ಒಬ್ಬರನ್ನು ಹಿಯ್ಯಾಳಿಸಿದಷ್ಟೂ ಕೆಳಗೆ ಬೀಳುತ್ತೀರಿ.!

ವಿಜಯ ದರ್ಪಣ ನ್ಯೂಸ್….

ಒಬ್ಬರನ್ನು ಹಿಯ್ಯಾಳಿಸಿದಷ್ಟೂ ಕೆಳಗೆ ಬೀಳುತ್ತೀರಿ.!

ಒಬ್ಬ ಮನುಷ್ಯ ತನಗಾಗದವರ ಅಥವಾ ಮತ್ತೊಬ್ಬರ ಬಗೆಗೆ ನಿರಂತರವಾಗಿ ಅಸೂಯೆ, ಕುಹಕ, ಅಪಪ್ರಚಾರ, ತೇಜೋವಧೆ, ವ್ಯಂಗ್ಯ, ದ್ವೇಷ , ಕೀಳುಮಟ್ಟದ ಟೀಕೆ , ಮಾನಹಾನಿ….. ಇವೇ ಮೊದಲಾದ ನಕಾರಾತ್ಮಕ ನಖರಾಗಳಲ್ಲೇ ಮುಳುಗೆದ್ದಿದ್ದರೆ ಅಥವಾ ಕೇವಲ ಇವುಗಳ ಮೂಲಕವೇ ತನ್ನ ಗ್ರೇಟ್ ನೆಸ್ಸನ್ನು ವೃದ್ಧಿಸಿಕೊಳ್ಳುವ ಅಥವಾ ಮತ್ತೊಬ್ಬರನ್ನು ತುಳಿದೇ ಬದುಕಬೇಕೆನ್ನುವ, ಒಬ್ಬರನ್ನು ತೇಜೋವಧೆ ಮಾಡಿಯೇ ಗೆಲ್ಲಬೇಕೆನ್ನುವ ಇಂಚಿಂಚೂ ಇರಾದೆ ಹೊಂದಿದ್ದರೆ ಬಹುಶಃ ಅಂಥವರಿಗಿಂತ ಕಚಡಾ ಮನಸ್ಥಿತಿಯುಳ್ಳವರು ಭೂಮಿ ಮೇಲೆ ಬೇರೊಬ್ಬರಿಲ್ಲವೆನಿಸುತ್ತೆ.!

ನೀವು ಯಾವುದೇ ಕ್ಷೇತ್ರವನ್ನು ತೆಗೆದುಕೊಳ್ಳಿ , ಅಲ್ಲಿ ಯಶಸ್ಸು ಗಳಿಸಲು ಸ್ವಸಾಮರ್ಥ್ಯದ ಮೇಲಿನ ಧೃಢ ನಂಬಿಕೆಗಿಂತಲೂ ಇನ್ನೊಬ್ಬರ ಮೇಲಿನ ಅಪಪ್ರಚಾರದ ಮೂಲಕ ಗೆಲುವು ಸಾಧಿಸುವ ಶಾರ್ಟ್ ಕಟ್ ಸಕ್ಸೆಸ್ಸ್ ಗೆ ಜೋತು ಬಿದ್ದಿರುವ ಹಲವು ತಗಡು ತಪರಾಕಿ ಗಿರಾಕಿಗಳನ್ನು ಕಾಣಬಹುದು. ಅದು ಉದ್ಯೋಗ ಮಾಡುವ ಸ್ಥಳವಾಗಿರಬಹುದು, ಕೌಟುಂಬಿಕ ವಲಯವಾಗಿರಬಹುದು , ರಾಜಕೀಯ ಕ್ಷೇತ್ರವೂ ಆಗಿದ್ದಿರಬಹುದು. ಎಲ್ಲೆಡೆ ಈ ದುರ್ಭಾವನೆಗಳನ್ನು ಹಾಸಿ ಹೊದ್ದಿರುವ ಮನೋವಿಕೃತಿಗಳು ಅದನ್ನೇ ತಮ್ಮ ಗೆಲುವಿನ ಹಾದಿಯನ್ನಾಗಿ ಮಾಡಿಕೊಂಡು‌ ವಿಜೃಂಭಿಸುವ ಅಲ್ಪಕಾಲದ ವಿಕೃತಾನಂದದ ಅಮಲಿಗೆ ದಾಸರಾಗಿರುತ್ತಾರೆ.

