ಕನ್ನಡ ಚಿತ್ರರಂಗ ದುಸ್ಥಿತಿಯಲ್ಲಿ…….
ವಿಜಯ ದರ್ಪಣ ನ್ಯೂಸ್…
ಕನ್ನಡ ಚಿತ್ರರಂಗ ದುಸ್ಥಿತಿಯಲ್ಲಿ…….
ಕೆಲವೇ ಕೆಲವು ನಟನಟಿಯರು, ನಿರ್ಮಾಪಕರು, ಪ್ರದರ್ಶಕರು ಮಾತ್ರವೇ ದೊಡ್ಡ ಮಟ್ಟದ ಯಶಸ್ಸು ಕಂಡು ಹಣ ಮಾಡುತ್ತಿದ್ದಾರೆ. ಬಹುತೇಕ ಶೇಕಡಾ 90% ಕ್ಕಿಂತ ಹೆಚ್ಚು ಆ ಕ್ಷೇತ್ರದ ಅವಲಂಬಿತರು ನಷ್ಟದಲ್ಲಿದ್ದಾರೆ ಅಥವಾ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಚಿತ್ರರಂಗ ಅವಸಾನದ ಅಂಚಿಗೆ ಬಂದು ತಲುಪುತ್ತದೆ. ಆದ್ದರಿಂದ ಏನಾದರೂ ಕ್ರಮ ಕೈಗೊಳ್ಳಲೇಬೇಕು…..
ಮುಖ್ಯವಾಗಿ ಪ್ರಖ್ಯಾತ ನಟರು ಹೆಚ್ಚು ಹೆಚ್ಚು ಸಿನಿಮಾ ಮಾಡಬೇಕು. ಏಕೆಂದರೆ ಅವರಿಂದ ಒಂದಷ್ಟು ಪ್ರೇಕ್ಷಕರು ಚಿತ್ರಮಂದಿರಗಳತ್ತ ಬರಬಹುದು ಎಂಬ ನಿರೀಕ್ಷೆ. ಹಾಗೆಯೇ ಬಿ ಮತ್ತು ಸಿ ದರ್ಜೆಯ ಚಿತ್ರಮಂದಿರಗಳು ಬಹುತೇಕ ಮುಚ್ಚುವ ಹಂತದಲ್ಲಿವೆ ಅಥವಾ ಮುಚ್ಚಿವೆ. ಈಗ ದಾರಿ ಕಾಣದಾಗಿದೆ ಎಂಬ ಚರ್ಚೆಗಳು ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿದೆ…..
ಯಾವಾಗಲೂ ಒಂದು ಕ್ಷೇತ್ರ ಆರ್ಥಿಕ ಸಂಕಷ್ಟ ಎದುರಾದಾಗ ಆ ಕ್ಷೇತ್ರದ ಜನ ಅಷ್ಟಕ್ಕೇ ಸೀಮಿತವಾಗಿ ಒಂದಷ್ಟು ಕ್ರಮಗಳನ್ನು ಕೈಗೊಳ್ಳುತ್ತಾರೆ. ಇದು ಸಾಮಾನ್ಯ ಪ್ರಕ್ರಿಯೆ. ಆದರೆ ಜಾಗತೀಕರಣದ ನಂತರ ಈ ರೀತಿಯ ಅನೇಕ ಕ್ಷೇತ್ರಗಳು ಸಾಕಷ್ಟು ದೊಡ್ಡ ಪಲ್ಲಟಗಳಿಗೆ ಕಾರಣವಾಗಿ ಅದು ಸಂಪೂರ್ಣ ಕುಸಿದು, ಆ ಪ್ರಕ್ರಿಯೆಯಲ್ಲಿ ಅನೇಕರು ನಷ್ಟ ಅನುಭವಿಸಿ ಆ ಕ್ಷೇತ್ರವನ್ನೇ ಬಿಟ್ಟು ಹೋಗಿರುವುದಲ್ಲದೆ ಇನ್ನೂ ಕೆಲವರು ಆತ್ಮಹತ್ಯೆಯನ್ನೇ ಮಾಡಿಕೊಂಡಿದ್ದಾರೆ……..
