ನಾಳೆ ಗುರು ಪೂರ್ಣಿಮೆ… ಅರಿತವಂಗೆ ಎಲ್ಲವೂ – ಎಲ್ಲರೂ ಗುರುಗಳೇ….. ಅರಿಯದವಂಗೆ ಅಹಂಕಾರ ಅಜ್ಞಾನವೇ ಗುರು….. ನನ್ನ ದೇಹವೇ ನನ್ನ ಗುರು………
ವಿಜಯ ದರ್ಪಣ ನ್ಯೂಸ್…
ನಾಳೆ ಗುರು ಪೂರ್ಣಿಮೆ…
ಅರಿತವಂಗೆ ಎಲ್ಲವೂ – ಎಲ್ಲರೂ ಗುರುಗಳೇ…..
ಅರಿಯದವಂಗೆ ಅಹಂಕಾರ ಅಜ್ಞಾನವೇ ಗುರು…..
ನನ್ನ ದೇಹವೇ ನನ್ನ ಗುರು………
ಪಂಚೇಂದ್ರಿಯಗಳನ್ನು ಒಳಗೊಂಡ ಇಡೀ ಶರೀರವೇ ನನ್ನ ಗುರು,
ನನ್ನ ತಂದೆ ತಾಯಿ ಬಂಧು ಬಳಗವೇ ನನ್ನ ಗುರುಗಳು,
ಶಿಕ್ಷಕ, ಗೆಳೆಯ, ವೈದ್ಯ, ಚಾಲಕ, ಕ್ಷೌರಿಕ, ಅಗಸ, ಚಮ್ಮಾರ, ಪೂಜಾರಿ, ರೈತ, ದಾದಿ, ಪೋಲೀಸ್ ಮುಂತಾದ ಎಲ್ಲರೂ ಗುರುಗಳೇ,
ಪುಸ್ತಕ, ಬಳಪ, ವಾಹನ, ಪ್ರಾಣಿ, ಪಕ್ಷಿ, ಆಕಾಶ, ಭೂಮಿ, ನೀರು, ಕಾಡುಗಳು ಇತ್ಯಾದಿಗಳು ಗುರುಗಳೇ,
ಊಟ, ಬಟ್ಟೆ, ಜಗಳ, ಕೋಪ, ಜ್ವರ, ನೋವು, ಪ್ರೀತಿ, ಪ್ರೇಮ, ಪ್ರಣಯ, ಕಷ್ಟ, ಸುಖ ಎಲ್ಲವೂ ಗುರುಗಳೇ,
ಧರ್ಮ, ಕಾನೂನು, ಇತಿಹಾಸ, ವಿಜ್ಞಾನ, ಸಂಘರ್ಷ, ಟೀಕೆ, ಹೊಗಳಿಕೆಗಳು ಗುರುಗಳೇ,
ಕೊಲೆ, ಸುಲಿಗೆ, ವಂಚನೆ, ಅತ್ಯಾಚಾರ, ತ್ಯಾಗ, ಸೌಹಾರ್ದ, ಸಹಕಾರಗಳು ಗುರುಗಳೇ,
ಎಲ್ಲಾ ರೀತಿಯ ಸಾಮಾಜಿಕ ಜಾಲತಾಣಗಳು ಗುರುಗಳೇ,
ನೀವು, ನಿಮ್ಮ ಅಭಿಪ್ರಾಯಗಳು, ಸಲಹೆಗಳು ಎಲ್ಲವೂ ಗುರುಗಳೇ,
ಇಡೀ ಸಮಾಜವೇ ನನ್ನ ಗುರು………
ನನ್ನ ಅನುಭವವೇ ನನ್ನ ಗುರು………
ಗುರುವೆಂದರೆ,
ಅದೊಂದು, ವ್ಯಕ್ತಿ, ಶಕ್ತಿ, ಅರಿವು, ಗ್ರಹಿಕೆ, ದಾರಿ, ಮಾರ್ಗದರ್ಶನ ಹೀಗೆ ಎಲ್ಲವೂ ಹೌದು, ರೂಪಗಳು ಬೇರೆ ಬೇರೆ,
ಗುರು ಪೂರ್ಣಿಮೆ ಕೇವಲ ಒಂದು ಸಾಂಕೇತಿಕ ದಿನ ಮಾತ್ರ,
ಪ್ರತಿಕ್ಷಣವೂ ಗುರು ನಮ್ಮೊಂದಿಗೆ ಇರುತ್ತಾರೆ.
ಗುರುಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ,
ನಾವು ಗುರುವಾಗುವತ್ತ ಮುನ್ನಡೆಯೋಣ…….
************************
ಬೆತ್ತಲಾಗುತ್ತಿರುವ ಭಾರತೀಯ ಸಮಾಜ, ಮುಕ್ತವಾಗುತ್ತಿರುವ ಜನರ ಭಾವನೆ ಮತ್ತು ವರ್ತನೆಗಳು……..
ಸಮೂಹ ಸಂಪರ್ಕ ಕ್ರಾಂತಿಯ ಪರಿಣಾಮವಾಗಿ, ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ, ಇಡೀ ವ್ಯವಸ್ಥೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಎಲ್ಲಾ ರೀತಿಯ, ಎಲ್ಲಾ ವರ್ಗದ, ಎಲ್ಲಾ ಹಂತದ, ಎಲ್ಲಾ ಪ್ರಕಾರದ ಜನ ತಮ್ಮ ಅಭಿಪ್ರಾಯವನ್ನು ವಿವಿಧ ರೂಪಗಳಲ್ಲಿ ಅಭಿವ್ಯಕ್ತಿಸಿ ಮುಖ್ಯವಾಹಿನಿಗೆ ಬರುತ್ತಿದ್ದಾರೆ.
ನನ್ನ ಅಭಿಪ್ರಾಯದಲ್ಲಿ ಇದೊಂದು ಬಹುದೊಡ್ಡ, ಅತ್ಯಂತ ಪರಿಣಾಮಕಾರಿ ಮತ್ತು ಸ್ವಾಗತಾರ್ಹ ಬೆಳವಣಿಗೆ……..
ನಿಂತ ನೀರಾಗಿ ಕೊಳೆಯುತ್ತಿದ್ದ ಭಾರತೀಯ ಸಮಾಜ ಮತ್ತು ಮನಸ್ಸುಗಳು ಇದೀಗ ತೆರೆದುಕೊಳ್ಳುತ್ತಿವೆ.
ಸ್ವಲ್ಪ ಹಿಂದೆ ಅಂದರೆ ಸುಮಾರು 20/25 ವರ್ಷಗಳ ಹಿಂದೆ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಕೇವಲ ರಾಜಕಾರಣಿಗಳ, ಸಿನಿಮಾ ನಟರ ಧರ್ಮಾಧಿಕಾರಿಗಳ, ಉದ್ಯಮಿಗಳ, ಜನಪ್ರಿಯ ವ್ಯಕ್ತಿಗಳ, ಉನ್ನತ ಶಿಕ್ಷಣ ಪಡೆದವರ, ಶ್ರೀಮಂತರ ಸ್ವತ್ತಾಗಿತ್ತು. ಅಲ್ಲದೆ ಅದನ್ನು ವ್ಯಕ್ತಪಡಿಸುವ ವೇದಿಕೆಗಳೂ ಅವರ ಹಿಡಿತದಲ್ಲೇ ಇದ್ದವು. ಪತ್ರಿಕೆ, ರೇಡಿಯೋ, ಟಿವಿ, ವಿಚಾರ ಸಂಕಿರಣಗಳು, ಸಭೆ ಸಮಾರಂಭಗಳು ಸಹ ಕೇವಲ ಕೆಲವೇ ಕೆಲವರ ಅಧೀನದಲ್ಲಿತ್ತು…….
ಕಲೆ, ಸಾಹಿತ್ಯ, ಸಂಗೀತ, ಸಿನಿಮಾ, ಕ್ರೀಡೆ, ವಿಜ್ಞಾನ, ರಾಜಕೀಯ ಕೆಲವೇ ಜನರ ಜಾಗೀರಾಗಿತ್ತು. ಅವರ ಅಭಿಪ್ರಾಯಗಳು ಮಾತ್ರ ಸಾರ್ವಜನಿಕ ಅಭಿಪ್ರಾಯ ಎಂಬಂತೆ ಬಿಂಬಿತವಾಗುತ್ತಿತ್ತು. ಸಾಮಾನ್ಯರ ಅನಿಸಿಕೆಗಳು ಅವರ ಮನೆಗೆ ಅಥವಾ ಸ್ನೇಹಿತರ ವಲಯ ಅಥವಾ ಒಂದು ಊರಿಗೆ ಮಾತ್ರ ಸೀಮಿತವಾಗಿರುತ್ತಿತ್ತು. ಅದರಲ್ಲೂ ಮಹಿಳೆಯರಿಗೆ ಮುಕ್ತ ಮಾತೇ ನಿಷೇಧಿಸಲಾಗಿತ್ತು. ಹೊರಗಡೆ ಜಾಸ್ತಿ ಮಾತನಾಡಿದರೆ ಬಜಾರಿ ಅಥವಾ ಆಕೆಯ ನಡತೆಯನ್ನೇ ಅನುಮಾನಿಸಲಾಗುತ್ತಿತ್ತು. ಇಡೀ ವ್ಯವಸ್ಥೆಯನ್ನು ಅತ್ಯಂತ ಕತ್ತಲೆಯಲ್ಲಿ, ಭ್ರಮೆಗಳಲ್ಲಿ ಇಡಲಾಗಿತ್ತು…….