ಅದರಲ್ಲೂ ವಿಶೇಷವಾಗಿ ರಾಜಕೀಯ ಕ್ಷೇತ್ರದಲ್ಲಂತೂ ಚುನಾವಣಾ ಸಂಧರ್ಭದಲ್ಲಿ ತಮ್ಮ ತಮ್ಮ ಸಾಧನೆಗಳ ಬಗೆಗೆ ಮಾತನಾಡುವ, ದೇಶದ ಭವಿಷ್ಯಕ್ಕಾಗಿ ತಮ್ಮ‌ ಕನಸುಗಳನ್ನು ತೆರೆದಿಡುವ , ದೇಶದ ಅಭಿವೃದ್ಧಿಯ ಪಥದಲ್ಲಿ ತಾವು ರೂಪಿಸಿದ ಕ್ರಿಯಾ ಯೋಜನೆಗಳ ಕುರಿತಂತೆ, ಯಾವೊಂದು ಪಕ್ಷದ ಯಾವೊಬ್ಬ ದೊಣೆ‌ನಾಯಕನೂ ಜನಗಳೆದುರು ಆತ್ಮವಿಶ್ವಾಸದಿಂದ ಬಾಯಿ‌ ಬಿಡೋಲ್ಲ. ( ಇವೆಲ್ಲವೂ ಇದ್ದರೆ ತಾನೇ ಬಾಯಿ‌ಬಿಡಲಿಕ್ಕೆ ?) . ಆದರೆ ಅದೇ ಸಮಯಕ್ಕೆ ತಮ್ಮೆಲ್ಲಾ ವಾಕ್ಚಾತುರ್ಯವನ್ನೂ, ಅಮೂಲ್ಯ ಸಮಯವನ್ನೂ, ಅಂತರ್ಗತವಾದ ಪ್ರತಿಭೆಯನ್ನೂ, ಅಪಾರ ಅನುಭವವನ್ನೂ‌ ತಮ್ಮ ಎದುರಾಳಿಗಳನ್ನು ಹಿಗ್ಗಾಮುಗ್ಗಾ ಹಿಯ್ಯಾಳಿಸಲೆಂದೇ ಅಸಭ್ಯ ಪದ ಪ್ರಯೋಗಗಳ ವೃಷ್ಟಿಯನ್ನೇ ಸುರಿಸುವ ಮೂಲಕ ಗೆದ್ದ ಜೋಷ್‌ನಿಂದ ಬೀಗುತ್ತಾರೆ…! ಕೈಲಾಗದವರ ಮೊದಲ ಅಸ್ತ್ರವೇ ಅಪಪ್ರಚಾರವೆನ್ನುವ ಬೇಸಿಕ್ ಕಾಮನ್ ಸೆನ್ಸ್‌ ಇಲ್ಲಿ ಗಾಯಬ್ ಆಗಿರುತ್ತೆ.