ಇದು ಸಮಗ್ರ ಚಿಂತನೆಗೆ ಒಳಪಡಬೇಕಾದ ವಿಷಯ. ಕೃಷಿ ಕ್ಷೇತ್ರವೇ ಇರಲಿ, ರೇಷ್ಮೆ ಉದ್ಯಮವೇ ಇರಲಿ, ಶಿಕ್ಷಣ ಆರೋಗ್ಯವೇ ಇರಲಿ, ಮನರಂಜನಾ ಉದ್ಯಮವೇ ಇರಲಿ, ರಾಜಕೀಯವೇ ಇರಲಿ,, ಉದ್ಯಮ ವ್ಯಾಪಾರವೇ ಇರಲಿ, ಬೀದಿ ಬದಿಯ ಸಣ್ಣಪುಟ್ಟ ವ್ಯಾಪಾರಿಗಳೇ ಇರಲಿ, ಚಿಲ್ಲರೆ ಅಂಗಡಿಗಳವರೇ ಆಗಿರಲಿ ದೊಡ್ಡ ವ್ಯಕ್ತಿಗಳು, ದೊಡ್ಡ ಸಂಸ್ಥೆಗಳು ಅಂದರೆ ಕಾರ್ಪೊರೇಟ್ ಸಂಸ್ಕೃತಿ ಯಾವುದೇ ಕ್ಷೇತ್ರಕ್ಕೆ ಪ್ರವೇಶಿಸಿದ ನಂತರ ಅದು ತನ್ನ ಕಬಂಧ ಬಾಹುಗಳನ್ನು ಎಲ್ಲೆಡೆ ಚಾಚಿ, ಮಧ್ಯಮ ಮತ್ತು ಸಣ್ಣ ಪ್ರಮಾಣದ ಎಲ್ಲರನ್ನು ತನ್ನೊಳಗಡೆ ಬಂಧಿಸಿ, ಅವರನ್ನು ನಾಶಪಡಿಸಿ ತಾನೇ ಏಕೀಕೃತ ಮತ್ತು ಕೇಂದ್ರೀಕೃತ ಆರ್ಥಿಕ ಬಲಶಾಲಿಯಾಗುವುದು ಸಾಮಾನ್ಯ ದೃಶ್ಯವಾಗಿದೆ……
ಇದನ್ನು ಎಲ್ಲಾ ಕ್ಷೇತ್ರಗಳಲ್ಲೂ ನೀವು ಗಮನಿಸಬಹುದು. ಸಣ್ಣಪುಟ್ಟ ಆಸ್ಪತ್ರೆಗಳು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಾಗಿ ಅದು ಮತ್ತೆ ಬೃಹತ್ ಉದ್ಯಮಿಯ ಕೈಗೆ ಹೋಗಿ ಆ ಜಾಲ ದೇಶಾದ್ಯಂತ ವ್ಯಾಪಿಸುತ್ತದೆ. ದಿನನಿತ್ಯದ ಸರಕು ಸರಂಜಾಮುಗಳ ವ್ಯಾಪಾರವು ಮಾಲ್ ಸಂಸ್ಕೃತಿ, ಬಿಗ್ ಬಜಾರ್ ಸಂಸ್ಕೃತಿಗೆ ಒಳಪಟ್ಟು ಚಿಕ್ಕ ಪುಟ್ಟ ಅಂಗಡಿಗಳು ಬದುಕುವುದೇ ದುಸ್ತರವಾಗಿದೆ….
