಜಾದ್ ಅವರಿಗೆ ಎಷ್ಟೊಂದು ಸುವ್ಯವಸ್ಥಿತ ಜಾಗೃತಿ ಇತ್ತೆಂದರೆ ಅವರ ಪಿಸ್ತೂಲಿನಲ್ಲಿ ಒಂದಾದ ನಂತರ ಒಂದು ಗುಂಡುಗಳು ಖಾಲಿಯಾಗುತ್ತಿದ್ದರೂ ಕೊನೆಯ ಗುಂಡಿನ ಲೆಕ್ಕ ಕೂಡಾ ಖಚಿತವಾಗಿ ಜಾಗೃತಿಯಲ್ಲಿದ್ದು, ಆ ಕೊನೆಯ ಗುಂಡಿನ ಅರಿವು ದೊರೆತ ತಕ್ಷಣದಲ್ಲಿ ಅದನ್ನು ತಮ್ಮ ತಲೆಗೆ ಗುರಿ ಇಟ್ಟುಕೊಂಡರು.
ತಮ್ಮನ್ನು ಯಾವುದೇ ಕ್ಷಣದಲ್ಲೂ ಬ್ರಿಟಿಷರಿಗೆ ಒಪ್ಪಿಸಿಕೊಳ್ಳದೆ ಬ್ರಿಟಿಷ್ ಹಿಂಸಾಚಾರಿ, ದಮನಕಾರಿ ಪ್ರವೃತ್ತಿಗಳಿಗೆ ಅದೇ ಮಾದರಿಯಲ್ಲಿ ಉತ್ತರ ನೀಡಿ ಇಡೀ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಿಂಹ ಸ್ವಪ್ನರಾಗಿದ್ದ ಚಂದ್ರಶೇಖರ್ ಆಜಾದ್ ಅವರ ಮಹಾನ್ ವ್ಯಕ್ತಿತ್ವ ನೆನೆದಾಗಲೆಲ್ಲಾ ದೇಶಭಕ್ತಿಯನ್ನು ಪ್ರಜ್ವಲಿಸುವ ಅಮರ ಜ್ಯೋತಿಯ ಉದ್ದೀಪನವಾದಂತೆನಿಸುತ್ತದೆ.
ಹಿಂಸೆಗೆ ಉತ್ತರವಾಗಿ ಕ್ರಾಂತಿಕಾರಿ ದಾರಿ ಹಿಡಿದರಾದರೂ ಅವರ ಬದುಕಿನಲ್ಲಿ ಜಾಗೃತವಾಗಿದ್ದ ಸುಸಂಸ್ಕೃತ ನಡಾವಳಿ, ಸ್ತ್ರೀಯರು ಮತ್ತು ಹಿರಿಯರ ಬಗ್ಗೆ ಗೌರವ, ಬಡಜನರ ಬಗ್ಗೆ ಅನುಕಂಪ, ದೇಶಕ್ಕಾಗಿ ಏನನ್ನೂ ಮಾಡಲು ಸಿದ್ಧವಿದ್ದ ಭಕ್ತಿನಿಷ್ಠ ಮನಸ್ಸುಗಳು ನಿರಂತರ ಮನನಯೋಗ್ಯವಾಗಿವೆ.