ಸೈಬರ್ ಸೆಂಟರ್ಗಳ ಮುಂದೆ ಪಡಿತರ ಚೀಟಿಗಾಗಿ ಜನರ ಅಲೆದಾಟ

ವಿಜಯ ದರ್ಪಣ ನ್ಯೂಸ್…..

ವಿಜಯಪುರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ : ಪಟ್ಟಣದ ಸೈಬ‌ರ್ಸೆಂಟರ್‌ಗಳ ಮುಂದೆ ಸಾರ್ವಜನಿಕರು ತುಂಬಿ ತುಳುಕುತ್ತಿದ್ದಾರೆ ಸರ್ಕಾರದ ರಾಜಕಾರಣಿಗಳಿಗೆ ಮತ್ತು ಆಹಾರ ಇಲಾಖೆ ಅಧಿಕಾರಿಗಳಿಗೆ ಜನ ಶಾಪ ಹಾಕುತ್ತಿದ್ದಾರೆ.

ಕಳೆದ ಒಂದು ವರ್ಷದಿಂದ ರೇಷನ್‌ ಕಾರ್ಡ್ ಮಾಡಿಸಿಕೊಳ್ಳಲು ಸೈಬರ್ ಸೆಂಟರ್ ಗಳ ಮುಂದೆ ಪರದಾಡುತ್ತಿದ್ದೇವೆ. ಸೈಬರ್ ಸೆಂಟರ್ ಗಳ ಮುಂದೆ ಕಾದು ಕಾದು ಸಾಕಾಗಿದೆ. ಇಲಾಖೆ, ರಾಜಕಾರಣಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷದಿಂದ ನಾವು ಪರದಾಡುವ ಪರಿಸ್ಥಿತಿ ಉಂಟಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ

ಇದೇ ಸಂದರ್ಭದಲ್ಲಿ ವಿಜಯಪುರ ಪಟ್ಟಣದ ತಸ್ಲಿಂ ಎಂಬ ಮಹಿಳೆ ಮಾತನಾಡಿ ಕಳೆದ ನಾಲೈದು ವರ್ಷಗಳಿಂದ ರೇಷನ್‌ ಕಾರ್ಡ್ಗಾಗಿ ಮಕ್ಕಳು ಮರಿಗಳನ್ನು ಹಾಕಿಕೊಂಡು ಸೈಬರ್ ಸೆಂಟರ್ ಬಳಿ ಕಾದು ಕಾದು ಸಾಕಾಗಿದೆ. ಓಟು ಕೇಳಲು ಮಾತ್ರ ರಾಜಕಾರಣಿಗಳು ಮನೆ ಮುಂದೆ ಬರುತ್ತಾರೆ.

ಈ ಪಕ್ಷಕ್ಕೆ ಮತ ಹಾಕಿ ಆ ಪಕ್ಷಕ್ಕೆ ಮತ ಹಾಕಿ ಎಂದು ಹೇಳುತ್ತಾರೆ ಈಗ ಯಾರೂ ಬರುವುದಿಲ್ಲ. ಇವರಿಗೆ ಏಕೆ ಮತ ಹಾಕಬೇಕು ಇವರು ಮತ ಹಾಕಿಸಿಕೊಂಡು ಮನೆಯಲ್ಲಿ ಕೂತು ಇರುತ್ತಾರೆ ನಮ್ಮ ಕಷ್ಟ ಯಾರಿಗೆ ಹೇಳುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಂಡಿಗನಹಳ್ಳಿ ಗ್ರಾಮದ ದೇವರಾಜ್ ಮಾತನಾಡಿ ಕಳೆದ ಎರಡು ತಿಂಗಳಿಂದ ಸೈಬ‌ರ್ ಸೆಂಟರ್ ಗೆ ಬಂದು ಹೋಗುತ್ತಿದ್ದೇವೆ ಸರ್ವ‌ರ್ ಇಲ್ಲ ಎಂದು ಹೇಳುತ್ತಲೇ ಇದ್ದಾರೆ. ಕೂಲಿ ನಾಲಿ ಮಾಡುವ ಜನ ಬೆಳಗ್ಗೆಯಿಂದ ಸಂಜೆವರೆಗೂ ಸೈಬರ್ ಸೆಂಟರ್ ಮುಂದೇನೇ ಇದ್ದರೇ ನಮ್ಮ ಹೊಟ್ಟೆ ಪಾಡೇನು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ನಿವಾಸಿ ಶಬಿನಾ ಮಾತನಾಡಿ ಕಳೆದ ಒಂದು ವರ್ಷಗಳಿಂದ ಸೈಬರ್ ಸೆಂಟರ್ ಗೆ ಬಂದು ಹೋಗುತ್ತಿದ್ದೇವೆ ನನ್ನ ಗಂಡನಿಗೆ ಆಸ್ಪತ್ರೆಯಲಿ ಚಿಕಿತ್ಸೆ ನೀಡಲಾಗುತ್ತಿದ್ದು ರೇಷನ್‌ ಕಾರ್ಡ್ ಕೇಳುತ್ತಾರೆ. ರೇಷನ್ ಕಾರ್ಡ್ ಇಲ್ಲದೆ ನನ್ನ ಗಂಡನಿಗೆ ಚಿಕಿತ್ಸೆ ಇಲ್ಲದೆ ಒಂದು ವರ್ಷದಿಂದ ನರಳುತ್ತಿದ್ದಾರೆ. ರೇಷನ್‌ಕಾರ್ಡ್ ಇಲ್ಲದೆ ಚಿಕಿತ್ಸೆ ಇಲ್ಲದಂತಾಗಿ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಕೂಡಲೇ ರೇಷನ್ ಕಾರ್ಡ್ ಮಾಡಿಸಿಕೊಳ್ಳಲು ಅನುವು ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.