ಹಾಗೆಯೇ ಮನರಂಜನಾ ಉದ್ಯಮವು ಸಹ ಕೆಲವೇ ಕೆಲವು ಹಿತಾಸಕ್ತಿಗಳು, ಜನಪ್ರಿಯರು ಮಾತ್ರವೇ ಚಿತ್ರರಂಗ ಎಂದು ಪರಿಗಣಿಸುವ ಮಟ್ಟಕ್ಕೆ ಬೆಳೆದಿರುತ್ತದೆ. ಬಣ್ಣದ ಲೋಕದ ಮನರಂಜನಾ ಉದ್ಯಮ ಈಗ ಅನುಭವಿಸುತ್ತಿರುವ ಸಂಕಷ್ಟಗಳು ಈ ದೇಶದ ಅನೇಕ ಮಧ್ಯಮ, ಕೆಳಮಧ್ಯಮ ವರ್ಗದ ಜನ ಕಳೆದ 20/30 ವರ್ಷಗಳಿಂದ ಅನುಭವಿಸುತ್ತಾ ಇದ್ದಾರೆ. ಇದು ಹೊಸದೇನು ಅಲ್ಲ. ನಮ್ಮ ಕಣ್ಣ ಮುಂದೆಯೇ ಅನೇಕ ಸಿರಿವಂತ ಕುಟುಂಬಗಳು ಕೆಳಕ್ಕೆ ಜಾರಿವೆ. ಹಾಗೆಯೇ ಅನಿರೀಕ್ಷಿತವಾಗಿ ಕೆಲವು ಕುಟುಂಬಗಳು ದೊಡ್ಡ ಹಂತಕ್ಕೆ ಬೆಳೆದೂ ಸಹ ಇವೆ…..
ಕೆಜಿಎಫ್, ಬಾಹುಬಲಿಯಂತ ಸಿನಿಮಾ 1500 ಕೋಟಿ ಅಥವಾ ಕಾಂತಾರದಂತಹ ಸಿನಿಮಾ 700 ಕೋಟಿ ಹಣ ಮಾಡುತ್ತಿರುವಾಗ ಚಿತ್ರರಂಗ ದುಸ್ಥಿತಿಗೆ ಬರಲು ಹೇಗೆ ಸಾಧ್ಯ ಎಂದು ಜನಸಾಮಾನ್ಯರಿಗೆ ಅನ್ನಿಸಬಹುದು. ನಾವು ಕೇವಲ ಯಶಸ್ಸುಗಳನ್ನು, ಪ್ರಚಾರ ಪಡೆದ ಸಿನಿಮಾಗಳನ್ನು ಮಾತ್ರ ಗಮನಿಸಬಾರದು. ದೊಡ್ಡ ಮೊತ್ತ ಕೇವಲ ಒಂದು ಎರಡಕ್ಕೇ ಸೀಮಿತವಾಗಿರುತ್ತದೆ. ಆದರೆ ಕನ್ನಡ ಚಿತ್ರರಂಗದಲ್ಲಿ ಸಾಮಾನ್ಯವಾಗಿ ಸರಿಸುಮಾರು ವರ್ಷಕ್ಕೆ 100/130/180 ಚಿತ್ರಗಳು ನಿರ್ಮಾಣವಾಗಿ ಬಿಡುಗಡೆಯಾಗುತ್ತವೆ. ಅದನ್ನೂ ಗಮನಿಸಬೇಕು….
