ಬ್ಯಾಂಕ್ ಮ್ಯಾನೇಜರ್, ಸಿಬ್ಬಂದಿಗಳಿಂದಲೇ ಗ್ರಾಹಕರಿಗೆ ಪಂಗನಾಮ : ಅಸಲಿ ಚಿನ್ನದ ಜಾಗದಲ್ಲಿ ನಕಲಿ ಚಿನ್ನ !!
ವಿಜಯ ದರ್ಪಣ ನ್ಯೂಸ್..
ಬ್ಯಾಂಕ್ ಮ್ಯಾನೇಜರ್, ಸಿಬ್ಬಂದಿಗಳಿಂದಲೇ ಗ್ರಾಹಕರಿಗೆ ಪಂಗನಾಮ!
ಅಸಲಿ ಚಿನ್ನದ ಜಾಗದಲ್ಲಿ ನಕಲಿ ಚಿನ್ನ ಇಟ್ಟಿದ್ದರು!!
ಮ್ಯಾನೇಜರ್ ಮತ್ತು ಸಿಬ್ಬಂದಿಗಳು ಅನ್ನದಾತ ಬ್ಯಾಂಕ್ ಗೆ ಮತ್ತು ಗ್ರಾಹಕರಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಚಿಕ್ಕಮಗಳೂರು ನಗರದ ಬೋಳರಾಮೇಶ್ವರ ದೇವಾಲಯದ ಬಳಿ ಇರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಚಿಕ್ಕಮಗಳೂರು ನಗರ ಶಾಖೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ನಗರ ಸೆಂಟ್ರಲ್ ಬ್ಯಾಂಕ್ ಶಾಖೆಯ ಮ್ಯಾನೇಜರ್ ಸಂದೀಪ್ ಮತ್ತು ಸಿಬ್ಬಂದಿ ನಾರಾಯಣಸ್ವಾಮಿ ಎಂಬುವವರು ಗ್ರಾಹಕರಿಂದ ಅಸಲಿ ಚಿನ್ನ ಪಡೆದು ಲೋನ್ ನೀಡಿದ್ದಾರೆ. ನಂತರ ಸೆಂಟ್ರಲ್ ಬ್ಯಾಂಕ್ ಲಾಕರ್ನಲ್ಲಿ ನಕಲಿ ಚಿನ್ನವಿಟ್ಟು ಗ್ರಾಹಕರ ಚಿನ್ನವನ್ನ ಮಾರಾಟ ಮಾಡಿದ್ದರು. ಜೊತೆಗೆ FD ಹಣ ಸೇರಿದಂತೆ ಗ್ರಾಹಕರ ಖಾತೆಯಲ್ಲಿದ್ದ ಲಕ್ಷಾಂತರ ಹಣ ಲೂಟಿ ಮಾಡಿದ್ದರು. ಈ ಅಕ್ರಮ ಕಳೆದ ನವೆಂಬರ್ ತಿಂಗಳಲ್ಲಿ ಬಯಲಾಗಿತ್ತು.
ಈ ಸಂಬಂಧ ಸೆಂಟ್ರಲ್ ಬ್ಯಾಂಕ್ ಚಿಕ್ಕಮಗಳೂರು ನಗರ ಠಾಣೆಗೆ ಕಳೆದ ವರ್ಷದ ನವೆಂಬರ್ನಲ್ಲಿ ಬ್ಯಾಂಕ್ ಮ್ಯಾನೇಜರ್ ಸಂದೀಪ್, ಸಿಬ್ಬಂದಿ ಸೇರಿದಂತೆ 5 ಜನರ ವಿರುದ್ಧ ದೂರು ನೀಡಲಾಗಿತ್ತು. ಪೊಲೀಸ್ ತನಿಖೆಯಲ್ಲಿ ಇವರು ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿತ್ತು. 6 ತಿಂಗಳ ಕಾಲ ಕಾದು ಕಾದು ಆಕ್ರೋಶಗೊಂಡ ಮೋಸ ಹೋದ ಗ್ರಾಹಕರು ಇಂದು ಬ್ಯಾಂಕಿಗೆ ಬಂದು ಚಿನ್ನ ಹಣ ವಾಪಸ್ ನೀಡುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಸಲಿ ಚಿನ್ನದ ಜಾಗದಲ್ಲಿ ನಕಲಿ ಚಿನ್ನ
ಚಿಕ್ಕಮಗಳೂರು ಶಾಖೆಯ ಸೆಂಟ್ರಲ್ ಬ್ಯಾಂಕ್ನಲ್ಲಿ ರೂಪಾಯಿ ಚಿನ್ನದ ಲೋನ್ ನೀಡಲಾಗಿತ್ತು. ದಿನನಿತ್ಯ ಕೋಟ್ಯಾಂತರ ರೂಪಾಯಿ ಚಿನ್ನದ ಲೋನ್ ನೀಡುತ್ತಿರುವ ಬಗ್ಗೆ ಅನುಮಾನಗೊಂಡ ಬೆಂಗಳೂರಿನ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್ ತನಿಖೆ ನಡೆಸುವಂತೆ ಹಾಸನ ವಿಭಾಗದ ಮ್ಯಾನೇಜರ್ಗೆ ಸೂಚನೆ ನೀಡಿದರು.
