ವಕೀಲರು ಸಮಾಜಮುಖಿ ವೃತ್ತಿಶ್ರೇಷ್ಠರು’; ಹೈಕೋರ್ಟ್ ನ್ಯಾಯಮೂರ್ತಿ ಇಂದಿರೇಶ್
ವಿಜಯ ದರ್ಪಣ ನ್ಯೂಸ್…
ವಕೀಲರು ಸಮಾಜಮುಖಿ ವೃತ್ತಿಶ್ರೇಷ್ಠರು’; ಹೈಕೋರ್ಟ್ ನ್ಯಾಯಮೂರ್ತಿ ಇಂದಿರೇಶ್
ಕೋಲಾರ: ಸಮಾಜದ ಹಿತವು ವಕೀಲರನ್ನೂ ಆಧರಿಸಿರುವಾಗ ನ್ಯಾಯವಾದಿಗಳ ಪಾತ್ರವೂ ಮಹತ್ವದ್ದಾಗಿದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಪ್ರತಿಪಾದಿಸಿದ್ದಾರೆ. ಪ್ರಸಕ್ತ ಸನ್ನಿವೇಶಗಳಲ್ಲಿ ಲಾಯರ್‌ಗಳು ಲಾ ಮೇಕರ್ ಮತ್ತು ಜನಸಾಮಾನ್ಯರ ನಡುವೆ ರಾಯಭಾರಿಯಂತಿದ್ದು, ವಕೀಲರ ಸಮಾಜಮುಖಿ ಕಾರ್ಯನಿರ್ವಹಣೆಯಿಂದ ಅವರ ವೃತ್ತಿಶ್ರೇಷ್ಠತೆ ಬಿಂಬಿತವಾಗುತ್ತದೆ ಎಂದವರು ಬಣ್ಣಿಸಿದ್ದಾರೆ.
ಕೋಲಾರ ಜಿಲ್ಲೆ ಕೆಜಿಎಫ್‌ನಲ್ಲಿ ಪ್ರತಿಷ್ಠಿತ ಶ್ರೀ ಕೆಂಗಲ್ ಹನುಮಂತಯ್ಯ ಕಾನೂನು ಮಹಾವಿದ್ಯಾಲಯದ 42ನೇ ಪದವಿ ದಿನ (Graduation Day) ಸಮಾರಂಭದಲ್ಲಿ ಭಾಗವಹಿಸಿ, ಕಾನೂನು ಶಿಕ್ಷಿತರಿಗೆ ಮಾರ್ಗದರ್ಶನ ಭಾಷಣ ಮಾಡಿದ ನ್ಯಾಯಮೂರ್ತಿ ಇಂದ್ರೇಶ್, ಭಾವೀ ವಕೀಲರ ಸಂಭವನೀಯ ವೃತ್ತಿ ಜೀವನದಲ್ಲಿ ಹೇಗೆ ಯಶೋಗಾಥೆ ಬರೆಯಲು ಸಾಧ್ಯ ಎಂಬ ಬಗ್ಗೆ ಸೂತ್ರ ಹೇಳಿ ಕೊಟ್ಟರು.
ವೃತ್ತಿಯ ‘ಆರಂಭದ 10 ವರ್ಷ ಕತ್ತೆಯ ರೀತಿ ದುಡಿದರೆ, ನಂತರದ ವರ್ಷಗಳಲ್ಲಿ ಕುದುರೆ ಥರಾ ಓಡಬಲ್ಲರು’ ಎಂಬ ತಜ್ಞರ ಮಾತನ್ನು ನೆನಪಿಸಿದ ಅವರು, ವಕೀಲರು ಹಣಕ್ಕಾಗಿ ವೃತ್ತಿಯನ್ನು ಆಯ್ಕೆ ಮಾಡುವುದಕ್ಕಿಂತ ದೇಶಕ್ಕಾಗಿ ಕೆಲಸ ಮಾಡಬೇಕೆಂಬ ನಿಲುವನ್ನು ಹೊಂದಿರುವವರು, ನ್ಯಾಯದತ್ತ ಚಿತ್ತ ಇಟ್ಟವರು ಎಂದರು.
