ಶೋಕಿ ಹಿಂದ ಬೆನ್ನ ಹತ್ತಿ…. ಜಯಶ್ರೀ ಜೆ. ಅಬ್ಬಿಗೇರಿ
ವಿಜಯ ದರ್ಪಣ ನ್ಯೂಸ್…
ಶೋಕಿ ಹಿಂದ ಬೆನ್ನ ಹತ್ತಿ….
ಜಯಶ್ರೀ ಜೆ. ಅಬ್ಬಿಗೇರಿ
ಮನ್ಯಾಗ ಎಲ್ಲಿ ನೋಡಿದ್ರೂ ಬಟ್ಟಿಗಳ ರಾಶಿ. ತೊಳದಿದ್ದು ಯಾವ್ದು? ತೊಳಿಲಾರೆದ್ದು ಯಾವ್ದು?ತಿಳಿತಿಲ್ಲ. ಮಕ್ಕಳ ಬಟ್ಟಿ ನಮ್ಮ ಬಟ್ಟಿ ಎಲ್ಲಾ ಕೂಡಿ ಬಿಟ್ಟಾವು. ಇವನ್ನ ಸಪರೇಟ್ ಮಾಡಾಕ ಒಂದ ದಿನನ ಬೇಕು.
ಲಾಂಡ್ರಿಯೊಳಗರ ಇಷ್ಟ ಬಟ್ಟಿ ಇರ‍್ತಾವಿಲ್ಲೊ. ಇವರ‍್ಯಾರು ತಮ್ಮ ಬಟ್ಟಿ ನೀಟಾಗಿ ಮಡಚಿ ತಮ್ ತಮ್ ಕಬರ್ಡನ್ಯಾಗ ಇಟ್ಕೊಳ್ಳುದಿಲ್ಲ. ಎಲ್ಲಾ ನಾನ ಮಾಡ್ಬೇಕು. ನಮ್ಮ ಮನ್ಯಾಗ ಒಬ್ಬ ಕೆಲ್ಸದಾಕಿನ ಇಟ್ಕೊಂಡ್ರ ಆಕಿ ಹೇಳದ ಕೇಳದ ಓಡಿ ಹೋಗ್ತಾಳ. ಅಂತ ಸಿಟ್ಟಿನಿಂದ ಜೋರಾಗಿ ಒದರಾಡುತ್ತಿದ್ದೆ.
ಅದನ್ನು ಕೇಳಿಸಿಕೊಂಡ ಅವ್ವ,ಇಲ್ಲ ಬಿಡವಾ ನೀವ, ಮಕ್ಕಳಿಗೆ, ನಿಮಗ ಬಟ್ಟಿನ ಬಾಳ ತುಗೊಂಡಿರಿ. ನಮ್ಮ ಕಾಲದಾಗ ನೋಡು ಮೈ ಮ್ಯಾಲೊಂದಿರತ್ತಿತ್ತು. ಕಲ್ಲ ಮ್ಯಾಲೊಂದಿರತ್ತಿತ್ತು. ಅಂದ್ರ ದಿನಾ ತೊಡಾಕ ಎರಡ ಬಟ್ಟಿ. ಜಾತ್ರಿ, ನಿಬ್ಬಣ, ಹಬ್ಬ ಹರಿದಿನ ಇದ್ದಾಗ ಒಂದು. ಅದನ ನಮ್ಮಮ್ಮ ಕಪಾಟನ್ಯಾಗ ಕೀಲಿ ಹಾಕಿ ಇಟ್ಟಿರತಿದ್ಲು.ಅದನ ಯಾರದರ ಮದುವಿ, ಮುಂಜುವಿ,ಹಬ್ಬದಾಗ ಜಾತ್ರ್ಯಾಗ ಮಾತ್ರ ತೆಗೆದು ಕೊಡತಿದ್ಲು.ಬಂಗಾರ ಸಾಮಾನು ಕೊಡುವಾಗ ಕಾಳಜಿಲಿ ಇಟ್ಕೊಳ್ರಿ ಅಂತ ಹೇಳ್ತಾರಲ್ಲ ಹಂಗ,ಜ್ವಾಪಾನ ತಂಗಿ ದುಬಾರಿ ಅಂಗಿ ಹರಕೊಂಡ ಗಿರಕೊಂಡಿ ಅಂತ ಎಚ್ಚರಿಕಿ ಕೊಡತಿದ್ಲು.
