ಸಂಗೀತ ಲೋಕ ಜೀವನದ ಎಲ್ಲ ಏರಿಳಿತಗಳನ್ನೂ ತಹಬಂದಿಗೆ ತರಬಲ್ಲ ಸಂಜೀವಿನಿ: ಡಾ.ಎಂ ಬೈರೇಗೌಡ

ವಿಜಯ ದರ್ಪಣ ನ್ಯೂಸ್..
ಸಂಗೀತಲೋಕ ಮನುಷ್ಯನ ಆಧ್ಯಾತ್ಮಿಕ ಉನ್ನತಿಗೆ ಸೋಪಾನ. ಜೀವನದ ಎಲ್ಲ ಏರಿಳಿತಗಳನ್ನೂ ತಹಬಂದಿಗೆ ತರಬಲ್ಲ ಸಂಜೀವಿನಿ. ಅದರ ಚುಂಬಕ ಶಕ್ತಿಯ ವಿರಾಟ್ ದರ್ಶನ ಆಗಬೇಕೆಂದರೆ ಸಂಪೂರ್ಣ ತಲ್ಲೀನತೆಯಿಂದ ಆಲಿಸುವ ಗುಣ ಬೆಳೆಸಿಕೊಳ್ಳಬೇಕೆಂದು ಜಾನಪದ ವಿದ್ವಾಂಸ ಡಾ. ಎಂ. ಬೈರೇಗೌಡ ನುಡಿದರು.
ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಮತ್ತು ಸಾರ್ವಜನಿಕ ಗ್ರಂಥಾಲಯ ಇಲಾಖೆ ಸಹಯೋಗದಲ್ಲಿ, ಬೆಂಗಳೂರಿನ ಹಂಪಿನಗರ ಬಡಾವಣೆಯ ಗ್ರಂಥಾಲಯ ಸಭಾಂಗಣದಲ್ಲಿ  ಕಳೆದ ಇಪ್ಪತ್ತು ವರ್ಷಗಳಿಂದಲೂ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಓದಿನರಮನೆಯಲ್ಲಿ ತಿಂಗಳ ಒನಪು ಕಾರ್ಯಕ್ರಮ ಸರಣಿಯ 188ನೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಗೀತದ ಮಾಧುರ್ಯಕ್ಕೆ ಮನಸೋಲದವರೇ ಇಲ್ಲ, ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುವ ಶಕ್ತಿ ಸಂಗೀತಕ್ಕಿದೆ. ಅದು ಜಾನಪದವಾಗಿರಲಿ, ಭಾವಗೀತೆಯಾಗಿರಲಿ, ಭಕ್ತಿರಸಪ್ರಧಾನ ಗೀತೆಗಳಾಗಿರಲಿ ಎಲ್ಲವೂ ಮನುಷ್ಯನ ಮನಸ್ಸಿನ ಗಾಯಗಳಿಗೆ ಅಪರೂಪದ ಔಷಧಿಯಾಗಿ ಕಾರ್ಯನಿರ್ವಹಿಸಬಲ್ಲದು ಎಂದರು.
ಹಳ್ಳಿ ಜಾನಪದ ಕಲಾತಂಡದ ನಾಯಕ ಕಲಾವಿದ ಹೊಸಳ್ಳಿ ವಾಸುದೇವ್ ಮಾತನಾಡಿ, ಯಾವುದೇ ಆಧುನಿಕ ವಾದ್ಯಗಳನ್ನು ಬಳಸದೆ, ನಮ್ಮ ಕಂಠದ ಮೇಲೆ ನಂಬಿಕೆಯಿಟ್ಟು ಸಾಂಕೇತಿಕವಾದ ಪಾರಂಪರಿಕ ವಾದ್ಯ ಪರಿಕರಗಳ ಜೊತೆಯಲ್ಲಿ ಗಾಯನ ಪ್ರಸ್ತುತ ಪಡಿಸಬೇಕೆಂಬುದು ನಮ್ಮ ಬಯಕೆಯಾಗಿದೆ. ನಾಡಿನಾದ್ಯಂತ ಪ್ರಚುರ ಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸುತ್ತಿರುವುದಾಗಿ ಅವರು ತಿಳಿಸಿದರು.
ಬೆಂಗಳರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕು, ದೊಡ್ಡ ಹೊಸಹಳ್ಳಿಯ ಹಳ್ಳಿ ಜನಪದ ಕಲಾತಂಡ, ಕಂಟನಕುಂಟೆ ಅಶ್ವತ್ಥನಾರಾಯಣ, ಗಂಗಾಧರ್, ಮಲ್ಲೇಶಪ್ರಭು, ನಾಗರಾಜು ತಮ್ಮ ಸುಮಧುರ ಕಂಠದಿಂದ ಸಂಗೀತ ಸಂಭ್ರಮ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.