ಈ ಮನೋವಿಕೃತಿಗೆ ಕಾರಣ ಬಹು ಸಿಂಪಲ್.‌ ಯಾವಾಗ ಒಬ್ಬ ವ್ಯಕ್ತಿ , ಒಂದು ಪಕ್ಷ ಅಥವಾ ಒಂದು‌ ಸಂಘಟನೆಗೆ ತನ್ನ ಸಾಧನೆಯ‌ ಮೂಲಕ ಮಾತನಾಡಲು ಬೇಕಾಗುವ ಪ್ರಾಮಾಣಿಕ ಬ್ಯಾಕಪ್ ಇರುವುದಿಲ್ಲವೋ…ಅಥವಾ ‌ಸ್ವಾರ್ಥಪರ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಸಲುವಾಗಿ ನೇರಮಾರ್ಗದ ಯೋಗ್ಯತೆಯಿಲ್ಲದೇ ವಾಮಮಾರ್ಗದ ಬಳಸುದಾರಿಯನ್ನೇ ಸಂಪೂರ್ಣವಾಗಿ ನೆಚ್ಚಿಕೊಳ್ಳುತ್ತಾರೋ ಆಗ ಇಂತಹಾ ಅನಪೇಕ್ಷಿತ ಸೀನುಗಳು ಸರ್ವೇ ಸಾಮಾನ್ಯ. ಇಂಥವರ ತಲೆಯೊಳಗಿನ ತತ್ವವೆಂದರೆ ಎದುರಾಳಿಯ‌ ಬಗೆಗೆ ಕ್ಷುಲ್ಲಕ ಅಪಪ್ರಚಾರ ಮಾಡಿದಷ್ಟೂ , ಒಬ್ಬರನ್ನು ಹಿಯ್ಯಾಳಿಸಿ ಅಪಮಾನ‌ ಮಾಡಿದಷ್ಟೂ ಅಥವಾ ಕೀಳು ಭಾಷೆಯಲ್ಲಿ ನಿಂದಿಸಿದಷ್ಟೂ ಅದನ್ನೆ ಸತ್ಯವೆಂದು ನಂಬಿಸುವ ಮೂಲಕ ತಮ್ಮ ಬದುಕಿನ‌ಲ್ಲಿ ಗೆಲುವಿನ ಹಾದಿ ಸುಗಮವಾಗಬಲ್ಲದು ಎಂಬ‌ ಭ್ರಮೆ !

ಉದಾಹರಣೆಗೆ ಒಂದು ಸಂಸ್ಥೆಯಲ್ಲಿ ಯಾವುದೇ ಉದ್ಯೋಗಿಯೊಬ್ಬನಿಗೆ ತಾನು ಉನ್ನತ ಸ್ಥಾನಕ್ಕೇರಲು ಬಹುಮುಖ ಸಾಧನೆ , ಸತತ ಪರಿಶ್ರಮ, ಕೊಟ್ಟ ಗುರಿಯ ನಿರ್ವಹಣೆ ಇವೆಲ್ಲವೂ ಬಹು ಮುಖ್ಯ. ಆದರೆ ಕೆಲವರಿಗೆ ಇತರರ ಬಗೆಗೆ ಒಂದು ನಕಾರಾತ್ಮಕ ಹವಾ ಕ್ರಿಯೇಟ್ ಮಾಡಿ ಅದರಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವಂತಹ ಭಿನ್ನ ಹಾದಿಯೇ ಅತಿ ಸುಲಭ.‌! ಈ‌ ಮನೋವಿಸ್ಮೃತಿಯ ಸೆಳಕುಗಳು ಸಮಾಜದಲ್ಲಿ ಮೊದಲಿನಿಂದಲೂ ಇದ್ದವಾದರೂ ಇಂದಿನ‌ ದಿನಗಳಲ್ಲಿ ಅದು ಎಲ್ಲೆ‌ ಮೀರಿ ವಿಜೃಂಭಿಸುತ್ತಿದೆ.

