ನಮ್ಮ ಕುಟುಂಬದ ಹೆಣ್ಣು ಮಕ್ಕಳಿಗೂ ಹೀಗೆ ಆಗುವ ಮುನ್ನ ಎಚ್ಚರಗೊಳ್ಳಿ……
ವಿಜಯ ದರ್ಪಣ ನ್ಯೂಸ್
ನಮ್ಮ ಕುಟುಂಬದ ಹೆಣ್ಣು ಮಕ್ಕಳಿಗೂ ಹೀಗೆ ಆಗುವ ಮುನ್ನ ಎಚ್ಚರಗೊಳ್ಳಿ……
ಮಹಿಳೆಯರ ಘನತೆ, ಸ್ವಾತಂತ್ರ್ಯ, ಸಮಾನತೆ, ಪುರುಷರು ಕೊಡುವ ಸಹಾನುಭೂತಿ, ಭಿಕ್ಷೆ, ಸಹಾಯ ಸೇವೆ, ಗೌರವವಲ್ಲ. ಅದು ಅವರ ಹಕ್ಕು ನೆನಪಿರಲಿ……
ಒಂದು ಕುತೂಹಲಕಾರಿ, ಆಶ್ಚರ್ಯಕಾರಿ, ಆಘಾತಕಾರಿ ಬೆಳವಣಿಗೆ ಕರ್ನಾಟಕದ ರಾಜಕೀಯ ಮತ್ತು ಮಾಧ್ಯಮ ಲೋಕದಲ್ಲಿ ನಡೆಯುತ್ತಿದೆ. ಸೀಡಿ ಅಥವಾ ಪೆನ್ ಡ್ರೈ ವ್ ಅಥವಾ ಮೊಬೈಲ್ ಅಥವಾ ಹಿಡನ್ ಕ್ಯಾಮೆರಾ ಅಥವಾ ಆ ರೀತಿಯ ಗ್ಯಾಜೆಟ್ಗಳಲ್ಲಿ ಚಿತ್ರೀಕರಣಗೊಂಡ, ಅನೇಕರ ಅನೈತಿಕ ಲೈಂಗಿಕ ಚಟುವಟಿಕೆಗಳ ದೃಶ್ಯಗಳು ಈಗಾಗಲೇ ಗುಪ್ತವಾಗಿ ಸಂಗ್ರಹವಾಗಿದೆ…….
ಅದನ್ನು ಬಳಸಿಕೊಂಡು ಕೆಲವರು ಬ್ಲಾಕ್ ಮೇಲ್ ಮಾಡಿ ಹಣ ಮಾಡುತ್ತಿದ್ದಾರೆ, ಹನಿಟ್ರ್ಯಾಪ್ ಗಿಂತ ಹೆಚ್ಚಾಗಿ ಇದನ್ನು ನಿರ್ಧಿಷ್ಟವಾಗಿ ಕೆಲವು ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿ, ರಾಜಕೀಯವಾಗಿ ಮುಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಎಲ್ಲ ಕಡೆ ಮಾತುಕತೆಗಳು ನಡೆಯುತ್ತಿದೆ……
ಅದರಲ್ಲೂ ಮುಖ್ಯವಾಗಿ ಕರ್ನಾಟಕದ ಉಪಮುಖ್ಯಮಂತ್ರಿ ಶ್ರೀ ಡಿ ಕೆ ಶಿವಕುಮಾರ್ ಅವರ ಬಳಿ ನೂರಾರು ಸೀಡಿಗಳಿದ್ದು ಅದರಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ದೊಡ್ಡ ಹುದ್ದೆಯ ಸರ್ಕಾರಿ ಅಧಿಕಾರಿಗಳು, ವಿರೋಧ ಪಕ್ಷದ ನಾಯಕರು ಮುಂತಾದ ಎಲ್ಲರ ಲೈಂಗಿಕ ಕ್ರಿಯೆಯ ಸೀಡಿಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ ಎಂದು ಮಾಜಿ ಮಂತ್ರಿ ರಮೇಶ್ ಜಾರಕಿಹೊಳಿ ಅವರು ನೇರವಾಗಿ ಮಾಧ್ಯಮಗಳ ಮುಂದೆ ಆರೋಪ ಮಾಡುತ್ತಾರೆ…..