ಆಗ ಮನ್ಯಾಗಿನ ಮಕ್ಕಳಿಗೆಲ್ಲ ಒಂದ ತರದ ಬಣ್ಣದ ಅಂಗಿ ಹೆಣ್ಮಕ್ಕಳಿಗೊಂದು ತಾಗೆ, ಗಂಡ್ಮಕ್ಕಳಿಗೊಂದು ತಾಗೆ (ಈಗಿನ ಇನಿಪಾರಮ್ ತರ) ತಂದ ಬಿಡ್ತಿದ್ರು. ಆಗೆಲ್ಲ ಈಗಿನಂಗ ಯಾವಾಗ ಬೇಕಾದಂಗ ಬಟ್ಟಿ ಹೊಲಸ್ತಿದ್ದಿಲ್ಲ. ವರ್ಷಕ್ಕೊಮ್ಮೆ ಮನಿ ಹಬ್ಬದಾಗ (ದೀಪಾವಳಿ, ಯುಗಾದಿ, ರಂಜಾನ್) ಒಂದ್ಸಲ ಮನ್ಯಾಗಿನ ಹಿರಿಯರು ಪಟ್ಟಣಕ್ಕ ಹೋಗಿ ತಾಗೆಗಟ್ಲೆ ಅರಬಿ ತಂದು,ನಮ್ಮನೆಲ್ಲ ಸಿಂಪರ ಕಡೆ ಕರಕೊಂಡು ಹೋಗಿ ಮಾಪ ಕೊಡಿಸಿ ಹೊಲಿಯಾಕ ಹಾಕತಿದ್ದರು. ಆಗ ಈಗಿನ್ಹಂಗ ಟೇಲರು ಬಾಳ ಇದ್ದಿದ್ದಿಲ್ಲ. ಊರಿಗೆ ಒಬ್ರೊ ಇಬ್ರೊ ಇರತಿದ್ರು ಅವರ ಕಡೆನ ಇಡೀ ಊರವರ ಅಂಗಿ ರೆಡಿಯಾಗ್ತಿದ್ವು.
ಹಬ್ಬಕ್ಕ ಒಂದೆರಡು ತಿಂಗಳ ಮೊದಲನ ಹೊಸ ಅಂಗಿ ಹೊಲಸು ತಯಾರಿ ಸುರು ಆಗತಿತ್ತು. ಮನ್ಯಾನ ಮಕ್ಳೆಲ್ಲ ನಮಗ ಹಬ್ಬಕ್ಕ ಹೊಸ ಅಂಗಿ ಹೊಲಸ್ತಾರ ಅಂತ ತಕ- ತಕ ಕುಣಿತಿದ್ರು. ಎರಡ ದಿನಕ್ಕೊಮ್ಮೆ ಟೇಲರ್ ಅಂಗಡಿಗೆ ಹೋಗಿ ನಮ್ಮ ಅಂಗಿ ಹೊಲದಿರೆನ ಅಂತ ಕೇಳಿ ಕೇಳಿ ಬರತಿದ್ವಿ. ನಾಳೆ ಕೊಡತಿನಿ ಅಂತ ಹೇಳಿದರ ಹೊಸ ಅಂಗಿ ಹಾಕ್ಕೊಂಡ್ಹಂಗ ಕನಸು ಕಾಣತಿದ್ವಿ, ಊರ ಜಾತ್ರ್ಯಾಗ, ಹಬ್ಬದಾಗ ನಾವೆಲ್ಲಾರೂ ಹೊಸ ಜಂಪರು ಲಂಗ ಹಾಕ್ಕೊಂಡು ಯಾಡ ಜಡಿ ಹಾಕ್ಕೊಂಡು ರಿಬ್ಬನ್ ಕಟ್ಕೊಂಡು ಮಲ್ಲಿಗಿ ಹೂ, ಹೆಣೆದ ಕ್ಯಾದಗಿ ಮುಡ್ಕೊಂಡು ಬಾಳ ಸಂಭ್ರಮದಿಂದ ಅಡ್ಡಾತಿದ್ವಿ.ಹೊಸ ಅರಬಿ ಅಂದ್ರ ನಮಗ ಬಂಗಾರ ಆದಂಗ ಆಗಿತ್ತು. ಆದ್ರ ಈಗಿನ ಹುಡುಗರಿಗೆ ಅರಬಿ ಅಂದ್ರ ಕಾಲಾಗಿನ ಕಸ ಆಗೈತಿ.
ಸಿಟಿಯೊಳಗ ಅರಬಿ ಅಂಗಡಿನ ತುಂಬ್ಯಾವು.
