ಬದಲಾವಣೆಯ ದಾರಿಯಲ್ಲಿ ಭಾರತದ ರಾಜಕೀಯ ಮತ್ತು ಸಂಸತ್ತು……..
ವಿಜಯ ದರ್ಪಣ ನ್ಯೂಸ್…
ಬದಲಾವಣೆಯ ದಾರಿಯಲ್ಲಿ ಭಾರತದ ರಾಜಕೀಯ ಮತ್ತು ಸಂಸತ್ತು……..
ಕಳೆದ ಹತ್ತು ವರ್ಷಗಳಿಂದ ಒಂದು ರೀತಿಯ ರಾಜಕೀಯ ಮತ್ತು ಆಡಳಿತಾತ್ಮಕ ವ್ಯವಸ್ಥೆಯನ್ನು ನೋಡಿದ್ದೇವೆ. ಈಗ ಬಿರುಗಾಳಿಯ ನಂತರದ ಸ್ವಲ್ಪ ಆತಂಕ ಮತ್ತು ಕುತೂಹಲದ ವಾತಾವರಣದಂತೆ ಭಾರತದ ರಾಜಕಾರಣ ಕಂಡುಬರುತ್ತಿದೆ……
ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿಯವರ ನೇರ ಮುಖಾಮುಖಿ ಆಗುತ್ತಿದೆ. ಇಬ್ಬರ ವಯಸ್ಸು, ಅನುಭವ, ಹಿನ್ನೆಲೆ, ಸ್ವಭಾವ, ಪಕ್ಷ, ಸೈದ್ಧಾಂತಿಕ ನಿಲುವುಗಳು ತೀರಾ ವಿಭಿನ್ನ, ವಿರುದ್ಧ ಮತ್ತು ವೈರುಧ್ಯಗಳಿಂದ ಕೂಡಿವೆ…….
ಸಹಜವಾಗಿಯೇ ಅವರವರ ಅಭಿಮಾನಿಗಳಿಗೆ, ಹಿಂಬಾಲಕರಿಗೆ ಇಬ್ಬರೂ ಸೂಪರ್ ಹೀರೋಗಳ ತರ ಕಂಡರೆ, ಅದೇ ಸಮಯದಲ್ಲಿ ಅವರ ವಿರೋಧಿಗಳಿಗೆ ವಿಲನ್ ಗಳಂತೆ ಕಾಣುತ್ತಾರೆ ಇದು ಒಂದು ಸಹಜ ಪ್ರತಿಕ್ರಿಯೆ…..
ಕಳೆದ ಹತ್ತು ವರ್ಷಗಳಿಂದ ಏರುಮುಖವಾಗಿದ್ದ ನರೇಂದ್ರ ಮೋದಿಯವರ ರಾಜಕೀಯ ಬದುಕು ಈ ಕ್ಷಣದಲ್ಲಿ ತಟಸ್ಥತೆಗೆ ಅಥವಾ ಸಮತಟ್ಟಾದ ಸ್ಥಳಕ್ಕೆ ಬಂದು ನಿಂತಂತಿದೆ. ಹಾಗೆಯೇ ಇಳಿಮುಖವಾಗುತ್ತಿದ್ದ ರಾಹುಲ್ ಗಾಂಧಿಯವರ ರಾಜಕೀಯ ಜೀವನ ಏರು ಮುಖದಲ್ಲಿದೆ…….