ಹಾಗೆಯೇ ಇದೇ ರಮೇಶ್ ಜಾರಕಿಹೊಳಿಯವರ ಸೀಡಿಗಳು ಸಹ ಮಾಧ್ಯಮದಲ್ಲಿ ಪ್ರಸಾರವಾಯಿತು ಮತ್ತು ಅದನ್ನು ಅವರು ಒಪ್ಪಿಕೊಂಡರು ಸಹ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಹ ನನ್ನ ಬಳಿ ಸಾಕಷ್ಟು ಸೀಡಿಗಳಿದ್ದು ಸಮಯ ಬಂದಾಗ ಬಿಡುಗಡೆ ಮಾಡುವುದಾಗಿ ತಮ್ಮ ಪಾಕೆಟ್ ನಲ್ಲಿ ಪೆನ್ ಡ್ರೈವ್ ಇಟ್ಟುಕೊಂಡು ಓಡಾಡುತ್ತಿದ್ದಾರೆ ಮತ್ತು ಮಾಧ್ಯಮ ಪತ್ರಿಕಾಗೋಷ್ಠಿಗಳಲ್ಲಿ ಹೇಳುತ್ತಿರುತ್ತಾರೆ…
ಈ ರಾಜ್ಯದ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರು ಸೇರಿ ಅನೇಕ ಬಾಂಬೆ ಬಾಯ್ಸ್ ಎಂದು ಕರೆಯಲ್ಪಡುವ ಮಾಜಿ ಮಂತ್ರಿಗಳು, ಶಾಸಕರು, ಉದ್ಯಮಿಗಳು, ಚಲನಚಿತ್ರ ನಟರು, ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪನವರ ಪುತ್ರ ಕಾಂತೇಶ್ ಹೀಗೆ ಇನ್ನೂ ಹಲವಾರು ಜನ ಸೀಡಿ ಪ್ರಸಾರವಾಗದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ….
ಇನ್ನೊಂದಷ್ಟು ಜನ ಬಹಿರಂಗವಾಗಿ ಅದನ್ನು ಹೇಳಿಕೊಳ್ಳಲಾಗದೇ ಒಳಗೊಳಗೆ ಎಷ್ಟು ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೋ ಗೊತ್ತಿಲ್ಲ. ಬಹಿರಂಗವಾಗದ ಎಷ್ಟೋ ಸೀಡಿಗಳು ಇನ್ನು ಹಾಗೇ ಇರಬಹುದು. ಒಟ್ಟಿನಲ್ಲಿ ಕರ್ನಾಟಕದಲ್ಲಿ ಸೀಡಿ, ಪೆನ್ ಡ್ರೈವ್ ಗಳ ಪ್ರಹಸನ ಜೋರಾಗಿ ನಡೆಯುತ್ತಿದೆ. ಕಾಲಕ್ಕೆ, ಸಮಯಕ್ಕೆ, ಸಂದರ್ಭಕ್ಕೆ ತಕ್ಕಂತೆ ಅವುಗಳು ಬಿಡುಗಡೆಯಾಗುತ್ತಿವೆ…….
ವಿಶೇಷವೆಂದರೆ, ಇದರಲ್ಲಿ ಬಹುತೇಕ ಸಮಾಜದ ಮುಖ್ಯ ವಾಹಿನಿಯ ಜನರೇ ಭಾಗಿಗಳಾಗಿದ್ದಾರೆ ಅಥವಾ ಪಾತ್ರಧಾರಿಗಳಾಗಿದ್ದಾರೆ. ಸಾಮಾನ್ಯ ಜನರ ಯಾವ ಸೀಡಿಗಳು ಇಲ್ಲಿಯವರೆಗೂ ಹೊರಬಂದಿಲ್ಲ, ಬಂದರೂ ಅದಕ್ಕೆ ಹೆಚ್ಚಿನ ಮಹತ್ವವಿರುವುದಿಲ್ಲ…….
