ಜುಲೈ 18 ಕ್ಕೆ ಪ್ರೇಮಮಯಿ ಹಿಡಿಂಬೆ ನಾಟಕ ಪ್ರದರ್ಶನ

ವಿಜಯ ದರ್ಪಣ ನ್ಯೂಸ್…

ಜುಲೈ  18ಕ್ಕೆ ಗೀತಾ ರಾಘವೇಂದ್ರ ಅಭಿನಯದ ಏಕವ್ಯಕ್ತಿ ರಂಗ ಪ್ರಯೋಗ….
ಪ್ರೇಮಮಯಿ ಹಿಡಿಂಬೆ ನಾಟಕ ಪ್ರದರ್ಶನ

ಕೋಲಾರ ಜುಲೈ 17 : ಮಾಲೂರು ರಂಗ ವಿಜಯಾ ಸಂಸ್ಥೆಯಲ್ಲಿ ಪಡೆದ ತರಭೇತಿ ಶ್ರಮದಿಂದ ಕಿರುತೆರೆ ನಟಿ ಗೀತಾ ರಾಘವೇಂದ್ರ ಅಭಿನಯಿಸುವ ಏಕ ವ್ಯಕ್ತಿ ರಂಗ ಪ್ರಯೋಗದ ಪ್ರೇಮಮಯಿ ಹಿಡಿಂಬೆ ನಾಟಕವನ್ನು ಜುಲೈ 18 ರ ಗುರುವಾರ ಸಂಜೆ 7 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರಂ ಎರಡನೇ ಅಡ್ಡರಸ್ತೆಯಲ್ಲಿನ ಈಸ್ಟ್ ಲಿಂಕ್ ರಸ್ತೆಯಲ್ಲಿರುವ ಕೇಶವ ಕಲ್ಪ ರಂಗಭೂಮಿಕೆಯಲ್ಲಿ ಪ್ರಥಮ ಪ್ರದರ್ಶವನ್ನು ನೀಡಲಿದ್ದಾರೆ ಎಂದು ನಾಟಕಕಾರ ಹಾಗೂ ನಿರ್ದೇಶಕ ಡಾ. ಬೇಲೂರು ರಘುನಂದನ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ 4 ದಶಕಗಳಿಂದ ರಂಗಭೂಮಿಗೆ ದುಡಿಯುತ್ತಾ ಮಿಡಿಯುತ್ತಿರುವ ಕಲಾವಿದ ಮಾಲೂರು ವಿಜಿ ಅವರ ಕನಸಿನ ಕೂಸು ರಂಗ ವಿಜಯಾ ಈ ಸಂಸ್ಥೆಯಲ್ಲಿ ಕಳೆದ ಒಂದು ದಶಕಗಳಿಂದ ಶಾಲಾ ಕಾಲೇಜುಗಳ ಮಕ್ಕಳಿಗೆ ರಂಗದ ಪರಿಚಯ ಮಾಡುತ್ತಾ ಶೈಕ್ಷಣಿಕವಾಗಿ ರಂಗಭೂಮಿ ಹೇಗೆ ಸಹಕಾರಿ ಅಗುತ್ತದೆ ಎಂಬುವುದು ತೋರಿಸಿ ವಿದ್ಯಾರ್ಥಿಗಳಿಗೆ ಜನಪದ ಕಲೆಗಳನ್ನು ಕಲಿಸುವ ಪ್ರಯತ್ನ ಮಾಡುತ್ತಿರುವ ಅವರಿಂದ ಮೊದಲ ಬಾರಿಗೆ ಪ್ರೇಮಮಯಿ ಹಿಡಿಂಬೆ ಎಂಬ ಏಕವ್ಯಕ್ತಿ ನಾಟಕವನ್ನು ಪ್ರದರ್ಶಿಸುವ ಹೊಸ ಆಯಾಮವನ್ನು ಪ್ರದರ್ಶಿಸಲು ಮುಂದಾಗಿರುವುದು ಶ್ಲಾಘನೀಯ ಎಂದರು.