ಹಾಗಾದರೆ ಈ ಹಾದಿಯಲ್ಲಿರುವವರ ಸಕ್ಸೆಸ್ ರೇಟ್ ಎಷ್ಟು ಎನ್ನುವ ಪ್ರಶ್ನೆ ಮೂಡಬಹುದಲ್ಲವೇ ? ನೆನಪಿಡಿ, ಈ ವಾಮಮಾರ್ಗಗಳಿಂದ ಮೂಡಿಬರುವ ಔನ್ನತ್ಯ ಅಥವಾ ಯಶಸ್ಸು ಒಂದೊಮ್ಮೆ ಸಿಕ್ಕರೂ ಅದರ ಆಯಸ್ಸು ಬಹಳ‌ ಕಡಿಮೆ. ಒಬ್ಬರ ತೇಜೋವಧೆಯಿಂದ ಮನಕ್ಕೆ‌‌ ಸಿಗುವುದು ಪ್ರಾಮಾಣಿಕವಾದ ನೆಮ್ಮದಿಯ ಆನಂದವಲ್ಲ, ಸ್ವಾರ್ಥಸಾಧನೆಯ ವಿಕೃತ ಸಂತಸ. ಒಬ್ಬರ ಬಗೆಗಿನ ಕೀಳು ಪದ ಪ್ರಯೋಗದಿಂದ ಕಡಿಮೆಯಾಗುವುದು ಅವುಗಳನ್ನು ಬಳಸಿದವರ ಯೋಗ್ಯತೆಯೇ ವಿನಃ ಉದ್ದೇಶಿಸಲ್ಪಟ್ಟವರದಲ್ಲ . ಜನರ ಕಿವಿಯಲ್ಲಿ ಸದಾ ಲಾಲ್ ಬಾಗ್ ಇರಿಸುವ ನಾನಾ ತರಹದ ಷೋ ಆಫ಼್ ಆಟಗಳ ಕ್ರಿಯಾತ್ಮಕತೆಯಲ್ಲಿ ಅಥವಾ ಸುಳ್ಳುಗಳ ಸೃಷ್ಟಿಯ ಆಧಾರದಲ್ಲಿ ಸಾಧಿಸಿದ ಗೆಲುವಿಗೆ ಆಯಸ್ಸು ಅಲ್ಪ.! ನೀವು ಒಬ್ಬರನ್ನು ತೆಗಳುತ್ತಲೇ, ಹಿಯ್ಯಾಳಿಸುತ್ತಲೇ ಹೋದಷ್ಟೂ ಆ ವ್ಯಕ್ತಿ ಅಪಮಾನಕ್ಕೊಳಗಾಗಿ ಕುಗ್ಗಿ ಹೋಗಲಾರ, ಬದಲಿಗೆ ಜನರ ದೃಷ್ಟಿಯಿಂದ ತಮಗರಿವಿಲ್ಲದಂತೆಯೇ ಮತ್ತಷ್ಟು ಬಲಶಾಲಿಯಾಗಿ ಪ್ರಬುದ್ಧನಾಗಿ ಹೋಗುತ್ತಾನೆ.

ಇದು ಸಿದ್ಧಾಂತವೂ ಅಲ್ಲ, ವೇದಾಂತವೂ ಅಲ್ಲ. ಜಸ್ಟ್…ಸಾಮಾನ್ಯ ವ್ಯಕ್ತಿಯೊಬ್ಬನ‌ ಮನದಿಂಗಿತ‌!!

** ಮರೆಯುವ ಮುನ್ನ**

ಇತಿಹಾಸ ನಮಗೆ ಅನೇಕ ಪಾಠಗಳನ್ನು‌ ಕಲಿಸಿದೆ, ಕಲಿಸುತ್ತಲೇ ಇದೆ. ಆದರೆ ಕೆಲವರು ಅದನ್ನು ಪ್ರಜ್ಞಾಪೂರ್ವಕವಾಗಿ, ತಮ್ಮ ತಮ್ಮ‌ ಅನುಕೂಲಕ್ಕಾಗಿ ಸೈಡ್ ಲೈನ್ ಮಾಡುತ್ತಲೇ ಎಲ್ಲಿಯವರೆಗೆ ತಲುಪಿರುತ್ತಾರೆಂದರೆ ಕೊನೆಗೆ ಅವರೂ , ಅವರ ಮನೋವಿಕೃತಿಯ ಕೃತ್ಯಗಳೂ ಇತಿಹಾಸದ ಪುಟಗಳಲ್ಲಿ ಪಾಠಗಳಾಗಿ ದಾಖಲಾಗುವ ತನಕ !