ಸಿಟಿಯೊಳಗ ಅಷ್ಟ ಅಲ್ಲ ಹಳ್ಳ್ಯಾಗನೂ ಬಟ್ಟಿನ ಪಟ್ಟಣದಾಗಿಂದ ತಂದು ಮನ್ಯಾಗಿಟ್ಟು ಮಾರ‍್ತಾರ. ಹಿಂಗಾಗಿ ಈಗ ಎಲ್ಲಿ ನೋಡಿದ್ರೂ ಅರಬಿದ ಸುಗ್ಗಿ ಅನ್ನುವಂಗ ಆಗೈತಿ. ಅದೂ ಅಲ್ಲದ ಈಗ ರೆಡಿಮೆಡ್ ಬಟ್ಟಿ ಸಿಗ್ತಾವ. ಹೊಲಸಾಕ ಹಾಕಬೇಕು ಅನ್ನು ಚಿಂತಿನೂ ಇಲ್ಲ. ಪ್ಯಾಟ್ಯಾಗ ಮಕ್ಕಳಿಗೆ ದೊಡ್ಡವರಿಗೆ ಕಣ್ಣು ಕುಕ್ಕುವಂಥ ಮಿನ ಮಿನ ಡಿಜೈನ್ ಬಟ್ಟಿ ಸಿಗ್ತಾವ ಹಿಂಗಾಗಿ ಎಲ್ಲಾರೂ ದುಡದ ದುಡ್ಡಿನ್ಯಾಗ ಬಾಳ ದುಡ್ಡು ಬಟ್ಟಿಗೆ ಸುರುವಾಕ ಹತ್ಯಾರ.ಶೋಕಿ ಹಿಂದ ಬೆನ್ನ ಹತ್ತಿ ಕಿಸೆನ ಖಾಲಿ ಮಾಡ್ಕೊಳ್ಳಾಕತ್ತಾರ. ಬಲ್ಲವ ಬೆಲ್ಲ ಮಾರಬೇಕಂತ ಅರಿಯದವ ಅರಬಿ ಮಾರಬೇಕಂತ ಗಾದಿ ಮಾತ ಐತೆಲ್ಲ. ಹಂಗ ಬಟ್ಟಿಯೊಳಗ ಏನೂ ತಿಳಿಯುದಿಲ್ಲ. ಅವ್ರು ಹೇಳಿದಷ್ಟು ರೊಕ್ಕ ಕೊಟ್ಟು ಮನಿ ತುಂಬ ಬಟ್ಟಿ ತುಂಬಿಸಿರಿ. ಎಂದು ಬಟ್ಟೆ ಬಗ್ಗೆ ಪ್ರವರ ಬಿಚ್ಚಿಟ್ಟಳು.
ಅವ್ವ ಹೇಳಿದ ಮಾತುಗಳೆಲ್ಲ ನಿಜವೆನಿಸಿದವು.ನಾನು ಅದೆಷ್ಟೊ ಸಾರಿ ನನಗೆ, ಮಕ್ಕಳಿಗೆ ಇದ್ದ ಬಟ್ಟೆಗಳು ಹರಿದ ಮೆಲೆ ಹೊಸ ಬಟ್ಟೆ ಖರೀದಿಸಬೇಕು ಎಂದು ನಿರ್ಧರಿಸಿದರೂ ಪೇಟೆಯಲ್ಲಿ ಆಕರ್ಷಕ ಮನಮೋಹಕ ಬಟ್ಟೆಗಳನ್ನು ನೋಡಿದ ತಕ್ಷಣ, ನನಗರಿವಿಲ್ಲದಂತೆಯೇ ಕಾಲುಗಳು ನನ್ನನ್ನು ಅಂಗಡಿಯಲ್ಲಿ ತಂದು ನಿಲ್ಲಿಸುತ್ತವೆ. ತುಂಬಿದ ಪರ್ಸು ಖಾಲಿ ಮಾಡಿಸಿ, ಕೈಯಲ್ಲಿ ಬಟ್ಟೆ ತುಂಬಿದ ಬ್ಯಾಗು ಹಿಡಿಯುವಂತೆ ಮಾಡುತ್ತವೆ.