ಆದರೆ ಈ ಎಲೆಕ್ಟ್ರಾನಿಕ್ ಮಾಧ್ಯಮಗಳು ಮತ್ತು Social media ಗಳ ಬಳಕೆ ಹೆಚ್ಚಾದಂತೆ ಬಡವರು, ಮಹಿಳೆಯರು, ಸಾಮಾನ್ಯರು, ರೈತರು, ಕಾರ್ಮಿಕರು ಎಲ್ಲರೂ ಅದರ ವ್ಯಾಪ್ತಿಯಲ್ಲಿ ಸೇರಿಕೊಂಡಂತೆ ಇವರ ಮುಖವಾಡಗಳೆಲ್ಲಾ ಬಯಲಾಗತೊಡಗಿದವು.
ಕೆಲವು ರಾಜಕಾರಣಿ ಎಂದರೆ ಸಮಾಜ ಸೇವಕ ಎಂಬ ಅಭಿಪ್ರಾಯ ಬದಲಾಗಿ ಅವನೊಬ್ಬ ವಂಚಕ, ಸುಳ್ಳುಗಾರ, ಭರವಸೆಗಳನ್ನೇ ಬಂಡವಾಳ ಮಾಡಿಕೊಂಡ ವ್ಯಾಪಾರಿ ಎಂದು ತಿಳಿಯತೊಡಗಿತು.
ಕೆಲವು ಪಾದ್ರಿಗಳು, ಮೌಲ್ವಿಗಳು, ಮಠಾಧೀಶರು, ಧರ್ಮಾಧಿಕಾರಿಗಳು, ನಕಲಿ ದೇವಮಾನವರು ಮುಂತಾದವರನ್ನು ದೇವರ ಪ್ರತಿನಿಧಿಗಳೆಂಬಂತೆ ಭಾವಿಸಿದ್ದ ಜನಕ್ಕೆ ಅವರಲ್ಲೂ ಬಹಳಷ್ಟು ಜನರು ಸಾಮಾನ್ಯರಿಗಿಂತ ಅತ್ಯಂತ ಕೆಳಮಟ್ಟದ ನೈತಿಕತೆ ಹೊಂದಿದ ಮುಖವಾಡದವರು, ಅವಕಾಶ ಸಿಕ್ಕರೆ ಎಂತಹ ಕೀಳು ಮಟ್ಟಕ್ಕೂ ಇಳಿಯಬಲ್ಲರು ಎಂಬ ಬಣ್ಣ ಬಯಲಾಯಿತು……
ಕೆಲವು ಸಾಹಿತಿಗಳು, ಪತ್ರಕರ್ತರು, ಹೋರಾಟಗಾರರು, ಬರಹಗಾರರೆಂದರೆ ಈ ಸಮಾಜದ ಅತ್ಯಂತ ಬುದ್ದಿವಂತ ವರ್ಗ ಎಂದು ಭಾವಿಸಿ, ಅವರು ಹೇಳಿದ್ದೆಲ್ಲಾ ಸತ್ಯ ಎಂಬ ಕಾಲ ಬದಲಾಗಿ, ಅವರನ್ನು ಪ್ರಶ್ನಿಸುವ, ಅವರ ಹುಳುಕುಗಳನ್ನು ಎತ್ತಿ ತೋರಿಸುವ ಮನೋಭಾವ ಬೆಳೆಯತೊಡಗಿದೆ.