ಒಬ್ಬರನ್ನು ಅನಾವಶ್ಯಕವಾಗಿ ಡೀ ಫ಼ೇಮ್ ಮಾಡುವ ದಟ್ಟ ಮಾನಸಿಕ ದಾರಿದ್ರ್ಯಕ್ಕೆ ವ್ಯಕ್ತಿಯೊಬ್ಬ ಒಮ್ಮೆ ಬಲಿಯಾದನೆಂದರೆ, ಮುಂದೊಂದು ದಿನ ಅದು ತಮಗೇ ತಿರುಗುಬಾಣವಾದೀತೆಂಬ ಕಿಂಚಿತ್ ಕಲ್ಪನೆಯೂ ಅಥವಾ ಯಃಕಿಂಚಿತ್‌ ವಿವೇಕವೂ ಅವನಲ್ಲಿ‌ ಮೂಡುವುದಕ್ಕೆ ಆ ಸಮಯದಲ್ಲಿ ಆಸ್ಪದ ಕೊಡದಂತೆ ಅಟ್ಟಹಾಸ ಮೆರೆಯುತ್ತಿರುತ್ತಾನೆ. ಬಹುಶಃ ‌ಈ ವರ್ತನೆಗೆ ಹಣ, ಅಂತಸ್ತು, ಅಧಿಕಾರ, ಪ್ರತಿಷ್ಠೆ, ಶ್ರೇಷ್ಠತೆಯ ಅಮಲು ಹಾಗೂ‌ ಬದುಕಲ್ಲಿ ತಾನು ಬೆಳೆದು ಬಂದ ದಾರಿಯ ಮರೆವು….ಹೀಗೆ ಎಲ್ಲವೂ ಮಾದಕ ಅಮಲಿನಂತೆ ಅವನಲ್ಲಿ ಇಂಜೆಕ್ಟ್ ಮಾಡಿರುತ್ತವೆ.

ಒಬ್ಬರನ್ನು ತುಳಿದೇ ಬದುಕುವ, ಅಸೂಯೆಯಿಂದ ತೇಜೋವಧೆ ಮಾಡಿಯೇ ತಾವು ಚಾಲ್ತಿಯಲ್ಲಿರಬೇಕೆನ್ನುವ ವಿಕೃತ ಮನೋಭಾವ ಒಂಥರಾ ಗಾಯದ ಹುಣ್ಣನ್ನು ಕೆರೆದುಕೊಂಡಂತೆ. ಹಾಗೆ ಕೆರೆದುಕೊಳ್ಳುವವನಿಗೆ ಕೆರೆದುಕೊಳ್ಳುವಾಗ ಕೆಟ್ಟ ಸಂತೋಷದ ಅಮಲು ಸಿಗಬಹುದು. ಆದರೆ ಅದರ ಭಯಂಕರ ದುಷ್ಪರಿಣಾಮ ಆಗೋದು ಕೆರೆದುಕೊಳ್ಳುವವರಿಗೆ ಮಾತ್ರ . ಸಾಧನೆ ಮಾತನಾಡಬೇಕೇ ಹೊರತು ಮಾತನಾಡುವುದೇ ಅಥವಾ ಒಬ್ಬರನ್ನು ಹಿಯ್ಯಾಳಿಸುವುದೇ ಸಾಧನೆಯಾಗಬಾರದು.

ನೆನಪಿರಲಿ, ಜೀವನದಲ್ಲಿ ತನ್ನ ಸಾಧನೆಯಿಂದಲೇ ಔನ್ನತ್ಯಕ್ಕೇರುವುದು ಸಂಸ್ಕಾರ. ಆದರೆ ಮತ್ತೊಬ್ಬರ ತೇಜೋವಧೆ, ಅಪಮಾನ ಮಾಡುವುದರಿಂದಲೇ ಮೇಲಕ್ಕೇರಬೇಕೆನ್ನುವುದು‌ ವಿಕಾರ .

ಪ್ರೀತಿಯಿಂದ….

ಹಿರಿಯೂರು ಪ್ರಕಾಶ್.