ಹೊಸ ಅಪರಾಧ ಕಾನೂನುಗಳು‌…….

ವಿಜಯ ದರ್ಪಣ ನ್ಯೂಸ್…

ಹೊಸ ಅಪರಾಧ ಕಾನೂನುಗಳು‌…….

ನ್ಯಾಯ, ಸಾಕ್ಷಿ, ತಂತ್ರಜ್ಞಾನ, ಶಿಕ್ಷೆ, ಆಧಾರಿತ ಹೊಸ ಅಪರಾಧ ಕಾನೂನು ಜಾರಿಗೆ ಬಂದಿದೆ. ಹಿಂದಿನ ಐಪಿಸಿ ಎಂಬ ಕ್ರಿಮಿನಲ್ ಕಾನೂನುಗಳನ್ನು ರದ್ದು ಮಾಡಲಾಗಿದೆ. ಕರ್ನಾಟಕದಲ್ಲಿ ಈ ಕಾನೂನಿಗೆ ರಾಜ್ಯ ಸರ್ಕಾರ ತನ್ನ ಸಾಂವಿಧಾನಿಕ ಅಧಿಕಾರ ಬಳಸಿಕೊಂಡು ಇನ್ನೊಂದಿಷ್ಟು ಸಣ್ಣ ತಿದ್ದುಪಡಿ ಮಾಡಲು ಯೋಚಿಸುತ್ತಿದೆ…..

ಒಟ್ಟಿನಲ್ಲಿ ನಿರಪರಾಧಿಗಳನ್ನು ರಕ್ಷಿಸಲು, ಅಪರಾಧಿಗಳನ್ನು ಶಿಕ್ಷಿಸಲು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕೆಲವು ಬದಲಾವಣೆಗಳೊಂದಿಗೆ ಹೊಸ ಕಾನೂನು ತರಲಾಗಿದೆ. ಇದಕ್ಕೆ ಸಂಸತ್ತಿನಲ್ಲಿ ಮತ್ತು ಕಾನೂನು ವಲಯದಲ್ಲಿ ಇನ್ನಷ್ಟು ದೀರ್ಘ ಚರ್ಚೆಯ ಅವಶ್ಯಕತೆ ಇತ್ತು. ಆದರೂ ಈಗ ಇನ್ನು ಮುಂದೆ ಅದೇ ಕಾನೂನಿನ ವ್ಯಾಪ್ತಿಗಳಲ್ಲಿ ನಾವೆಲ್ಲರೂ ಸೇರುತ್ತೇವೆ…..

ಇರಲಿ, ನಾವೇನು ಅಂತಹ ಹುಟ್ಟಾ ಅಪರಾಧಿಗಳಲ್ಲ. ಸಾಮಾನ್ಯ ಜನರು. ಕೆಲವು ಸಣ್ಣಪುಟ್ಟ ತಪ್ಪುಗಳಲ್ಲಿ ಭಾಗಿಯಾಗಬಹುದು ಅಥವಾ ಕೆಲವರು ನಮ್ಮನ್ನು ಶೋಷಿಸಬಹುದು. ಆದ್ದರಿಂದ ಸಾಮಾನ್ಯರು ಈ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಮೇಲ್ನೋಟಕ್ಕೆ ಅನಿಸಬಹುದು‌. ಆದರೆ ನಿಜಕ್ಕೂ ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಏರಿದಂತೆ ಕ್ರಿಮಿನಲ್ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಸಹಜವಾಗಿ ಮತ್ತು ಒಳ್ಳೆಯವರಾಗಿ ನಮ್ಮ ಪಾಡಿಗೆ ನಾವು ಇರಲು ಸಹ ಸಾಧ್ಯವಾಗುವುದಿಲ್ಲ…..

