ರೈತರಿಗೆ ಬೆಳೆ ವಿಮೆಯಿಂದಾಗುವ ಅನುಕೂಲದ ಬಗ್ಗೆ ಅರಿವು ಮೂಡಿಸಿ: ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್
ವಿಜಯ ದರ್ಪಣ ನ್ಯೂಸ್…
ರೈತರು ಬೆಳೆ ವಿಮೆಗೆ ನೋಂದಾಯಿಸಲು ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ಸಲಹೆ
ರೈತರಿಗೆ ಬೆಳೆ ವಿಮೆಯಿಂದಾಗುವ ಅನುಕೂಲದ ಬಗ್ಗೆ ಅರಿವು ಮೂಡಿಸಿ: ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್
ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜುಲೈ. 02 :- ರೈತರಿಗೆ ಬೆಳೆ ವಿಮೆ ನೋಂದಣಿ ಮಾಡಿಸುವದರಿಂದ ಆಗುವ ಲಾಭ ಹಾಗೂ ಅನುಕೂಲಗಳ ಕುರಿತು ಸರಿಯಾದ ಮಾಹಿತಿ ಇರುವುದಿಲ್ಲ. ಕೃಷಿ, ತೋಟಗಾರಿಕೆ ಅಧಿಕಾರಿಗಳು ಮತ್ತು ಬೆಳೆ ವಿಮಾ ಸಂಸ್ಥೆಗಳು ಜಂಟಿಯಾಗಿ ಸ್ಥಳೀಯ ಮಟ್ಟದಲ್ಲಿ ರೈತರಿಗೆ ಬೆಳೆ ವಿಮೆ ಬಗ್ಗೆ ಅರಿವು ಮೂಡಿಸುವ ಮೂಲಕ ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಲು ಕ್ರಮ ವಹಿಸಿ ಎಂದು ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಹೋಬಳಿ ಮಟ್ಟದಲ್ಲಿ ವಾರಕ್ಕೊಮ್ಮೆ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ರೈತರ ಕೃಷಿ ಕಾರ್ಯಾಗಾರವನ್ನು ಆಯೋಜನೆ ಮಾಡಿ, ರೋಗ ಬಾಧೆಯಿಂದ ಬೆಳೆಯ ರಕ್ಷಣೆ, ಗೊಬ್ಬರ ಪೂರೈಕೆ, ಇಳುವರಿ ಹೆಚ್ಚಿಸುವ ಬೆಳೆಗಳ ಕುರಿತು ಜಾಗೃತಿ ಮೂಡಿಸಿ ಜೊತೆಗೆ ಬೆಳೆ ವಿಮೆ ನೋಂದಣಿಗೆ ಹೆಚ್ಚಿನ ಜಾಗೃತಿ ಮೂಡಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದರು.
ಪ್ರಸಕ್ತ ವರ್ಷದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಮಟ್ಟದಲ್ಲಿ ನೋಂದಣಿಯಾಗಿ ಗುರಿಯನ್ನು ಸಾಧಿಸಬೇಕು ಈ ಹಿನ್ನೆಲೆಯಲ್ಲಿ
ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಡಿಯಲ್ಲಿ ಬರುವ ಬೆಳೆಗಳಿಗೆ ರೈತರು ವಿಮೆ ಮಾಡಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕೃಷಿ ಬೆಳೆ ವಿಮೆಗೆ ನೋಂದಾಯಿಸಿ
2024 ರ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೃಷಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದ್ದು, ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ.
ವಿಮೆ ಮಾಡಿದ ಕ್ಷೇತ್ರದಲ್ಲಿ ಮಳೆ ಅಭಾವದಿಂದ ಬಿತ್ತನೆ/ನಾಟಿ ವಿಫಲಗೊಂಡಲ್ಲಿ ವಿಮಾ ರಕ್ಷಣೆ ಒದಗಿಸುವುದು. ಹಾಲಿ ಇರುವ ಬೆಳೆಗಳಿಗೆ (ಬಿತ್ತನೆಯಿಂದ ಕಟಾವಿನ ಹಂತದವರೆಗೆ) ಬರ/ಶುಷ್ಕ ಪರಿಸ್ಥಿತಿ, ನೆರೆ/ಪ್ರವಾಹಗಳಿಂದ ಬೆಳೆ ಮುಳಗಡೆ, ಗುಡುಗು ಮಿಂಚುಗಳಿಂದ ಉಂಟಾಗುವ ಬೆಂಕಿ ಅವಘಡ, ಭೂಕುಸಿತ, ಬಿರುಗಾಳಿ, ಚಂಡಮಾರುತ ಸಹಿತ ಮಳೆ, ಅಕಾಲಿಕ ಮಳೆಯಿಂದ ನಷ್ಟ ಸಂಭವಿಸಿದಲ್ಲಿ ಸಮಗ್ರ ವಿಮಾ ಭದ್ರತೆಯನ್ನು ಒದಗಿಸುವುದು ಹಾಗೂ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟ ಸಂದರ್ಭದಲ್ಲಿ (14 ದಿನಗಳವರೆಗೆ) ಆಲಿಕಲ್ಲು ಮಳೆ, ಚಂಡಮಾರುತ ಸಹಿತ ಮಳೆ ಹಾಗೂ ಅಕಾಲಿಕ ಮಳೆಯಿಂದ ಬೆಳೆ ನಷ್ಟವಾದರೆ ನಷ್ಟ ಪರಿಹಾರವನ್ನು ಒದಗಿಸುವುದು ಯೋಜನೆಯ ಪ್ರಮುಖ ಅಂಶಗಳಾಗಿರುತ್ತವೆ.
