ಜೀವನ ನಮ್ಮದೇ ಪ್ರತಿಬಿಂಬ : ಜಯಶ್ರೀ ಅಬ್ಬಿಗೇರಿ
ವಿಜಯ ದರ್ಪಣ ನ್ಯೂಸ್….
🌻ದಿನಕ್ಕೊಂದು ಕಥೆ🌻
ಜೀವನ ನಮ್ಮದೇ ಪ್ರತಿಬಿಂಬ..
ಅಣ್ಣ-ತಂಗಿ ನಡುವಿನ ಜಗಳ ತಾರಕಕ್ಕೇರಿ, ತಂಗಿಯ ಗೊಂಬೆಯನ್ನು ಅಣ್ಣ ಒಡೆದುಹಾಕಿದ. ಅದಕ್ಕೆ ತಾಯಿ ಗದರಿದಳು. ತಂಗಿಯೆದುರು ಅವಮಾನವಾಯಿತೆಂದು ಭಾವಿಸಿದ ಮಗ ತಾಯಿಗೇ ಎದುರುತ್ತರ ನೀಡಿದ, ಬಿರುನುಡಿಗಳನ್ನಾಡಿದ. ಆವೇಶದಲ್ಲಿ ಮನೆಬಿಟ್ಟು ಊರಾಚೆಯ ಬೆಟ್ಟದ ಬಳಿ ಬಂದ. ಅಮ್ಮನ ಗದರಿಕೆಯನ್ನು ಮನದಲ್ಲಿಟ್ಟುಕೊಂಡು ‘ನಾನು ನಿನ್ನನ್ನು ದ್ವೇಷಿಸುತ್ತೇನೆ’ ಎಂದು ಜೋರಾಗಿ ಕಿರುಚಿದ. ಕ್ಷಣಾರ್ಧದಲ್ಲೇ ‘ನಾನು ನಿನ್ನನ್ನು ದ್ವೇಷಿಸುತ್ತೇನೆ’ ಎಂಬ ಮಾರ್ನಡಿ ಅವನ ಕಿವಿಗಪ್ಪಳಿಸಿತು. ಬಾಲಕನಿಗೆ ಭಯವಾಗಿ ಮನೆಗೆ ಓಡಿಬಂದು ಅಮ್ಮನ ಮಡಿಲಗೂಡಲ್ಲಿ ಗುಬ್ಬಚ್ಚಿಯಾದ, ಬಿಕ್ಕಳಿಸಿ ಅಳಲು ಪ್ರಾರಂಭಿಸಿದ. ಅಮ್ಮ ಮಗನ ತಲೆ ನೇವರಿಸುತ್ತ ಕಾರಣ ಕೇಳಲಾಗಿ, ‘ಬೆಟ್ಟದ ಬಳಿ ಯಾರೋ ಕೆಟ್ಟ ಬಾಲಕ ನನ್ನನ್ನು ದ್ವೇಷಿಸುವುದಾಗಿ ಗರ್ಜಿಸಿದ’ ಎಂದು ಹೇಳಿದ. ಅನುಭವಿ ಅಮ್ಮನಿಗೆ ಎಲ್ಲ ಅರ್ಥವಾಗಿ, ‘ಮಗೂ, ಬೆಟ್ಟದ ಬಳಿ ಇನ್ನೊಮ್ಮೆ ಹೋಗಿ ‘ನಾನು ನಿನ್ನನ್ನು ಪ್ರೀತಿಸುವೆ’ ಎಂದು ಜೋರಾಗಿ ಕೂಗು’ ಎಂದು ಸಮಾಧಾನ ಮಾಡಿ ಕಳಿಸಿದಳು. ಬಾಲಕ ಹಾಗೇ ಮಾಡಿದಾಗ, ‘ನಾನು ನಿನ್ನನ್ನು ಪ್ರೀತಿಸುವೆ’ ಎಂಬ ದನಿ ಬೆಟ್ಟದ ಸುತ್ತಲೆಲ್ಲ ಮಾರ್ದನಿಸಿತು. ಅತೀವ ಸಂತೋಷಗೊಂಡ ಬಾಲಕ ಮನೆಗೆ ಮರಳಿ ‘ಹೀಗೇಕೆ?’ ಎಂದು ಕೇಳಿದಾಗ, ‘ಮಗೂ, ಜೀವನ ಎಂಬುದು ಒಂದು ಪ್ರತಿಫಲಕವಿದ್ದಂತೆ; ನಾವು ಸುತ್ತಲಿನವರಿಗೆ ಏನನ್ನು ನೀಡುತ್ತೇವೋ ಮರಳಿ ಅದನ್ನೇ ಪಡೆಯುತ್ತೇವೆ. ಆದ್ದರಿಂದ ಸಮಾಜಕ್ಕೆ ಸಾಧ್ಯವಾದಷ್ಟೂ ಒಳ್ಳೆಯದನ್ನೇ ಕೊಡುಗೆಯಾಗಿ ನೀಡಲು ಯತ್ನಿಸಬೇಕು’ ಎಂದು ಅಮ್ಮ ತಿಳಿಹೇಳಿದಳು. ಸಂತಸಗೊಂಡ ಮಗನ ಕಣ್ಣುಗಳಲ್ಲಿ ಅರಿವಿನ ದೀಪ ಬೆಳಗಿತು.
ಜೀವನವೆಂಬುದು ಕನ್ನಡಿಯಲ್ಲಿ ಕಾಣುವ ನಮ್ಮದೇ ಪ್ರತಿಬಿಂಬವಿದ್ದಂತೆ. ನಮ್ಮ ಆಲೋಚನಾ ವಿಧಾನ ಮತ್ತು ನಡವಳಿಕೆಗಳ ಕುರಿತಾಗಿ ನಾವು ಸದಾ ಜಾಗೃತರಾಗಿರಬೇಕು. ಬದುಕಲ್ಲಿ ನಮಗೆ ದಕ್ಕುವ ಜಯ, ವೈಫಲ್ಯ ಎಲ್ಲವೂ ನಮ್ಮ ಚಟುವಟಿಕೆಗಳ ಪ್ರತಿಫಲಗಳೇ. ಬೇವಿನ ಸಸಿ ನೆಟ್ಟು ಮಾವಿನ ಹಣ್ಣನ್ನು ಪಡೆಯಲಾದೀತೇ? ಕೊಳೆತ ಮನಸ್ಸು ಬದುಕನ್ನು ಕೆಡಿಸುತ್ತದೆ, ಪ್ರಬುದ್ಧ ಮನಸ್ಸು ಬಾಳನ್ನು ಬೆಳಗುತ್ತದೆ. ನಡತೆ ಎಂಬುದು ತಳಪಾಯದ ಕಲ್ಲಿದ್ದಂತೆ. ಅದರ ಮೇಲೆ ಜೀವನ ಸಾರ್ಥಕತೆಯ ಕಟ್ಟಡ ಕಟ್ಟಬೇಕು, ತನ್ಮೂಲಕ ಬದುಕನ್ನು ಸುಂದರವಾಗಿಸಿಕೊಳ್ಳಬೇಕು.
— ಜಯಶ್ರೀ ಅಬ್ಬಿಗೇರಿ.