ಸಿನಿಮಾ ನಟ ನಟಿಯರೆಂದರೆ ಸ್ವರ್ಗಲೋಕದ ಮನ್ಮಥ ಅಪ್ಸರೆಯರು, ಸೂಪರ್ ಮ್ಯಾನ್ ಗಳು, ನಿಷ್ಕಲ್ಮಶ ಮನಸ್ಥಿತಿಯವರು ಎಂಬುದು ಮಾಯಾವಾಗಿ ಕೆಲವೊಮ್ಮೆ ಅವರು ಸಾಮಾನ್ಯಕ್ಕಿಂತ ಕಡಿಮೆ ಮತ್ತು ದುರ್ಬಲ ವ್ಯಕ್ತಿತ್ವದ ಪುಕ್ಕಲರು ಎಂದು ಅರ್ಥವಾಗತೊಡಗಿದೆ…..
ಇನ್ನೂ ಅನೇಕ ಜನರ ಮುಖವಾಡಗಳು ಕಳಚಿ ಬೀಳುತ್ತಿವೆ. ಹಾಗೆಯೇ,
ಪ್ರತಿಭಾವಂತರ ಗಣಿಯೇ ಎದ್ದು ಬರುತ್ತಿದೆ. ಸಂಪರ್ಕ ಕ್ರಾಂತಿ ಬಲವಾದಂತೆ ಇಲ್ಲಿಯವರೆಗೂ ಬಚ್ಚಿಟ್ಟುಕೊಂಡಿದ್ದ ಮಹಿಳೆಯರ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಾ ರಂಗಗಳಲ್ಲೂ ತನ್ನ ಛಾಪು ಮೂಡಿಸುತ್ತಿದೆ. ಸಾಮಾನ್ಯರ ಅಸಾಮಾನ್ಯ ಪ್ರತಿಭೆಗಳು ಅನಾವರಣಗೊಳ್ಳುತ್ತಿವೆ…..
ಜೊತೆಗೆ,
ನಮ್ಮ ಜನರಲ್ಲಿ ಅಡಗಿದ್ದ ಎಲ್ಲಾ ವಿಕೃತಗಳು, ವಿಕಾರವಾಗಿ ತನ್ನ ನಿಜ ರೂಪ ದರ್ಶನ ಮಾಡಿಸುತ್ತಿವೆ. ಅತ್ಯಂತ ಕೆಟ್ಟ, ಕೊಳಕ ಜನರ ಮನೋಭಾವಗಳ ವಿರಾಟ್ ಪ್ರದರ್ಶನವಾಗುತ್ತಿದೆ.
ವಿಷಕಾರುವ ವರ್ಗಗಳೇ ಎಲ್ಲೆಲ್ಲೂ ರಾರಾಜಿಸುತ್ತಿವೆ.
ಇದನ್ನೇ ಸಮಾಜ ಬೆತ್ತಲಾಗುತ್ತಿದೆ ಎಂದು ಹೇಳಿದ್ದು…….
ಇದು ಒಳ್ಳೆಯದೇ ಆಯಿತು.
ಒಮ್ಮೆ ಬೆತ್ತಲಾಗುವ ಪ್ರಕ್ರಿಯೆ ಸಂಪೂರ್ಣವಾದರೆ ಅದರಿಂದ ಅಸಹ್ಯ, ಅವಮಾನ, ಅನಾಗರಿಕತೆ ಜನರನ್ನು ಕಾಡತೊಡಗುತ್ತದೆ. ಜೊತೆಗೆ ಬೆತ್ತಲೆಯ ಪರಿಜ್ಞಾನ, ಅಗಾಧತೆ ಮತ್ತು ಅದರ ವಾಸ್ತವಿಕತೆ, ಪ್ರಾಯೋಗಿಕತೆ ಬಗ್ಗೆ ಅರಿಯುತ್ತಾರೆ, ಕೆಲವೊಮ್ಮೆ ಭ್ರಮನಿರಸನಗೊಳ್ಳುತ್ತಾರೆ.
ಅದರ ಮುಂದಿನ ಹಂತವೇ ಮತ್ತೆ ಸಭ್ಯತೆಯ, ನಾಗರಿಕ ಪ್ರಜ್ಞೆಯ, ಮತ್ತೊಂದು ಹೊಸ ಸಮಾಜದ, ಮನೋಭಾವದ ಉಗಮದ ಪ್ರಕ್ರಿಯೆಗೆ ಚಾಲನೆ ದೊರೆಯುತ್ತದೆ……..
ಆ ದಿನಗಳು ಆದಷ್ಟು ಬೇಗ ಬರಲಿ ಎಂದು ಆಶಿಸುತ್ತಾ…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಎಚ್. ಕೆ.
9844013068…….