ಇಲ್ಲಿ ನಾವು ಮುಖ್ಯವಾಗಿ ಯೋಚಿಸಬೇಕಿರುವುದು ಸೀಡಿ ಮಾಡುವವರನ್ನೋ, ಸೀಡಿಯಲ್ಲಿ ಪಾತ್ರವಹಿಸುವವರನ್ನೋ ಅಥವಾ ಸೀಡಿಗಳನ್ನು ಹಂಚುವವರನ್ನೋ, ಇವರಲ್ಲಿ ಯಾರನ್ನು ಮುಖ್ಯ ತಪ್ಪಿತಸ್ಥರೆಂದು ಪರಿಗಣಿಸಬೇಕು ಎಂಬುದು ಬಹಳ ಮುಖ್ಯವಾದ ವಿಷಯವಾಗುತ್ತದೆ……
ಒಂದು ವೇಳೆ ಡಿಕೆ ಶಿವಕುಮಾರ್ ಅವರು ನೂರಾರು ಸೀಡಿಗಳನ್ನು ಮಾಡಿಕೊಂಡಿದ್ದು ಅದನ್ನು ಸಮಯ ಸಂದರ್ಭಕ್ಕೆ ತಕ್ಕಂತೆ ಬಹಿರಂಗಪಡಿಸುತ್ತಿದ್ದರೆ ನೈತಿಕವಾಗಿ ಅವರನ್ನು ಮೆಚ್ಚಿ ಅಭಿನಂದಿಸಬೇಕಾಗುತ್ತದೆ. ಕಾನೂನಾತ್ಮಕವಾಗಿ ಅದು ತಪ್ಪು ಅಥವಾ ಅಪರಾಧವಾಗಿದ್ದರು ಸಹ ಇಂತಹ ನೀಚ, ಹೆಣ್ಣಿನ ಶೋಷಣೆಯ, ದೌರ್ಜನ್ಯದ ಸೀಡಿಗಳನ್ನು ಗುಪ್ತ ಕಾರ್ಯಾಚರಣೆಯ ಮೂಲಕ ಮಾಡಿಕೊಳ್ಳುವ ಧೈರ್ಯ, ಚಾಕಚಕ್ಯತೆ, ತಂತ್ರಗಾರಿಕೆಯನ್ನು ಶ್ರೀ ಶಿವಕುಮಾರ್ ಅವರು ತೋರಿಸಿರುವುದನ್ನು ಈ ವಿಷಯದಲ್ಲಿ ಖಂಡಿತವಾಗಿ ಒಬ್ಬ ಸಭ್ಯ ನಾಗರೀಕರಾಗಿ ಮೆಚ್ಚಲೇಬೇಕಾಗುತ್ತದೆ……
ಯಾವ ಪೊಲೀಸ್, ಯಾವ ಸಮಾಜ ಸೇವಕರು, ಯಾವ ನ್ಯಾಯಾಲಯ, ಯಾವ ಬೇಹುಗಾರಿಕೆ ಸಂಸ್ಥೆಗಳು, ಯಾವ ಪತ್ರಕರ್ತರು ಈ ರೀತಿಯ ಘಟನೆಗಳನ್ನು ಗುರುತಿಸಿ ಬಹಿರಂಗಪಡಿಸಬೇಕಾಗಿತ್ತೋ ಅದನ್ನು ಶಿವಕುಮಾರ್ ಅವರು ಮಾಡುತ್ತಿದ್ದರೆ ಅವರು ಅಭಿನಂದನೆಗೆ ಅರ್ಹರು…..
ಈ ಎಲ್ಲ ಸೀಡಿಗಳು ಅಧಿಕಾರ ದುರುಪಯೋಗದ, ಲೈಂಗಿಕ ಶೋಷಣೆಯ, ದೌರ್ಜನ್ಯದ, ಅಮಾನವೀಯ ನಡವಳಿಕೆಯ ಸಾಕ್ಷಿಗಳಂತಿವೆ. ಒಂದು ವೇಳೆ ಶಿವಕುಮಾರ್ ಅವರ ಸೀಡಿಗಳಿದ್ದರೂ ಸಹ ಅವರ ವಿರೋಧಿಗಳು ಅದನ್ನು ಬಹಿರಂಗಗೊಳಿಸಲಿ. ಈ ಸಮಾಜದ ಕಾಮುಕರ ಮುಖವಾಡ ಹೊರಗೆ ಬೀಳಲಿ…..