ಒಬ್ಬ ನಾಯಕನಟ 100 ಕೋಟಿ, 50 ಕೋಟಿಯ ಸಂಭಾವನೆ ಪಡೆದರೆ ಅದು ಆತನಿಗೆ ಮಾತ್ರ ಸೀಮಿತವಾಗಿರುತ್ತದೆ. ಅದೇ ಮಾನದಂಡವನ್ನು ಎಲ್ಲ ಕಡೆ ಉಪಯೋಗಿಸಲು ಸಾಧ್ಯವಿಲ್ಲ. ಇಡೀ ವ್ಯವಸ್ಥೆ ಎಚ್ಚೆತ್ತುಕೊಂಡು ಸುಸ್ಥಿರ ಅಭಿವೃದ್ಧಿಯ ಕಡೆ, ಸಮಾನ ಹಂಚಿಕೆಯ ಕಡೆ, ಸಮಾನ ಹಕ್ಕು ಮತ್ತು ಕರ್ತವ್ಯಗಳ ಕಡೆ ಮುನ್ನುಗ್ಗದಿದ್ದರೆ ಈ ರೀತಿಯ ಏರಿಳಿತಗಳಿಗೆ ಎಲ್ಲ ಕ್ಷೇತ್ರಗಳ ಮಧ್ಯಮ ಮತ್ತು ಕೆಳ ಮಧ್ಯಮ ಹಾಗೂ ಬಡ ಕುಟುಂಬಗಳು ಬಲಿಯಾಗುತ್ತವೆ ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕಿದೆ. ಇಲ್ಲದಿದ್ದರೆ ಇವತ್ತು ಚಿತ್ರರಂಗ, ನಾಳೆ ರಿಯಲ್ ಎಸ್ಟೇಟ್, ನಾಡಿದ್ದು ಮತ್ತೊಂದು ಉದ್ಯಮ ಹೀಗೆ ಕೆಲವೇ ಜನರ ನಿಯಂತ್ರಿತ ವ್ಯವಸ್ಥೆ ನಮ್ಮನ್ನು ಗುಲಾಮರನ್ನಾಗಿ ಮಾಡುವುದು ನಿಶ್ಚಿತ…..
ಜಿಡಿಪಿ ಬೆಳವಣಿಗೆಯ ಅಂಕಿ ಅಂಶಗಳು ಅಥವಾ ಬೃಹತ್ ಗಾತ್ರದ ಆರ್ಥಿಕತೆ, ಈ ಎರಡನ್ನೇ ನಾವು ಅಭಿವೃದ್ಧಿಯ ಮಾನದಂಡ ಎಂದು ಪರಿಗಣಿಸಬಾರದು. ಸಮಗ್ರ – ಸುಸ್ಥಿರ ಅಭಿವೃದ್ಧಿ ಬಹಳ ಮುಖ್ಯವಾಗುತ್ತದೆ. ದೇಶದ ಪ್ರತಿ ಪ್ರಜೆಯ ಈ ಕ್ಷಣದ ಆತನ ಜೀವನ ಮಟ್ಟ ಮತ್ತು ನೆಮ್ಮದಿಯ ಗುಣಮಟ್ಟ ಬಹಳ ಮುಖ್ಯವಾಗಬೇಕು……
ಶಾರುಖಾನ್ ಕೇವಲ ನಟ ಮಾತ್ರ ಅಲ್ಲ ನಿರ್ಮಾಪಕನೂ ಹೌದು, ಐಪಿಎಲ್ ಮುಂತಾದ ಕ್ರೀಡಾ ತಂಡಗಳ ಮಾಲೀಕನೂ ಸಹ ಹೌದು, ಜಾಹೀರಾತು, ಇವೆಂಟ್ ಮ್ಯಾನೇಜ್ಮೆಂಟ್ ಉದ್ಯಮ ದೊರೆಯೂ ಹೌದು. ಹಾಗೆಯೇ ಅಂಬಾನಿ, ಅದಾನಿಗಳು ತಮ್ಮ ವ್ಯಾಪಾರ ಕ್ಷೇತ್ರಗಳನ್ನು ಮೀರಿ ಕ್ರೀಡೆ, ಮಾಧ್ಯಮ ಕ್ಷೇತ್ರಗಳನ್ನು ತಮ್ಮ ವ್ಯಾಪಾರದ ಬಲೆಯೊಳಗೆ ಸೇರಿಸಿಕೊಳ್ಳುತ್ತಿದ್ದಾರೆ. ಮೇಲ್ನೋಟಕ್ಕೆ ಅಭಿವೃದ್ಧಿ ಮತ್ತು ಸ್ಪರ್ಧೆ ಎನಿಸಬಹುದು. ಆದರೆ ಇಡೀ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಗುಲಾಮಿತನಕ್ಕೆ ಇದು ಕಾರಣವಾಗುತ್ತದೆ ಎಂಬ ಸೂಕ್ಷ್ಮವನ್ನು ಸಂವೇದನಾಶೀಲ ಮನಸ್ಸುಗಳು ಗ್ರಹಿಸಬೇಕು…….