ಈ ಸಮಾಜದೊಂದಿಗೆ ಸದಾ ವ್ಯಾಪಾರ, ವ್ಯವಹಾರ, ಕ್ರಿಯೆ – ಪ್ರತಿಕ್ರಿಯೆ ಮುಂತಾದ ಚಟುವಟಿಕೆಗಳನ್ನು ನಿರಂತರವಾಗಿ ಮಾಡುತ್ತಲೇ ಇರಬೇಕಾಗುತ್ತದೆ. ಆದ್ದರಿಂದ ಈ ಕಾನೂನುಗಳು ಸಹ ನಮ್ಮ ಜೀವನದಲ್ಲಿ ಬಹು ಮುಖ್ಯ ಪಾತ್ರ ವಹಿಸಬಹುದು. ಕೇವಲ ಕಳ್ಳತನ, ವಂಚನೆ, ಭ್ರಷ್ಟಾಚಾರ, ಕೊಲೆ, ಅತ್ಯಾಚಾರ ಮಾತ್ರ ಅಪರಾಧವಲ್ಲ. ನಮ್ಮ ನಡುವಿನ ಅನೇಕ ಭಿನ್ನಾಭಿಪ್ರಾಯಗಳು, ಆಸ್ತಿ ಜಗಳಗಳು, ಸೈದ್ಧಾಂತಿಕ ನಿಲುವುಗಳು, ಹಣಕಾಸಿನ ವ್ಯವಹಾರಗಳು, ರಸ್ತೆ ಅಪಘಾತಗಳು, ಅನಿವಾರ್ಯವಾಗಿ ಸಾಕ್ಷಿಯಾಗಬೇಕಾದ ಕೊಲೆಗಳು, ವ್ಯವಸ್ಥೆಯ ವಿರುದ್ಧದ ಹೋರಾಟಗಳು, ಮುಂತಾದುವುಗಳಲ್ಲಿ ನಾವು ಸಾಮಾನ್ಯವಾಗಿ ಭಾಗಿಯಾಗಲೇ ಬೇಕಾಗುತ್ತದೆ…..

ಆದ್ದರಿಂದ ಈ ಹೊಸ ಕಾನೂನುಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವುದು ಸಹ ಮುಖ್ಯ. ಯಾರಾದರೂ ತಮಗೆ ಪರಿಚಯದ ವಕೀಲರನ್ನು, ಕಾನೂನು ತಜ್ಞರನ್ನು ಸಂಪರ್ಕಿಸಿ ಅಥವಾ ಅಂತರ್ಜಾಲದ ಮೂಲಕ ಸ್ವಲ್ಪ ಈ ಹೊಸ ಅಪರಾಧ ಕಾನೂನುಗಳ ಬಗ್ಗೆ ಅರಿವು ಮೂಡಿಸಿಕೊಂಡರೆ ಉತ್ತಮ. ಇದನ್ನು ಹೊರತುಪಡಿಸಿ ಇನ್ನೊಂದಷ್ಟು ನಮ್ಮ ಸಮಾಜದ ನೈತಿಕ ಮೌಲ್ಯಗಳ ಬಗ್ಗೆ ಮಾತನಾಡಬೇಕಿದೆ…….

ವಿಶ್ವದಲ್ಲೇ ಅತ್ಯಂತ ದೊಡ್ಡ ಲಿಖಿತ ಸಂವಿಧಾನ ಭಾರತದ್ದು. ಅತ್ಯಂತ ಚಿಕ್ಕ ಸಂವಿಧಾನ ಹೊಂದಿರುವುದು ಅಮೆರಿಕ. ಯಾವುದೇ ಲಿಖಿತ ಸಂವಿಧಾನ ಹೊಂದದೆ ಇತಿಹಾಸ ಮತ್ತು ಅನುಭವದ ಆಧಾರದ ಮೇಲೆ ಅಲಿಖಿತವಾಗಿರುವ ಸಂವಿಧಾನ ಇಂಗ್ಲೆಂಡ್ ನವರದು……