ಹಾಗೆಯೇ ಸರ್ಕಾರ ಮತ್ತು ಆಡಳಿತ ನಡೆಸುತ್ತಿರುವವರ ಅಧಿಕಾರ ದುರುಪಯೋಗದ ಮತ್ತು ಅತ್ಯಂತ ಹೀನ ಕೃತ್ಯಗಳು ಬಯಲಾಗಲಿ. ನ್ಯಾಯಾಲಯ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಸಂಪೂರ್ಣವಾಗಿ ಇದನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಸ್ವತಃ ಒಂದು ಸುಮೋಟೊ ಕೇಸ್ ದಾಖಲಿಸಿ ತಡೆಯಾಜ್ಞೆ ತಂದ ಎಲ್ಲರ ಸೀಡಿಗಳನ್ನು ಸಂಗ್ರಹಿಸಿ, ರಾಜ್ಯದ ಪೊಲೀಸ್ ಮುಖ್ಯಸ್ಥರಿಗೆ ನೀಡಿ ತನ್ನ ಸುಪರ್ದಿಯಲ್ಲಿಯೇ ತನಿಖೆಗೆ ಒಳಪಡಿಸಿದರೆ ಖಂಡಿತವಾಗಲೂ ಈ ರಾಜ್ಯ ಈ ವಿಷಯದಲ್ಲಿ ಸ್ವಲ್ಪವಾದರೂ ಶುದ್ಧೀಕರಣವಾಗುತ್ತದೆ, ಜೊತೆಗೆ ನಿಜವಾಗಲೂ ಆ ಸೀಡಿಗಳಲ್ಲಿ ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಯರು, ಸಂತ್ರಸ್ತೆಯರು ನಿಟ್ಟುಸಿರಿ ಬಿಡುತ್ತಾರೆ…..
ಜೊತೆಗೆ ತಪ್ಪಿತಸ್ಥರೆಂದು ಕಂಡುಬಂದರೆ ಅವರಿಗೆ ಈ ಪಾತ್ರಧಾರಿಗಳಿಂದಲೇ ಅವರ ಆಸ್ತಿಯಲ್ಲಿ ದೊಡ್ಡಮಟ್ಟದ ಪರಿಹಾರ ನೀಡಿ ಪರೋಕ್ಷವಾಗಿ ಪುನರ್ವಸತಿ ಕಲ್ಪಿಸಿದಂತಾಗುತ್ತದೆ. ಮಾಜಿ ಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರು, ಹಿರಿಯ ಅಧಿಕಾರಿಗಳು, ಅವರ ಪುತ್ರರು ಇಡೀ ವ್ಯವಸ್ಥೆಯನ್ನು, ಅದರಲ್ಲೂ ಮಹಿಳೆಯರನ್ನು ಈ ರೀತಿ ಶೋಷಿಸುತ್ತಿರುವ ಸಮಾಜದಲ್ಲಿ ನಾವು ಬದುಕುತ್ತಿರುವುದು ಕೂಡ ಅತ್ಯಂತ ಅಸಹ್ಯ ಮತ್ತು ಅಸಹನೀಯ ಪರಿಸ್ಥಿತಿ ಸೃಷ್ಟಿಸಿದೆ…..
ಇಷ್ಟೆಲ್ಲಾ ದೊಡ್ಡ ದೊಡ್ಡ ಪ್ರಶಸ್ತಿಗಳು, ಸಾಧನೆಗಳು, ಸನ್ಮಾನಗಳು, ಅಧಿಕಾರಿಗಳು, ಹೋರಾಟಗಾರರು, ದಾರ್ಶನಿಕರು, ಪ್ರವಚನಕಾರರು, ಸ್ವಾಮೀಜಿಗಳು, ಪತ್ರಕರ್ತರು ಎಲ್ಲರ ಅರಿವಿನ, ಕಣ್ಣಂಚಿನ ತುದಿಯಲ್ಲಿ ಇಂತಹ ಹೇಸಿಗೆ ಕೃತ್ಯಗಳು ನಡೆಯುವಾಗ ನಮ್ಮನ್ನು ನಾವು ಯಾವ ಸ್ಥಾನದಲ್ಲಿ ನಿಲ್ಲಿಸಿಕೊಳ್ಳಬೇಕು, ನಾವು ಯಾವ ಮೌಲ್ಯವನ್ನು ಹೊಂದಿದ್ದೇವೆ, ನಮ್ಮ ಧೈರ್ಯ, ಶಕ್ತಿ ಸಾಮರ್ಥ್ಯ, ಸೇವೆಗಳಿಗೆ ಯಾವ ಅರ್ಥವಿದೆ ಎಂದು ನನ್ನನ್ನು ಕಾಡುತ್ತಿದೆ…..