ದಿಢೀರ್ ಚಿಕ್ಕಮಗಳೂರು ಶಾಖೆಯ ಬ್ಯಾಂಕ್ಗೆ ಭೇಟಿ ನೀಡಿದಾಗ ನಕಲಿ ಚಿನ್ನದ ಬ್ಯಾಗ್ ಪತ್ತೆಯಾಗಿತ್ತು. ಲಾಕರ್ನಲ್ಲಿ ನಕಲಿ ಚಿನ್ನ ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಇದರಿಂದ ಕಂಗಾಲದ ಬ್ಯಾಂಕ್, ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದೂರನ್ನ ನೀಡಿದ್ದು , ನಿರ್ದಿಷ್ಟ ವಂಚನೆಯ ಹಣದ ಕುರಿತು ಪ್ರತಿ ಅಕೌಂಟ್ ಅನ್ನು ಆಡಿಟ್ ಮಾಡಿದಾಗ ಕೋಟ್ಯಾಂತರ ರೂಪಾಯಿ ವಂಚನೆ ಆಗಿರುವುದು ಪತ್ತೆಯಾಗಿತ್ತು.
ಇನ್ನು ಗ್ರಾಹಕರ ಚಿನ್ನ ಕೂಡ ನಾಪತ್ತೆಯಾಗಿದ್ದು, ಅಸಲಿ ಚಿನ್ನದ ಜಾಗದಲ್ಲಿ ನಕಲಿ ಚಿನ್ನ ಇಡಲಾಗಿದೆ. ಇದರಿಂದ ಕಂಗಾಲದ ಬ್ಯಾಂಕ್, ಮುಖ್ಯ ಮ್ಯಾನೇಜರ್ ನಾರಾಯಣಸ್ವಾಮಿ, ಮ್ಯಾನೇಜರ್ ಸಂದೀಪ್ ಕೊಲ್ಲೂರಿ, ಪ್ರಶಾಂತ್ನನ್ನ ಅಮಾನತು ಮಾಡಿ ಐವರ ವಿರುದ್ಧ ಚಿಕ್ಕಮಗಳೂರು ನಗರ ಠಾಣೆಯಲ್ಲಿ ದೂರನ್ನ ನೀಡಿತ್ತು. ಕಳೆದ ನವೆಂಬರ್ನಿಂದ ಎಸ್ಕೇಪ್ ಆಗಿರುವ ಐವರು ಪೋಲೀಸರಿಗೆ ಸಿಗದೇ ಕಳ್ಳ ಪೊಲೀಸ್ ಆಟವಾಡುತ್ತಿದ್ದಾರೆ. ಇತ್ತ ಚಿನ್ನವು ಇಲ್ಲ, ಖಾತೆಯಲ್ಲಿದ್ದ ಹಣವನ್ನು ಕಳೆದುಕೊಂಡ ಗ್ರಾಹಕರು ಬ್ಯಾಂಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ. ಬ್ಯಾಂಕ್ ಸಿಬ್ಬಂದಿಗಳ ಜೊತೆ ವಾಗ್ವಾದ ನಡೆಸಿದ್ದಾರೆ.
ಒಟ್ಟಿನಲ್ಲಿ ಕೆಲಸ ಕೊಟ್ಟ ಬ್ಯಾಂಕಿಗೆ, ಬ್ಯಾಂಕ್ ನಂಬಿದ ಗ್ರಾಹಕರಿಗೆ ಕೋಟ್ಯಾಂತರ ರೂಪಾಯಿ ವಂಚನೆಯನ್ನ ಮಾಡಿ ತಲೆಮರೆಸಿಕೊಂಡಿರುವ ಐವರ ಪತ್ತೆಗಾಗಿ ಚಿಕ್ಕಮಗಳೂರಿನ ಪೊಲೀಸರು ಬಲೆ ಬೀಸಿದ್ದಾರೆ .