ಹಿಡಿಂಬೆ ಎಂಬ ಮಹಿಳಾ ಪಾತ್ರವನ್ನು ವಹಿಸಿದ್ದು ಹಿಡಿಂಬೆ ರಾಕ್ಷಸಿಯಾದರೂ ಸಹ ಅವಳಲ್ಲಿರುವ ಮಾನವೀಯ ಅಂತ:ಕರಣದ ಗುಣಗಳನ್ನು ಮತ್ತು ಆಕೆಯಲ್ಲಿರುವ ಮಾನವ ಬಂಧುತ್ವದ ತಿಳುವಳಿಕೆ ಮೂಲಕ ಹೆಣ್ಣು ಸಮಾಜದ ಪ್ರಗತಿ, ದೈವತ್ವ ಎಂಬುವುದನ್ನು ತೋರಿಸಿಕೊಡಲಾಗಿದೆ. ಹಿಡಿಂಬೆ ಎಂದರೆ ನಾವೆಲ್ಲಾ ಭಾವಿಸಿರುವಂತೆ ಕಾಡಿನ ರಾಣಿಯಾಗಿಯೋ ಅಥವಾ ಕೊಂದು ತಿನ್ನುವಂತ ರಕ್ಕಸಿಯಾಗಿ ಮಾತ್ರ ನೋಡಿವಂತಾಗದೆ ಅಕೆಯಲ್ಲಿರುವ ಪ್ರೇಮ ಮತ್ತು ಅಂತ:ರಕರಣಗಳನ್ನು ನಾಟಕದುದ್ದಕ್ಕೂ ಸಾಬೀತುಪಡಿಸುವ ಅತ್ಯಂತ ಪರಿಣಾಮಕಾರಿ ಪ್ರಯೋಗದ ಪ್ರೇಮಮಯಿ ಹಿಡಿಂಬೆಯು ವನಕ್ಕೆ ಬಂದಾಗ ಪಾಂಡವರಲ್ಲಿ ಭೀಮನ ಮೇಲಿನ ಪ್ರೇಮ ಪರಿಣಯ ಹಾಗೂ ಕುರುಕ್ಷೇತ್ರದಲ್ಲಿನ ಘಟೋತ್ಕಚನ ಸಾವಿನ ತನಕವೂ ಕಥೆಯನ್ನು ಸಮಕಾಲೀನವಾಗಿ ಪ್ರದರ್ಶಿಸುವ ಮೂಲಕ ಪುಟ್ಟ ಜಗತ್ತಿನಲ್ಲಿ ದೊಡ್ಡ ಕನಸನ್ನು ಕಾಣುವಂತ ಸುಮಾರು ಒಂದೂವರೆ ತಾಸು ನಮ್ಮನ್ನು ನಾವು ಆತ್ಮಶೋಧನೆ ಮಾಡಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಲಿದೆ ಎಂದು ಹೇಳಿದರು.

ಹಿಡಿಂಬೆ ನಾಟಕ ಮೂಲಕ ಮಹಿಳೆ ಮತ್ತು ಸ್ವಾತಂತ್ರö್ಯ ಹೆಣ್ಣು ಮತ್ತು ಅಸ್ಥಿತ್ವ, ಹೆಣ್ಣು ಮತ್ತು ಕುಟುಂಬ ಹೀಗೆ ಭಿನ್ನ ನೆಲೆಗಳಲ್ಲಿ ಮಹಿಳೆ ಪರವಾದ ಚಿಂತನೆಗಳನ್ನು ನಾವು ಪುನರ್ ಚಿಂತಿಸಲು ದಾರಿಗಳನ್ನು ಈ ನಾಟಕ ಮಾಡಿಕೊಡುತ್ತದೆ. ಅರಣ್ಯ ಸಂಪತ್ತು ಮತ್ತು ಕಾಡು ಹಾಗೂ ಮಹಿಳೆ, ಮನುಷ್ಯ ಇವುಗಳನ್ನು ವ್ಯಾಪಾರೀಕರಣ, ಲೋಭ ಮತ್ತು ಪ್ರಕೃತಿಯ ಅದಮ್ಯವಾಗಿ ಬಳಿಸಿಕೊಂಡು ಬೆಸೆಯುತ್ತಿರುವ ಇಂದು ಈ ನಾಟಕ ಮನುಷ್ಯ ಮತ್ತು ಕಾಡಿನ ನಡುವೇ ಬೆಳೆಯ ಬೇಕಾದಂತಹ ಅನ್ಯೋನ್ಯ ಸಂಬಂಧಗಳೇನು ಎಂಬುವುದನ್ನು ನಾಟಕವು ಎತ್ತಿ ಹಿಡಿಯಲಿದೆ ಎಂದರು.

