ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ ರಾಜೀನಾಮೆ.

ವಿಜಯ ದರ್ಪಣ ನ್ಯೂಸ್….

 ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ ರಾಜೀನಾಮೆ. 

ಚಿಕ್ಕಬಳ್ಳಾಪುರ: ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ ರಾಜೀನಾಮೆ ನೀಡಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.ಮುನಿಯಪ್ಪ ರಾಜೀನಾಮೆಗೆ ಶಾಸಕ ಪ್ರದೀಪ್ ಈಶ್ವರ್ ನಡೆ ಕುರಿತ ಅಸಮಾಧಾನವೇ ಕಾರಣ ಎಂಬ ಮಾತು ಕೇಳಿ ಬರುತ್ತಿವೆ.

ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಮುನಿಯಪ್ಪ ಅವರನ್ನು ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಆದರೆ, ಈಗ ಶಾಸಕ ಪ್ರದೀಪ್‌ ಈಶ್ವರ್ ಅವರ ನಡವಳಿಕೆಯಿಂದ ಬೇಸತ್ತು ಮುನಿಯಪ್ಪ ಅವರು ಅಧಿಕಾರ ವಹಿಸಿಕೊಳ್ಳಲು ನಿರಾಕರಿಸಿದ್ದಾರೆ ಎನ್ನಲಾಗಿದ್ದು, ರಾಜೀನಾಮೆ ಪತ್ರವನ್ನು ಜಿಲ್ಲಾಧಿಕಾರಿಗೆ ನೀಡಿದ್ದಾರೆ.

ಮುನಿಯಪ್ಪ ಅವರು ಅನಾರೋಗ್ಯದ ಕಾರಣದಿಂದ ನಾನು ಈ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂದು ರಾಜಿನಾಮೆ ಪತ್ರದಲ್ಲಿ ಮುನಿಯಪ್ಪ ಉಲ್ಲೇಖಿಸಿದ್ದಾರೆ. ಆದರೆ, ಆಪ್ತ ಮೂಲಗಳ ಪ್ರಕಾರ ಮುನಿಯಪ್ಪ ಅವರಿಗೆ ಶಾಸಕ ಪ್ರದೀಪ್ ಈಶ್ವರ್ ಅವರ ಧೋರಣೆ ಮತ್ತು ಪಕ್ಷದ ಮುಖಂಡರೊಂದಿಗೆ ಸಮಾಲೋಚನೆಯಲ್ಲಿ ತೋರಿಸುತ್ತಿರುವ ನಿರ್ಲಕ್ಷ್ಯವೇ ಮುಖ್ಯ ಕಾರಣ ಎನ್ನಲಾಗಿದೆ.

ಕಾಂಗ್ರೆಸ್ ಪಕ್ಷಕ್ಕೆ ಪ್ರಾಮಾಣಿಕವಾಗಿ ದುಡಿದ ಮುಖಂಡರನ್ನು ಶಾಸಕ ಪ್ರದೀಪ್‌ ಈಶ್ವ‌ರ್ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಅಲ್ಲದೆ, ದೂರವಾಣಿ ಕರೆಗಳಿಗೂ ಪ್ರತಿಕ್ರಿಯಿಸುವುದಿಲ್ಲ ಎಂದು ಜಿಲ್ಲೆಯ ಹಲವು  ಮುಖಂಡರು ಬಹಿರಂಗವಾಗಿ ಅಸಮಾಧಾನ ಹೊರ ಹಾಕುತ್ತಿದ್ದಾರೆ.