” ಕಾನೂನುಗಳು ಜಾಸ್ತಿಯಾದಷ್ಟೂ ಅಪರಾಧಗಳು ಹೆಚ್ಚಾಗುತ್ತದೆ ” ಎಂಬ ಮಾತು ಭಾರತಕ್ಕೆ ಸ್ಪಷ್ಟವಾಗಿ ಅನ್ವಯವಾಗುತ್ತದೆ. ಇಷ್ಟು ದೊಡ್ಡ ಎಲ್ಲಾ ಅಂಶಗಳನ್ನು ಒಳಗೊಂಡ ಸಂವಿಧಾನ ನಮ್ಮದಾದರೂ ಅದರ ದುರುಪಯೋಗ ಮಾತ್ರ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಕಾರಣ ನಮ್ಮ ಜನಗಳ – ವ್ಯವಸ್ಥೆಯ – ನಾಗರಿಕತೆಯ ಮೂಲ ಸ್ವರೂಪದಲ್ಲಿ ಇರುವ ಆತ್ಮವಂಚನೆಯ ವ್ಯಕ್ತಿತ್ವ…..

ಹೌದು, ಕಾನೂನಿನಲ್ಲಿ ಒಂದು ಅಂಶವಿದೆ. ಕೊಲೆ, ಅತ್ಯಾಚಾರ ಸೇರಿದಂತೆ ಯಾವುದೇ ಅಪರಾಧಕ್ಕೆ ಸ್ಪಷ್ಟವಾದ ಸಾಕ್ಷಿ ಮತ್ತು ದಾಖಲೆ ಇದ್ದಾಗ ಮಾತ್ರ ಆರೋಪಿಗೆ ಶಿಕ್ಷೆ ವಿಧಿಸಬೇಕು. ನೂರು ಅಪರಾಧಿಗಳು ಶಿಕ್ಷೆಯಿಂದ ಪಾರಾದರೂ ಪರವಾಗಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂಬುದು ಇದರ ಮೂಲ ಆಶಯ. ಆದರೆ ಆಗಿರುವುದೇನು ?……

ಈ ದೇಶದ ಶೇಕಡಾ 90% ಕ್ಕೂ ಹೆಚ್ಚು ಗಂಭೀರ ಆರೋಪಗಳು ಸಾಕ್ಷಿಗಳ ಕೊರತೆಯಿಂದ, ಪ್ರಾಸಿಕ್ಯೂಷನ್ ಅದನ್ನು ದೃಢಪಡಿಸಲು ಸಾಧ್ಯವಾಗದ ಕಾರಣ, ವಕೀಲರ ಬುದ್ಧಿವಂತಿಕೆಯಿಂದ ಶಿಕ್ಷಿಯಾಗದೆ ಬಿಡುಗಡೆಯಾಗುತ್ತಿವೆ…..

ಕಾನೂನುನಲ್ಲಿ ಕೆಲವು ಲೋಪಗಳಿವೆ ಅಥವಾ ದುರುಪಯೋಗ ಪಡಿಸಿಕೊಳ್ಳವ ಅವಕಾಶ ಇದೆ ಎಂದ ಮಾತ್ರಕ್ಕೆ ನಾವು ತಪ್ಪು ಮಾಡಬೇಕೆ, ಟ್ರಾಫಿಕ್ ಸಿಗ್ನಲ್ ನಲ್ಲಿ ಹಸಿರು ದೀಪ ಇದೆ ಎಂಬ ಕಾರಣಕ್ಕೆ ಮುಂದೆ ಮನುಷ್ಯರು ಇದ್ದರೂ ಸಹ ವಾಹನ ಚಲಾಯಿಸಬಹುದೇ, ಅಪರಾಧ ಸಾಬೀತು ಪಡಿಸಲು ಸಾಕ್ಷಿಗಳ ಅವಶ್ಯಕತೆ ಇದೆ ಎಂದ ಮಾತ್ರಕ್ಕೆ ‌ಸಾಕ್ಷ್ಯಗಳು ಇಲ್ಲದಂತೆ ಕೊಲೆ, ಅತ್ಯಾಚಾರ, ಭ್ರಷ್ಟಾಚಾರ ಮಾಡಬಹುದೇ…..

