ಜಾಗೃತ ಮನಸ್ಸುಗಳ ಜವಾಬ್ದಾರಿ…….

ವಿಜಯ ದರ್ಪಣ ನ್ಯೂಸ್

ಜಾಗೃತ ಮನಸ್ಸುಗಳ ಜವಾಬ್ದಾರಿ…….

ಚಳಿ ತಡೆಯಲಾರದೆ ರಸ್ತೆ ಬದಿಯಲ್ಲಿ ಮಲಗಿರುವ ಮಗು,

ಒಂದು ತುತ್ತು ಅನ್ನಕ್ಕಾಗಿ ದೇವ ಮಂದಿರಗಳ ಮುಂದೆ
ಹಸಿವಿನಿಂದ ಅಂಗಲಾಚುತ್ತಿರುವ ಪುಟ್ಟ ಕಂದ,

ತನ್ನ ಹಾಗೂ ತನ್ನ ನಂಬಿದವರ ಊಟಕ್ಕಾಗಿ
ಯಾರೋ ಅಪರಿಚಿತನಿಗೆ ದೇಹ ಅರ್ಪಿಸುವ ಹೆಣ್ಣು,

ಹಸಿವು ನೀಗಿಕೊಳ್ಳಲು, ಸಂಸಾರ ನಡೆಸಲು ಇತರರ ಮಲ ಹೊತ್ತು ಸಾಗುವ ವ್ಯಕ್ತಿ,

ರೋಗ ಉಲ್ಬಣಿಸಿದ್ದರೂ ಚಿಕಿತ್ಸೆ ಪಡೆಯಲು ಕಾಸಿಲ್ಲದೆ ಸಾವನ್ನು ಎದುರು ನೋಡುತ್ತಿರುವ ಜೀವ,

ತಾನು ಮಾಡದ ತಪ್ಪಿಗೆ ಜ್ಯೆಲುಪಾಲಾಗಿ
ಕೋರ್ಟನಿಂದ ಜಾಮೀನು ಸಿಕ್ಕರೂ ಶ್ಯೂರಿಟಿ ಇಲ್ಲದೇ
ವರ್ಷಾನುಗಟ್ಟಲೆ ಜ್ಯೆಲಿನಲ್ಲಿ ಕೊಳೆಯುತ್ತಿರುವ ನತದೃಷ್ಟ,

ಓದುವ ಆಸೆ ಇದ್ದರು ಬಡತನದಿಂದ ಸಾಧ್ಯವಾಗದೆ ಹೋಟೆಲ್ಲಿನಲ್ಲಿ
ದಿನದ 18 ಗಂಟೆ ದುಡಿಯುವ ಪುಟ್ಟ ಕಂದಮ್ಮಗಳು,

ಮದುವೆ ವಯಸ್ಸು ಮೀರಿದ್ದರೂ ಮದುವೆಯಾಗದೆ ತನ್ನ ಓರಗೆಯವರು ತಮ್ಮ ಮಕ್ಕಳೊಂದಿಗೆ ಆಟವಾಡುವುದನ್ನು ನೋಡುತ್ತಾ
ತನ್ನ ದರಿದ್ರ ದುರಾದೃಷ್ಟದ ಅಸಹಾಯಕತೆಗೆ ಕೊರಗುವ ಅಬಲೆ,

ಸೇಬು, ಐಸ್ ಕ್ರೀಮ್, ಡ್ರೈಪ್ರೂಟ್ಸ್ ಗಳನ್ನು ಜೀವನದಲ್ಲಿ ಒಮ್ಮೆಯೂ ಸವಿಯದ ಕೋಟ್ಯಾಂತರ ಜನ ವಾಸಿಸುತ್ತಿರುವ ಈ ನಮ್ಮ ಸಮಾಜದಲ್ಲಿ,

ರಾಜಕಾರಣಿಗಳು ಆಡಳಿತಗಾರರು, ಸಿನಿಮಾ ನಟರು, ಪತ್ರಿಕೋದ್ಯಮಿಗಳು,
ವ್ಯಾಪಾರಿಗಳು, ಸಾಹಿತಿಗಳು, ಮಠಾಧೀಶರು, …ಇತ್ಯಾದಿ, ಇತ್ಯಾದಿಗಳು………

ಮಹಾನ್ ನಾಗರೀಕರಂತೆ,
ಇರುವ – ಇಲ್ಲದ – ದೇವರು ಧರ್ಮ, ಜಾತಿ,
ತತ್ವ ಸಿದ್ಧಾಂತ, ವಾಕ್ ಚಾತುರ್ಯಗಳನ್ನು ಪ್ರದರ್ಶಿಸುತ್ತಾ, ತಮಗೂ ಇದಕ್ಕೂ ಸಂಬಂಧವಿಲ್ಲದಿರುವಂತೆ ಜೀವಿಸುತ್ತಿರುವುದನ್ನು,
ನೋಡಿದರೆ,

ಈ ಅಭಿವೃದ್ಧಿ ಮತ್ತು ಚಿಂತನೆಗಳ ಕ್ರಮವನ್ನೇ ಪ್ರಶ್ನಿಸಿಕೊಳ್ಳಬೇಕೆನಿಸುತ್ತದೆ.

