ಮೂಲ ಕೃತಿಯ ಗಟ್ಟಿತನ ಅನುವಾದಕ್ಕೆ ಪ್ರವೇಶ ಪಡೆಯುವುದು ಮುಖ್ಯ : ಡಾ. ಮೈಥಿಲಿ ಪಿ. ರಾವ್

ವಿಜಯ ದರ್ಪಣ ನ್ಯೂಸ್…
ಸೃಜನಶೀಲ ಕೃತಿಯೊಂದರ ಅನುವಾದ ಯಾರು ಮಾಡಿದ್ದಾರೆ? ಮೂಲ ಕೃತಿಯ ಗಟ್ಟಿತನ ಎಷ್ಟು, ಅದು ಸಾರ್ವಕಾಲಿಕವೇ ಈ ಪ್ರಶ್ನೆಗಳ ಮೂಲಕ ಅನುವಾದಕ್ಕೆ ಪ್ರವೇಶ ಪಡೆಯುವುದು ಮುಖ್ಯ. ಹಾಗಾದಾಗ ಎರಡೂ ಭಾಷೆಗಳಿಗೂ ಗಾಂಭೀರ್ಯ, ಗೌರವ ದೊರೆಯುತ್ತದೆ ಎಂದು ಜೈನ್ ಕಾಲೇಜಿನ ನಿಕಟಪೂರ್ವ ಡೀನ್ ಮತ್ತು ಪ್ರಾಧ್ಯಾಪಕಿ ಡಾ. ಮೈಥಿಲಿ ಪಿ. ರಾವ್ ಹೇಳಿದರು.

ಅವರು ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್, ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಡಾ. ಎಂ. ಬೈರೇಗೌಡರ ವೇಷದ ಹುಲಿ ನಾಟಕ ಮರುಮುದ್ರಣ ಮತ್ತು ಹಿಂದಿ ಅವತರಣಿಕೆ ವ್ಯಾಘ್ರವೇಶಿ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಹಿಂದಿ ಅನುವಾದಿತ ಕೃತಿ ವ್ಯಾಘ್ರವೇಶಿ ಕುರಿತು ಮಾತನಾಡಿದರು.
ಅನುವಾದ ಎಂಬುದು ಕೃತಕ ಬುದ್ಧಿವಂತಿಕೆಯಿAದ ನಡೆಯಬಾರದು. ಅದಕ್ಕಾಗಿಯೇ ಅಗತ್ಯ ಪದಸಂಪತ್ತು ಅನುವಾದಕನಲ್ಲಿ ಇರಬೇಕಾಗುತ್ತದೆ. ಹಾಗೆ ಅನುವಾದವಾದ ಕೃತಿ ಮೂಲ ಲೇಖಕನ ಸೃಜನಕ್ರಿಯೆಗೆ ಹಿಡಿದ ಕನ್ನಡಿಯಾಗಿ ಸದಾ ಹರಿಯುವ ನೀರಿನಂತೆ ಚಲನಶೀಲತೆಯನ್ನು ಪಡೆಯುತ್ತದೆ. ಈ ಹಿನ್ನೆಲೆಯಲ್ಲಿ ಅಪಾರ ಇತಿಹಾಸ, ಪುರಾಣ ಮತ್ತು ಜಾನಪದ ಸಂಪತ್ತನ್ನು ಒಟ್ಟುಗೂಡಿಸಿ ವರ್ತಮಾನದ ತುರ್ತುಗಳನ್ನು ಅರಗಿಸಿಕೊಂಡು ಬೈರೇಗೌಡರು ರಚಿಸಿರುವ ವೇಷದ ಹುಲಿ ನಾಟಕವು ಸಮರ್ಥವಾಗಿ ಹಿಂದಿಗೆ ಅನುವಾದಗೊಂಡಿದೆ. ಈ ಕೃತಿಯ ನೀತಿ ಇಂದಿನ ಯುವಪೀಳಿಗೆಗೆ ತಲುಪಬೇಕಾದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳು ಗಮನ ಹರಿಸುವಂತೆ ಕನ್ನಡ ಸಾಹಿತ್ಯ ಪರಿಷತ್ತಿನಂತ ಕನ್ನಡಪರ ಸಂಘ-ಸAಸ್ಥೆಗಳು ಒತ್ತಡ ಹೇರಬೇಕೆಂದರು.