ಈ ದುಸ್ಥಿತಿಗಳು ದಿಢೀರ್ ಎಂದು ಆಗುವುದಿಲ್ಲ. ಇದು ಕ್ಯಾನ್ಸರ್ ಕಣಗಳಂತೆ ನಿಧಾನವಾಗಿ, ಒಳಗೊಳಗೆ ಜೀವ ತಳೆಯುತ್ತಿರುತ್ತವೆ. ಒಂದು ದಿನ ಅದರ ದುಷ್ಪರಿಣಾಮಗಳು ಗೋಚರವಾಗತೊಡಗಿದಾಗ ಅದರ ಅರಿವಾಗುತ್ತದೆ. ಅದು ಯಾವ ಹಂತಕ್ಕೆ ಬಂದಮೇಲೆ ನಮ್ಮ ಅರಿವಿಗೆ ಬರುತ್ತದೆ ಎಂಬುದರ ಮೇಲೆ ಮುಂದಿನ ಪರಿಣಾಮಗಳು ಅವಲಂಬಿಸಿರುತ್ತದೆ…..
ಸಿನಿಮಾ ಮಂದಿಗೆ ಈಗ ಅರ್ಥವಾಗುತ್ತಿದೆ. ಕಾಲ ಮಿಂಚಿದೆ. ಅನೇಕ ಪರ್ಯಾಯ ಮಾಧ್ಯಮಗಳು ಬೆಳವಣಿಗೆ ಹೊಂದಿವೆ. ಆದರೂ ಒಂದಷ್ಟು ಪರಿಹಾರ ಸೂತ್ರಗಳು ಇದ್ದೇ ಇರುತ್ತವೆ. ಅದನ್ನು ಎಲ್ಲರ ಸಹಕಾರದೊಂದಿಗೆ ಕಂಡುಕೊಳ್ಳಲೇಬೇಕಿದೆ. ಪ್ರಖ್ಯಾತ ನಟರು ತಮ್ಮ ಹಮ್ಮು ಬಿಮ್ಮು ಮರೆತು ಅಜ್ಞಾನ ಮೆರೆಯದೆ ಇದಕ್ಕೆ ಸಹಕರಿಸಬೇಕಿದೆ. ಅನುಭವಿಗಳು ಪರಿಹಾರ ಸೂತ್ರ ಹಣಿಯಬೇಕಿದೆ……
ನಮ್ಮ ಬಾಲ್ಯದ, ಯೌವ್ವನದ, ಸಂಕಷ್ಟದ ಸಮಯದಲ್ಲಿ ಈ ಸಿನಿಮಾಗಳು ನಮ್ಮ ಮೇಲೆ ಒಂದಷ್ಟು ಪರಿಣಾಮ ಬೀರಿದೆ. ಒಂದು ಇಡೀ ಜನಾಂಗವೇ ಸಿನಿಮಾಗಳ ಭ್ರಮಾ ಲೋಕದಲ್ಲಿ ತೇಲಿದೆ ಮತ್ತು ಮುಳುಗಿದೆ. ಸಿನಿಮಾ ನಟರು ನಮ್ಮದೇ ಬದುಕಿನ ಭಾಗವಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ಸಾಕಷ್ಟು ಕೆಟ್ಟ ಮೌಲ್ಯಗಳ ಪ್ರತಿಪಾದಕರಾಗಿದ್ದರು, ಚಿತ್ರರಂಗ ಮೌಲ್ಯಯುತವಾಗಿ, ಪ್ರಾಮಾಣಿಕವಾಗಿ, ಸುಸ್ಥಿರವಾಗಿ ಉಳಿಯಲಿ ಮತ್ತು ಬೆಳೆಯಲಿ ಎಂದು ಹಾರೈಸುತ್ತಾ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068………