ಸಂವಿಧಾನದಲ್ಲಿ ಅಧಿಕಾರ ಹಿಡಿಯಲು ಆಯ್ಕೆಯಾದ ಜನ ಪ್ರತಿನಿಧಿಗಳ ಸಂಖ್ಯೆ ಮುಖ್ಯ ಎಂಬ ಒಂದು ಅಂಶವನ್ನೇ ಮುಂದೆ ಮಾಡಿ ಯಾರು ಯಾರೋ, ಹೇಗೆ ಹೇಗೋ, ವಾಮ ಮಾರ್ಗದಿಂದ ಅಧಿಕಾರ ಸ್ವೀಕರಿಸಬಹುದೇ, ಪರೀಕ್ಷೆಗಳಲ್ಲಿ ಅಂಕಗಳೇ ಮುಖ್ಯ ಎಂದು ವಿದ್ಯಾರ್ಥಿಗಳು ಯಾರಿಗೂ ಕಾಣದಂತೆ ಯಾವುದೋ ಮಾರ್ಗದಲ್ಲಿ ಅಂಕ ಹೆಚ್ಚು ಗಳಿಸಿದರೆ ಸಾಕೇ, ಯಾರಿಗೂ ಗೊತ್ತಾಗದಂತೆ ಲಂಚ ಪಡೆಯಬಹುದೇ………

ಸ್ವತಃ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇದನ್ನು ಬಲ್ಲವರಾಗಿದ್ದರು. ಅವರೇ ಒಮ್ಮೆ ಹೇಳುತ್ತಾರೆ. ಕಾನೂನುಗಳ ರಚನೆಯ ಸಾರ್ಥಕತೆ ಅಡಗಿರುವುದು ಅದನ್ನು ಅನುಷ್ಠಾನಗೊಳಿಸುವವರ ಪ್ರಾಮಾಣಿಕತೆಯನ್ನು, ನೈತಿಕತೆಯನ್ನು ಅವಲಂಬಿಸಿರುತ್ತದೆ ಎಂದು……

ಲೋಪವಿರುವುದು ಕಾನೂನಿನಲ್ಲಿ – ಸಂವಿಧಾನದಲ್ಲಿಯಲ್ಲ.
ನಮ್ಮ ಮನಸ್ಸುಗಳಲ್ಲಿ,
ನಮ್ಮ ನಡವಳಿಕೆಗಳಲ್ಲಿ,
ನಮ್ಮ ವ್ಯಕ್ತಿತ್ವದಲ್ಲಿ…….

ಕಾನೂನಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಲಂಚ ಪಡೆಯುವುದು ಅಪರಾಧ ಅದಕ್ಕೆ ಶಿಕ್ಷೆ ಇದೆ ಎಂದು. ಆದರೆ ಈ ದೇಶದ ಆಡಳಿತದ – ಕೆಲಸದ ಸಮಯದಲ್ಲಿ ಮತ್ತು ನಂತರದಲ್ಲೂ ಪ್ರತಿ ಕ್ಷಣ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆಯುತ್ತಲೇ ಇದೆ……

ಕೊಲೆ ಅತ್ಯಾಚಾರ ದರೋಡೆಗೆ ಮರಣದಂಡನೆ ಜೀವಾವಧಿ ಶಿಕ್ಷೆ ಇದ್ದರು ಈಗಲೂ ಇದು ನಮ್ಮ ಸಮಾಜದ ದಿನನಿತ್ಯದ
ಭಾಗವಾಗಿದೆ……..

ಈಗ ಹೇಳಿ, ಕಾನೂನು ಮಾಡುವುದು ಹೇಗೆ. ಕಳ್ಳರ ಸಂತೆಯಲ್ಲಿ ಸಂತನನ್ನು ಹುಡುಕುವುದು ಹೇಗೆ….