ರಾಜಕೀಯವಾಗಿ ಇದೊಂದು ಸ್ವಾಭಾವಿಕ ಬದಲಾವಣೆಗಳು. ಆ ನಿಟ್ಟಿನಲ್ಲಿ ಯೋಚಿಸುವುದಾದರೆ ಅದಕ್ಕೆ ಹಲವಾರು ಕಾರಣಗಳು ಸಿಗಬಹುದು. ಆದರೆ ವ್ಯಕ್ತಿಗತವಾಗಿ ಇದನ್ನು ಸಹಜ ಪ್ರಕ್ರಿಯೆ ಎಂದೇ ಪರಿಗಣಿಸಬೇಕು……
ಚಹಾ ಮಾರುತಿದ್ದ ವ್ಯಕ್ತಿಯೊಬ್ಬರು 10 ವರ್ಷಗಳ ಕಾಲ 143 ಕೋಟಿ ಜನಸಂಖ್ಯೆಯ ದೇಶದಲ್ಲಿ ಏಕಮೇವಾದ್ವಿತೀಯ ನಾಯಕರಾಗಿ ಮೋದಿ….. ಮೋದಿ…. ಮೋದಿ….. ಎಂಬ ಹವಾ ಸೃಷ್ಟಿಸಿ ದೇಶದಲ್ಲಿ ಮಾತ್ರವಲ್ಲ, ಅಂತರಾಷ್ಟ್ರೀಯ ಮಟ್ಟದಲ್ಲೂ ಬಹುದೊಡ್ಡ ಇಮೇಜ್ ಸೃಷ್ಟಿಸಿಕೊಂಡಿದ್ದರು. ಅದು ವ್ಯಕ್ತಿಯೊಬ್ಬರ ವೈಯಕ್ತಿಕ ಮಹೋನ್ನತ ಸಾಧನೆ ಅಥವಾ ಪಡೆದ ಸ್ಥಾನ ಎಂದು ಭಾವಿಸಬಹುದು. ಮೋದಿಯವರ ರಾಜಕೀಯ ಅಥವಾ ಸೈದ್ಧಾಂತಿಕ ಅಥವಾ ಬೇರೆ ಯಾವುದೇ ವಿಷಯದಲ್ಲಿ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ವ್ಯಕ್ತಿಗತವಾಗಿ 75 ವರ್ಷದ ಆಸುಪಾಸಿನ ವ್ಯಕ್ತಿ ತನ್ನ ಬದುಕಿನಲ್ಲಿ ಕಂಡ ಬಹುತೇಕ ಕನಸುಗಳನ್ನು ಈಡೇರಿಸಿಕೊಂಡು ಅತ್ಯುನ್ನತ ಸ್ಥಾನ ತಲುಪಿ, ಆ ಸ್ಥಾನದಲ್ಲೂ 10 ವರ್ಷಗಳ ನಿರಂತರತೆ ಕಾಪಾಡಿಕೊಂಡು ಮುಂದುವರಿಯುತ್ತಿರುವುದು ವ್ಯಕ್ತಿಗತವಾಗಿ ಬಹುದೊಡ್ಡ ಸಾಧನೆಯೇ ಸರಿ. ಆ ಎತ್ತರ ಏರುವವರ ಸಂಖ್ಯೆ ತುಂಬಾ ತುಂಬಾ ಅಪರೂಪ ಮತ್ತು ಕಡಿಮೆ. ಹಾಗೆಂದು ಅದಕ್ಕಾಗಿ ತುಂಬಾ ಶ್ರಮ ಆಗಿದೆ ಎಂಬುದು ಅಷ್ಟೇನು ಉತ್ತಮ ವ್ಯಾಖ್ಯಾನವಲ್ಲ. ಏಕೆಂದರೆ ಹುಟ್ಟುವ ಪ್ರತಿ ವ್ಯಕ್ತಿಯು ತನ್ನದೇ ರೀತಿಯಲ್ಲಿ ತನ್ನ ತನ್ನ ಕ್ಷೇತ್ರದಲ್ಲಿ ಶ್ರಮ ಪಡುತ್ತಲೇ ಇರುತ್ತಾರೆ. ಆದರೆ ಶ್ರಮದ ಜೂತೆಗೆ ಅದನ್ನು ಮೀರಿದ ಒಂದು ಅದೃಷ್ಟದಾಟ ಈ ರೀತಿ ವ್ಯಕ್ತಿಯನ್ನು ಆ ಸ್ಥಾನಕ್ಕೆ ತೆಗೆದುಕೊಂಡು ಹೋಗಿರುತ್ತದೆ……