ಆಯಾ ತಾಲ್ಲೂಕಿನಲ್ಲಿ ಮುಖ್ಯ ಬೆಳೆಗಳಿಗೆ ಗ್ರಾಮ ಪಂಚಾಯತ್/ ನಗರ ಸ್ಥಳೀಯ ಸಂಸ್ಥೆಗಳನ್ನು ವಿಮಾ ಘಟಕವಾಗಿ ಹಾಗೂ ಇತರೆ ಬೆಳೆಗಳಿಗೆ ಹೋಬಳಿಯನ್ನು ವಿಮಾ ಘಟಕವಾಗಿ ಪರಿಗಣಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮುಖ್ಯ ಬೆಳೆಯಾಗಿ ರಾಗಿ (ಮಳೆಯಾಶ್ರಿತ ಮತ್ತು ನೀರಾವರಿ) ಹಾಗೂ ಭತ್ತ (ನೀರಾವರಿ), ಮುಸುಕಿನ ಜೋಳ (ಮಳೆಯಾಶ್ರಿತ ಮತ್ತು ನೀರಾವರಿ), ತೊಗರಿ (ಮಳೆಯಾಶ್ರಿತ ಹಾಗೂ ನೀರಾವರಿ), ನೆಲಗಡಲೆ (ಮಳೆಯಾಶ್ರಿತ) ಹುರುಳಿ (ಮಳೆಯಾಶ್ರಿತ) ಮತ್ತು ಟೊಮ್ಯಾಟೋ ಬೆಳೆಗಳನ್ನು ಇತೆರೆ ಬೆಳೆಗಳಾಗಿ ಅಧಿಸೂಚಿಸಲಾಗಿದೆ.
ಟೊಮ್ಯಾಟೋ ಮತ್ತು ತೊಗರಿ ಬೆಳೆಗೆ ಜುಲೈ 15, ನೆಲಗಡಲೆ ಬೆಳೆಗೆ ಜುಲೈ 31 ಮತ್ತು ಉಳಿದಂತೆ ರಾಗಿ, ಭತ್ತ, ಮುಸುಕಿನ ಜೋಳ ಮತ್ತು ಹುರುಳಿ ಬೆಳೆಗಳಿಗೆ ಆಗಸ್ಟ್ 16 ರವರೆಗೆ ವಿಮೆಗೆ ನೋಂದಾಯಿಸಲು ಕೊನೆಯ ದಿನಾಂಕವಾಗಿದೆ.
ಅಂತಿಮ ದಿನದವರೆಗೆ ಕಾಯದೆ ರೈತರು ಹತ್ತಿರದ ಗ್ರಾಮ ಒನ್, ಸಾಮಾನ್ಯ ಸೇವಾ ಕೇಂದ್ರ, ಕರ್ನಾಟಕ ಒನ್ ಅಥವಾ ಬ್ಯಾಂಕ್ಗಳಲ್ಲಿ ವಿಮಾ ಪ್ರಸ್ತಾವನೆ, ಪಹಣಿ, ಚಾಲ್ತಿ ಬ್ಯಾಂಕ್ ಪಾಸ್ ಪುಸ್ತಕ, ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯೊಂದಿಗೆ ಪ್ರೀಮಿಯಂ ಪಾವತಿಸಿ ವಿಮೆಗೆ ನೋಂದಾಯಿಸುವುದು.
ಆಸಕ್ತ ರೈತರು ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳು, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಬ್ಯಾಂಕುಗಳನ್ನು ಸಂಪರ್ಕಿಸಿ, ಕೊನೆಯ ದಿನಾಂಕದವರೆಗೆ ವಿಳಂಬಿಸದೆ ವಿಮೆಗೆ ನೋಂದಾಯಿಸಿಕೊಳ್ಳಬಹುದು.