ನನ್ನ ಅನುಭವದಲ್ಲಿ ಹೇಳುವುದಾದರೆ, ಕಾನೂನುಗಳು ಎಷ್ಟೇ ಬಿಗಿಯಾಗಿದ್ದರು ಕಾಲ ಕ್ರಮೇಣ ಅದರ ಲೋಪಗಳು ತೆರೆದುಕೊಳ್ಳುತ್ತಾ ಸಡಿಲವಾಗುತ್ತವೆ ಮತ್ತು ಅಪರಾಧಗಳಿಗೆ ಸಹಾಯ ಮಾಡುತ್ತದೆ. ಪಕ್ಷಾಂತರ ನಿಷೇಧ ಕಾನೂನು ಈಗ ಪಕ್ಷಾಂತರಿಗಳಿಗೆ ವರವಾದ ರೀತಿಯಲ್ಲಿ…..

ಈಗಲೂ ಅಷ್ಟೇ,
ನ್ಯಾಯಾಲಯದ ವಿಚಾರಣೆಯಲ್ಲಿ ಅನುಭವ ಇರುವವರಿಗೆ ಇದು ತಿಳಿದಿರುತ್ತದೆ. ಒಬ್ಬ ನಿರಪರಾಧಿ ತಾನು ಒಳ್ಳೆಯವನು ಎಂದು ಸಾಬೀತು ಪಡಿಸಲು ಹಲವಾರು ದಾಖಲೆಗಳನ್ನು ಒದಗಿಸಬೇಕು. ನಾವು ಸಹಾಯದ ಸಾಲವಾಗಿ ಗೆಳೆಯರು ಮತ್ತು ಸಂಬಂಧಿಗಳಿಗೆ ಹಣ ಕೊಟ್ಟು ಅವರು ಅದನ್ನು ಹಿಂದಿರುಗಿಸದಿದ್ದಾಗ, ಅದನ್ನು ಪಡೆಯಲು ನ್ಯಾಯಾಲಯದ ಮೊರೆ ಹೋದಾಗ, ನಾವು ಹಣ ಕೊಟ್ಟಿರುವ ಕಾರಣ, ಸಂದರ್ಭ, ಕೊಟ್ಟಿರುವ ರೀತಿ, ಕಾನೂನಿನ ವ್ಯಾಪ್ತಿ ಮುಂತಾದ ಅನೇಕ ವಿಷಯಗಳನ್ನು ಸ್ಪಷ್ಟವಾಗಿ ಅರ್ಥಮಾಡಿಸಬೇಕು…..

ಆದರೆ ತಪ್ಪಿತಸ್ಥರು ಒಂದೇ ವಾಕ್ಯದಲ್ಲಿ ತಾನು ಅಪರಾಧ ಮಾಡಿಲ್ಲ ಅಥವಾ ಹಣ ಪಡೆದಿಲ್ಲ ಎಂದು ಹೇಳುತ್ತಾರೆ ಮತ್ತು ನಾವು ಕೊಟ್ಟಿರುವ ಸಾಕ್ಷಿ ದಾಖಲೆಗಳನ್ನು ಸುಳ್ಳು ಎಂದು ಸಾಬೀತುಪಡಿಸಲು ಸಹಜವಾಗಿ ಅನೇಕ ಮಾರ್ಗಗಳು ಇರುತ್ತದೆ. ಏಕೆಂದರೆ ವ್ಯವಹಾರ ಮಾಡುವಾಗ ಮೊದಲೇ ಎಲ್ಲವನ್ನೂ ಊಹಿಸುವುದು ಕಷ್ಟ. ಒಂದು ವೇಳೆ ಊಹಿಸಿದರೆ ಎಷ್ಟೋ ವ್ಯವಹಾರಗಳು ನಡೆಯುವುದೇ ಇಲ್ಲ. ಎಲ್ಲರೂ ಸಂಬಳದ ಕೆಲಸ ಮಾಡುವ ಅಥವಾ ಶ್ರೀಮಂತರು ಅಲ್ಲವಲ್ಲ. ಹೊಟ್ಟೆ ಪಾಡಿಗೆ ಕೆಲಸ ವ್ಯವಹಾರ ಮಾಡಲೇ ಬೇಕಲ್ಲವೇ. ಕೆಲವೊಮ್ಮೆ ಸಹಾಯವೂ ಮಾಡಬೇಕಾಗುತ್ತದೆ. ನಂಬಿಕೆಗಳ – ಭಾವನೆಗಳ ಆಧಾರದಲ್ಲಿ ಈ ದೇಶ ನಡೆಯುತ್ತಿದೆಯೇ ಹೊರತು ವಾಸ್ತವದ ಮೇಲಲ್ಲ……