ಕಾನೂನು ಪದವೀಧರರಿಗೆ ಸಾಕಷ್ಟು ಉದ್ಯೋಗದ ಅವಕಾಶಗಳಿವೆ. ಯುಪಿಎಸ್ಸಿ ಸಹಿತ ಹಲವಾರು ಅವಕಾಶಗಳಿರಬಹುದು, ನ್ಯಾಯಾಧೀಶರೂ ಆಗಬಹುದು, ಸಾರ್ವಜನಿಕ ಸ್ವಾಮ್ಯದ ಕಂಪನಿಗಳಲ್ಲೂ, ನ್ಯಾಯ ಕ್ಷೇತ್ರದಲ್ಲೂ ಹುದ್ದೆ ಸಿಗಬಹುದು. ಆದರೂ ಸಮಾಜಮುಖಿ ಕೆಲಸಕ್ಕಾಗಿ ತನ್ನ ಕಾನೂನು ಶಿಕ್ಷಣವನ್ನು ಧಾರೆ ಎರೆಯಬೇಕು. ಆಗ ಕಾನೂನು ಪಾಂಡಿತ್ಯದ ಉದ್ದೇಶ ಸಾಕಾರಗೊಂಡಂತಾಗುತ್ತದೆ ಎಂದು ನುಡಿದರು.
ಶಿಕ್ಷಣವು ನಿಂತ ನೀರಿನಂತಲ್ಲ. ಕಲಿತ ಶಿಕ್ಷಣವನ್ನು ಸಮಾಜಕ್ಕಾಗಿ ಸಮರ್ಪಿಸಲು ವಕೀಲ ವೃತ್ತಿಯಿಂದ ಅವಕಾಶವಿದೆ. ಈ ಮೂಲಕ ಸಮಾಜದಲ್ಲಿ ತುಳಿತಕ್ಕೊಳಗಾದವರಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯವಿದೆ. ಈ ನ್ಯಾಯವು ವಕೀಲರ ಪರಿಶ್ರಮದಿಂದ ಮಾತ್ರ ಸಾಧ್ಯವಿದೆ. ಶಿಕ್ಷಿತ ಕಾನೂನು ಪದವೀಧರರು ಇಂತಹ ಅವಕಾಶವನ್ನು ಬಿಟ್ಟುಕೊಡಬಾರದು ಎಂದರು.
ಕಾನೂನು ವಿದ್ಯಾರ್ಥಿಗಳಷ್ಟೇ ಅಲ್ಲ, ಸ್ಥಳೀಯ ನ್ಯಾಯವಾದಿಗಳು, ಶಿಕ್ಷಣ ತಜ್ಞರೂ ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶ್ರೀ ಕೆಂಗಲ್ ಹನುಮಂತಯ್ಯ ಲಾ ಕಾಲೇಜು ಪ್ರಿನ್ಸಿಪಾಲ್ ಡಾ.ಜಿ.ಮ್ಯಾಥ್ಯೂಸ್ ಉಪಸ್ಥಿತಿಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ಪದವಿ ಹಾಗೂ ಪದಕಗಳನ್ನು ನ್ಯಾಯಮೂರ್ತಿ ಇಂದಿರೇಶ್ ಅವರು ರಲ್ಲಿ ಪ್ರದಾನ ಮಾಡಿದರು.
ವಿದ್ಯಾರ್ಥಿಗಳ ಮನಮುಟ್ಟಿದ ನ್ಯಾ.ಇಂದಿರೇಶ್ ಹಿತವಚನ:
ನ್ಯಾಯಮೂರ್ತಿ ಇಂದಿರೇಶ್ ಅವರ ಸುದೀರ್ಘ ಭಾಷಣ ಕಾನೂನು ವಿದ್ಯಾರ್ಥಿಗಳ ಪಾಲಿಗೆ ಮಾರ್ಗದರ್ಶನ ಮಾತೆಂಬಂತಾಯಿತು. ಅವರ ಭಾಷಣದಿಂದ ಪುಳಕಿತರಾದ ವಿದ್ಯಾರ್ಥಿಗಳು ನ್ಯಾಯಮೂರ್ತಿ ಜೊತೆ ಫೊಟೋ ತೆಗೆಸಿಕೊಳ್ಳಲು ಮುಗಿಬಿದ್ದರು. ಸಮಚಿತ್ತದಿಂದಲೇ ನ್ಯಾಯಮೂರ್ತಿಗಳು ವಿದ್ಯಾರ್ಥಿಗಳ ಜೊತೆ ಫೊಟೋಗೆ ಫೋಸ್ ಕೊಟ್ಟ ನಡೆ ಎಲ್ಲರ ಮೆಚ್ಚುಗೆಗೂ ಕಾರಣವಾಯಿತು.