ಮಾರುಕಟ್ಟೆ ಜಾಹೀರಾತುಗಳಿಗೆ ಮರುಳಾಗಿ ಕೊಳ್ಳುಬಾಕ ಸಂಸ್ಕೃತಿಗೆ ಮಾರುಹೋಗುತಿದ್ದೇವೆ. ಅನವಶ್ಯಕವಾಗಿ ಬೇಡದ ಬಟ್ಟೆಯ ಮೇಲೆ ಮನಸೋತು, ಶೋಕಿ ಹಿಂದೆ ಬೆನ್ನು ಹತ್ತಿ ಹಣ ಕಳೆದುಕೊಳ್ಳುತ್ತ್ತಿದ್ದೇವೆ.ತುತ್ತು ಅನ್ನ ತಿನ್ನೊಕೆ ಬೊಗಸೆ ನೀರು ಕುಡಿಯೋಕೆ ತುಂಡು ಬಟ್ಟೆ ಸಾಕು ನಂಗೆ ಮಾನ ಮುಚ್ಚೋಕೆ ಅನ್ನೋ ಹಾಡು ನೆನಪಿದ್ದರೂ, ಮನಮೋಹಕ ಉಡುಪುಗಳಿಗೆ, ಕಣ್ಣು ಕುಕ್ಕುವ ಬಟ್ಟೆಯ ಸೊಬಗಿಗೆ ಅದರ ಹಿಂದೆ ಬೆನ್ನು ಹತ್ತುತ್ತಿದ್ದೇವೆ,
ಮನೆಯಲ್ಲಿ ಸಾಕಷ್ಟು ಬಟ್ಟೆಗಳಿದ್ದರೂ ಮತ್ತೊಬ್ಬರ ವಿವಾಹ ಮಹೋತ್ಸವಕ್ಕಂತಲೇ ಹೊಸ ಬಟ್ಟೆ ಖರೀದಿಸಿ ಅತ್ತಿಂದಿತ್ತ ಇತ್ತಿಂದತ್ತ ಸುಳಿದಾಡುತ್ತ ಇತರರನ್ನು ಆಕರ್ಷಿಸಲು ಬಯಸುವವರೂ ಇದ್ದಾರೆ. ಖರೀದಿಸಲು ನಮ್ಮ ಬಳಿ ಹಣ ಇರಬಹುದು ಆದರೆ ನೈಸರ್ಗಿಕ ಸಂಪತ್ತನ್ನು ಹಾಳು ಮಾಡುವದು ಅಪರಾಧ. ಅದನ್ನು ತಿಳಿದು ಬಟ್ಟೆ ಖರೀದಿಯಲ್ಲಿ ಅಹಂಕಾರ ತೋರಿಸದೇ, ವ್ಯರ್ಥ ಹಣ ಪೋಲು ಮಾಡದಿರುವ ಸಂಸ್ಕಾರ ಬೆಳೆಸಿಕೊಳ್ಳೋಣ.
ನಮ್ಮ ಕೊಳ್ಳುವ ಶಕ್ತಿ ಹೆಚ್ಚಾಗಿದ್ದರೂ ಅದನ್ನು ಉಪಯೋಗಿಸುವ ಯುಕ್ತಿಯನ್ನು ಬಳಸಿಕೊಳ್ಳುವಲ್ಲಿ ಎಡುವುತ್ತಿದ್ದೇವೆ.ಇದರಿಂದ ಇತರರ ಕುರಿತಾಗಿ ವಿಚಾರ ಮಾಡುವ ನೈತಿಕತೆಯನ್ನು ಕಳೆದುಕೊಂಡಿದ್ದೇವೆ.ತೋರಿಕೆಗೆ ಒತ್ತು ಕೊಟ್ಟು , ಇತರರಲ್ಲಿ ಇರುವ ಬಟ್ಟೆ ಸಂಗ್ರಹವನ್ನು ನಮಗೆ ಹೋಲಿಸಿಕೊಂಡು ಅದರ ಬಗ್ಗೆ ಹೆಚ್ಚು ಆಲೋಚಿಸಿ ನೆಮ್ಮದಿ ಕಳೆದುಕೊಳ್ಳುತ್ತಿದ್ದೇವೆ.
ನಮ್ಮ ಬಳಿ ಬಟ್ಟೆ ಹೆಚ್ಚಿಗಿದ್ದರೂ ಅವುಗಳನ್ನು ಧರಿಸಿ ಅನುಭವಿಸಲು ಸಮಯವಿಲ್ಲದಂತೆ ಅನಿಸುತ್ತಿದೆ.ಎಷ್ಟೋ ಸಾರಿ ಬಟ್ಟೆ ಖರೀದಿಗಾಗಿಯೇ ಮನೆಯಲ್ಲಿ ಮನಃ ಶಾಂತಿ ಕಳೆದುಕೊಂಡದ್ದೂ ಉಂಟು. ಕಾರಣ ಇನ್ನು ಮೇಲೆ ತುಂಡು ಬಟ್ಟೆ ಸಾಕು ಮಾನ ಮುಚ್ಚೋಕೆ ಅನ್ನೋ ತತ್ವ ಪಾಲಿಸಿ ಎಲ್ಲರಿಗೂ ಸಲ್ಲಬೇಕಾದ ನೈಸರ್ಗಿಕ ಸಂಪತ್ತನ್ನು ನಮ್ಮಲ್ಲಿ ಕೂಡಿ ಹಾಕುವ ದುಸ್ಸಾಹಸ ಬಿಟ್ಟು ಸರ್ವರ ಹಿತ ಕಾಪಾಡೊದು ಒಳಿತು.ಅಂತ ಗಟ್ಟಿಯಾಗಿ ನಿರ್ಧರಿಸೋಣ ಮತ್ತು ಪಾಲಿಸಲು ಬದ್ಧರಾಗೋಣ.