ನಿರಪರಾಧಿಯೊಬ್ಬ ಅಥವಾ ಹಣದ ಸಹಾಯ ಮಾಡಿದವನು ಮೋಸ ಮಾಡಿದವನ ಮೇಲೆ ಮೊಕದ್ದಮೆ ಹೂಡಿದಾಗ ತೀರ್ಮಾನದ ಒಂದು ಭಾಗವಾಗಿ ನಿರಪರಾಧಿಯನ್ನು ವಿರೋಧಿ ವಕೀಲರು ಕಟಕಟೆಯಲ್ಲಿ ನಿಲ್ಲಿಸಿ ಕೇಳುವ ಪ್ರಶ್ನೆಗೆ ಆತ ಎಷ್ಟೇ ಪ್ರಾಮಾಣಿಕನಾಗಿದ್ದರೂ ತತ್ತರಿಸಿ ಹೋಗುತ್ತಾನೆ. ಅತ್ಯಾಚಾರಕ್ಕೆ ಒಳಗಾದ ಹೆಣ್ಣು ಮಗಳು ಸಹ ಅತ್ಯಾಚಾರಿ ಪರ ವಕೀಲರ ಕೆಲವು ಪ್ರಶ್ನೆಗೆ ಅವಮಾನ ಸಹಿಸಲಾಗದೆ ಆತ್ಮಹತ್ಯೆಯೇ ಲೇಸು ಎಂದು ಆಲೋಚಿಸುವುದೂ ಉಂಟು….

ನಮ್ಮ ಕಣ್ಣ ಮುಂದೆಯೇ ನಡೆದ ಕೊಲೆ, ಅತ್ಯಾಚಾರ, ಭ್ರಷ್ಟಾಚಾರ ಪ್ರಕರಣ ನಡದೇ ಇಲ್ಲ ಎನ್ನುವಷ್ಟು ಆಳವಾಗಿ ಕಾನೂನಿನ ಸಾಕ್ಷಿಗಳನ್ನು ತಿರುಚಿ ವಾದಿಸಬಲ್ಲ ಸಮರ್ಥ ಕ್ರಿಮಿನಲ್ ಲಾಯರುಗಳು ಸಹ ಇದ್ದಾರೆ……

ಹೀಗಿದೆ ನಮ್ಮ ಕಾನೂನು, ವ್ಯವಸ್ಥೆ, ಮನಸ್ಸು, ನಡವಳಿಕೆ. ಇದು ಮುಗಿಯದ ಕಥೆ…..

ಒಟ್ಟಾರೆ ಸಮಸ್ಯೆ ಇರುವುದು ಕಾನೂನು ಅಥವಾ ಸಂವಿಧಾನದಲ್ಲಿ ಅಲ್ಲ. ಒಂದು ವೇಳೆ ಸಣ್ಣ ಪುಟ್ಟ ಸಮಸ್ಯೆ ಇದ್ದರೂ ಅದನ್ನು ತಿದ್ದುಪಡಿ ಮುಖಾಂತರ ಬದಲಾಯಿಸಬಹುದು.
ಆದರೆ ವ್ಯಕ್ತಿತ್ವದ – ವ್ಯವಸ್ಥೆಯ ಸಮಸ್ಯೆ ಬದಲಾಯಿಸುವುದು ಹೇಗೆ ??????‌…..

ಅದರ ಹುಡುಕಾಟವೇ …….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ
ಮನಸ್ಸುಗಳ ಅಂತರಂಗದ ಚಳವಳಿ.


ವಿವೇಕಾನಂದ. ಎಚ್. ಕೆ.
9844013068……