ಮಹಿಳೆ ಮತ್ತು ಧರ್ಮ, ಮಹಿಳೆ ಮತ್ತು ರಾಜಕಾರಣ, ಮಹಿಳೆ ಮತ್ತು ಸಿಂಹಾಸನ ಈ ವಿಚಾರಗಳ ಜೊತೆಯಲ್ಲಿ ಹಿಡಿಂಬೆ ತನ್ನ ಅಸ್ತಿತ್ವಕ್ಕಾಗಿ ಮಾತನಾಡುವ ಮಾತುಗಳನ್ನು ಈ ನಾಟಕ ಇಡೀ  ಸ್ತ್ರೀಕುಲ  ಮಾತನಾಡುವ ಮತ್ತು ಆಕೆಯ ಪ್ರಶ್ನೆಗಳು ತನ್ನ ಪ್ರಶ್ನೆಗಳೆ ಎಂದು ಭಾವಿಸುವಂತೆ ಮಾಡುತ್ತದೆ. ಹಿಡಿಂಬೆ ತನ್ನ ಮಗನ ಸಾವಿನ ನಂತರದಲ್ಲಿ ಏಕಾಂಗಿತನವನ್ನು ಅನುಭವಿಸುತ್ತಲೇ ಅವರು ಪ್ರಕೃತಿಯಾಗುವ ಬಹಳ ದೊಡ್ಡ ಪ್ರಕ್ರಿಯೇ ಈ ನಾಟಕದ ಪ್ರಧಾನ ವಸ್ತುವಾಗಿದೆ. ಮನುಷ್ಯ ಮತ್ತು ರಾಕ್ಷಸ ಇವರ ನಡುವೆ ಇರುವಂತಹ ಮಾನುಷಗುಣಗಳು ಹಾಗೂ ರಕ್ಕಸಗುಣಗಳ ಪರಾಮರ್ಶೀಯು ಈ ನಾಟಕ ಸಾರಂಶವಾಗಿದೆ ಎಂದು ವಿವರಿಸಿದರು.

ಕಲಾವಿದೆ ಗೀತಾ ರಾಘವೇಂದ್ರ ಅವರು ಅನೇಕ ಕಿರು ತೆರೆಯಲ್ಲಿ ಪೋಷಕ ಪಾತ್ರವನ್ನು ಬೇರೆ ಭಾಷೆಗಳಲ್ಲಿ ಕಿರು ಧಾರವಾಹಿಯ ಬ್ಯೂಸಿ ಕಲಾವಿದೆಯಾಗಿದ್ದು ಅದರ ನಡುವೆ ರಂಗ ಭೂಮಿಕೆಯಲ್ಲಿ ತಮ್ಮ ಛಾಪು ಮೋಡಿಸುತ್ತಿರುವುದಕ್ಕೆ ಅವರಲ್ಲಿನ ಕಲೆಯ ಆಸಕ್ತಿಯೇ ಕಾರಣವಾಗಿದೆ. ಇದು ಸತತ 4 ವರ್ಷದ ಶ್ರಮವಾಗಿದ್ದು ವಿಸ್ತಾರದ ಆಶಯವಾಗಿದೆ ಎಂದು ತಿಳಿಸಿದರು.

ಗೀತಾ ರಾಘವೇಂದ್ರ ಮಾತನಾಡಿ, ಗುಬ್ಬಿ ಕಂಪನೆಯ ನಂಟನ್ನು ಹೊಂದಿರುವ ನಮ್ಮ ತಾತ ಶ್ರೀನಿವಾಸ್ ಮೂರ್ತಿಯವರಿಂದ ಬಂದ ರಂಗಭೂಮಿಕೆಯ ಬಳುವಳಿಯಾಗಿದೆ ಸಣ್ಣ ವಯಸ್ಸಿನಲ್ಲಿ ಸಂಸಾರದ ನೊಗ ಹೆಗಲೇರಿಸಿಕೊಂಡ ನಂತರ ರಂಗಭೂಮಿ ರಕ್ತಗತವಾಗಿ ಅಂಟಿರುವುದನ್ನು ಸಾಂಸಾರಿಕ ಬದುಕಿಗೂ ಮೆತ್ತಿಕೊಂಡು ತನ್ನ ಮಕ್ಕಳಾದ ನಾಗಪೂಜಾ, ರಕ್ಷಿತಾರವರ ಬದುಕಿಗೆ ರಂಗಭೂಮಿಯನ್ನು ತುಂಬಿಸುವ ನಿಟ್ಟಿನಲ್ಲಿ ರಂಗ ವಿಜಯ ಸೇರಿ ಅನೇಕ ಕಿರುತೆರೆ, ಬೆಳ್ಳಿತೆರೆಗಳಲ್ಲಿಯೂ ನಟಿಸಿರುವೆ ಎಂದರು.

ರಂಗ ವಿಜಯ ಸಂಸ್ಥಾಪಕ ಮಾಲೂರು ವಿಜಿ ಮಾತನಾಡಿ, ರಾಮಾಯಣದಲ್ಲಿ ಸೀತೆ ಅಪಹರಣದ ಸಮಯದ ಅನುಭವಗಳು, ರಾವಣದ ಪತ್ನಿ ಮಂಡೋದರಿಯ ವಿಭಿನ್ನ ಪಾತ್ರ ಮುಂತಾದವುಗಳಲ್ಲಿ ರಾಕ್ಷಸಿಗೂ ಹೆಣ್ತನ ಇತ್ತು, ಮಾನವನಂತೆ ಪ್ರೀತಿ, ಪ್ರೇಮ ಎಂಬುವುದು ಇರುತ್ತದೆ. ಅದೇ ರೀತಿ ಹಿಡಿಂಬೆ ರಾಕ್ಷಸಿಯಾದರೂ ಪ್ರಕೃತಿಯಲ್ಲಿನ ರಾಕ್ಷತ್ವದ, ರಾಕ್ಷಸರಲ್ಲೂ ಮಾನವೀಯತೆಯ ಅಂತ:ಕರಣ ಇತ್ತು ಎಂಬುವುದು ಹೊಸ ಆಯಾಮದ ಕಥೆಯಾಗಿದೆ ಎಂದು ತಿಳಿಸಿದರು.

ಇದನ್ನು ಕೋಲಾರದಲ್ಲಿಯೇ ಪ್ರಥಮ ಪ್ರದರ್ಶನ ನೀಡಬೇಕೆಂಬುವುದಾಗಿ ಯೋಜನೆ ಇತ್ತು. ಗಣ್ಯಾತಿ ಗಣ್ಯರಿಗೆ ಕೋಲಾರದ ರಂಗಮಂದಿರದಲ್ಲಿ ವ್ಯವಸ್ಥೆಗಳು ಸಮಾಧಾನಕರವಾಗದೆಂಬ ಹಿನ್ನಲೆಯಲ್ಲಿ ಪ್ರಥಮ ಪ್ರದರ್ಶನವನ್ನು ಬೆಂಗಳೂರಿನಲ್ಲಿ ಪ್ರದರ್ಶಿಸಿ ನಂತರ ಕೋಲಾರದಲ್ಲಿ ಪ್ರದರ್ಶಿಸುವ ಚಿಂತನೆ ಇದೆ ಎಂದು ಹೇಳಿದರು.

ವೇದಿಕೆಯಲ್ಲಿ ಡಾ.ಎಸ್.ಜಿ.ನಾರಾಯಣಸ್ವಾಮಿ, ಮಾಸ್ತಿ ರಮೇಶ್, ಟಿ.ಎನ್.ರಾಘವೇಂದ್ರರಾವ್ ಉಪಸ್ಥಿತರಿದ್ದರು.