ಸಾಮಾನ್ಯ ಜನ ಸಹ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ನಮಗೆ ಅರಿವಿಲ್ಲದೆ ನಮ್ಮ ಮನೆಯ ಹೆಣ್ಣು ಮಕ್ಕಳೇ ಈ ಜಾಲದಲ್ಲಿ ಸಿಲುಕಿರಬೇಕು ಅಥವಾ ಸಿಲುಕಬಹುದು ಎಂಬ ಮನಸ್ಥಿತಿಯಲ್ಲಿ ಜಾಗೃತವಾಗಿ ಕ್ರಿಮಿನಲ್ ರಾಜಕಾರಣಿಗಳ ಬಣ್ಣ ಬಯಲು ಮಾಡಿ ಅವರನ್ನು ನಿಯಂತ್ರಿಸದಿದ್ದರೆ ಇದೊಂದು ಅತ್ಯಂತ ಅನಾಗರಿಕ, ಅಮಾನವೀಯ ಸಮಾಜವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ…..
ರಾಜಕೀಯದಲ್ಲಿ ಮಹಿಳೆಯರಿಗೆ ಶೇಕಡ 33% ರಷ್ಟು ಮೀಸಲಾತಿ ನೀಡಿ ಪಕ್ಷದ ಕಾರ್ಯಕರ್ತರನ್ನೇ ಲೈಂಗಿಕವಾಗಿ ಶೋಷಿಸಿದರೆ ಅವರು ರಾಜಕೀಯಕ್ಕೆ ಬರುವುದಾದರೂ ಹೇಗೆ. ಈ ಸೀಡಿ ವ್ಯವಹಾರಗಳ ಬಗ್ಗೆ ಮಾತನಾಡುತ್ತಿರುವವರು ಮತ್ತು ಅದರಲ್ಲಿ ತೊಡಗಿಸಿಕೊಂಡಿರುವವರು ಸಾಮಾನ್ಯರಲ್ಲ. ಈ ರಾಜ್ಯದ ಬಹುತೇಕ ಸಂಪನ್ಮೂಲಗಳನ್ನು ಮತ್ತು ನಮ್ಮನ್ನು ನಿಯಂತ್ರಿಸುತ್ತಿರುವ ಮಂತ್ರಿ ಮಹೋದಯರು, ಸ್ವಾಮಿಗಳು, ಉದ್ಯಮಿಗಳು ಮತ್ತು ಅಧಿಕಾರಿ ವರ್ಗದವರು. ಇವರೇ ಸರಿ ಇಲ್ಲ ಎಂದ ಮೇಲೆ ಮತ್ತೆ ಸಮಾಜವನ್ನು ತಿದ್ದುವುದಾದರೂ ಹೇಗೆ. ಒಂದು ಆಡಳಿತ ವ್ಯವಸ್ಥೆ ಸಮಾಜವನ್ನು ಸುಸ್ಥಿತಿಯಲ್ಲಿರಿಸಲು ಸಮಾಜದ ಆದಾಯದ ಶೇಕಡ 50ಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡುತ್ತಿರುವುದಾದರೂ ಏಕೆ…
ಒಬ್ಬ ಸಂಸದನ ಐದು ವರ್ಷಗಳ ನಿರಂತರ ಲೈಂಗಿಕ ಶೋಷಣೆಯನ್ನು ಒಬ್ಬ ಮಹಿಳೆಯೂ ಪ್ರತಿಭಟಿಸದೆ, ಪೊಲೀಸ್ ಕಂಪ್ಲೇಂಟ್ ನೀಡದೆ, ನ್ಯಾಯಾಲಯಕ್ಕೆ ಅರ್ಜಿ ಹಾಕದೆ ಭಯಪಟ್ಟು ಸಹಿಸಿಕೊಂಡಿದ್ದಾರೆಂದರೆ ಅದಕ್ಕಿಂತ ನಾಚಿಕೆಗೇಡಿನ ವ್ಯವಸ್ಥೆ ಯಾವುದಿದೆ. ಮಂತ್ರಿ, ಶಾಸಕರು, ಮಾಜಿ ಮುಖ್ಯಮಂತ್ರಿಗಳು ಸೀಡಿಗಳನ್ನು ಜೇಬಲ್ಲಿಟ್ಟುಕೊಂಡು ಓಡಾಡುವುದು, ಇನ್ನೊಬ್ಬರ ಬಳಿ ಅಷ್ಟು ಸಂಗ್ರಹ ಇದೆ, ಇಷ್ಟು ಸಂಗ್ರಹ ಇದೆ ಎಂದು ಹೇಳುವುದು, ಇದನ್ನೆಲ್ಲ ಪೊಲೀಸ್ ವ್ಯವಸ್ಥೆ ನೋಡಿಕೊಂಡು ಸುಮ್ಮನಿರುವುದು, ಜನರು ಸಹ ಇದನ್ನು ಮನರಂಜನೆ ಎಂಬಂತೆ ಭಾವಿಸಿರುವುದು ಎಲ್ಲವೂ ಅನಾಗರಿಕ ಸಮಾಜದ, ಮುಖವಾಡದ ವ್ಯವಸ್ಥೆಯಂತೆ ಕಾಣುತ್ತಿದೆ…..
ಹೆಣ್ಣಿನ ಶೀಲವನ್ನು ಪವಿತ್ರಗೊಳಿಸಿ, ಆ ಪಾವಿತ್ರ್ಯತೆಯಲ್ಲಿ ಅವರನ್ನು ಶೋಷಿಸುತ್ತಾ, ಸಮ ಸಮಾಜದ ಆಶಯಗಳಿಗೆ ಚೂರಿ ಹಾಕುತ್ತಿರುವ ಈ ಮುಖ್ಯ ವಾಹಿನಿಯ ನಾಯಕರುಗಳಿಗೆ ಧಿಕ್ಕಾರ ಕೂಗಿದರೆ ಅದು ಸಣ್ಣ ಪದವಾಗುತ್ತದೆ. ಈಗ ನಿಜಕ್ಕೂ ಪ್ರಬುದ್ಧ ಮನಸ್ಸುಗಳು ಕಾರ್ಯಯೋನ್ಮುಖವಾಗುವ ಸಮಯ ಬಂದಿದೆ. ಒಂದು ನಾಗರಿಕ ಸಮಾಜ ಇಷ್ಟೊಂದು ಕೆಳಹಂತಕ್ಕೆ ನಮ್ಮ ಕಾಲದಲ್ಲೇ ಬಂದಿರುವುದು ವಿಷಾದನೀಯ…..
ಹೆಣ್ಣನ್ನು ಭೋಗದ ವಸ್ತುವೆಂದು ನೇರವಾಗಿ ಉಪಯೋಗಿಸಿಕೊಳ್ಳುತ್ತಿರುವುದು ಕರ್ನಾಟಕದಲ್ಲಿ ಕಣ್ಣಿಗೆ ಕಾಣುವಷ್ಟು ಸ್ಪಷ್ಟವಾಗಿ ಗೋಚರಿಸುತ್ತಿದೆ. ಕನಿಷ್ಠ ಈ ಪ್ರಜ್ವಲ್ ರೇವಣ್ಣನ ಪ್ರಕರಣದ ಹಿನ್ನೆಲೆಯಲ್ಲಿ ಆದರೂ ಈ ಪೆನ್ ಡ್ರೈವ್, ಸೀಡಿಗಳಿಗೆ ಒಂದು ಅಂತ್ಯ ಹಾಡಲೇಬೇಕಿದೆ….
ಮಹಿಳೆಯರ ಘನತೆಯನ್ನು ಎತ್ತಿ ಹಿಡಿಯಬೇಕಿದೆ. ಇದೇನೋ ಅವರಿಗೆ ನಾವು ಕೊಡುವ ಸಹಾನುಭೂತಿ, ಉದಾರತೆ, ಭಿಕ್ಷೆಯಲ್ಲ. ಮಹಿಳೆಯ ಸಮಾನತೆ, ಸ್ವಾತಂತ್ರ್ಯ ಆಕೆಯ ಹಕ್ಕು……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068……