ವಾದ್ಯ ಸಂಗೀತದೊಳಗೆ ಲೀನವಾದವರು: ಪಂಡಿತ್ ರಾಜೀವ್ ತಾರಾನಾಥ್
ವಿಜಯ ದರ್ಪಣ ನ್ಯೂಸ್..
ವಾದ್ಯ ಸಂಗೀತದೊಳಗೆ ಲೀನವಾದವರು……
ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅವರು ಅಸ್ತಂಗತರಾದ ಈ ಸಂದರ್ಭದಲ್ಲಿ……
ನಾಗರಿಕ ಮನುಷ್ಯ ಊಟ, ವಸತಿ, ಬಟ್ಟೆ, ವಾಹನ ಪ್ರಯಾಣ ಹೀಗೆ ನಾನಾ ಅವಶ್ಯಕತೆಗಳನ್ನು, ಆಧುನಿಕತೆಯನ್ನು ತಾಂತ್ರಿಕತೆಗಳನ್ನು ಪೂರೈಸಿಕೊಳ್ಳುತ್ತಾ ಸಾಕಷ್ಟು ಆರಾಮದಾಯಕ ಬದುಕಿಗಾಗಿ ಪರಿತಪಿಸುವಾಗಲು, ಕೆಲವು ಕ್ಷೇತ್ರಗಳಲ್ಲಿ ಮಹತ್ಸಾಧನೆಗಾಗಿ ಅಥವಾ ಆತ್ಮ ತೃಪ್ತಿಗಾಗಿ ಅದರಲ್ಲಿ ಲೀನವಾಗಲು ಸದಾ ಪ್ರಯತ್ನಿಸುತ್ತಲೇ ಇರುತ್ತಾನೆ…..
ಅಂತಹ ಒಂದು ಕ್ಷೇತ್ರ ಕಲೆಯ ಬಲೆಯಾಗಿರುವ ವಾದ್ಯ ಸಂಗೀತ. ಹರಿಯವ ನೀರಿನ ಜುಳು ಜುಳು ನಿನಾದ, ಸಮುದ್ರದಲೆಗಳ ಭೋರ್ಗರೆತ, ಗಾಳಿಯ ರೊಯ್ಯನೇ ಬೀಸುವ ತಂಗಾಳಿಯ ನಾದ,
ಪ್ರಾಣಿ ಪಕ್ಷಿ ಕ್ರಿಮಿಕೀಟಗಳ ಆಹ್ಲಾದಕರ ಸುಶ್ರಾವ್ಯ ಗಾನ, ದಟ್ಟ ಕಾಡುಗಳ, ಹಿಮಾಚ್ಛಾದಿತ ಪ್ರದೇಶಗಳ ವರ್ಣಿಸಲಾಗದ ಧ್ವನಿ ತರಂಗಗಳು, ಮರ ಮುಟ್ಟುಗಳ ವಿವಿಧ ಆಕಾರದ ದ್ವನಿ ಹೊಮ್ಮಿಸುವ ಶಬ್ದ ನಿನಾದಗಳು, ವಿಧ ವಿಧ ತಂತಿಗಳು ಹೊಮ್ಮಿಸುವ ಸಂಗೀತ ಪ್ರಾಕಾರಗಳು……..
ಹಾಗೆಯೇ, ವೀಣೆ, ಕೊಳಲು, ಹಾರ್ಮೋನಿಯಂ, ತಬಲಾ, ಸರೋದ್, ಮೃದಂಗ, ಗೆಜ್ಜೆ, ಪಿಟೀಲು, ತಾಳೆ, ಮದ್ದಲೆ, ಚೆಂಡೆ, ವೀಣೆ, ಘಟಂ, ಬುಲ್ ಬುಲ್ ತರಂಗ, ಗಂಟೆ, ಸಾರಂಗಿ, ಜಲ ತರಂಗ್, ಏಕತಾರಿ, ಪಿಯಾನೋ, ಮೌತ್ ಆರ್ಗನ್, ತಾಳ, ಜಾಗಟೆ, ಗಿಟಾರ್, ಸಂತೂರ್, ಡೋಲು,
ವಯಲಿನ್, ನಾದಸ್ವರ, ಶಹನಾಯಿ, ಡೋಲು, ಡಮರುಗ, ಕೀಬೋರ್ಡ್, ಡ್ರಮ್ಸ್ ಹೀಗೆ ಹಲವಾರು ವಾದ್ಯಗಳು, ಆ ವಾದ್ಯಗಳಲ್ಲಿ ಪರಿಣಿತರಾದ ಮಹಾನ್ ಚೇತನಗಳು, ಅದರ ಮೇಲೆ ಹೊಂದುತ್ತಿದ್ದ ನಿಯಂತ್ರಣ, ಉದಾಹರಣೆಗೆ, ಶಹನಾಯಿಯ ಬಿಸ್ಮಿಲ್ಲಾ ಖಾನ್, ಸರೋದ್ ವಾದನದ ಅಕ್ಬರ್ ಅಲಿ ಖಾನ್, ಪಂಡಿತ್ ರಾಜೀವ್ ತಾರಾನಾಥ್, ಕೊಳಲಿನ ಹರಿಪ್ರಸಾದ್ ಚೌರಾಸಿಯ, ಸೀತಾರಿನ ಪಂಡಿತ್ ರವಿಶಂಕರ್, ಸಂತೂರಿನ ಶಿವಕುಮಾರ್ ಶರ್ಮ, ವೀಣೆಯ ಶೇಷಣ್ಣ, ಡ್ರಮ್ಸ್ ನ ಶಿವಮಣಿ, ತಬಲದ ಜಾಕಿರ್ ಹುಸೇನ್, ಅಲ್ಲಾರಖಾ, ರುದ್ರ ವೀಣೆಯ ಬಿಂದು ಮಾಧವ, ಮ್ಯಾಂಡೋಲಿನ ಯು, ಶ್ರೀನಿವಾಸ್, ವಯಲಿನ್ ನ ಎಲ್, ಸುಬ್ರಹ್ಮಣ್ಯಂ, ಕುನ್ನುಕುಡಿ ವೈದ್ಯನಾಥನ್, ಗಿಟಾರ್ ನ ಪಂಡಿತ್ ಬ್ರಿಜ್ ಬುಷನ್ ಕಬ್ರಾ, ಪಿಯಾನೋ ದ ಅನಿಲ್ ಶ್ರೀನಿವಾಸನ್…
ಹೀಗೆ ಈ ಕ್ಷಣದಲ್ಲಿ ಹಲವರು ನೆನಪಾಗುತ್ತಿದ್ದಾರೆ. ಈ ವಾದ್ಯ ಸಂಗೀತದೊಂದಿಗೆ ಸಂಪೂರ್ಣ ಲೀನವಾಗಿ ಬದುಕನ್ನು ಸವಿದವರು ಮತ್ತು ಈಗಲೂ ಸವಿಯುತ್ತಿರುವವರು. ಮನುಷ್ಯನ ಆತ್ಮತೃಪ್ತಿಯ ಸಾಧನಗಳಲ್ಲಿ ವಾದ್ಯ ಸಂಗೀತವು ಒಂದು. ಇದು ಹೆಚ್ಚು ಜನರಿಗೆ ಪರಿಚಿತವಲ್ಲ. ಅನುಭವವೂ ಇಲ್ಲ. ಕೇವಲ ಕೆಲವೇ ಸಂಗೀತಾಸಕ್ತರಿಗೆ ಮತ್ತು ಕೆಲವೇ ಕೆಲವು ಅಪರೂಪದ ವ್ಯಕ್ತಿತ್ವಗಳಿಗೆ ಮಾತ್ರ ಈ ವಾದ್ಯ ಸಂಗೀತ ಬದುಕಿನ ಭಾಗವಾಗುತ್ತದೆ ಸಾರ್ಥಕತೆಯ ಸಾಧನವಾಗುತ್ತದೆ,….
ನಮ್ಮಂತ ಜನಸಾಮಾನ್ಯರು ಬದುಕಿನ ಜಂಜಾಟಗಳ ನಡುವೆ, ಈ ಕಾರ್ಪೊರೇಟ್ ಕೊಳ್ಳುಬಾಕ ಸಂಸ್ಕೃತಿಯ ಬದುಕಿನಲ್ಲಿ, ಜೀವನದ ಅಗತ್ಯತೆಗಳು, ಅವಶ್ಯಕತೆಗಳನ್ನು ಮೀರಿ ಯೋಚಿಸಲು ಸಾಧ್ಯವಾಗುತ್ತಿಲ್ಲ. ಎಷ್ಟೋ ಸ್ವಾಭಾವಿಕ ಸಹಜ ಪ್ರತಿಭೆಗಳು ಮುರುಟಿ ಹೋಗುವುದನ್ನು ಕಣ್ಣಾರ ಕಾಣುತ್ತಿದ್ದೇವೆ…..
ಇಂತಹ ಸಂದರ್ಭದಲ್ಲಿ ಸರೋದ್ ವಾದ್ಯದಲ್ಲಿ ಸಂಪೂರ್ಣ ಲೀನವಾದ ರಾಜೀವ್ ತಾರಾನಾಥ್ ಅವರು ಬದುಕನ್ನು ಮೊಗೆ ಮೊಗೆದು ಅನುಭವಿಸಿದವರು. ಅದರಲ್ಲಿ ತತ್ವಜ್ಞಾನಿಯಂತೆ ಚಿಂತಿಸಿದವರು, ಜ್ಞಾನಾಸಕ್ತ ಮತ್ತು ಧ್ಯಾನಾಸಕ್ತರಾದವರು. ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾ…..
ಅತ್ಯಂತ ಭೀಕರವಾಗಿ ಕಾಡಿದ ತಾಪಮಾನ, ಸುಮಾರು 75 ದಿನಗಳ ಚುನಾವಣಾ ರಾಜಕೀಯದ ತಲೆಬಿಸಿ, ಪ್ರಜ್ವಲ್ ರೇವಣ್ಣನ ಕಾಮ ಪುರಾಣ, ದರ್ಶನನ ಕ್ರೌರ್ಯ ಮುಂತಾದ ಬ್ರೇಕಿಂಗ್ ನ್ಯೂಸ್ ಗಳ ಮಧ್ಯೆ ಬಿಡುವು ಪಡೆದು, ಸಂಗೀತ ಸಾಗರದೊಳಗೆ ಧ್ಯಾನಸ್ಥವಾಗಲಿ ನಮ್ಮ ಮನಸ್ಸು….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್.ಕೆ. 9844013068……..