ಕನಿಷ್ಠ ಮಟ್ಟದ ನಾಗರಿಕ ಸೌಲಭ್ಯಗಳನ್ನು ಈ ಜನರಿಗೆ ತಲುಪಿಸಲು ಸಾಧ್ಯವಾಗದ ವ್ಯವಸ್ಥೆಯ ಬಗ್ಗೆ ಜಿಗುಪ್ಸೆ ಮೂಡುತ್ತದೆ.

ಎಷ್ಟೊಂದು ಕ್ರಮಬದ್ಧ ಆಡಳಿತ ವ್ಯವಸ್ಥೆ ಇದೆ. ಗ್ರಾಮ ಪಂಚಾಯತಿಯಿಂದ ಕೇಂದ್ರ ಸರ್ಕಾರದವರೆಗೆ ಮತ್ತು ಇದನ್ನು ನಿರ್ವಹಿಸುವವರು ಶಿಶಿವಿಹಾರದಿಂದ ಡಾಕ್ಟರೇಟ್ ವರೆಗೆ ಓದಿರುತ್ತಾರೆ.

ಸಾಕಷ್ಟು ಸಂಬಳ ಮತ್ತು ಇತರ ಸೌಲಭ್ಯಗಳನ್ನು ಪಡೆಯುತ್ತಾರೆ.

ಇದನ್ನು ಬೇರೆ ಬೇರೆ ರೀತಿಯಲ್ಲಿ ನಿಯಂತ್ರಿಸಲು ಸಹಕರಿಸಲು ಮೇಲ್ವಿಚಾರಣೆ ನಡೆಸಲು ಅನೇಕ ಮತ್ತಷ್ಟು ಸರ್ಕಾರಿ ಸಂಸ್ಥೆಗಳೇ ಇವೆ.

ಆದರೂ ಸಾಕಷ್ಟು ಉತ್ತಮ ವಾತಾವರಣ ನಿರ್ಮಿಸಲು ಸಾಧ್ಯವಾಗುತ್ತಿಲ್ಲ.

ಹೌದು, ಒಂದಷ್ಟು ಜನ ಇದರ ಸಂಪೂರ್ಣ ಲಾಭ ಪಡೆದು ಸುಖವಾಗಿದ್ದಾರೆ. ಅವರುಗಳಿಗೆ ಯಾವುದೇ ತಕರಾರು ಇಲ್ಲ.

ಹಾಗೆಂದು ಜಾಗೃತಗೊಂಡ ಮನಸ್ಸುಗಳು ಸುಮ್ಮನೆ ಇರಬಾರದು. ಯಾವುದಾದರೂ ರೀತಿಯಲ್ಲಿ ಈ ವ್ಯವಸ್ಥೆಯ ನಾಗರಿಕ ಸೌಲಭ್ಯಗಳನ್ನು ವಂಚಿತರಿಗೆ ತಲುಪಿಸಲು ಪ್ರಯತ್ನಿಸಬೇಕಿದೆ.

ಇಲ್ಲದಿದ್ದರೆ ಮುಂದೆ ಈ ಅಂತರ ಹೆಚ್ಚಾದಂತೆ ಈಗ ನೆಮ್ಮದಿಯಿಂದ ಇರುವವರ ಅನುಕೂಲಗಳಿಗೂ ತೊಂದರೆಯಾಗುವ ಸಾಧ್ಯತೆ ಇದೆ.

ಕ್ರಿಯಾತ್ಮಕ ಮಾನವೀಯ ಮನಸ್ಸುಗಳು ಈ ಬಗ್ಗೆ ಮತ್ತಷ್ಟು ಚಿಂತಿಸುವುದು ವ್ಯವಸ್ಥೆಯ ಸುಧಾರಣೆಯ ದೃಷ್ಟಿಯಿಂದ ತುಂಬಾ ಅವಶ್ಯಕತೆ ಇದೆ.

ಮುಂದಿನ ದಿನಗಳು ಮತ್ತಷ್ಟು ಹದಗೆಡುವ ಮುನ್ನ ಎಚ್ಚರಿಕೆಯಿಂದ ಮುನ್ನಡೆಯಬೇಕಿದೆ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.


ವಿವೇಕಾನಂದ. ಎಚ್.ಕೆ.
9844013068………