ಹಾಗೆಯೇ, ಕಳೆದ ಹತ್ತು ವರ್ಷಗಳಿಂದ ದೇಶದ ಒಂದಷ್ಟು ಜನರಿಂದ ಮತ್ತು ವಿರೋಧಿಗಳಿಂದ ಪಪ್ಪು, ಅಪ್ರಬುದ್ಧ, ಐರನ್ ಲೆಗ್ ಹೀಗೆ ಅನೇಕ ರೀತಿಯ ಟೀಕೆಗಳಿಗೆ ಒಳಗಾಗಿದ್ದ ರಾಹುಲ್ ಗಾಂಧಿ ಈಗ ಮತ್ತೆ ರಾಜಕೀಯ ಜೀವನದ ಏರು ಮುಖದಲ್ಲಿ ಬಂದು ನಿಂತಿದ್ದಾರೆ. ಅತಿಯಾದ ಆತ್ಮವಿಶ್ವಾಸದಿಂದ ಆಕ್ರಮಣಕಾರಿಯಾಗಿ ಮೋದಿಯವರನ್ನು ಎದುರಿಸುತ್ತಿದ್ದಾರೆ. ಅದು ಸಹ ಸಹಜವೇ. ಇಲ್ಲೂ ಕೇವಲ ಶ್ರಮ ಮಾತ್ರ ಮುಖ್ಯವಾಗಿರುವುದಿಲ್ಲ. ಅನೇಕ ಇತರ ವಿಷಯಗಳು ಅಡಕವಾಗಿರುತ್ತದೆ. ಫಲಿತಾಂಶವನ್ನು ಮಾತ್ರ ನಾವೀಗ ಪರಿಗಣಿಸಬೇಕು……
ಈ ಇಬ್ಬರ, ಅವರ ಪಕ್ಷದ, ಅವರ ಹೊಂದಾಣಿಕೆಯ ಪಕ್ಷಗಳ ಒಕ್ಕೂಟಗಳ ಅಧಿಕಾರ ಲಾಲಸೆ ಮತ್ತು ಸಂಘರ್ಷದಲ್ಲಿ ಭಾರತದ ಸಾಮಾನ್ಯ ಜನರ ಬದುಕು ಮತ್ತಷ್ಟು ಕಷ್ಟಕ್ಕೆ ಸಿಲುಕುವಂತಾಗಬಾರದು. ಜನರ ಜೀವನಮಟ್ಟ ಸುಧಾರಣೆಯಾಗಲೇಬೇಕು. ಆಗ ಮಾತ್ರ ಇವರ ರಾಜಕೀಯ ಹೋರಾಟಗಳಿಗೆ ಒಂದು ಅರ್ಥ ಬರುತ್ತದೆ. ಇಲ್ಲದಿದ್ದರೆ ಇದು ಕೇವಲ ಕುರ್ಚಿಯ ಸೆಣಸಾಟ ಮಾತ್ರವಾಗಿರುತ್ತದೆ……
ಭಾರತದ ರಾಜಕಾರಣದಲ್ಲಿ ಸಾಮಾನ್ಯವಾಗಿ ರಾಜಕಾರಣಿಗಳ ಒಂದು ಹುಟ್ಟುಗುಣ ಎಂದರೆ ಎದ್ದಾಗ ಕಾಲಿಡಿಯುವ, ಬಿದ್ದಾಗ ಜುಟ್ಟು ಹಿಡಿಯುವ ಸ್ವಭಾವವೇ ಹೆಚ್ಚಾಗಿ ಕಂಡುಬರುತ್ತದೆ. ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ ಎಂಬ ಮನೋಭಾವ ಹೆಚ್ಚು ಕಡಿಮೆ ಬಹುತೇಕರಲ್ಲಿ ಕಂಡುಬರುತ್ತದೆ. ನಾಗರಿಕ ಸಮಾಜದಲ್ಲಿ ಇದು ನಿಜಕ್ಕೂ ಆಘಾತಕಾರಿ ವಿಷಯವೇ ಸರಿ……
ಅದೆಲ್ಲವನ್ನೂ ಮೀರಿ ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಮತ್ತೊಮ್ಮೆ ತನ್ನ ಶಕ್ತಿಯ ವಿರಾಟ್ ರೂಪ ಪ್ರದರ್ಶಿಸುತ್ತಿದೆ. ಸ್ವಲ್ಪ ಹೆಮ್ಮೆ ಮತ್ತು ಸಮಾಧಾನಕರ. ಆದರೆ ಸಾಗಬೇಕಾದ ಹಾದಿ ಇನ್ನೂ ಇದೆ. ರಾಜಕೀಯ ಮತ್ತು ರಾಜಕಾರಣಿಗಳ ಅಮೂಲಾಗ್ರ ಬದಲಾವಣೆಯ ಅವಶ್ಯಕತೆ ಇದೆ. ರಾಜಕೀಯ ಒಂದು ಸೇವಾ ಕ್ಷೇತ್ರ ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕಿದೆ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ. ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068……..