ಈ ಕೃತಿಯಲ್ಲಿನ ವಸ್ತು ತುಂಬಾ ನಕಾರಾತ್ಮಕ ಅಂಶಗಳನ್ನು ಒಳಗೊಂಡಿದ್ದು, ಅವನ್ನೆಲ್ಲ ಹೇಗೆ ಸಕಾರಾತ್ಮಕಗೊಳಿಸಿ ಕೊಡಬಹುದೆಂದು ವೇಷದ ಹುಲಿ ನಾಟಕದ ಕರ್ತೃ ಡಾ. ಎಂ. ಬೈರೇಗೌಡ ತೋರಿಸಿಕೊಟ್ಟಿದ್ದಾರೆ. ಮನುಷ್ಯನಲ್ಲಿ ಅಡಗಿರಬಹುದಾದ ಕ್ರೌರ್ಯವನ್ನು ಪ್ರೀತಿಯ ಮುಲಾಮಿನಿಂದ ತಣ್ಣಗಾಗಿಸುವಲ್ಲಿ ಕೃತಿಯ ಹೆಚ್ಚುಗಾರಿಕೆ ಅಡಕವಾಗಿದೆ. ಇಡೀ ಕೃತಿಯ ತುಂಬ ಜಾನಪದೀಯ ಶಬ್ದಗಳ ನರ್ತಿಸುತ್ತವೆ. ಅವುಗಳಿಗೆ ಹದನಾದ ಹಾಸ್ಯ, ವಿಡಂಬನೆ, ಮಾತಿನ ಮೋಡಿಗಳಿಂದ ಸಹೃದಯನಲ್ಲಿ ಸಂಚಲನ ಮೂಡಿಸುವ ಕೃತಿಯಾಗಿ ನಿರ್ಮಾಣಗೊಂಡಿದೆ. ಮೂಲ ನಾಟಕಕಾರರು ಬಳಸಿರುವ ನುಡಿಗಟ್ಟುಗಳು, ಗಾದೆಮಾತುಗಳು ಗಮನ ಸೆಳೆಯುತ್ತವೆ. ಎಲ್ಲವೂ ಮನುಷ್ಯ ಕೇಂದ್ರಿತ ನೆಲೆಯಲ್ಲಿ ತೆರೆದುಕೊಳ್ಳುತ್ತವೆ. ಸ್ತಿçವಾದಿ ನೆಲೆಯ ತತ್ವಗಳನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡು ನಾಟಕಕಾರರು ದೃಶ್ಯಗಳ ಜೋಡಣೆ ಮಾಡಿದ್ದಾರೆ.
ವಾಚಾಳಿತನದಿಂದ ದೂರವುಳಿದು, ಒಂದೇ ಓದಿಗೆ ದಕ್ಕುವ ರೀತಿಯ ಬರವಣಿಗೆ ಎಲ್ಲರಿಗೂ ಸಿದ್ಧಿಸುವುದಲ್ಲ. ಇಲ್ಲಿನ ನಿರೂಪಣೆ ಸುಲಲಿತ ಓದಿಗೆ ಸಹಾಯಕವಾಗಿದೆ. ಅನುವಾದ ಕೂಡ ಅದೇ ನೆಲೆಯಲ್ಲಿ ಸಾಗಿರುವುದರಿಂದ ಕೃತಿಯೊಡನೆ ಓದುಗನಿಗೆ ಆಪ್ತತೆ ಮೂಡುತ್ತದೆ ಎಂದರು.
ಕೃತಿಗಳ ಬಿಡುಗಡೆ ಮಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಟಿ. ನಾಗೇಶ್ ಮಾತನಾಡಿ ಕೃತಿಗಳು ಇತರೆ ಭಾಷೆಗಳಿಗೆ ಅನುವಾದವಾಗುತ್ತವೆ ಎಂದರೆ ಅದರ ಗಟ್ಟಿತನ ಎಷ್ಟಿರಬಹುದೆಂದು ತಿಳಿದುಬರುತ್ತದೆ. ಉತ್ತರ ಭಾರತದಲ್ಲಿ ಅತಿಹೆಚ್ದು ಬಳಕೆಯಲ್ಲಿರುವ ಹಿಂದಿ ಭಾಷೆಗೆ ಕನ್ನಡದ ಕೃತಿಯೊಂದು ಅನುವಾದಗೊಂಡು ಕನ್ನಡ ಕಂಪನ್ನು ಹಿಂದಿಗರು ಅನುಭವಿಸುವಂತೆ ಮಾಡಿದ ಅನುವಾದಕ ಡಾ. ದೇವರಾಜ್ ಹಾಗೂ ನಾಟಕಕಾರ ಡಾ. ಎಂ. ಬೈರೇಗೌಡರು ಅಭಿನಂದನಾರ್ಹರು ಎಂದರು.
ವೇಷದ ಹುಲಿ ನಾಟಕ ಕೃತಿ ಕುರಿತು ಮಾತನಾಡಿದ ಉಪನ್ಯಾಸಕ ಅರುಣ್ ಕವಣಾಪುರ ಪ್ರೀತಿಯಿಂದ ಜಗತ್ತನ್ನೇ ಜಯಿಸಬಹುದೆಂಬ ತತ್ವವನ್ನು ಈ ಕೃತಿ ಪ್ರತಿಪಾದಿಸುತ್ತದೆ. ಕ್ರೌರ್ಯ ಎಂಬುದು ದ್ವೇಷಸಾಧನೆಯಿಂದ ಅಂತ್ಯ ಕಾಣುವುದಲ್ಲ; ಬದಲಾಗಿ ಸೌಮ್ಯತೆ ಮತ್ತು ಪ್ರೀತಿ ಮಾತ್ರ ಜಗತ್ತನ್ನೇ ಗೆಲ್ಲಿಸುವ ಶಕ್ತಿ ಪಡೆದಿದೆ ಎಂಬುದನ್ನು ಬೈರೇಗೌಡರು ತಮ್ಮ ನಾಟಕದ ಮೂಲಕ ಸಮಂಜಸವಾಗಿ ಸಾದರ ಪಡಿಸಿದ್ದಾರೆ,
ಮೌಲಿಕತೆಯೇ ಈ ಕೃತಿಯ ಸರ್ವಸತ್ವವೆಂದು ನುಡಿದರು.
ನಾಟಕಕಾರ ಡಾ. ಎಂ. ಬೈರೇಗೌಡ ಮಾತನಾಡಿ ಕನ್ನಡ ಭಾಷೆಯ ಕೃತಿ ಮತ್ತೊಂದು ಭಾಷೆಗೆ ಅನುವಾದವಾಗುತ್ತಿದೆ ಎಂದರೆ ಅದು ಹಲವು ಭಾಷೆಗಳಿಗೆ ಅನುವಾದಗೊಳ್ಳುವ ಯೋಗ್ಯತೆ ಪಡೆದಿರಬೇಕು. ಹಾಗೆಯೇ ಎರಡು ಭಾಷೆಗಳ ಸೇತುವಾಗಿ ಭಾಷಾ ಬಾಂಧವ್ಯವೃದ್ದಿಗೆ ಪೂರಕವಾಗುತ್ತದೆ. ಈ ನಿಟ್ಟಿನಲ್ಲಿ ನನ್ನದೊಂದು ಸಣ್ಣ ಪ್ರಯತ್ನ. ಹಾಗೆಯೇ ಅನುವಾದಗೊಳಿಸಿದ ಡಾ. ಎನ್. ದೇವರಾಜ್ ಅವರು ಅಭಿನಂದನಾರ್ಹರು ಎಂದರು.
ಮಾಜಿ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಸದಸ್ಯ ಹಾಗೂ ವೇಷದ ಹುಲಿ ನಾಟಕದ ಅನುವಾದಕ ಡಾ. ಎನ್. ದೇವರಾಜ್ ಮಾತನಾಡಿ, ಕನ್ನಡದ ಕೃತಿಗಳನ್ನು ಹಿಂದಿಗರು ತಮ್ಮದೇ ಭಾಷೆಯ ಕೃತಿಯೆಂಬ ಪ್ರೀತಿಯಿಂದ ಓದಬೇಕು. ಪ್ರೇಮಚಂದಾದಿ ಹಲವು ಗಣ್ಯರ ಕೃತಿಗಳನ್ನು ಕನ್ನಡದ್ದೇ ಕೃತಿಗಳೆಂದು ನಾವು ಓದುತ್ತಿರುವಂತೆ ಉತ್ತರದವರೂ ಕೂಡ ಪ್ರೀತಿಯಿಂದಲೇ ಓದುವಂತಾಗಬೇಕೆAಬ ಆಶಯ ವ್ಯಕ್ತಪಡಿಸಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಟಿ. ದಿನೇಶ್ ಬಿಳಗುಂಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ರಾಜೇಶ್ ಕವಣಾಪುರ ಉಪಸ್ಥಿತರಿದ್ದರು. ನವೀನ್ ರಾಮನಗರ ಕಾರ್ಯಕ್ರಮ ನಿರೂಪಿಸಿದರು. ಸಾಹಿತಿ ಬೆಳ್ಳೂರು ವೆಂಕಟಪ್ಪ, ಚನ್ನಪಟ್ಟಣ ತಾಲ್ಲೂಕು ಕಸಾಪ ಅಧ್ಯಕ್ಷ ಶ್ರೀನಿವಾಸ್ ರಾಂಪುರ, ಸಾಹಿತಿಗಳಾದ ಡಾ ಅಂಕನಹಳ್ಳಿ ಪಾರ್ಥ, ವಿಜಯ್ ರಾಂಪುರ, ಅಬ್ಬೂರು ಶ್ರೀನಿವಾಸ್, ಗಾಯಕ ನವೀನ್, ಎಚ್.ವಿ. ಮೂರ್ತಿ ಪಾಲ್ಗೊಂಡಿದ್ದರು.

Dr. M. Byregowda

9448102158